ನವದೆಹಲಿ:ಬಜಾಜ್ ಆಟೋ ಕಂಪನಿ ನೂತನ ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದ್ದು, 2020ರ ಜನವರಿಯಿಂದ ಚೇತಕ್ ಇ-ಸ್ಕೂಟರ್ ಮಾರಾಟ ಆರಂಭವಾಗಲಿದೆ ಎಂದು ತಿಳಿಸಿದೆ.
ಬಜಾಜ್ ಇ-ಸ್ಕೂಟರ್ ಅನ್ನು ಪ್ರಾಥಮಿಕವಾಗಿ ಪುಣೆ ಮತ್ತು ಬೆಂಗಳೂರಿನಲ್ಲಿ ಪ್ರೊ ಬೈಕಿಂಗ್ ನೆಟ್ ವರ್ಕ್ ಮೂಲಕ ಬಿಡುಗಡೆ ಮಾಡಲಾಗುವುದು ಎಂದು ಬಜಾಜ್ ಆಟೋ ಆಡಳಿತ ನಿರ್ದೇಶಕ ರಾಜೀವ್ ಬಜಾಜ್ ತಿಳಿಸಿದ್ದು, ಸದ್ಯ ಬಜಾಜ್ ಚೇತಕ್ ಇ-ಸ್ಕೂಟರ್ ಬೆಲೆಯನ್ನು ಬಹಿರಂಗಪಡಿಸಿಲ್ಲ. ಆದರೆ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಬೆಲೆಯನ್ನು ಸ್ಪರ್ಧಾತ್ಮಕವಾಗಿ ನಿಗದಿಪಡಿಸುವುದಾಗಿ ತಿಳಿಸಿದ್ದಾರೆ.
ದೇಶದ ಜನಪ್ರಿಯ ಬಜಾಜ್ ಆಟೋ ಸಂಸ್ಥೆಯ ಬಜಾಜ್ ಚೇತಕ್ ಮೂರು ದಶಕಗಳ ಕಾಲ ಮಾರುಕಟ್ಟೆಯಲ್ಲಿ ಹವಾ ಎಬ್ಬಿಸಿತ್ತು. 1972ರಿಂದ 2006ರವರೆಗೆ ಬಜಾಜ್ ಚೇತಕ್ ದೇಶದ ಬಹುಬೇಡಿಕೆಯ ವಾಹನವಾಗಿತ್ತು.
ನೂತನ ಆಕರ್ಷಕ ಮಾದರಿಯಲ್ಲಿ ರಸ್ತೆಗಿಳಿಯಲಿರುವ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಗೆ ಸ್ಟ್ಯಾಂಡರ್ಡ್ 5-15ಎಎಂಪಿ ಎಲೆಕ್ಟ್ರಿಕಲ್ ಔಟ್ ಲೆಟ್ ಗಳಲ್ಲಿ ಬ್ಯಾಟರಿ ಚಾರ್ಜ್ ಮಾಡಬಹುದಾಗಿದೆ. ಇ-ಸ್ಕೂಟರ್ ನಲ್ಲಿ ಇಂಟೆಲಿಜೆಂಟ್ ಬ್ಯಾಟರಿ ಮ್ಯಾನೇಜ್ ಮೆಂಟ್ ಸಿಸ್ಟಮ್ ಇದೆ. ಇದು ಚಾರ್ಜ್ ಕಂಟ್ರೋಲ್ ಮತ್ತು ಡಿಸ್ ಚಾರ್ಜ್ ನಿರ್ವಹಣೆ ಮಾಡಲಿದೆ. ಅಷ್ಟೇ ಅಲ್ಲ ಗ್ರಾಹಕರಿಗೆ ಮನೆಯಲ್ಲಿಯೇ ಚಾರ್ಚ್ ಸ್ಟೇಷನ್ ಅವಕಾಶ ನೀಡಲಾಗುತ್ತದೆ ಎಂದು ವರದಿ ತಿಳಿಸಿದೆ. ಬಜಾಜ್ ಚೇತಕ್ ಎರಡು ಡ್ರೈವಿಂಗ್ ಮಾದರಿಯ ಆಫರ್ ನೀಡಿದ್ದು, ಇಕೋ(95ಕಿಲೋ ಮೀಟರ್ ದೂರ) ಮತ್ತು ಸ್ಪೋರ್ಟ್ (85 ಕಿಲೋ ಮೀಟರ್ ದೂರ) ಮಾದರಿ ಎಂದು ತಿಳಿಸಿದೆ.
ಕುತೂಹಲದ ಸಂಗತಿ ಏನೆಂದರೆ ಇ-ಸ್ಕೂಟರ್ ನಲ್ಲಿ ಎಲ್ಲಿಯೂ ಬಜಾಜ್ ಬ್ರ್ಯಾಂಡಿಂಗ್ ಯಾವುದೇ ಲೋಗೋ ಹೊಂದಿಲ್ಲ.
*ಆರು ಬಣ್ಣಗಳಲ್ಲಿ ಚೇತಕ್ ಇ ಸ್ಕೂಟರ್ ಲಭ್ಯ
*2020ರಲ್ಲಿ ಚೇತಕ್ ಬಜಾಜ್ ಇ ಸ್ಕೂಟರ್ ಮಾರುಕಟ್ಟೆಯಲ್ಲಿ ಲಭ್ಯ
*ಇ-ಸ್ಕೂಟರ್ ಬೆಲೆ ಇನ್ನಷ್ಟೇ ಬಹಿರಂಗಗೊಳ್ಳಬೇಕು