Advertisement

ಬಜರಂಗದಳ, ಶ್ರೀರಾಮ ಸೇನೆ ನಿಷೇಧ ನಿರ್ಧಾರವಿಲ್ಲ

06:05 AM Jan 07, 2018 | Team Udayavani |

ತೀರ್ಥಹಳ್ಳಿ/ಸಾಗರ: ಪಿಎಫ್‌ಐ, ಬಜರಂಗದಳ, ಶ್ರೀರಾಮ ಸೇನೆ ಸೇರಿದಂತೆ ಯಾವುದೇ ಸಂಘಟನೆಯನ್ನು ನಿಷೇಧಿ ಸುವ ನಿರ್ಧಾರವನ್ನು ರಾಜ್ಯ ಸರ್ಕಾರ ತೆಗೆದುಕೊಂಡಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

Advertisement

ಶಿವಮೊಗ್ಗ ಜಿಲ್ಲೆಯ ಸಾಗರ, ತೀರ್ಥಹಳ್ಳಿ ಹಾಗೂ ಚಿಕ್ಕಮಗಳೂರಿನಲ್ಲಿ  ಶನಿವಾರ ನಡೆದ ಸಾಧನಾ ಸಂಭ್ರಮ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. 

ಪಿಎಫ್‌ಐ, ಬಜರಂಗದಳ, ಶ್ರೀರಾಮ ಸೇನೆ ಸೇರಿದಂತೆ ಯಾವುದೇ ಸಂಘಟನೆಯನ್ನು ನಿಷೇಧಿ ಸುವ ನಿರ್ಧಾರವನ್ನು ರಾಜ್ಯ ಸರ್ಕಾರ ತೆಗೆದುಕೊಂಡಿಲ್ಲ. ಆದರೆ, ಕೋಮುವಾದ ಬೆಳೆಸುವ ಪ್ರಯತ್ನವನ್ನು ಯಾರೇ ಮಾಡಿದರೂ ಅದನ್ನು ಸಹಿಸಲಾಗಲ್ಲ. ಅಂತವರ ವಿರುದ್ಧ ತನಿಖೆ ನಡೆಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.

ಕಾಂಗ್ರೆಸ್‌ನ ನೀತಿ, ಸಿದ್ಧಾಂತ ಒಪ್ಪಿ ಬರುವವರಿಗೆ ಸ್ವಾಗತವಿದೆ. ಆದರೆ, ಆರೆಸ್ಸೆಸ್‌, ಎಬಿವಿಪಿ ಹಿನ್ನೆಲೆಯಿರುವ ರಾಜಕಾರಣಿಗಳಿಗೆ ಪಕ್ಷದಲ್ಲಿ ಅವಕಾಶ ಇಲ್ಲ. ಈ ಚುನಾವಣೆ ರಾಹುಲ್‌- ಮೋದಿ ನಡುವಣ ಅಥವಾ ತಮ್ಮ ಹಾಗೂ ಅಮಿತ್‌ ಶಾ ನಡುವಣ ಅಥವಾ ಸಿದ್ದರಾಮಯ್ಯ-ಯಡಿಯೂರಪ್ಪ ನಡುವಿನ ಚುನಾವಣೆಯಲ್ಲ. ಇದು ಜಾತ್ಯತೀತತೆ ಮತ್ತು ಕೋಮುವಾದದ ನಡುವೆ ನಡೆಯುವ ಚುನಾವಣೆ. ಪ್ರಜಾಪ್ರಭುತ್ವ ಉಳಿಸುವ ಚುನಾವಣೆ. ಬಿಜೆಪಿ-ಕಾಂಗ್ರೆಸ್‌ ವಿಭಿನ್ನ ತಾತ್ವಿಕತೆ ಹೊಂದಿರುವ ಪಕ್ಷಗಳಾಗಿದ್ದು, ಆ ತತ್ವಗಳ ನಡುವಣ ಚುನಾವಣೆ ಎಂದರು.

ನಿವೃತ್ತಿ ವಯಸ್ಸು ಏರಿಕೆ ಪ್ರಸ್ತಾಪ ಇಲ್ಲ: ಸರ್ಕಾರಿ ನೌಕರರ ನಿವೃತ್ತಿ ವಯಸ್ಸನ್ನು 62ಕ್ಕೆ ಏರಿಸುವ ಯಾವುದೇ ಪ್ರಸ್ತಾವ ಇಲ್ಲ. ಅಲ್ಲದೆ, 6ನೇ ವೇತನ ಆಯೋಗದ ಮಧ್ಯಂತರ ವರದಿಯನ್ನು ಪಡೆಯಲಾಗುತ್ತಿಲ್ಲ. ನೇರವಾಗಿ ಅಂತಿಮ ವರದಿ ಬಂದ ನಂತರ ಕ್ರಮಕ್ಕೆ ಮುಂದಾಗಲಾಗುವುದು ಎಂದು ಇದೇ ವೇಳೆ ಮುಖ್ಯಮಂತ್ರಿ  ಸ್ಪಷ್ಟಪಡಿಸಿದರು.

Advertisement

ಕಾರ್ಯಕ್ರಮಕ್ಕೆ ಬನ್ನಿ ಎಂದು ಗೋಗರೆಯಬೇಕೆ?: ಈಗ ನಾವು ನಡೆಸುತ್ತಿರುವುದು ಸರ್ಕಾರಿ ಕಾರ್ಯಕ್ರಮ. ಇದರಲ್ಲಿ ಪಾಲ್ಗೊಳ್ಳಲು ಎಲ್ಲ ವಿರೋಧ ಪಕ್ಷದ ನಾಯಕರಿಗೆ ಪ್ರೊಟೋಕಾಲ್‌ ಪ್ರಕಾರ ಅವಕಾಶ ಕಲ್ಪಿಸಲಾಗಿರುತ್ತದೆ. ನಾನು ಕಾರ್ಯಕ್ರಮಕ್ಕೆ ಬನ್ನಿ ಎಂದು ವಿರೋಧ ಪಕ್ಷದವರ ಮನೆಗೆ ಹೋಗಿ ಗೋಗರೆಯಬೇಕೇ ಎಂದು ಸಿದ್ದರಾಮಯ್ಯ  ಪ್ರಶ್ನಿಸಿದರು. ವಿರೋಧ ಪಕ್ಷದವರು ಬಾರದಿದ್ದರೆ ಇದನ್ನು ಕಾಂಗ್ರೆಸ್‌ ಪಕ್ಷದ ಕಾರ್ಯಕ್ರಮ ಎಂದು ಕರೆಯುವುದು ಸರಿಯಲ್ಲ ಎಂದರು.

ಸಂವಿಧಾನದ ಮೇಲೆ ನಂಬಿಕೆ ಇಲ್ಲದವರು ಶಾಸಕರಲ್ಲ. ಗ್ರಾಪಂ ಸದಸ್ಯರಾಗಲು ಕೂಡ ಅನರ್ಹರು. ಸಮಾಜದಲ್ಲಿ ಅಶಾಂತಿ ಸೃಷ್ಟಿಸುವವರು ಎಂದಿಗೂ ಅ ಧಿಕಾರಕ್ಕೆ ಬರಬಾರದು. ಎಲ್ಲಾ ಜಾತಿ- ಧರ್ಮದ ಜನತೆಯನ್ನು ಒಂದಾಗಿ ತೆಗೆದುಕೊಂಡು ಹೋಗುವವರು ಮಾತ್ರ ಸಮಾಜದ ಎಲ್ಲಾ ವರ್ಗಕ್ಕೆ ನ್ಯಾಯ ಒದಗಿಸಬಲ್ಲರು.
– ಸಿದ್ದರಾಮಯ್ಯ, ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next