Advertisement

ಭಜನ ಸಂಭ್ರಮಕ್ಕೆ ಹರಿದು ಬಂದ ಜನಸಾಗರ

10:28 PM Dec 29, 2019 | Team Udayavani |

ಈಶ್ವರಮಂಗಲ: ಮಂಗಳೂರು ಮಹಾವಿಭಾಗ ಭಜನ ಮಹಾಮಂಡಲ ಮತ್ತು ಶ್ರೀ ಕ್ಷೇತ್ರ ಹನುಮಗಿರಿ ವತಿಯಿಂದ ಹನುಮಗಿರಿ ಕ್ಷೇತ್ರದಲ್ಲಿ ನಡೆಯುವ ಬೃಹತ್‌ ಭಜನ ಸಂಭ್ರಮ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಯಿತು. ಮಂಗಳೂರು ವಿಭಾಗದ (ದ.ಕ., ಉಡುಪಿ, ಕಾಸರಗೋಡು, ಕೊಡಗು ಜಿಲ್ಲೆಗಳ) ಸಾವಿರಕ್ಕೂ ಮಿಕ್ಕಿ ಭಜನ ಮಂಡಳಿಗಳು‌ ಭಜನ ಸಂಭ್ರಮ 2019ರಲ್ಲಿ ಭಾಗವಹಿಸಿದ್ದವು.

Advertisement

ಹನುಮಗಿರಿ ಗಜಾನನ ವಿದ್ಯಾಸಂಸ್ಥೆಯ ಆವರಣದಲ್ಲಿ 9 ಕೇಂದ್ರಗಳನ್ನು ತೆರೆದು ನೋಂದಣಿ ಕಾರ್ಯ ನಡೆಸಲಾಯಿತು. ಉಪಾಹಾರ ಮತ್ತು ಭೋಜನ ವ್ಯವಸ್ಥೆಗೆ ವೈದೇಹಿ ಸಭಾಭವನದ ಸಮೀಪ ವಿಶಾಲವಾದ ಚಪ್ಪರದ ವ್ಯವಸ್ಥೆ ಮಾಡಲಾಗಿತ್ತು. 5 ಗೋಷ್ಠಿಗಳು ನಡೆಸುವ ಸ್ಥಳಗಳನ್ನು ಗುರುತಿಸಿ, ಸಂತರ ಹೆಸರನ್ನು ಇಡಲಾಗಿತ್ತು.

ಕೇಸರಿ ತೋರಣ
ಈಶ್ವರಮಂಗಲ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಪೇಟೆಯನ್ನು ಕೇಸರಿ ತೋರಣ, ಭಗವಾಧ್ವಜದೊಂದಿಗೆ ಸಿಂಗರಿಸಿದ್ದಾರೆ. ಮೇ| ಸಂದೀಪ್‌ ಉಣ್ಣಿಕೃಷ್ಣನ್‌ ವೃತ್ತವನ್ನು ಬಿಎಂಎಸ್‌ ಚಾಲಕ ಮಾಲಕರ ಸಂಘದ ಪದಾಧಿಕಾರಿಗಳು ಸಿಂಗರಿಸಿದ್ದಾರೆ. ಪೇಟೆಯಿಂದ ದೇವಸ್ಥಾನಕ್ಕೆ ಬರುವ ದಾರಿಯಲ್ಲಿ ಕೇಸರಿ ತೋರಣಗಳಿಂದ ಸಿಂಗರಿಸಲಾಗಿತ್ತು.

ವಿಶಾಲ ಪಾರ್ಕಿಂಗ್‌ ವ್ಯವಸ್ಥೆ
ಐತಿಹಾಸಿಕ ಕಾರ್ಯಕ್ರಮಕ್ಕೆ ಪುತ್ತೂರು ತಾಲೂಕಿನ ಕೆಎಸ್‌ಆರ್‌ಟಿಸಿ ಘಟಕದಿಂದ ಬೆಳಗ್ಗೆ 7ರಿಂದ ರಾತ್ರಿ 8 ಗಂಟೆಯವರೆಗೆ ಸರಕಾರಿ ಬಸ್ಸುಗಳು ಓಡಾಡಿದವು. ಸುಮಾರು 20 ಸಾವಿರಕ್ಕಿಂತಲೂ ಹೆಚ್ಚು ಭಕ್ತರು ಪಾಲ್ಗೊಂಡಿದ್ದು, ಈಶ್ವರಮಂಗಲ ಪಂಚಲಿಂಗೇಶ್ವರ ದೇವಸ್ಥಾನದ ಸಮೀಪ, ಹನುಮಗಿರಿ ಗಜಾನನ ವಿದ್ಯಾಸಂಸ್ಥೆಯ ವಠಾರ ಹಾಗೂ ಈಶ್ವರಮಂಗಲ ಪೆಟ್ರೋಲ್‌ ಬಂಕ್‌ ಬಳಿ ಪಾರ್ಕಿಂಗ್‌ ವ್ಯವಸ್ಥೆ ಮಾಡಲಾಗಿತ್ತು.

15 ಸಾವಿರಕ್ಕೂ ಅಧಿಕ ಮಂದಿಗೆ ಪಾಕತಜ್ಞ ಶಿವಪ್ರಸಾದ್‌ ಕೊಚ್ಚಿ ಅವರ ನೇತೃತ್ವದಲ್ಲಿ 20 ಬಾಣಸಿಗರು ಸೇರಿ ಬೆಳಗ್ಗಿನ ಉಪಾಹಾರಕ್ಕೆ ಇಡ್ಲಿ, ಸಾಂಬಾರು, ಅವಲಕ್ಕಿ, ಮೊಸರು, 11 ಗಂಟೆಗೆ ಮಜ್ಜಿಗೆ, ಮಧ್ಯಾಹ್ನ ಊಟಕ್ಕೆ ಅನ್ನ, ಸಾರು, ಸಾಂಬಾರು, ಕ್ಯಾಬೇಜ್‌ ಪಲ್ಯ, ಕಡ್ಲೆಬೇಳೆ ಪಾಯಸ ಸಿದ್ಧಪಡಿಸಿದ್ದು, ಸ್ವಯಂಸೇವಕರು ಅಚ್ಚುಕಟ್ಟಾಗಿ ಉಣಬಡಿಸಿದರು. ಭೋಜನಕ್ಕೆ ನಿರ್ಮಿಸಿದ ಬೃಹತ್‌ ಚಪ್ಪರದಲ್ಲಿ 10 ಕೌಂಟರ್‌ಗಳನ್ನು ತೆರೆಯಲಾಗಿತ್ತು. ಸಾವಿರಕ್ಕಿಂತಲೂ ಹೆಚ್ಚು ಸ್ವಯಂಸೇವಕರು ಕಾರ್ಯಕ್ರಮದ ಅಚ್ಚುಕಟ್ಟುತನಕ್ಕೆ ಸಹಕರಿಸಿದರು.

Advertisement

ಅಚ್ಚುಕಟ್ಟು ಕಾರ್ಯಕ್ರಮ
ಶನಿವಾರ ರಾತ್ರಿ ಸುರಿದ ಭಾರೀ ಮಳೆ ಆತಂಕ ಉಂಟು ಮಾಡಿದ್ದರೂ ಕಾರ್ಯಕ್ರಮ ಯಾವುದೇ ಸಮಸ್ಯೆಯಿಲ್ಲದೆ ಅಚ್ಚುಕಟ್ಟಾಗಿ ನಡೆದಿದ್ದು ಎಲ್ಲರ ಪ್ರಶಂಸೆಗೆ ಪಾತ್ರವಾಯಿತು. ಬೆಳಗ್ಗೆ ದೂರದೂರಿನಿಂದ ಭಜನ ತಂಡಗಳು ಆಗಮಿಸಿದ್ದು, ನೋಂದಣಿ ಕಾರ್ಯ ಮಧ್ಯಾಹ್ನದ ವರೆಗೂ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next