ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ರಾಷ್ಟ್ರೀಯ ಬಾಲ ಪುರಸ್ಕಾರ ಗೌರವಕ್ಕೆ ಪಾತ್ರರಾದ ಮಕ್ಕಳನ್ನು ಭೇಟಿಯಾಗಿ ಅವರೊಂದಿಗೆ ಸಂವಾದವನ್ನು ನಡೆಸಿದರು. ದೇಶದ ವಿವಿಧ ಭಾಗಗಳಿಂದ ಆಗಮಿಸಿದ್ದ ಚಿಣ್ಣರು ಪ್ರಧಾನಿ ಮೋದಿ ಅವರನ್ನು ಭೇಟಿಯಾದರು. ಅವರೆಲ್ಲರಿಗೂ ಪ್ರಧಾನಿ ಅವರು ಉಡುಗೊರೆ ನೀಡಿ ಗೌರವಿಸಿದ್ದು ವಿಶೇಷವಾಗಿತ್ತು.
ಈ ಪ್ರತಿಭೆಗಳಲ್ಲಿ ನಮ್ಮ ಕರಾವಳಿಯ ಕುವರಿಯೊಬ್ಬಳೂ ಇರುವುದು ನಮಗೆಲ್ಲಾ ಹೆಮ್ಮೆಯ ವಿಚಾರವಾಗಿದೆ. ಅವರೇ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮೂರ್ಜೆ ಸುನಿತಾ ಪ್ರಭು.
ವಿಜ್ಞಾನ ಸಂಶೋಧನಾ ಕ್ಷೇತ್ರದಲ್ಲಿ ಈ ಬಾಲ ಪ್ರತಿಭೆ ಮಾಡಿರುವ ವಿಶೇಷ ಸಾಧನೆಗಾಗಿ ಸುನಿತಾ ಅವರಿಗೆ ರಾಷ್ಟ್ರೀಯ ಬಾಲ ಪುರಸ್ಕಾರ ಲಭಿಸಿದೆ.
ತಮ್ಮನ್ನು ಭೇಟಿಯಾದ ಬಾಲ ಪ್ರತಿಭೆಗಳ ಸಾಧನೆಯ ಕುರಿತಾಗಿ ಪ್ರಧಾನಿ ಮೋದಿ ಅವರು ತಮ್ಮ ಟ್ವಿಟ್ಟರ್ ಅಕೌಂಟ್ ನಲ್ಲಿ ಬರೆದುಕೊಂಡಿದ್ದಾರೆ. ಸುನಿತಾ ಪ್ರಭು ಅವರ ಕುರಿತಾಗಿ ಮೋದಿ ಅವರು ಹೀಗೆ ಬರೆದುಕೊಂಡಿದ್ದಾರೆ,
‘ಭಾರತದ ಪರಿಸರಕ್ಕೆ ಸಂಬಂಧಿಸಿದಂತೆ ಸೊಳ್ಳೆಗಳಿಂದ ಹರಡುವ ಕಾಯಿಲೆಗಳನ್ನು ನಿಗ್ರಹಿಸುವ ವಿಚಾರದಲ್ಲಿ ಸುನಿತಾ ಪ್ರಭು ಮೂರ್ಜೆ ಅವರು ಅಮೂಲ್ಯವಾದ ಕೊಡುಗೆಯನ್ನು ನೀಡಿದ್ದಾರೆ.’
‘ಬಾಲ ಪುರಸ್ಕಾರ ಪ್ರಶಸ್ತಿಗೆ ಪಾತ್ರರಾಗಿರುವ ಅವರನ್ನು ನಾನು ಈ ಸಂದರ್ಭದಲ್ಲಿ ವಿಶೇಷವಾಗಿ ಅಭಿನಂದಿಸುತ್ತೇನೆ ಮತ್ತು ಅವರಿಗೆ ಉಜ್ವಲ ಭವಿಷ್ಯವನ್ನು ಹಾರೈಸುತ್ತೇನೆ’ ಎಂದು ಮೋದಿ ತಮ್ಮ ಟ್ವಿಟ್ಟರ್ ಅಕೌಂಟ್ ನಲ್ಲಿ ಕರಾವಳಿ ಬಾಲಕಿಯ ಪ್ರತಿಭೆಯನ್ನು ಪ್ರಶಂಸಿದ್ದಾರೆ.
ಇದನ್ನೂ ಓದಿ: ಪ್ರಧಾನಿ ಮೋದಿ ಮುಖದ ಹೊಳಪಿನ ಗುಟ್ಟೇನು? ಮಕ್ಕಳೊಂದಿಗೆ ಗುಟ್ಟು ಬಿಟ್ಟುಕೊಟ್ಟ ನಮೋ!