Advertisement

ಬೈರಿಕಟ್ಟೆ-ಕಲ್ಲಜೇರ-ನೆಕ್ಕಿತ್ತಪುಣಿ ರಸ್ತೆ ವಿಸ್ತರಣೆಗೆ ಆಗ್ರಹ

10:25 PM Feb 27, 2021 | Team Udayavani |

ವಿಟ್ಲ: ಅಳಿಕೆ ಗ್ರಾಮದ ಬೈರಿಕಟ್ಟೆ-ಕಲ್ಲಜೇರ-ನೆಕ್ಕಿತ್ತಪುಣಿ ಜಿಲ್ಲಾ ಪಂಚಾಯತ್‌ ರಸ್ತೆಯಲ್ಲಿ ಅಪಾಯ ಕಾದಿದೆ. ರಸ್ತೆಯನ್ನು ವಿಸ್ತರಿಸಿ, ರಸ್ತೆ ಬದಿಯಲ್ಲಿರುವ ಅಪಾಯಕಾರಿ ಹೊಂಡಕ್ಕೆ ಮುಕ್ತಿ ಕಾಣಿಸಬೇಕು ಎಂದು ವಾಹನ ಚಾಲಕರು ಆಗ್ರಹಿಸಿದ್ದಾರೆ.

Advertisement

ಅಳಿಕೆ ಗ್ರಾಮದಲ್ಲಿ ಸುಬ್ರಹ್ಮಣ್ಯ- ಮಂಜೇಶ್ವರ ರಾಜ್ಯ ಹೆದ್ದಾರಿ ಸಾಗುತ್ತದೆ. ಬೈರಿಕಟ್ಟೆ ಅಂಗನವಾಡಿ ಬಳಿ ತಿರುಗಿ ನೆಕ್ಕಿತ್ತಪುಣಿ ದೇವಸ್ಥಾನಕ್ಕೆ ತೆರಳಬಹುದು. ಅಂಗನವಾಡಿ ತಿರುವಿನಿಂದ ಮಡಿಯಾಲ ತನಕ ರಸ್ತೆ ಅಭಿವೃದ್ಧಿಯಾಗಿಲ್ಲ. ಇಕ್ಕಟ್ಟಾಗಿದೆ.

ಎರಡು ಲಘು ವಾಹನಗಳಿಗೆ ಏಕ ಕಾಲದಲ್ಲಿ ಸಂಚರಿಸಲು ಅವಕಾಶ ಇಲ್ಲ. ಘನ ವಾಹನಗಳಾದ ಬಸ್‌, ಲಾರಿ ಸಂಚರಿಸುವ ವೇಳೆ ಇಲ್ಲಿ ಬೇರೆ ಇನ್ನಾವುದೇ ವಾಹನ ಸಂಚರಿಸಲು ಸಾಧ್ಯವಾಗುವುದಿಲ್ಲ. ರಸ್ತೆ ಬದಿಯಲ್ಲಿ ದೊಡ್ಡ ಗುಂಡಿ ಇದೆ. ವಾಹನಗಳು ಪರಸ್ಪರ ಎದುರು ಬದುರಾಗಿ ಸೈಡ್‌ ಕೊಡುವಾಗ ವಾಲಿದರೆ ದೊಡ್ಡದಾದ ಗುಂಡಿಗೇ ಬೀಳುವ ಸ್ಥಿತಿಯಿದೆ.

ಹೇಗೆ ಬಾಕಿಯಾಯಿತು ?
ಮಡಿಯಾಲದಿಂದ ನೆಕ್ಕಿತ್ತಪುಣಿವರೆಗೆ ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿ ರಸ್ತೆ ಅಭಿವೃದ್ಧಿಯಾಗಿದೆ. ಶಕುಂತಳಾ ಟಿ. ಶೆಟ್ಟಿ ಶಾಸಕರಾಗಿದ್ದಾಗ ಈ 1.80 ಕಿ.ಮೀ. ದೂರದ ರಸ್ತೆಗೆ 1.73 ಕೋಟಿ ರೂ. ಅನುದಾನ ಲಭ್ಯವಾಗಿತ್ತು. ಆಗ ಬೈರಿಕಟ್ಟೆ ಅಂಗನವಾಡಿಯಿಂದ ಮಡಿಯಾಲ ತನಕದ 700 ಮೀಟರ್‌ ದೂರದ ರಸ್ತೆ ಏಕಮುಖ ರಸ್ತೆಯಾಗಿಯೇ ಉಳಿದುಬಿಟ್ಟಿತು.

ಶಕುಂತಳಾ ಟಿ.ಶೆಟ್ಟಿ ಅವರ ಅವಧಿಯಲ್ಲೇ ನೆಕ್ಕಿತ್ತಪುಣಿಗೆ ಕೆಎಸ್‌ಆರ್‌ಟಿಸಿ ಬಸ್‌ ಆರಂಭವಾಗಿತ್ತು. ಈ ರಸ್ತೆಯಲ್ಲಿ ರಾತ್ರಿ 7.30ಕ್ಕೆ ಆಗಮಿಸುವ ಬಸ್‌, ಮರುದಿನ ಬೆಳಗ್ಗೆ 7.15ಕ್ಕೆ ತೆರಳುತ್ತದೆ. ಈ ತಿರುವಿನಲ್ಲಿ ಬಸ್‌ ಸಂಚಾರ ಸುಲಭವಲ್ಲ. 700 ಮೀಟರ್‌ ದೂರದ ಏಕಮುಖ ರಸ್ತೆಗೆ ಶಾಸಕ ಸಂಜೀವ ಮಠಂದೂರು ಡಾಮರು ಕಾಮಗಾರಿಗೆ 10 ಲಕ್ಷ ರೂ. ಅನುದಾನ ಮಂಜೂರು ಮಾಡಿದ್ದರು.

Advertisement

ಸೂಕ್ತ ಕ್ರಮಕ್ಕೆ ಆಗ್ರಹ
ನೆಕ್ಕಿತ್ತಪುಣಿ ರಸ್ತೆಯ ಬೈರಿಕಟ್ಟೆ ತಿರುವಿನಿಂದ ಮಡಿಯಾಲ ನಾರಾಯಣ ಭಟ್‌ ಮನೆ ಬಳಿ ತನಕ ರಸ್ತೆ ಅಭಿವೃದ್ಧಿ ಪಡಿಸುವಂತೆ ಮತ್ತು ರಸ್ತೆ ಬದಿಯ ದೊಡ್ಡ ಗುಂಡಿಗೆ ತಡೆಗೋಡೆ ನಿರ್ಮಿಸಲು ಅಳಿಕೆ ಗ್ರಾಮ ಪಂಚಾಯತ್‌ ಮತ್ತು ಜಿ.ಪಂ. ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಮನವಿ ಮಾಡುತ್ತೇನೆ
ಜಿಲ್ಲಾ ಪಂಚಾಯತ್‌ನಲ್ಲಿ ಅನುದಾನವಿಲ್ಲ. ಶಾಸಕರಲ್ಲಿ ಮನವಿ ಮಾಡುತ್ತೇನೆ. ಶಾಸಕರು ಅನುದಾನ ಬಿಡುಗಡೆ ಮಾಡಿದಲ್ಲಿ ತತ್‌ಕ್ಷಣ ಕೂಡಲೇ ಕ್ರಮಕೈಗೊಳ್ಳುತ್ತೇವೆ.
– ಜಗದೀಶ, ಜಿ. ಪಂ., ಎಂಜಿನಿಯರ್‌

700 ಮೀಟರ್‌ ರಸ್ತೆ ವಿಸ್ತರಣೆಯಾಗಬೇಕು
ಕೇವಲ 700 ಮೀಟರ್‌ ದೂರದ ತನಕ ರಸ್ತೆ ಅಭಿವೃದ್ಧಿಯಾಗಬೇಕಾಗಿದೆ. ರಸ್ತೆ ವಿಸ್ತರಣೆ ಮತ್ತು ದೊಡ್ಡ ಹೊಂಡದ ಬಳಿ ತಡೆಗೋಡೆ ನಿರ್ಮಾಣವಾಗಬೇಕಾಗಿದೆ. ಇಷ್ಟು ದೂರದ ರಸ್ತೆಯನ್ನು ಅಭಿವೃದ್ಧಿ ಪಡಿಸಿದಲ್ಲಿ ಬೈರಿಕಟ್ಟೆ-ನೆಕ್ಕಿತ್ತಪುಣಿ ರಸ್ತೆ ಸಂಚಾರ ಸುಗಮವಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next