ಮುಂಬಯಿ: ಮಹಾರಾಷ್ಟ್ರದಲ್ಲಿ ಬಿಜೆಪಿ – ಶಿವಸೇನೆ ಮೈತ್ರಿ ಸರಕಾರ ಅಧಿಕಾರದ ಗದ್ದುಗೆಯನ್ನು ಏರುವುದಕ್ಕೆ ವಿಘ್ನಗಳ ಮೇಲೆ ವಿಘ್ನಗಳು ಎದುರಾಗುತ್ತಿವೆ. ಯಾವುದೇ ಕಾರಣಕ್ಕೂ 50-50 ಸೂತ್ರವನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಬಿಜೆಪಿ ಹೇಳುತ್ತಿದ್ದರೆ, 50-50 ಸೂತ್ರವನ್ನು ಬಿಜೆಪಿ ಚುನಾವಣೆಗೆ ಮೊದಲೇ ನಮಗೆ ಭರವಸೆ ನೀಡಿತ್ತು ಈಗ ಕೇಸರಿ ಪಕ್ಷ ಅದನ್ನು ಪಾಲಿಸಲಿ ಎಂದು ಶಿವಸೇನೆ ಪಟ್ಟುಹಿಡಿದು ಕುಳಿತಿದೆ.
ಈತನ್ಮಧ್ಯೆ ಶಿವಸೇನೆಯಲ್ಲಿ ಗುರುವಾರದಂದು ಕ್ಷಿಪ್ರ ಬೆಳವಣಿಗೆಗಳು ಉಂಟಾಗಿದ್ದು ಈ ಪಕ್ಷದ ನೂತನ ಶಾಸಕರು ಏಕನಾಥ ಶಿಂಧೆ ಅವರನ್ನು ಆಯ್ಕೆ ಮಾಡಿದ್ದಾರೆ ಮತ್ತು ಶಿಂಧೆ ಅವರ ನೇತೃತ್ವದಲ್ಲಿ ಶಿವಸೇನೆಯ ಶಾಸಕರು ರಾಜ್ಯಪಾಲರನ್ನು ಭೇಟಿಯಾಗಲೂ ಸಹ ನಿರ್ಧರಿಸಿದ್ದಾರೆ.
ಇನ್ನೊಂದೆಡೆ ಶಿವಸೇನಾ ಕಾರ್ಯಕರ್ತರೊಂದಿಗೆ ಸಭೆ ನಡೆಸಿದ ಪಕ್ಷಾಧ್ಯಕ್ಷ ಉದ್ಭವ್ ಠಾಕ್ರೆ ಅವರು ಭಾರತೀಯ ಜನತಾ ಪಕ್ಷವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಶಿವಸೇನೆಯ ಸಂಸ್ಥಾಪಕ ಭಾಳಾ ಠಾಕ್ರೆ ಅವರು ತಮ್ಮ ರಾಜಕೀಯ ಜೀವನದಲ್ಲಿ ಎಂದೂ ತಾವು ಕೊಟ್ಟ ಮಾತಿಗೆ ತಪ್ಪುತ್ತಿರಲಿಲ್ಲ, ಇದೇ ತತ್ವವನ್ನು ಬಿಜೆಪಿಯೂ ಸಹ ಪಾಲಿಸಬೇಕು ಎಂದು ಉದ್ಭವ್ ಅವರು ಬಿಜೆಪಿ ನಾಯಕರಿಗೆ ಸವಾಲೆಸೆದಿದ್ದಾರೆ.
ಶಿವಸೇನೆಯು ಅಧಿಕಾರ ದಾಹವನ್ನು ಹೊಂದಿಲ್ಲ ಆದರೆ 50-50 ಸೂತ್ರಕ್ಕೆ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರೇ ಲೋಕಸಭಾ ಚುನಾವಣೆಗೂ ಮೊದಲು ನಡೆದಿದ್ದ ಮೀಟಿಂಗ್ ನಲ್ಲಿ ಒಪ್ಪಿಗೆ ಸೂಚಿಸಿದ್ದರು ಹಾಗಾಗಿ ಬಿಜೆಪಿ ಈಗ ಆ ಸೂತ್ರಕ್ಕೆ ಒಪ್ಪಿಕೊಳ್ಳಲೇಬೇಕು ಎಂದು ಉದ್ಭವ್ ಅವರು ಹೇಳಿದರು.
ಮುಖ್ಯಮಂತ್ರಿ ಪಟ್ಟ ಎನ್ನುವುದು ಯಾವತ್ತೂ ಒಬ್ಬ ವ್ಯಕ್ತಿಯ ಸ್ವತ್ತಲ್ಲ, ಈ ಬಾರಿಯ ಚುನಾವಣೆಯಲ್ಲಿ ಶಿವಸೇನೆಯೂ ಸಹ ಉತ್ತಮ ಸಾಧನೆಯನ್ನು ಮಾಡಿದೆ ಮತ್ತು ಶಿವಸೇನೆಯ ವ್ಯಕ್ತಿಯೊಬ್ಬರು ಮುಖ್ಯಮಂತ್ರಿ ಕುರ್ಚಿಯಲ್ಲಿ ಕುಳಿತುಕೊಳ್ಳುವುದನ್ನು ಪಕ್ಷ ನೋಡಲು ಬಯಸುತ್ತದೆ ಎಂದು ಉದ್ಧವ್ ಠಾಕ್ರ ಅವರು ಇದೇ ಸಂದರ್ಭದಲ್ಲಿ ಅಭಿಪ್ರಾಯಪಟ್ಟರು. ದೇವೇಂದ್ರ ಫಡ್ನವೀಸ್ ಅವರು ಮುಂದಿನ ಐದು ವರ್ಷಗಳ ಕಾಲ ನಾನೇ ಮುಖ್ಯಮಂತ್ರಿ ಎಂದು ನೀಡಿದ್ದ ಹೇಳಿಕೆಗೆ ತಿರುಗೇಟು ನೀಡಿದಂತಿತ್ತು ಉದ್ಭವ್ ಠಾಕ್ರೆ ಅವರ ಈ ಹೇಳಿಕೆ.