ಬೆಂಗಳೂರು: ಬಜರಂಗ ದಳವನ್ನು ನಿಷೇಧಿಸುವ ಸಂದರ್ಭ ಬರದು. ಒಂದೊಮ್ಮೆ ಬಂದರೆ ನಿಷೇಧಿಸುತ್ತೇವೆ ಎಂದು ಗೃಹ ಸಚಿವ ಡಾ| ಜಿ.ಪರಮೇಶ್ವರ್ ಹೇಳಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ಸಮಾಜದ ಸ್ವಾಸ್ಥ್ಯ ಹಾಳು ಮಾಡುವ ವ್ಯಕ್ತಿ ಅಥವಾ ಸಂಘಟನೆ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ನಮ್ಮ ಪ್ರಣಾಳಿಕೆಯಲ್ಲಿ ಹೇಳಿದ್ದೇವೆ. ಅಂಥ ಕೃತ್ಯವನ್ನು ಯಾರೂ ಮಾಡುವುದಿಲ್ಲ ಎಂದರೆ ಭಯಪಡುವ ಅಗತ್ಯ ಇಲ್ಲ. ಸಮಾಜದ ಶಾಂತಿ ಕದಡುವವರು ಮಾತ್ರ ಈ ವಿಚಾರದಲ್ಲಿ ಭಯಪಡಬೇಕು. ನೈತಿಕ ಪೊಲೀಸ್‌ಗಿರಿ ಹಾಗೂ ಮತೀಯ ಘಟನೆಗಳನ್ನು ಸಹಿಸುವುದಿಲ್ಲ. ಅಂಥ ಕೃತ್ಯಗಳ ವಿರುದ್ಧ ಕಠಿನ ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಪೊಲೀಸ್ ಇಲಾಖೆಯಲ್ಲಿ ಸೆಲ್ಯೂಟ್ ಸಿಗುತ್ತದೆ, ಒದೆಯೂ ಸಿಗುತ್ತದೆ, ಗುಂಡು ಹಾರಿಸುವುದೂ ಇದೆ. ಯಾವುದು ಬೇಕು ಎಂಬುದು ನಮ್ಮ ಕೃತ್ಯಗಳ ಆಧಾರದ ಮೇಲೆ ನಿರ್ಧಾರವಾಗುತ್ತದೆ. ಲಾಠಿ ಏಟು ತಿನ್ನಬೇಕೋ? ಗುಂಡು ಹಾರಿಸಿಕೊಳ್ಳಬೇಕೋ ಅಥವಾ ಶಾಂತಿಯಿಂದ ರಾಜ್ಯ ನಡೆಸಬೇಕೋ ಎಂದು ಜನರೇ ತೀರ್ಮಾನಿಸಲಿ ಎಂದು ಅವರು ಹೇಳಿದರು.
ಪಿಎಸ್‌ಐ ಪರೀಕ್ಷೆ ಬಗ್ಗೆ ಚರ್ಚೆ
ಪಿಎಸ್‌ಐ ಪರೀಕ್ಷೆ ಅಕ್ರಮದ ಬಗ್ಗೆ ಹಿರಿಯ ಅಧಿಕಾರಿಗಳ ಜತೆ ಚರ್ಚಿಸಿದ್ದೇನೆ. ಮುಂದೆ ಯಾವ ರೀತಿ ಕ್ರಮ ಕೈಗೊಳ್ಳಬೇಕು ಎಂದು ನಿರ್ಧರಿಸುತ್ತೇವೆ. ನೇರವಾಗಿ ಅಥವಾ ಪರೋಕ್ಷವಾಗಿ ಭಾಗಿಯಾದವರ ವಿರುದ್ಧ ಕ್ರಮ ಕೈಗೊಳ್ಳಲು ಹಿಂದೇಟು ಹಾಕುವುದಿಲ್ಲ ಎಂದರು.