Advertisement

ಬರಿದಾಗುತ್ತಿದೆ ಬಜೆ ಅಣೆಕಟ್ಟು !: ಉಡುಪಿ ನಗರಕ್ಕೆ ತಟ್ಟಲಿದೆ ನೀರಿನ ಬಿಸಿ

11:16 AM Mar 24, 2019 | keerthan |

ಉಡುಪಿ: ಬೇಸಗೆ ತಾಪ ದಿನದಿಂದ ದಿನಕ್ಕೆ ಏರುತ್ತಿದೆ. ಜನರಿಗೆ ಕುಡಿಯುವ ನೀರಿನ ಸಮಸ್ಯೆ ಈಗಲೇ ತಟ್ಟಿದ್ದು, ಮುಂದೇನು ಅನ್ನುವ ಪ್ರಶ್ನೆ ಕಾಡಲಾರಂಭಿಸಿದೆ.

Advertisement

ಸ್ವರ್ಣಾ ನದಿಗೆ ನಿರ್ಮಿಸಿರುವ ಬಜೆ ಅಣೆಕಟ್ಟಿನಲ್ಲಿ ಪ್ರತೀ ವರ್ಷ ಮಾರ್ಚ್‌ ತಿಂಗಳ ಕೊನೆ, ಎಪ್ರಿಲ್‌ ತಿಂಗಳ ಆರಂಭದಲ್ಲಿ ನೀರಿನ ಮಟ್ಟ ಇಳಿಮುಖವಾಗುತ್ತಿತ್ತು. ಆದರೆ ಈಗ ಮಾರ್ಚ್‌ನಲ್ಲೇ ಬರಿದಾಗುತ್ತಿದ್ದು, ಸಮಸ್ಯೆ ಉಲ್ಬಣಿಸುವ ಲಕ್ಷಣಗಳು ಗೋಚರಿಸುತ್ತಿವೆ.
ಬಜೆಯಲ್ಲಿ ನೀರಿನ ಸಮಸ್ಯೆ ಹೊಸದೇನಲ್ಲ. 2017 ಎಪ್ರಿಲ್‌- ಮೇಯಲ್ಲಿ ಸಮಸ್ಯೆ ಗಂಭೀರವಾ ಗಿತ್ತು. 2018ರಲ್ಲಿ ಸಮಸ್ಯೆ ಆರಂಭವಾಗುತ್ತಿದ್ದಂತೆ ಮಳೆ ಸುರಿದ ಕಾರಣ ಅನುಭವಕ್ಕೆ ಬಂದಿರಲಿಲ್ಲ. ಪ್ರಸ್ತುತ 4.34 ಮೀ. ನೀರಿದೆ. ಕಳೆದ ವರ್ಷ 5.35 ಮೀ. ಇತ್ತು.

ಅಸಮರ್ಪಕ ನೀರು ಪೂರೈಕೆ
ಅಧಿಕಾರಿಗಳು ನೀರು ಪೂರೈಕೆ ಸಮರ್ಪಕವಾಗಿದೆ ಎಂದು ಹೇಳಿದರೂ ನಗರದ ಕೆಲವು ಕಡೆ ಸರಿಯಾಗಿಲ್ಲ ಎಂದು ಸಾರ್ವಜನಿಕರು ದೂರುತ್ತಿದ್ದಾರೆ. ಅಲ್ಲೆಲ್ಲ ಟ್ಯಾಂಕರ್‌ ನೀರಿನ ಮೊರೆಹೋಗುತ್ತಿದ್ದಾರೆ. ಆದರೆ ಅಧಿಕಾರಿಗಳು ಸರಿಯಾಗಿ ಸ್ಪಂದಿಸುತ್ತಿಲ್ಲ ಎಂಬುದು ಸ್ಥಳೀಯರ ಆರೋಪ.

ಹೂಳೆತ್ತದಿರುವುದೇ ಕಾರಣ!
ಹಿಂದೆಲ್ಲ ಒಳ ಹರಿವು ಕೊನೆಯಾಗುವ ಜನವರಿ ಒಳಗೆ ಅಣೆಕಟ್ಟಿಯ ಹೂಳೆತ್ತಲಾಗುತ್ತಿತ್ತು. ಆದರೆ ಎರಡು ವರ್ಷಗಳಿಂದ ಇದು ನಡೆದಿಲ್ಲ. ಪ್ರಸ್ತುತ 2 ಮೀ.ಗೂ ಅಧಿಕ ಹೂಳು ತುಂಬಿದ್ದು, ಮೇಲೆತ್ತಲು ಅಧಿಕಾರಿಗಳು ಮೀನಮೇಷ ಎಣಿಸುತ್ತಿದ್ದಾರೆ. ಹೂಳೆತ್ತುವುದನ್ನು ಮರಳುಗಾರಿಕೆ ಎಂದು ವ್ಯಾಖ್ಯಾನಿಸಿಕೊಂಡು ಕಾಲಹರಣ ನಡೆಸಲಾಗಿದೆ. “ಮರಳುಗಾರಿಕೆ’ ಕಾನೂನು ಮುಖ್ಯವೋ ಕುಡಿಯುವ ನೀರು ಮುಖ್ಯವೋ ಎಂದು ಕಾನೂನು ಪಂಡಿತರು ತೀರ್ಮಾನಿಸಬೇಕಾದ ಸ್ಥಿತಿ ಇದೆ.

ಬೇಡಿಕೆ ಅಧಿಕ; ಪೂರೈಕೆ ಕಡಿಮೆ
ನಗರಕ್ಕೆ ದಿನವೊಂದಕ್ಕೆ ಸುಮಾರು 35 ದಶಲಕ್ಷ ಲೀ. ನೀರು ಅಗತ್ಯ. ಆದರೆ ಸದ್ಯಕ್ಕೆ 25 ದಶಲಕ್ಷ ಲೀ. ಮಾತ್ರ ಪೂರೈಕೆಯಾಗುತ್ತಿದೆ. ಇದು ನಗರಸಭೆಗೆ ದೊಡ್ಡ ಸವಾಲು. ನಗರಾಡಳಿತಕ್ಕೆ ಚುನಾಯಿತ ಪ್ರತಿನಿಧಿಗಳಿದ್ದರೂ ಸರಕಾರದ ಮೀಸಲಾತಿ ಉಪದ್ವಾéಪದಿಂದ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯಾಗಿಲ್ಲ, ನಗರಸಭಾ ಸದಸ್ಯರು ಪ್ರಮಾಣ  ವಚನ ಸ್ವೀಕರಿಸಿಲ್ಲ. ಇನ್ನೊಂದೆಡೆ ಚುನಾಯಿತ ಪ್ರತಿನಿಧಿಗಳಿದ್ದರೂ ಅವರಿಗೆ ಯಾವ ಹಕ್ಕೂ ಇಲ್ಲದೆ ಅಧಿಕಾರಿಗಳ “ರಾಜ್‌’ ನಡೆಯುತ್ತಿದೆ.

Advertisement

ವಾರಾಹಿ ಯೋಜನೆಯೊಂದೇ ಪರಿಹಾರ!
ನಗರಕ್ಕೆ 24 ಗಂಟೆ ನೀರುಣಿಸುವ ಮಹತ್ವಾಕಾಂಕ್ಷಿ ವಾರಾಹಿ ಯೋಜನೆ ಯಶಸ್ವಿಯಾದರೆ ವಾರಾಹಿಯು ಸ್ವರ್ಣೆಯೊಂದಿಗೆ ಬೆರೆತು ನಗರಕ್ಕೆ ಹರಿದೀತು. ಆದರೆ
ಈ ಯೋಜನೆ ಸುಲಭದಲ್ಲಾಗುವಂಥದ್ದಲ್ಲ. ಕಾರ್ಯರೂಪಕ್ಕೆ
ಬರುವವರೆಗೆ ಮಾಡಬಹುದಾದ ಪರ್ಯಾಯ ಯೋಜನೆ ಗಳ ಬಗ್ಗೆ ಆಡಳಿತ ವ್ಯವಸ್ಥೆ ಗಮನಹರಿಸಬೇಕಿದೆ.

ಗ್ರಾ.ಪಂ. ಮಟ್ಟದಲ್ಲಿ ಟೆಂಡರ್‌
ಗ್ರಾಮೀಣ ಭಾಗಗಳಲ್ಲಿ ಕುಡಿಯುವ ನೀರು ಪೂರೈಕೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಅಗತ್ಯ ಇರುವಲ್ಲಿ ಟ್ಯಾಂಕರ್‌ ಮೂಲಕವೂ ವಿತರಿಸಲಾಗುತ್ತಿದೆ. ಟ್ಯಾಂಕರ್‌ಗಳಿಗೆ ಜಿಪಿಎಸ್‌ ಅಳವಡಿಸಲಾಗಿದ್ದು, ಯಾವ ಮೂಲದಿಂದ ನೀರು ಸಂಗ್ರಹಿಸಿ ಎಲ್ಲಿ ವಿತರಣೆಯಾಗುತ್ತಿದೆ ಎಂಬುದನ್ನು ಗಮನಿಸಲು ಸಾಧ್ಯವಾಗುತ್ತದೆ. ಟ್ಯಾಂಕರ್‌ ನೀರು ಪೂರೈಕೆ ಟೆಂಡರ್‌ ಪ್ರಕ್ರಿಯೆ ಗ್ರಾ.ಪಂ. ಮಟ್ಟದಲ್ಲೇ ನಡೆಯುತ್ತಿದ್ದು, ಕಾರ್ಕಳ ಮತ್ತು ಕುಂದಾಪುರ ತಾಲೂಕಿನಲ್ಲಿ ಪೂರ್ಣಗೊಂಡಿದೆ. ಉಡುಪಿ ತಾಲೂಕಿನಲ್ಲಿಯೂ ಶೀಘ್ರ ಪೂರ್ಣಗೊಳಿಸಲಾಗುವುದು. ಹಣಕಾಸಿನ ಕೊರತೆ ಇಲ್ಲ ಎಂದು ಜಿ.ಪಂ. ಸಿಇಒ ಸಿಂಧೂ ಬಿ. ರೂಪೇಶ್‌ ತಿಳಿಸಿದ್ದಾರೆ.

ನಾಳೆಯಿಂದ 3 ದಿನಕ್ಕೊಮ್ಮೆ ನೀರು
ಬಜೆ ನೀರಿನ ಮಟ್ಟ ಕುಸಿಯು ತ್ತಿರುವುದರಿಂದ ಮುಂಜಾಗರೂಕತೆ ಕ್ರಮವಾಗಿ ಉಡುಪಿ ನಗರಸಭೆ ವ್ಯಾಪ್ತಿಯಲ್ಲಿ ಮಾ.25ರಿಂದ ಮೂರು ದಿನಕ್ಕೊಮ್ಮೆ ನೀರು ಪೂರೈಕೆ ಮಾಡಲು ನಿರ್ಧರಿಸಲಾಗಿದೆ ಎಂದು ನಗರಸಭೆ ಆಡಳಿತಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ತಿಳಿಸಿದ್ದಾರೆ.

ಸ್ವರ್ಣಾ ನದಿಯಲ್ಲಿ ತುಂಬಿದ ಹೂಳನ್ನು ಎರಡು ವರ್ಷಗಳಿಂದ ತೆಗೆದಿಲ್ಲ. ಈ ಬಗ್ಗೆ ಗಮನ ಹರಿಸಲಾಗುವುದು.
 ರಾಘವೇಂದ್ರ, ಎಂಜಿನಿಯರ್‌

ಪುನೀತ್‌ ಸಾಲ್ಯಾನ್‌

Advertisement

Udayavani is now on Telegram. Click here to join our channel and stay updated with the latest news.

Next