Advertisement

ಬೇಕರಿ ಯುವಕ ನಾಪತ್ತೆ ಪ್ರಕರಣ

02:21 PM Feb 26, 2018 | Team Udayavani |

ಮಹಾನಗರ: ನಗರದ ಬೇಕರಿಯೊಂದರಲ್ಲಿ ಕೆಲಸಕ್ಕಿದ್ದ ಯುವಕ ಐದು ತಿಂಗಳ ಹಿಂದೆ ನಾಪತ್ತೆಯಾಗಿದ್ದು, ಇನ್ನೂ ಪತ್ತೆಯಾಗದ ಬಗ್ಗೆ ಮಂಗಳೂರು ಪೊಲೀಸ್‌ ಆಯುಕ್ತರ ಕಚೇರಿಯಲ್ಲಿ ರವಿವಾರ ನಡೆದ ದಲಿತರ ಕುಂದು ಕೊರತೆ ಅಹವಾಲು ಸಭೆಯಲ್ಲಿ ದಲಿತ ಮುಖಂಡರು ಪ್ರಸ್ತಾವಿಸಿ ಪತ್ತೆ ಕಾರ್ಯವನ್ನು ತ್ವರಿತಗೊಳಿಸುವಂತೆ ಆಗ್ರಹಿಸಿದರು. ಪತ್ತೆ ಕಾರ್ಯ ವಿಳಂಬವಾದ ಬಗ್ಗೆ ವಿಚಾರಣೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಸಭೆಯ ಅಧ್ಯಕ್ಷತೆ ವಹಿಸಿದ್ದ ಡಿಸಿಪಿ ಉಮಾ ಪ್ರಶಾಂತ್‌ ತಿಳಿಸಿದರು.

Advertisement

ಬೆಳ್ತಂಗಡಿಯ ದಲಿತ ಸಂಘಟನೆಯ ನಾಯಕ ಶೇಖರ ಎಲ್‌. ಅವರ ವಿಷಯ ಪ್ರಸ್ತಾವಿಸಿ, ಮಂಗಳೂರಿನ ಜಪ್ಪಿನಮೊಗರಿನ ಕ್ರೌನ್‌ ಬೇಕರಿಯಲ್ಲಿ 8 ವರ್ಷಗಳಿಂದ ಕೆಲಸ ಮಾಡುತ್ತಿದ್ದ ಬೆಳ್ತಂಗಡಿ ತಾಲೂಕು ಪುಂಜಾಲಕಟ್ಟೆಯ ನಂದ ಕುಮಾರ್‌ (22) 2017 ಸೆ. 5ರ ಬಳಿಕ ನಾಪತ್ತೆಯಾಗಿದ್ದು, ಇದುವರೆಗೆ ಪತ್ತೆಯಾಗಿಲ್ಲ. ಪ್ರಕರಣ ದಾಖಲಾಗಿರುವ ಕಂಕನಾಡಿ ಪೊಲೀಸ್‌ ಠಾಣೆಯಲ್ಲಿ ವಿಚಾರಿಸಿದರೆ ‘ನಾವು ಹುಡುಕುತ್ತಿದ್ದೇವೆ’ ಎಂದು ಹೇಳುತ್ತಾರೆ. ಆದ್ದರಿಂದ ಪತ್ತೆ ಕಾರ್ಯವನ್ನು ತ್ವರಿತಗೊಳಿಸಬೇಕು ಎಂದು ಆಗ್ರಹಿಸಿದರು.

ನಂದ ಕುಮಾರ್‌ ತನ್ನ ಮೊಬೈಲ್‌ ನಲ್ಲಿ ಯುವತಿಯೋರ್ವಳ ಫೋಟೊ ತೆಗೆದಿದ್ದಾನೆ ಎಂಬ ಆರೋಪದ ಮೇಲೆ ಬೇಕರಿ ಮಾಲಕ ರಜಿತ್‌ ಕುಮಾರ್‌ 2017 ಸೆ. 5ರಂದು ರಾತ್ರಿ ನಂದ ಕುಮಾರ್‌ನಿಗೆ ಹೊಡೆದಿದ್ದರು. ಈ ಘಟನೆ ಬಳಿಕ ನಂದ ಕುಮಾರ್‌ ನಾಪತ್ತೆಯಾಗಿದ್ದಾನೆ.

ಆತ ನಾಪತ್ತೆಯಾದ ಬಗ್ಗೆ ಆತನ ಮನೆಮಂದಿಗೆ ಮಾಲಕ ರಜಿತ್‌ ಕುಮಾರ್‌ ತಿಳಿಸಿಲ್ಲ. ಕೆಲವು ದಿನಗಳ ಬಳಿಕ ಬೇಕರಿಯಲ್ಲಿ ಕೆಲಸ ಮಾಡುತ್ತಿರುವ ಬೇರೆ ಹುಡುಗರ ಮೂಲಕ ಮನೆ ಮಂದಿಗೆ ವಿಷಯ ತಿಳಿದಿದೆ. ಬಳಿಕ ಆತನ ತಾಯಿ ಜಪ್ಪಿನಮೊಗರಿಗೆ ತೆರಳಿ ಬೇಕರಿ ಮಾಲಕರಲ್ಲಿ ವಿಚಾರಿಸಿ ಮಾಹಿತಿ ಪಡೆದುಕೊಂಡು ಬಳಿಕ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಇತ್ತೀಚೆಗೆ ಪುಂಜಾಲಕಟ್ಟೆಯಲ್ಲಿರುವ ನಂದ ಕುಮಾರ್‌ ಮನೆಗೆ ಕಂಕನಾಡಿ ಪೊಲೀಸರು ತನಿಖೆಯ ನೆಪದಲ್ಲಿ ತೆರಳಿ ಮನೆ ಮಂದಿಗೆ ಕಿರುಕುಳ ನೀಡಿದ್ದಾರೆ ಎಂದು ಶೇಖರ್‌ ಆರೋಪಿಸಿದರು.

ಎರಡು ಪ್ರಕರಣ ದಾಖಲು
ನಂದ ಕುಮಾರ್‌ ನಾಪತ್ತೆಯಾದ ಬಗ್ಗೆ ಬೇಕರಿ ಮಾಲಕ ರಜಿತ್‌ ಕುಮಾರ್‌ ಅವರು ದೂರು ದಾಖಲಿಸಿದ್ದಾರೆ. ಆತನಿಗೆ ಹೊಡೆದ ಬಗ್ಗೆ ಅವರು (ರಜಿತ್‌ ಕುಮಾರ್‌) ಒಪ್ಪಿಕೊಂಡಿದ್ದಾರೆ. ಈ ಪ್ರಕರಣದಲ್ಲಿ ಎರಡೂ ಕಡೆಗಳಿಂದ ದೂರು ದಾಖಲಾಗಿದ್ದು, ಈಗಾಗಲೇ ಎರಡು ಬಾರಿ ನಂದ ಕುಮಾರ್‌ ಪತ್ತೆಗಾಗಿ ವ್ಯಾಪಕ ಕಾರ್ಯಾಚರಣೆ ನಡೆಸಲಾಗಿದೆ.

Advertisement

ಆದರೆ ಮನೆಮಂದಿಗೆ ಕಿರುಕುಳ ನೀಡಿಲ್ಲ ಎಂದು ಕಂಕನಾಡಿ ಪೊಲೀಸ್‌ ಠಾಣೆಯ ಇನ್‌ಸ್ಪೆಕ್ಟರ್‌ ರವಿ ನಾಯ್ಕ ತಿಳಿಸಿದರು. ನಂದಕುಮಾರ್‌ ಪತ್ತೆಗೆ ಪ್ರಯತ್ನಿಸಲಾಗುವುದು ಎಂದು ಡಿಸಿಪಿ ಉಮಾ ಪ್ರಶಾಂತ್‌ ತಿಳಿಸಿದರು. ಕಾವೂರಿನ ರಘುವೀರ್‌ ಅವರು ತನ್ನ ಮೇಲೆ ಕಾವೂರು ಪೊಲೀಸ್‌ ಠಾಣೆಯಲ್ಲಿ ಸುಳ್ಳು ದೂರು ದಾಖಲಿಸಲಾಗಿದೆ ಎಂದು ಆರೋಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next