Advertisement

ಬಜತ್ತೂರು: ಕುಸಿಯುವ ಹಂತದಲ್ಲಿ ಗುಡ್ಡ 

12:31 PM Jul 13, 2018 | |

ಉಪ್ಪಿನಂಗಡಿ: ಬಜತ್ತೂರು ಗ್ರಾಮದ ಎಂಜಿರಡ್ಕ ಜನತಾ ಕಾಲನಿಯಲ್ಲಿ ಗುಡ್ಡವೊಂದು ಕುಸಿಯುವ ಹಂತದಲ್ಲಿದೆ. ಪಕ್ಕದಲ್ಲೇ 2 ಮನೆಗಳು ಇದ್ದು, ಗುಡ್ಡ ಯಾವುದೇ ಸಂದರ್ಭದಲ್ಲಿ ಈ ಮನೆಗಳ ಮೇಲೆ ಕುಸಿದು ಬೀಳುವ ಸಾಧ್ಯತೆ ಇದೆ. ಅಪಾಯದ ಅಂಚಿನಲ್ಲಿರುವ ಎರಡೂ ಮನೆಯವರು ದಿನಂಪ್ರತಿ ಭೀತಿಯಿಂದಲೇ ದಿನ ಕಳೆಯುವಂತಾಗಿದೆ.

Advertisement

ಎಂಜಿರಡ್ಕ ಜನತಾ ಕಾಲನಿ ನಿವಾಸಿ ಹಸೈನಾರ್‌ ಅವರ ಮನೆಗೆ ತಾಕಿಕೊಂಡು ಗುಡ್ಡ ಇದೆ. ಪಕ್ಕದಲ್ಲಿ ರಾಮಣ್ಣ ಅವರ ಮನೆ ಇದೆ. ನಿರಂತರ ಮಳೆಯ ನೀರು ಗುಡ್ಡದ ಬದಿಯಿಂದಲೇ ಹೋಗುತ್ತಿದ್ದು, ಗುಡ್ಡದ ಮಣ್ಣು ಮೃದುವಾಗುತ್ತಿರುವುದು ಕಂಡುಬಂದಿದೆ. ಯಾವುದೇ ಸಂದರ್ಭದಲ್ಲಿ ಧರೆ ಕುಸಿದು ಬೀಳುವ ಲಕ್ಷಣ ಇದೆ. ಕುಸಿದರೆ ಎರಡೂ ಮನೆಗಳಿಗೆ ಅಪಾಯ ಕಟ್ಟಿಟ್ಟ ಬುತ್ತಿ.

ಅಧಿಕಾರಿಗಳೇ  ಇತ್ತ ಗಮನ ಹರಿಸುವಿರಾ?
ಕಳೆದೊಂದು ತಿಂಗಳಿನಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಹಲವು ಕಡೆ ಗುಡ್ಡ ಕುಸಿದು ಮನೆಗಳಿಗೆ ಹಾನಿಯಾಗಿರುವುದು ವರದಿಯಾಗುತ್ತಲೇ ಇದೆ. ಮೊನ್ನೆಯಷ್ಟೇ ಪುತ್ತೂರು ಹೆಬ್ಟಾರ ಬೈಲುವಿನಲ್ಲಿ ಗುಡ್ಡ ಕುಸಿದು ಮನೆ ಮೇಲೆ ಬಿದ್ದು ಇಬ್ಬರು ಮೃತಪಟ್ಟಿದ್ದಾರೆ. ಸಂಭವನೀಯ ಅವಘಡ ತಪ್ಪಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಎಂಜಿರಡ್ಕದತ್ತ ಗಮನ ಹರಿಸಬೇಕು ಎನ್ನುವುದು ಗ್ರಾಮಸ್ಥರ ಆಗ್ರಹವಾಗಿದೆ.

ದೂರು ನೀಡಿದ್ದೇವೆ; ಪ್ರಯೋಜನವಾಗಿಲ್ಲ
ಅಪಾಯಕಾರಿ ಗುಡ್ಡದ ಕುರಿತು ಗ್ರಾ.ಪಂ.ಗೆ ದೂರು ನೀಡಿದ್ದೇವೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ನಾನು ಕೂಲಿ ಮಾಡಿಕೊಂಡು ಪತ್ನಿ ಮತ್ತು ಮೂವರು ಮಕ್ಕಳೊಂದಿಗೆ ಜೀವನ ನಿರ್ವಹಿಸುತ್ತಿದ್ದೇನೆ. ಅದೇ ರೀತಿ ನೆರೆಮನೆಯ ರಾಮಣ್ಣ ಅವರು ಪತ್ನಿ, ಮೂವರು ಮಕ್ಕಳೊಂದಿಗೆ ಕೂಲಿ ಕೆಲಸ ಮಾಡಿಕೊಂಡು ಜೀವನ ನಿರ್ವಹಿಸುತ್ತಿದ್ದಾರೆ. ನಾವು ಎರಡೂ ಮನೆಯವರು ಯಾವಾಗ ಏನಾಗುತ್ತದೋ ಎನ್ನುವ ಭೀತಿಯಲ್ಲೇ ದಿನ ಕಳೆಯುತ್ತಲಿದ್ದೇವೆ. ಅದರಲ್ಲೂ ರಾತ್ರಿಯಲ್ಲಿ ಮಳೆಯ ಸದ್ದಾಗುತ್ತಲೇ ಎಚ್ಚರವಾಗುತ್ತದೆ. ನಿದ್ದೆಯೂ ಸರಿಯಾಗಿ ಹತ್ತುವುದಿಲ್ಲ.
ಹಸೈನಾರ್‌
ಎಂಜಿರಡ್ಕ ನಿವಾಸಿ

ಪರಿಶೀಲನೆ ನಡೆಸಿ ಕ್ರಮ
ಗುಡ್ಡ ಕುಸಿತ ಸಾಧ್ಯತೆ ಬಗ್ಗೆ ಗಮನಕ್ಕೆ ಬಂದಿದೆ. ಗುಡ್ಡಕ್ಕೆ ತಡೆಗೋಡೆ ನಿರ್ಮಿಸಲು ಗ್ರಾ.ಪಂ.ನಲ್ಲಿ ಅನುದಾನ ಇಲ್ಲ. ಆದರೂ ಸ್ಥಳೀಯರ ಮನವಿಯಂತೆ ಸ್ಥಳ ಪರಿಶೀಲನೆ ನಡೆಸಿ ಸೂಕ್ತ ಕ್ರಮಕ್ಕೆ ಪ್ರಯತ್ನಿಸುತ್ತೇನೆ.
 - ಸಂತೋಷ್‌ ಕುಮಾರ್‌
ಬಜತ್ತೂರು ಗ್ರಾ.ಪಂ. ಅಧ್ಯಕ್ಷರು

Advertisement
Advertisement

Udayavani is now on Telegram. Click here to join our channel and stay updated with the latest news.

Next