Advertisement

ಸ್ನೇಹ-ದ್ವೇಷ- ಶಕ್ತಿಯ ದುರ್ವ್ಯಯ-ಆತ್ಮವಿಮರ್ಶೆ…

11:52 PM Feb 11, 2023 | Team Udayavani |

ಬಾಲಗಂಗಾಧರ ತಿಲಕ್‌ (1856-1920) ಮತ್ತು ಗೋಪಾಲ ಗಣೇಶ ಅಗರ್ಕರ್‌ (1856-1895) ಪುಣೆಯಲ್ಲಿ ಕಾನೂನು ವ್ಯಾಸಂಗ ಮಾಡುತ್ತಿದ್ದಾಗ ಗೆಳೆಯರಾದವರು. ದೇಶದ ಪಾರತಂತ್ರ್ಯಕ್ಕೆ ದುರ್ಬಲ ಸಮಾಜ ಕಾರಣ, ಇದಕ್ಕೆ ವಿದೇಶೀ ಚಿಂತನೆಯ ಶಿಕ್ಷಣವೇ ಕಾರಣ ಎಂಬುದನ್ನು ಮನಗಂಡು ತಾವೇ ಭಾರತೀಯ ಶಿಕ್ಷಣ ಕ್ರಮದ ಶಾಲೆ ತೆರೆಯಲು ನಿರ್ಧರಿಸಿದರು. ಯವ್ವನದ ಹುಮ್ಮಸ್ಸು, ಶಿಕ್ಷಕರಾಗಿದ್ದ ವಿಷ್ಣು ಕೃಷ್ಣ ಚಿಪ್ಳೂಣ್ಕರ್‌ರಲ್ಲಿ ಚರ್ಚಿಸಿದರು. ಯುವಕರ ಮಾತು ಒಪ್ಪಿದ ಚಿಪ್ಳೂಣ್ಕರ್‌ ಖಾಯಂ ಶಿಕ್ಷಕರ ಕೆಲಸಕ್ಕೆ 1880ರ ಜ. 1ರಂದು ರಾಜೀನಾಮೆ ನೀಡಿ ಮರುದಿನವೇ ಪುಣೆಯ ಶಾಲೆ ಆರಂಭಿಸಿದರು.

Advertisement

ಪ್ರಚಂಡ ಬರೆಹಗಾರ ಅಗರ್ಕರ್‌ ಮರಾಠಿ ಭಾಷೆಯ “ಕೇಸರಿ’ಯನ್ನೂ, ತಿಲಕ್‌ ಇಂಗ್ಲಿಷ್‌ನ “ಮರಾಠಾ’-ಹೊಸ ಪತ್ರಿಕೆಗಳನ್ನು ಆರಂಭಿಸಿದರು. ಹಗಲಿನಲ್ಲಿ ಪಾಠ, ರಾತ್ರಿ ಯಲ್ಲಿ ಪತ್ರಿಕೆಗಳ ಕೆಲಸ. ಡೆಕ್ಕನ್‌ ಎಜುಕೇಶನ್‌ ಸೊಸೈಟಿ (1884) ಮೂಲಕ ಫ‌ರ್ಗ್ಯುಸನ್‌ ಕಾಲೇಜನ್ನೂ (1885) ಆರಂಭಿಸಲಾಯಿತು. ಬ್ರಿಟಿಷರ ವಿರುದ್ಧದ ಲೇಖನಕ್ಕಾಗಿ ಡೋಂಗ್ರೆ ಜೈಲಿನಲ್ಲಿ 101 ದಿನ ಸಜೆ ಅನುಭವಿಸು ವಾಗಲೂ ಇಬ್ಬರಿಗೂ ಸ್ವಾತಂತ್ರ್ಯದ್ದೇ ಚಿಂತೆ…

ಸ್ವಾತಂತ್ರ್ಯ ಪಡೆಯುವ ಮಾರ್ಗದಲ್ಲಿ ಮಾತ್ರ ಭಿನ್ನಾಭಿಪ್ರಾಯಗಳಿದ್ದವು. ಅಗರ್ಕರ್‌ ಬಡತನದಿಂದ ಬಂದವರಾಗಿದ್ದರಿಂದ “ಬಡವರ ಪರ ಈ ಜಗತ್ತು ಇಲ್ಲ. ಸಮಾಜದಲ್ಲಿರುವ ಅನಿಷ್ಟಗಳು ಮೊದಲು ತೊಲಗ ಬೇಕು, ಅವುಗಳಿದ್ದು ಸ್ವಾತಂತ್ರ್ಯ ಸಿಕ್ಕಿದರೇನು ಫ‌ಲ?’ ಎನ್ನುವುದು ಅಭಿಮತವಾಗಿದ್ದರೆ, “ಮೊದಲು ಸ್ವಾತಂತ್ರ್ಯ ಸಿಗಲಿ, ಬ್ರಿಟಿಷರು ಮೊದಲು ತೊಲಗಬೇಕು. ಅನಂತರ ಸಾಮಾಜಿಕ ಸುಧಾರಣೆಗಳನ್ನು ಜಾರಿಗೊಳಿಸಬೇಕು’ ಎನ್ನುವುದು ತಿಲಕ್‌ ಅಭಿಮತ. ಈ ಭಿನ್ನ ಅಭಿಪ್ರಾಯ ಗಳು “ಕೇಸರಿ’ ಮತ್ತು “ಮರಾಠಾ’ದಲ್ಲಿ ತೋರಿದವು. ಅಗರ್ಕರ್‌ “ಕೇಸರಿ’ಗೆ ರಾಜೀನಾಮೆ ನೀಡಿ “ಸುಧಾರಕ್‌’ ಎಂಬ ಪತ್ರಿಕೆ ಹೊರತಂದ ಬಳಿಕ “ಕೇಸರಿ’, “ಮರಾಠಾ’ ದಲ್ಲಿ ಬರುವ ಲೇಖನಕ್ಕೆ “ಸುಧಾರಕ್‌’ನಲ್ಲಿಯೂ, “ಸುಧಾರಕ್‌’ಗೆ “ಕೇಸರಿ, “ಮರಾಠಾ’ದಲ್ಲಿಯೂ ವಿರುದ್ಧ ಬರೆಹಗಳು ಮೂಡಿಬಂದವು.

ಭಿನ್ನಾಭಿಪ್ರಾಯಗಳು ಎಜುಕೇಶನ್‌ ಸೊಸೈಟಿಯಲ್ಲೂ ಮಾರ್ದನಿಸಿತು. ಗೋಪಾಲಕೃಷ್ಣ ಗೋಖಲೆ ಸೊಸೈಟಿ ಪದಾಧಿಕಾರಿಯಾಗಿದ್ದು ಸಾರ್ವಜನಿಕ ಸಮಿತಿ ಕಾರ್ಯ ದರ್ಶಿಯಾಗಿ 3 ತಾಸು ಕೆಲಸ ಮಾಡುತ್ತಿರುವುದರಿಂದ ಸೊಸೈಟಿಗೆ ನಷ್ಟ ಎಂದು ಆಕ್ಷೇಪಣೆ ಬಂತು. ಶಾಲೆ ಆರಂ ಭಿಸುವಾಗ ಒಂದು ವರ್ಷ ವೇತನರಹಿತ, ಬಳಿಕ ಗರಿಷ್ಠ 75 ರೂ. ಮಾತ್ರ ವೇತನ ಪಡೆಯಬೇಕು, ಹೊರಗಡೆ ಕೆಲಸ ಮಾಡಿದರೆ (ಉಡುಗೊರೆ ಸಿಕ್ಕಿದರೂ) ಅದನ್ನು ಸಂಸ್ಥೆಗೇ ಕೊಡಬೇಕೆಂಬ ಷರತ್ತುಗಳನ್ನು ಒಪ್ಪಿಕೊಳ್ಳಲಾಗಿತ್ತು.

ಅಧ್ಯಾಪಕರಾಗಿದ್ದ ಲೇಖಕ ವಾಮನ ಶಿವರಾಮ ಆಪ್ಟೆಯವರಿಗೆ ಹಣಕಾಸು ಮುಗ್ಗಟ್ಟಾದಾಗ ಪುಸ್ತಕ ಪ್ರಕ ಟಿಸಲು ಒಂದು ವರ್ಷದ ಮಟ್ಟಿಗೆ ತಿಲಕರು ಅನುಮತಿ ನೀಡಿದ್ದು ತಗಾದೆಗೆ ಕಾರಣವಾಯಿತು. ಬೇಸತ್ತ ತಿಲಕರು ಸೊಸೈಟಿಗೆ 1890 ಅ. 14ರಂದು ರಾಜೀನಾಮೆ ನೀಡಿ, “ಕೇಸರಿ’, “ಮರಾಠಾ” ಪತ್ರಿಕೆಗಳನ್ನು 7,000 ರೂ. ಸಾಲ ಮಾಡಿ ಕೊಂಡುಕೊಳ್ಳಬೇಕಾಯಿತು. ಅನಂತರ ತಿಲಕರು ಸ್ವಾತಂತ್ರ್ಯ ಹೋರಾಟಗಾರರಾದರು, ಮಂಡಾಲೆ ಜೈಲಿನಿಂದ ಹೊರಬಂದು “ಲೋಕಮಾನ್ಯ’ರಾದರು.

Advertisement

ಇತ್ತ ಅಗರ್ಕರ್‌ ಫ‌ರ್ಗ್ಯುಸನ್‌ ಕಾಲೇಜಿನ ಪ್ರಾಂಶು ಪಾಲರಾದರು, ಆರೋಗ್ಯ ಹದಗೆಟ್ಟಿತು. ಇಬ್ಬರೂ ಸುದೀರ್ಘ‌ ಕಾಲ ಜತೆಗಾರರಾಗಿದ್ದವರು ಕೊನೆಗೆ ಮುಖದರ್ಶನವೇ ಇರಲಿಲ್ಲ. ಹಾಸಿಗೆ ಹಿಡಿದಿದ್ದ ಅಗ ರ್ಕರ್‌ರಿಗೆ ತಡೆದುಕೊಳ್ಳಲಾಗದೆ ತಿಲಕರನ್ನು ಬರಲು ಹೇಳಿದರು. ಆ ಕೊನೆಯ ಭೇಟಿಯಲ್ಲಿ ತಿಲಕರು- ಅಗರ್ಕರ್‌ ಕೈಕೈ ಹಿಡಿದು ಎರಡು ಗಂಟೆ ಅತ್ತರು, ಪಶ್ಚಾತ್ತಾಪ ಅನುಭವಿಸಿದರು. “ಇನ್ನು ನಾನು ನಿಶ್ಚಿಂತ’ ಎಂದು ಹೇಳಿದ ಅಗರ್ಕರ್‌ (39 ವರ್ಷ) ಕೆಲವೇ ಹೊತ್ತಿನಲ್ಲಿ ಇಹಲೋಕ ಯಾತ್ರೆ ಮುಗಿಸಿದರು. “ಇಬ್ಬರೂ ಮಾತನಾಡಿದ್ದಕ್ಕಿಂತ ಅತ್ತದ್ದೇ ಹೆಚ್ಚು’ ಎಂದು ಅಗರ್ಕರ್‌ ಪತ್ನಿ ಯಶೋದಾಬಾಯಿ ಕೃತಿಯೊಂದರಲ್ಲಿ ಹೇಳಿಕೊಂಡಿದ್ದಾರೆ. ಈ ಸತ್ಯಘಟನೆ ಮರಾಠಿ ರಂಗಭೂಮಿಯಲ್ಲಿ ಹಲವು ದಶಕ ಮೆರೆದಾಡಿತು.

ಲೋಕದಲ್ಲಿ ನಿನ್ನೆ, ಇಂದು, ನಾಳೆ ಕಾಣುವುದು ಇದುವೇ. ಅಧಿಕಾರವಿಲ್ಲದಾಗ (ದುರ್ಬಲರಿದ್ದಾಗ) ಸ್ನೇಹ, ದೇಶಸೇವೆ-ನಿಸ್ವಾರ್ಥ ಮನೋಭಾವ; ಅಧಿಕಾರ ಬರುವಾಗ (ಸಬಲರಾದಾಗ) ವೈಮನಸ್ಸು-ಸ್ಪರ್ಧೆ- ಜಿದ್ದಾಜಿದ್ದಿ; ಎಲ್ಲವೂ ಮುಗಿದಾಗ (ವ್ಯಯ ಮಾಡು ವಷ್ಟು ಶಕ್ತಿ ಇಲ್ಲದಾಗ) ಇಷ್ಟೆಲ್ಲ ವ್ಯರ್ಥಶ್ರಮ ಅಗತ್ಯವಿತ್ತೆ ಎಂಬ ಮಾನಸಿಕ ತೊಳಲಾಟ… ಯಾರಿಗೆ? ಮೊದಲೆ ರಡು ಬಹುತೇಕ ಎಲ್ಲರಲ್ಲಿ ಆಗುತ್ತದೆ, ನೋಡುತ್ತಲೇ ಇರುತ್ತೇವೆ. ಕೊನೆಯದಾದ ಪಶ್ಚಾತ್ತಾಪ (ಜ್ಞಾನೋ ದಯ) ಆತ್ಮವಿಶ್ಲೇಷಣೆ ಮಾಡಿಕೊಳ್ಳುವವರಲ್ಲಿ ಕೊನೆ ಗಾಲದಲ್ಲಾದರೂ ಆಗಬಹುದು. ಇವರಿಬ್ಬರುನಿಸ್ವಾರ್ಥಿಗಳಾಗಿಯೂ ಕಲಹ ಕಂಡುಬಂತು, ನಿಸ್ವಾರ್ಥಿಗಳಾ ದ್ದರಿಂದಲೇ ಕೊನೆಯಲ್ಲಾದರೂ ಪಶ್ಚಾತ್ತಾಪ ಉಂಟಾ ಯಿತೆನ್ನಬಹುದು. ಇದಾವುದನ್ನೂ ಚಿಂತಿಸದ ಸ್ವಾರ್ಥಿ ಗಳ ಪಾಡೇನು? ವೈಮನಸ್ಸಿನ ಮೂಲ ತೀರಾ ಕ್ಷುಲ್ಲಕ, ದೊಡ್ಡ ನದಿಗಳ ಮೂಲ ಸಣ್ಣ ತೊರೆಯಂತೆ. ಬಹುತೇಕ ಸಮಾನಮನಸ್ಕರಿದ್ದು ಕ್ಷುಲ್ಲಕ ವಿಷಯ ಬಿಗಡಾಯಿಸಿ ರಂಪಾಟ, ವಿಚ್ಛೇದನವೇ ನಡೆದುಹೋಗಿರುತ್ತವೆ. ಇಂತಹ ಘರ್ಷಣೆಗಳನ್ನು (ಶಕ್ತಿಯ ದುವ್ಯìಯ) ತಪ್ಪಿಸಿದರೆ ಎಷ್ಟು ಸಾಮ್ರಾಜ್ಯಗಳನ್ನು ಕಟ್ಟಬಹುದು?…

ಮಹಾಭಾರತದ ವನಪರ್ವದ ಯಕ್ಷಪ್ರಶ್ನೆ ಪ್ರಸಂಗ ದಲ್ಲಿ ಧರ್ಮರಾಯ-ಯಮಧರ್ಮರ ನಡುವಿನ ಸಂವಾದ ಚಿಂತನೀಯ. ಯಮ ಕೇಳುತ್ತಾನೆ- “ಜಗತ್ತಿನ ಅತ್ಯಾಶ್ಚರ್ಯ ಸಂಗತಿ ಯಾವುದು?’. ಧರ್ಮಜ ಹೇಳು ತ್ತಾನೆ- “ನಿತ್ಯವೂ ಯಮಲೋಕಕ್ಕೆ ಹೋಗುತ್ತಿರುವು ದನ್ನು ಕಂಡರೂ ಬದುಕಿರುವವರು ಮಾತ್ರ ತಾವು ಶಾಶ್ವತ ವೆಂಬಂತೆ (ದರ್ಪಿಷ್ಟರಾಗಿ) ವರ್ತಿಸುತ್ತಿರುವುದು’.

-ಮಟಪಾಡಿ ಕುಮಾರಸ್ವಾಮಿ

Advertisement

Udayavani is now on Telegram. Click here to join our channel and stay updated with the latest news.

Next