Advertisement

ಕಚ್ಚಾ ರಸ್ತೆಗಳೇ ಈ ಗ್ರಾಮದ ದೊಡ್ಡ ಸಮಸ್ಯೆ

10:29 AM Jul 05, 2022 | Team Udayavani |

ಬಜಪೆ: ಮಂಗಳೂರು ವಿಮಾನ ನಿಲ್ದಾಣದ ರನ್‌ವೇಯ ಪೂರ್ವತಟದಲ್ಲಿದೆ ಕೊಳಂಬೆ ಗ್ರಾಮ. ದೇಶ ವಿದೇಶಗಳ ವಿಮಾನಗಳು ಬಂದಿಳಿಯುವ ಸುತ್ತಲಿನ ಪ್ರದೇಶವಾದರೂ ಒಮ್ಮೆ ಗ್ರಾಮಕ್ಕೆ ಭೇಟಿ ನೀಡಿದರೆ, ಕುಗ್ರಾಮದಂತೆ ತೋರುತ್ತಿದೆಯಲ್ಲ ಎಂದೆನಿಸುವುದು ಸಹಜ.

Advertisement

ಇದಕ್ಕೆ ಮೂಲ ಕಾರಣವೆಂದರೆ ಹಲವಾರು ರಸ್ತೆಗಳು ಇನ್ನೂ ಕಚ್ಚಾ ಸ್ಥಿತಿಯಲ್ಲಿವೆ. ಜೈನ ಅರಸರು ಆಡಳಿತ ನಡೆಸಿದ ಪ್ರದೇಶವಿದು. ಇಲ್ಲಿಗೆ ಇನ್ನೂ ಅಭಿವೃದ್ಧಿಯ ಬೆಳಕು ಸರಿಯಾಗಿ ಹರಿದಿಲ್ಲ. ಗ್ರಾಮದ ವಿಸ್ತೀರ್ಣ 2711.49 ಹೆಕ್ಟೇರ್‌. ಕೃಷಿ ಭೂಮಿ 1,570 ಹೆಕ್ಟೇರ್‌ ಗಳಿವೆ. 1,787 ಕುಟುಂಬಗಳಿದ್ದು, ಜನಸಂಖ್ಯೆ 5,592.

ಹೊಗೆಪದವು, ಕೌಡೂರು, ಬೇಡೆಮಾರ್‌, ಕೌಡೂರು ಕೋರೆ, ತಲ್ಲದ ಬೈಲು, ಕೊಡಮಣಿತ್ತಾಯ ದೈವಸ್ಥಾನ ಮುಂತಾದವುಗಳ ರಸ್ತೆ ಅಭಿವೃದ್ಧಿ ಕಂಡಿವೆ. ಆದರೆ ಕೌಡೂರು ಸೈಟ್‌ಗೆ ಹೋಗುವ ಕೆಂಪೆನೆ ರಸ್ತೆ,ಕೌಡೂರು ಶ್ರೀ ಕಾಲಭೈರವ ದೇವಸ್ಥಾನ ರಸ್ತೆ, ಕಿನ್ನಿಕಂಬಳ ಶಾಲಾ ಹಿಂಬದಿಯ ರಸ್ತೆ, ಈಶ್ವರ ಕಟ್ಟೆಯಿಂದ ಸೈಟ್‌ ಪಕ್ಕ ರಸ್ತೆ, ಕೌಡೂರು ಎರೆಮೆಯಿಂದ ಶ್ರೀ ಕೊಡಮಣಿತ್ತಾಯ ರಸ್ತೆ, ಕಜೆ ಕೊಳಂಬೆ ಪಿಲಿಚಾಮುಂಡಿ ರಸ್ತೆ, ಹೊಗೈ ಪದವಿನಿಂದ ಬದ್ರಗುರಿ ಬೈಲು ಕೊಲ್ಪೆ ರಸ್ತೆ, ಕಜೆ ಖಂಡಿತ್ತಾಯ ದೈವಸ್ಥಾನ ರಸ್ತೆ, ಪುಚ್ಚಾಳದಿಂದ ಕಜೆ ದಡ್ಡಿ ದೇವರಗುಡ್ಡೆ ರಸ್ತೆ, ಫಾದರ್‌ ಮುಲ್ಲರ್‌ ಆಸ್ಪತ್ರೆ ಹಿಂಬದಿ ಕಚ್ಚಾ ರಸ್ತೆಗಳಾಗಿದ್ದು, ಅಭಿವೃದ್ಧಿಗೊಳ್ಳಬೇಕಿವೆ. ವಿಟ್ಲಬೆಟ್ಟು ನಿಂದ ಮಡಿತನಕ ವಿಮಾನ ನಿಲ್ದಾಣದ ರನ್‌ ವೇ ನೀರು ಹರಿದು ಬರುತ್ತಿದ್ದು ಕೆಲವೆಡೆ ಗುಡ್ಡ ಕುಸಿತ ಕಂಡಿದೆ. ಈ ಪ್ರದೇಶದಲ್ಲಿ ತಡೆಗೋಡೆ ಹಾಗೂ ಚರಂಡಿ ಶೀಘ್ರ ನಿರ್ಮಾಣವಾಗಬೇಕು. ಹೂಳು ತುಂಬಿದ ಅಯ್ಯರ ಗುಂಡಿ ಕೆರೆ ಅಭಿವೃದ್ಧಿ ಮಾಡಿದರೆ, ಒಂದಿಷ್ಟು ಅನುಕೂಲವಾಗಲಿದೆ.

ಬೈಲ ಬೀಡು’ ಅರಸು ಮನೆತನದ ಇತಿಹಾಸ

Advertisement

ಜೈನ ಅರಸಾದ ಬೈಲು ಬೀಡು ಬಲ್ಲಾಳ ವಂಶದವರು ಮೂಡುಕರೆ,ಕೊಳಂಬೆ,ಅದ್ಯಪಾಡಿ ಮತ್ತು ಕಂದಾವರ ಗ್ರಾಮಗಳನ್ನು ಅಳುತ್ತಿದ್ದರು. ಈ ಸೀಮೆಯಲ್ಲಿ ನಾಲ್ಕು ಮಾಗಣೆಗುತ್ತುಗಳಾದ ಕೊಳಂಬೆ ಗ್ರಾಮದ ಎತಮೊಗರುಗುತ್ತು, ಕೊಳಂಬೆ ಗುತ್ತು ಮತ್ತು ಮೂಡುಕರೆ, ಅದ್ಯಪಾಡಿಗುತ್ತು. ಬಲ್ಲಾಳನಿಗೆ ಪಟ್ಟ ಕಟ್ಟುವಾಗ ಬಲ್ಲಾಳನ ಕೈಹಿಡಿದು ಪಟ್ಟದ ಮಂಚದ ಮೇಲೆ ಕುಳಿತುಕೊಳ್ಳುವ ಅಧಿಕಾರವು ಎತಮೊಗರು ಗುತ್ತಿನವರಿಗೆ, ಪಟ್ಟದ ಉಂಗುರವನ್ನು ಬಲ್ಲಾಳನ ಕೈಬೆರಳಿಗೆ ಇಡುವ ಅಧಿಕಾರ ಮೂಡುಕರೆ ಗುತ್ತಿನವರಿಗೆ, ಪಟ್ಟದ ಕತ್ತಿಯನ್ನು ಬಲ್ಲಾಳನ ಕೈಯಲ್ಲಿ ಕೊಡುವ ಅಧಿಕಾರ ಕೊಳಂಬೆಗುತ್ತಿನವರಿಗೆ, ಪಟ್ಟದ ಹೆಸರನ್ನು ಕರೆಯುವ ಅಧಿಕಾರ ಅದ್ಯಪಾಡಿಗುತ್ತಿನವರಿಗಿತ್ತು.ಇವರ ಪಟ್ಟದ ಉಂಗುರದ ಮೇಲೆ ಶ್ರೀ ಆದಿನಾಥೇಶ್ವರ ಎಂದು ಇತ್ತು ಎಂದು ಹೇಳಲಾಗುತ್ತದೆ.

ಬೈಲು ಬೀಡು ಬಲ್ಲಾಳ ವಂಶದವರಿಗೆ ಬೈಲ ಬೀಡು ,ಕಾಪು ಬೀಡು 2ಬೀಡುಗಳ ಆಡಳಿತ ಗಳಿತ್ತು. ಕೊಳಂಬೆಯಲ್ಲಿರುವ ಬೈಲಬೀಡು ಸುಮಾರು 100 ವರ್ಷಗಳ ಹಿಂದೆ ಹೊಸದಾಗಿ ಕಟ್ಟಿಸಿದ್ದಾಗಿದೆ. ಅದಕ್ಕಿಂತ ಮುನ್ನ ಅದ್ಯಪಾಡಿಯ ಕೆಳಗಿನ ಬೀಡು ವಿನಲ್ಲಿ ಅರಸ ಮನೆತನದವರಿದ್ದರು. ಅ ಪ್ರದೇಶದಲ್ಲಿ ನೆರೆ ಬರುವ ಕಾರಣ ಬೈಲ ಬೀಡಿಗೆ ಸ್ಥಳಾಂತರಗೊಳ್ಳಲಾಗಿತ್ತು ಎನ್ನಲಾಗುತ್ತದೆ. ಬೈಲ ಬೀಡಿನ ಪಟ್ಟದ ಹೆಸರು ಬಲ್ಲಾಳ. ಕಾಪು ಬೀಡಿನ ಪಟ್ಟದ ಹೆಸರು ಮರ್ದ ಹೆಗ್ಗಡೆ. ಇದರಿಂದಾಗಿ ಈ ಎರಡು ಬೀಡುಗಳ ಅರಸ ಚಂದ್ರರಾಜ ಸಾವಂತ ಮರ್ದ ಹೆಗ್ಗೆಡೆ ಬಲ್ಲಾಳ ಎಂದು ಕರೆಯಲಾಗುತ್ತಿತ್ತು. ಅವರು ಪಟ್ಟಾಭಿಷೇಕವಾದ ಬೈಲಬೀಡು ಮನೆತನದ ಕೊನೆಯ ಅರಸರು. ಬೈಲ ಬೀಡಿ ಪಕ್ಕದಲ್ಲಿ ಮಹಾಪುರುಷರಾದ “ವೀರ ಅನಂತಯ್ಯ’ ಮತ್ತು “ವಿಕ್ರಮ ಅನಂತಯ್ಯ ‘ ಅವರ ಗುಡಿ ಇದೆ. ಊರಿನವರು ಅವರನ್ನು ಭಕ್ತಿಯಿಂದ “ಪೆರಿಯಾಕಳು’ ಎನ್ನುತ್ತಾರೆ. ಇವರು ಮೂಡಬಿದಿರೆ ಚೌಟ ಅರಸರ ಅಳಿಯಂದಿರು ಎಂಬ ಪ್ರತೀತಿಯಿದೆ. ಅಲ್ಲಿರುವ ಮೂರ್ತಿಗೆ ಸುಮಾರು 900 ಮತ್ತು 1000 ವರ್ಷಗಳ ಇತಿಹಾಸ ಇರುವ ನಂಬಿಕೆ. ಇದನ್ನು ಮರದಿಂದ ಮಾಡಿದ್ದು, ಅದಕ್ಕೆ ನೈಸರ್ಗಿಕ ಬಣ್ಣವನ್ನು ಲೇಪಿಸಲಾಗಿದೆ.

ವ್ಯಾಪ್ತಿ ಕೊಳಂಬೆಯಲ್ಲಿ, ಹೆಸರು ಬಜಪೆಗೆ

ಹಳೆ ವಿಮಾನ ನಿಲ್ದಾಣ ಹಾಗೂ ಹಳೆ ವಿಮಾನ ನಿಲ್ದಾಣ ರನ್‌ವೇ ಯ ಕೆಲವು ಭಾಗ. ಅದಕ್ಕೆ‌ ಹೋಗುವ ರಸ್ತೆ-ಎಲ್ಲವೂ ಕೊಳಂಬೆ ಗ್ರಾಮದ ವ್ಯಾಪ್ತಿಯಲ್ಲಿ ಬಂದರೂ ಕೇಳಿಬರುವ ಹೆಸರು ಬಜಪೆ ವಿಮಾನ ನಿಲ್ದಾಣವೆಂದೇ ಕರೆಯಲಾಗುತ್ತದೆಅದೇ ರೀತಿ ಕೊಳಂಬೆ ವ್ಯಾಪ್ತಿಯಲ್ಲಿರುವ ಜಾನ್‌ ದ್ವಿತೀಯ ಪೌಲ್‌ ಪುಣ್ಯಕ್ಷೇತ್ರ ಇದ್ದರೂ ಬಜಪೆಯ ಹೆಸರು ಲಗತ್ತಾಗಿದೆ.

ಕೌಡೂರು ಸೈಟ್‌ನಲ್ಲಿ 187 ಮಂದಿಗೆ ಮನೆ ನಿವೇಶನದ ಜಾಗದ ನಕ್ಷೆ ತಯಾರಿ ನಡೆದಿದೆ. ಕುಡಿಯುವ ನೀರಿನ ಟ್ಯಾಂಕ್‌ ನಿರ್ಮಿಸಲಾಗಿದೆ. ಮೂಲ ಸೌಕರ್ಯಗಳನ್ನು ಒದಗಿಸಿ, 2-3 ತಿಂಗಳುಗಳಲ್ಲಿ ನಿವೇಶನದ ಹಕ್ಕುಪತ್ರ ವಿತರಿಸಲಾಗುವುದು. – ಉಮೇಶ್‌ ಮೂಲ್ಯ, ಅಧ್ಯಕ್ಷರು, ಕಂದಾವರ ಗ್ರಾ.ಪಂ

-ಸುಬ್ರಾಯ ನಾಯಕ್‌ ಎಕ್ಕಾರು

Advertisement

Udayavani is now on Telegram. Click here to join our channel and stay updated with the latest news.

Next