ಹೊಸದಿಲ್ಲಿ: ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ನಡೆಯುತ್ತಿದ್ದ ಪ್ರತಿಭಟನೆಯ ವೇಳೆ ಹೇಳಿಕೆ ನೀಡಿ ತನ್ನ ಪ್ರತಿಷ್ಠೆಯನ್ನು ಹಾಳು ಮಾಡಿದ್ದಾರೆ ಎಂದು ಆರೋಪಿಸಿ ಕೋಚ್ ನರೇಶ್ ದಹಿಯಾ ಅವರು ಸಲ್ಲಿಸಿದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಕೇಸ್ ನಲ್ಲಿ ಕುಸ್ತಿಪಟು ಬಜರಂಗ್ ಪುನಿಯಾ ಅವರಿಗೆ ದೆಹಲಿ ನ್ಯಾಯಾಲಯ ಗುರುವಾರ ಜಾಮೀನು ನೀಡಿದೆ.
ಕುಸ್ತಿಪಟುಗಳ ಪ್ರತಿಭಟನೆಯ ಸಂದರ್ಭದಲ್ಲಿ, ಬಜರಂಗ್ ಅವರು ಅತ್ಯಾಚಾರ ಪ್ರಕರಣವನ್ನು ಎದುರಿಸುತ್ತಿರುವ ಕಾರಣ ದಹಿಯಾಗೆ ಆಂದೋಲನವನ್ನು ವಿರೋಧಿಸುವ ಯಾವುದೇ ವಿಶ್ವಾಸಾರ್ಹತೆ ಇಲ್ಲ ಎಂದು ಹೇಳಿದ್ದರು. ನಂತರ ದಹಿಯಾ ನ್ಯಾಯಾಲಯದ ಮೊರೆ ಹೋಗಿದ್ದರು. ಏಷ್ಯನ್ ಗೇಮ್ಸ್‌ನಲ್ಲಿ ಸೋಲನುಭವಿಸಿದ ಪದಕವಿಲ್ಲದೆ ಮರಳಿದ ಬಜರಂಗ್ ಅವರಿಗೆ ಸಮನ್ಸ್ ನೀಡಿದ್ದರು.
“ಬಜರಂಗ್ ಅವರು ದೈಹಿಕ ಹಾಜರಾತಿಯಿಂದ ವಿನಾಯಿತಿ ಕೋರಿದ್ದರು ಮತ್ತು ಮೊದಲ ಮೂರು ವಿಚಾರಣೆಗಳನ್ನು ತಪ್ಪಿಸಿಕೊಂಡರು. ಇಂದು ಅವರು ವಿಚಾರಣೆಗೆ ಹಾಜರಾಗಿದ್ದು, ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ವಿಚಾರಣೆಯ ಮುಂದಿನ ದಿನಾಂಕ ಮಾರ್ಚ್ 5 ಆಗಿದೆ, ”ಎಂದು ದಹಿಯಾ ಪರ ವಕೀಲ ರಾಜೇಶ್ ಕುಮಾರ್ ರೆಕ್ಸ್ವಾಲ್ ಅವರು ವಿಚಾರಣೆಯ ನಂತರ ಪಿಟಿಐಗೆ ತಿಳಿಸಿದರು.
ಅತ್ಯಾಚಾರ ಪ್ರಕರಣದಲ್ಲಿ ತಾನು ಖುಲಾಸೆಗೊಂಡಿದ್ದೇನೆ ಮತ್ತು ಬಜರಂಗ್ ಅವರ ಹೇಳಿಕೆಗಳು ತನಗೆ ಕೆಟ್ಟ ಹೆಸರು ತಂದಿದೆ ಎಂದು ದಹಿಯಾ ನ್ಯಾಯಾಲಯದಲ್ಲಿ ವಾದಿಸಿದ್ದರು.
ಕುಸ್ತಿಪಟುಗಳಾದ ಬಜರಂಗ್, ವಿನೇಶ್ ಫೋಗಟ್ ಮತ್ತು ಸಾಕ್ಷಿ ಮಲಿಕ್ ಅವರು ಡಬ್ಲ್ಯುಎಫ್‌ಐ ಮುಖ್ಯಸ್ಥರರಾಗಿದ್ದ , ಹಲವು ಮಹಿಳಾ ಕುಸ್ತಿಪಟುಗಳನ್ನು ಲೈಂಗಿಕವಾಗಿ ಶೋಷಿಸಿದ್ದಾರೆ ಎಂದು ಆರೋಪಿಸಿ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ಈ ವಿಚಾರದಲ್ಲಿ ಇದೀಗ ನ್ಯಾಯಾಲಯದ ಮೊಕದ್ದಮೆ ಎದುರಿಸುತ್ತಿರುವ ಸಿಂಗ್, ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದಾರೆ.