Advertisement

ಬಜೆ ಡ್ಯಾಂ: ಇನ್ನೆರಡು ದಿನಗಳಲ್ಲಿ ನೀರು ಶೇಖರಣೆ ಆರಂಭ

01:48 PM Dec 07, 2020 | Suhan S |

ಉಡುಪಿ, ಡಿ. 6: ಬಿಸಿಲಿನ ಝಳ ತೀವ್ರಗೊಳ್ಳುತ್ತಿದ್ದು ಗರಿಷ್ಠ ತಾಪಮಾನ 35 ಡಿಗ್ರಿ ಸೆಲ್ಸಿಯಸ್‌ ತಲುಪಿದೆ. ಈ ನಡುವೆ ನಗರಕ್ಕೆ ನೀರಿನ ಮೂಲವಾಗಿರುವ ಸ್ವರ್ಣಾ ನದಿಯ ಬಜೆ ಅಣೆಕಟ್ಟಿನಲ್ಲಿ ನೀರಿನ ಸಂಗ್ರಹ, ಲಭ್ಯತೆ ಅನುಸಾರ ಬಳಸಲು ನಗರಸಭೆ ಕಾರ್ಯ ಯೋಜನೆಗಳನ್ನು ರೂಪಿಸಿದ್ದು, ಜೂನ್‌ ತಿಂಗಳವರೆಗೆ ನಿರಂತರ ನೀರು ಸರಬರಾಜು ನಡೆಯುವಂತೆ ರೂಪುರೇಖೆ ಸಿದ್ಧಪಡಿಸಲಾಗುತ್ತಿದೆ.

Advertisement

ಈ ಬಾರಿ ಮಳೆ ಹೆಚ್ಚಾಗಿದ್ದ ಕಾರಣ ನೀರಿನ ಒಳಹರಿವು ಉತ್ತಮವಾಗಿದೆ. ಈ ಹಿಂದಿನ ಕೆಲವು ವರ್ಷಗಳಲ್ಲಿ ಡಿಸೆಂಬರ್‌ ತಿಂಗಳಾಂತ್ಯಕ್ಕೆ ಬಜೆ ಡ್ಯಾಂನಲ್ಲಿ ನೀರು ಸಂಗ್ರಹಿಸಿ ಅನಂತರ ಶಿರೂರು ಡ್ಯಾಂನಲ್ಲಿ ನೀರು ಸಂಗ್ರಹ ಮಾಡಲಾಗುತ್ತಿತ್ತು. ಇದರಿಂದಾಗಿ 2017-18ನೇ ಸಾಲಿನಲ್ಲಿ ನಗರದಲ್ಲಿ ನೀರಿನ ಬಹುದೊಡ್ಡ ಸಮಸ್ಯೆ ಎದುರಾಗಿತ್ತು.

ಡಿಸೆಂಬರ್ಮೊದಲ  ವಾರದಲ್ಲೇ ನೀರು ಸಂಗ್ರಹ  : ಇನ್ನೆರಡು ದಿನಗಳೊಳಗೆ ಬಜೆ ಡ್ಯಾಂನಲ್ಲಿಯೂ ನೀರು ಸಂಗ್ರಹ ಮಾಡಲಾಗುತ್ತದೆ. ಡ್ಯಾಂನ ಮಟ್ಟಕ್ಕೆ ನೀರನ್ನು ಶೇಖರಿಸಿಡಲಾಗುತ್ತದೆ. ಅನಂತರ ಶಿರೂರು ಡ್ಯಾಂನಲ್ಲಿಯೂ ಇದೇ ರೀತಿ ನೀರು ಶೇಖರಣೆ ನಡೆಯಲಿದೆ. ಬಜೆ ಅಣೆಕಟ್ಟಿನಲ್ಲಿ ಶನಿವಾರ 5.21 ಮೀ. ಹಾಗೂ ರವಿವಾರ 5.20 ಮೀ.ನೀರಿತ್ತು. ಹಿಂದಿನ ವರ್ಷವೂ ಈ ದಿನ ನೀರಿನ ಪ್ರಮಾಣ ಇಷ್ಟೇ  ಪ್ರಮಾಣದಲ್ಲಿತ್ತು. ಈಗಲೇ ನೀರು ಶೇಖರಿಸಿದರೆ ಮೇ ಅಂತ್ಯದವರೆಗೆ ನೀರಿಗೆ ಯಾವುದೇ ಸಮಸ್ಯೆ ಎದುರಾಗದು ಎನ್ನುವುದು ನಗರಸಭೆ ಅಧಿಕಾರಿಗಳ ಲೆಕ್ಕಾಚಾರ.

ತ್ವರಿತಗತಿಯಲ್ಲಿ ನಿರ್ವಹಣೆ : ನಗರದ ಕೆಲವೆಡೆ ನೀರು ಸರಬರಾಜು ತಾಂತ್ರಿಕ ಕಾರಣಗಳಿಂದ ವ್ಯತ್ಯಯವಾಗುತ್ತಿತ್ತು.ಇವುಗಳನ್ನೆಲ್ಲ ಗಮನಿಸಿ ನೀರು ಪೋಲಾಗುತ್ತಿದ್ದ ಜಾಗದಲ್ಲಿ ದುರಸ್ತಿ ಮಾಡಿ ಪೋಲಾಗದಂತೆ ಎಲ್ಲ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. 250 ಎಚ್‌.ಪಿ. ಸಾಮರ್ಥ್ಯದ ಎರಡು ಪಂಪ್‌ಗ್ಳಲ್ಲಿ ನೀರೆತ್ತಲಾಗುತ್ತಿದ್ದು, ಮುನ್ನೆಚ್ಚರಿಕೆ ದೃಷ್ಟಿಯಿಂದ ಹೆಚ್ಚುವರಿಯಾಗಿ 20.50 ಲ.ರೂ. ವೆಚ್ಚದಲ್ಲಿ ಹೊಸ ಪಂಪ್‌ ಖರೀದಿಸಲು ಅನುಮೋದನೆ ಪಡೆದುಕೊಳ್ಳಲಾಗಿದೆ. ಪ್ರಸ್ತುತ ಎರಡು ಪಂಪ್‌ಗ್ಳು ತಲಾ 12 ಗಂಟೆಗಳಂತೆ ನೀರನ್ನು ಸರಬರಾಜು ಮಾಡುತ್ತಿವೆ. ಪಂಪ್‌ ಕೆಟ್ಟುಹೋದರೆ ಪರ್ಯಾಯವಾಗಿ ಹೊಸ ಪಂಪ್‌ ಬಳಕೆಗೆ ಬರಲಿದೆ.

ನೀರಿನ ಬಳಕೆ ನಿಯಂತ್ರಣ ಅಗತ್ಯಬೇಸಗೆ ಕಾಲ ಆಗಮಿಸುತ್ತಿದ್ದು, ಸಾರ್ವಜನಿಕರು  ನೀರು ಪೋಲು ಮಾಡದೆ ಉಪಯೋಗಿಸಿದರೆ ಉತ್ತಮ. ಮುಂದೆ ಬಿಸಿಲು ಜಾಸ್ತಿಯಾಗುವಾಗ ಮತ್ತಷ್ಟು  ನೀರಿನ ಸಮಸ್ಯೆ ಉಲ್ಬಣವಾಗಬಹುದು. ಈ ಸಮಯದಲ್ಲಿ ದಿನವೊಂದಕ್ಕೆ 3ರಿಂದ 4 ಸೆಂ.ಮೀ.ನಷ್ಟು ನೀರು ಆವಿಯಾಗುವ ಸಾಧ್ಯತೆಗಳಿವೆ. ಈ ಕಾರಣಕ್ಕೆ ಈಗಿನಿಂದಲೇ ನೀರನ್ನು ಎಚ್ಚರಿಕೆಯಿಂದ ಬಳಕೆ ಮಾಡುವಂತೆ ನಾಗರಿಕರು ಗಮನಹರಿಸಬೇಕಿದೆ.

Advertisement

ರೇಷನಿಂಗ್ಇಲ್ಲಕಳೆದ ಕೆಲವು ವರ್ಷಗಳಲ್ಲಿ ಜನವರಿ ಹಾಗೂ ಫೆಬ್ರವರಿ ತಿಂಗಳೊಳಗೆ ನೀರಿನ ರೇಷನಿಂಗ್‌ ನಡೆಯುತ್ತಿತ್ತು. ದಿನಕ್ಕೊಂದು ಬಾರಿ ಅಥವಾ ಎರಡು ದಿನಗಳಿಗೊಮ್ಮೆ ನೀರು ಸರಬರಾಜು ಮಾಡಲಾಗುತ್ತಿತ್ತು. ಆದರೆ ಈ ಬಾರಿ ನೀರು ದಾಸ್ತಾನು ಇರುವ ಕಾರಣ ರೇಷನಿಂಗ್‌ ಮಾಡುವ ಸ್ಥಿತಿ ಎದುರಾಗುವ ಸಾಧ್ಯತೆ ಇಲ್ಲ ಎನ್ನುತ್ತಾರೆ ನಗರಸಭೆ ಅಧಿಕಾರಿಗಳು.

ಒಳಹರಿವು ಉತ್ತಮ :  ಪ್ರಸ್ತುತ ನೀರಿನ ಒಳಹರಿವು ಉತ್ತಮವಾಗಿದೆ. ಈಗಿನಿಂದಲೇ ನೀರನ್ನು ದಾಸ್ತಾನು ಮಾಡಿ ನಗರಕ್ಕೆ ಪ್ರತೀ ದಿನವೂ ನೀರು ಸಿಗುವಂತೆ ಮಾಡಲು ಎಲ್ಲ ರೀತಿಯಿಂದಲೂ ಯತ್ನಿಸಲಾಗುವುದು. ಈಗಾಗಲೇ ನೀರು ಸೋರಿಕೆಯಾಗುವ ಸ್ಥಳಗಳನ್ನು ಗುರುತಿಸಿ ದುರಸ್ತಿಪಡಿಸಲಾಗಿದೆ. ಈ ಮೂಲಕ ಅನಗತ್ಯ ನೀರು ಸೋರಿಕೆಯನ್ನು ತಡೆದು ನಗರಕ್ಕೆ ನಿರಂತರ ನೀರು ಪೂರೈಸುವ ಉದ್ದೇಶ ಹೊಂದಲಾಗಿದೆ.ಮೋಹನ್ರಾಜ್‌,  ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತ, ಉಡುಪಿ ನಗರಸಭೆ

 

ವಿಶೇಷ ವರದಿ

Advertisement

Udayavani is now on Telegram. Click here to join our channel and stay updated with the latest news.

Next