Advertisement

ಬಕಾಸುರ

03:45 AM Jun 22, 2017 | Harsha Rao |

ಪಗಡೆಯಾಟದಲ್ಲಿನ ಶರತ್ತಿನಂತೆ, ಪಾಂಡವರು, ಹದಿನಾಲ್ಕು ವರ್ಷ ವನವಾಸ ಮುಗಿಸಿ, ಒಂದು ವರ್ಷ ಅಜ್ಞಾತವಾಸವನ್ನು ಪೂರೈಸಬೇಕಿತ್ತು. ಅಜ್ಞಾತವಾಸದ ಸಂದರ್ಭದಲ್ಲಿ ಅವರು  ಬ್ರಾಹ್ಮಣರ ವೇಷ ಧರಿಸಿ  ಏಕಚಕ್ರ ನಗರವನ್ನು ಸೇರಿದರು.ಅಲ್ಲಿ ಒಬ್ಬ ಬ್ರಾಹ್ಮಣನ ಮನೆಯನ್ನು ಸೇರಿ ಭಿಕ್ಷಾನ್ನದಿಂದ ವಾಸಿಸುತ್ತಿದ್ದರು.

Advertisement

ಒಂದು ದಿನ ಆ ಬ್ರಾಹ್ಮಣನ ಮನೆಯಿಂದ ಅಳುವ ಶಬ್ದವು ಕೇಳಿಸಿತು. ಊರಿನ ಹತ್ತಿರ “ಬಕ ‘ಎಂಬ ರಾಕ್ಷಸನಿದ್ದ. ಅವನು ಮನುಷ್ಯರ ಮಾಂಸವನ್ನು ತಿನ್ನುವವನು.ಊರಿನವರು ಪ್ರತಿನಿತ್ಯವೂ ಅವನಿಗೆ ಒಂದು ಬಂಡಿ ಅನ್ನವನ್ನೂ ಕಳುಹಿಸಬೇಕಿತ್ತು. ಅವನು ಆ ಅನ್ನವನ್ನೂ, ಗಾಡಿಗೆ ಕಟ್ಟಿದ ಎರಡು ಕೋಣಗಳನೂ ,° ಗಾಡಿಯನ್ನು ಹೊಡೆದುಕೊಂಡು ಹೋದವನನ್ನೂ ತಿನ್ನುತ್ತಿದ್ದ. ಸರದಿಯ ಪ್ರಕಾರ ಪ್ರತಿ ಮನೆಯವರೂ ಹೀಗೆ ಬಲಿಯನ್ನು ಕಳುಹಿಸಬೇಕಾಗುತ್ತಿತ್ತು. ಮರುದಿನ ಆ ಬ್ರಾಹ್ಮಣನ ಸರದಿ.

ಬ್ರಾಹ್ಮಣನ ಮನೆಯವರೆಲ್ಲ ಅಳುತ್ತಿದ್ದರು. ಬ್ರಾಹ್ಮಣನು,”ನಾನು ಬಲಿಯಾದರೆ ಸಂಸಾರದ ಗತಿಯೇನು? ನೀವೆಲ್ಲ ಹೇಗೆ ಜೀವನ ಮಾಡುತ್ತೀರಿ? ಹೆಂಡತಿಯಾಗಿ, ಶೀಲಸಂಪನ್ನೆಯಾಗಿ ,ಸಂಸಾರವನ್ನು ಚೊಕ್ಕವಾಗಿ ನಡೆಸಿಕೊಂಡು ಬರುತ್ತಿದ್ದೀ, ನಿನ್ನನ್ನು ಹೇಗೆ ಆ ರಾಕ್ಷಸನ ಬಳಿಗೆ ಕಳುಹಿಸಲಿ? ಮುದ್ದು ಮಗಳು ಇನ್ನೂ ಮದುವೆಯಾಗಿ ಗಂಡನ ಮನೆಯನ್ನು ಬೆಳಗಬೇಕಾದವಳು, ಅವಳನ್ನು  ಸಾವಿನ ಬಾಯಿಗೆ ಹೇಗೆ ಕೊಡಲಿ?’ ಎಂದು ಅಳುತ್ತಿದ್ದ. ಹೆಂಡತಿಯು,”ನೀವು ರಾಕ್ಷಸನ ಬಾಯಿಗೆ ತುತ್ತಾದರೆ ನಾನು ಹೇಗೆ ವಿಧವೆಯಾಗಿ ಬದುಕಲಿ? ಮಕ್ಕಳನ್ನು ಹೇಗೆ ಸಾಕಲಿ? ನಾನು ರಾಕ್ಷಸನಿಗೆ ತುತ್ತಾಗುತ್ತೇನೆ’ ಎಂದು ಅಳುತ್ತಿದ್ದಳು. ಸಣ್ಣ ಮಗುವು ಒಂದು ಕೋಲನ್ನು ಹಿಡಿದುಕೊಂಡು, “ನಾನು ಈ ಕೋಲಿನಿಂದ ಆ ರಾಕ್ಷಸನನ್ನು ಹೊಡೆದುಹಾಕುತ್ತೇನೆ, ನೀವು ಅಳಬೇಡಿ!’ ಎನ್ನುತ್ತಿತ್ತು. ಅದರ ಮಾತುಗಳನ್ನು ಕೇಳಿ ಉಳಿದವರಿಗೆ ಏಕಕಾಲದಲ್ಲಿ ಸಂತೋಷವೂ ಆಯಿತು, ದುಃಖವೂ ಹೆಚ್ಚಿತು.

ಇವರೆಲ್ಲರ ಅಳು ಕುಂತಿಗೆ ಮತ್ತು ಭೀಮನಿಗೆ ಕೇಳಿಸಿತು. ಉಳಿದ ಪಾಂಡವರು ಭಿಕ್ಷೆಗೆ ಹೋಗಿದ್ದರು. ಕುಂತಿಯು ಈ ಸಂಸಾರಕ್ಕೆ ಏನು ದುಃಖ ಎಂದು ವಿಚಾರಿಸಲು ಹೋದಳು. ಅವಳಿಗೆ ವಿಷಯ ತಿಳಿಯಿತು. ಕುಂತಿಯು, “ನನಗೆ ಐವರು ಗಂಡು ಮಕ್ಕಳು. ಐವರಲ್ಲಿ ಒಬ್ಬ ಮಗನಿಗೆ ತೊಂದರೆಯಾದರೂ ಪರವಾಗಿಲ್ಲ. ಒಬ್ಬನು ಆಹಾರದ ಗಾಡಿಯನ್ನು ಹೊಡೆದುಕೊಂಡು ಹೋಗಲಿ!’ ಎಂದಳು. ಬ್ರಾಹ್ಮಣನು -“ಛೇ ಎಲ್ಲಾದರೂ ಉಂಟೇ? ನಮಗಾಗಿ ನಿಮ್ಮ ಮಗನನ್ನು ಬಲಿಕೊಡುವುದೇ? ಸಾಧ್ಯವೇ ಇಲ್ಲ’ ಎಂದನು. ಕುಂತಿಯು, “ನನ್ನ ಮಗ ಆ ರಾಕ್ಷಸನನ್ನೇ ಕೊಲ್ಲುತ್ತಾನೆ’ ಎಂದು ಧೈರ್ಯ ಹೇಳಿ, ಕಡೆಗೂ ಅವರನ್ನು ಒಪ್ಪಿಸಿದಳು. ಆ ಹೊತ್ತಿಗೆ ಮನೆಗೆ ಬಂದ ಯುಧಿಷ್ಠಿರನಿಗೆ ಇದು ಒಪ್ಪಿಗೆಯಾಗಲಿಲ್ಲ. ಆದರೆ ಕುಂತಿಯು ಅವನಿಗೆ ಧೈರ್ಯ ಹೇಳಿದಳು.

ಮರುದಿನ ಭೀಮನು ಅನ್ನ ಮತ್ತು ಭಕ್ಷ್ಯಗಳ ಗಾಡಿಯನ್ನು ಹೊಡೆದುಕೊಂಡು ಬಕನ ಗುಹೆಗೆ ಹೊರಟ. ತಾನೇ ಆರಾಮವಾಗಿ ಬೇಕಾದುದನ್ನು ತಿನ್ನುತ್ತ  ಗುಹೆಯನ್ನು ಸಮೀಪಿಸಿದ. ಬಕನ ಹೆಸರನ್ನು ಗಟ್ಟಿಯಾಗಿ ಕೂಗಿದ. ಬಕನು ಹೊರಕ್ಕೆ ಬಂದು ನೋಡುತ್ತಾನೆ. ಮನುಷ್ಯನೊಬ್ಬ ತನಗಾಗಿ ಕಳುಹಿಸಿದ್ದ ಅನ್ನವನ್ನು  ತಿನ್ನುತ್ತಿದ್ದಾನೆ! ಬಕನು,”ನಿನ್ನನ್ನು ಕೊಂದುಬಿಡುತ್ತೇನೆ!’ ಎಂದು ಕೂಗಾಡಿದ. ರಾಕ್ಷಸನ ಮಾತು ಕೇಳಿಸಲೇ ಇಲ್ಲ ಎಂಬಂತೆ ಭೀಮ ತನ್ನ ಪಾಡಿಗೆ ತಾನು ತಿನ್ನುತ್ತಲೇ ಇದ್ದ. ಬಕನು ಅವನನ್ನು ಹಿಡಿದುಕೊಂಡರೂ ಭೀಮನು ತಿನ್ನುವುದನ್ನು ನಿಲ್ಲಿಸಲಿಲ್ಲ. ಆಗ ಸಿಟ್ಟಿಗೆದ್ದ ಬಕನು ಭೀಮನನ್ನು ಗುದ್ದಿದ.

Advertisement

ಆದರೂ ಭೀಮ ಊಟ ಮಾಡುತ್ತಲೇ ಇದ್ದ. ಬಕನು ಮತ್ತಷ್ಟು ಕೋಪದಿಂದ ಒಂದು ಮರವನ್ನು ಎತ್ತಿಕೊಂಡು ಬಂದ. ಭೀಮನು ಆ ಮರವನ್ನೇ ಕಿತ್ತುಕೊಂಡು ಬಕನಿಗೆ ಹೊಡೆದ. ಇಬ್ಬರಿಗೂ ಉಗ್ರ ಹೋರಾಟವಾಯಿತು. ಪರಸ್ಪರ ಹೊಡೆದರು, ಗುದ್ದಿದರು, ಮರಗಳನ್ನು ಹಿಡಿದು ಆಕ್ರಮಣ ಮಾಡಿದರು. ಕಡೆಗೆ ಭೀಮನು ಬಕನನ್ನು ಕೊಂದ. ಅವನ ಹೆಣವನ್ನು ಊರ ಬಾಗಿಲಿನ ಮುಂದಿಟ್ಟು ಮನೆಗೆ ಬಂದ.

ಮರುದಿನ ಊರವರು ಬಕನ ಶವವನ್ನು ನೋಡಿ “ಇವನನ್ನು ಕೊಂದವರು ಯಾರು?’ ಎಂದು ಬೆರಗಾದರು, ಸಂತೋಷಪಟ್ಟರು, ದೇವರ ಉತ್ಸವ ಮಾಡಿದರು. ಮಾರುವೇಷದಲ್ಲಿದ್ದ ಪಾಂಡವರ ಮನೆಗೆ ಬಂದು, ನಮ್ಮ ಊರಿಗೆ ಒದಗಿದ್ದ ದೊಡ್ಡ ಕಷ್ಟದಿಂದ ಎಲ್ಲರನ್ನೂ ಪಾರು ಮಾಡಿದ್ದೀರಿ. ನಿಮಗೆ ನಾವೆಲ್ಲಾ ಋಣಿಗಳು ಎನ್ನುತ್ತಾ ಕೈಮುಗಿದರು.

Advertisement

Udayavani is now on Telegram. Click here to join our channel and stay updated with the latest news.

Next