Advertisement

ಗ್ರಾಪಂ ಅಧ್ಯಕ್ಷ, ಪಿಡಿಒ ಅಧಿಕಾರ ದುರುಪಯೋಗ

08:39 PM Mar 04, 2021 | Team Udayavani |

ಆಲೂರು: ಗ್ರಾಪಂ ಅಧ್ಯಕ್ಷರೊಬ್ಬರು ಅಧಿಕಾರ ವಹಿಸಿಕೊಂಡ ಕೇವಲ 20 ದಿನಗಳಲ್ಲೇ ಸದಸ್ಯರನ್ನು ವಿಶ್ವಾಸಕ್ಕೆ ತಗೆದುಕೊಳ್ಳದೇ, ಬೇಡವಾದ ಕಡೆ ಕಾಮಗಾರಿಪಟ್ಟಿ ತಯಾರಿಸಿ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

Advertisement

ಅಧ್ಯಕ್ಷರು ಹೊಸದಾಗಿ ರೂಪಿಸಿದ ಕಾಮಗಾರಿ ಪಟ್ಟಿಗೆ ತಡೆ ನೀಡುವಂತೆ ಹಾಗೂ ತುರ್ತು ಸಭೆ ಕರೆಯುವಂತೆ ಆಗ್ರಹಿಸಿ ಜಿಪಂ ಸಿಇಒಗೆ 10 ಸದಸ್ಯರು ದೂರು ನೀಡಿದ್ದಾರೆ. ಈ ಘಟನೆ ತಾಲೂಕಿನ ಬೈರಾಪುರ ಗ್ರಾಪಂನಲ್ಲಿ ನಡೆದಿದೆ.

ಗ್ರಾಪಂ ವ್ಯಾಪ್ತಿಯ ಗ್ರಾಮಗಳ ಅಭಿವೃದ್ಧಿಗೆ ಸರ್ಕಾರದಿಂದ 2020-21ನೇ ಸಾಲಿನಲ್ಲಿ 14 ಹಾಗೂ 15ನೇ ಹಣಕಾಸು ಯೋಜನೆಯಡಿಯಲ್ಲಿ ಬಂದಿರುವ ಅನುದಾನದ ಬಗ್ಗೆ ಪಿಡಿಒ ಭವ್ಯಾ ಅವರು, ಕಳೆದ ಗ್ರಾಪಂ ಸಭೆಯಲ್ಲಿ ಸದಸ್ಯರಿಗೆ ಮಾಹಿತಿ ನೀಡದೇ ಅಧ್ಯಕ್ಷರು ಹಾಗೂ ಅವರ ಬಂಬಲಿಗರ ಜೊತೆ ಸೇರಿ ಹಣ ಮಾಡುವ ಉದ್ದೇಶದಿಂದ ಬೇಡವಾದ ಕಡೆ ಅವರ ಅನುಕೂಲಕ್ಕೆ ತಕ್ಕಂತೆ ಕಾಮಗಾರಿ ಪಟ್ಟಿ ತಯಾರಿಸಲಾಗಿದೆ ಎಂದು ಆರೋಪಿಸಲಾಗಿದೆ.

ಕಾಮಗಾರಿ ಪಟ್ಟಿ ತಡೆ ಹಿಡಿಯುವಂತೆ ಸೂಚಿಸಬೇಕು, ತುರ್ತು ಸಭೆ ಕರೆಯಬೇಕೆಂದು ಎಂದು ಆಗ್ರಹಿಸಿ ಹಾಸನ ಜಿಲ್ಲಾ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ತಾಪಂ ಇಒಗೆ ಸದಸ್ಯರು ಮನವಿ ಪತ್ರ ಸಲ್ಲಿಸಿದ್ದಾರೆ.

ಬೆಂಬಲ ನೀಡಿದವರೆ ತಿರುಗಿ ಬಿದ್ರು: ತಾಲೂಕಿನ ಬೈರಾಪುರ ಗ್ರಾಪಂನಲ್ಲಿ 15 ಸದಸ್ಯ ಬಲ ಇದೆ. ಅದರಲ್ಲಿ ಹಾಲಿ ಅಧ್ಯಕ್ಷರಾಗಿರುವ ರವಿಕುಮಾರ್‌ಗೆ ಬೆಂಬಲ ನೀಡಿದ 5 ಜನ ಸದಸ್ಯರೇ 20 ದಿನಗಳಲ್ಲಿಯೇ ತಿರುಗಿ ಬಿದ್ದಿದ್ದು, ರವಿಕುಮಾರ್‌ ನಡೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಅವರ ಗುಂಪಿನವರ ನೇತೃತ್ವದಲ್ಲಿ ಮೇಲಧಿಕಾರಿಗಳಿಗೆ ದೂರು ನೀಡಲಾಗಿದೆ.

Advertisement

ಗ್ರಾಮಗಳ ಅಭಿವೃದ್ಧಿಗಾಗಿ ಸರ್ಕಾರ 15ನೇ ಹಣಕಾಸು ಯೋಜನೆಯಡಿ ಅನುದಾನ ಬಿಡುಗಡೆ ಮಾಡಿದೆ. ಅದರ ಲೆಕ್ಕ ಹಾಗೂ ಆ ಬಗ್ಗೆ ಚರ್ಚೆ ನಡೆಸಲು ತುರ್ತುಸಭೆ ಕರೆಯ ಬೇಕೆಂದು ನಾನು ಸೇರಿ 10 ಸದಸ್ಯರು ಸಹಿ ಮಾಡಿ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಗ್ರಾಮದ ಬಸ್‌ ನಿಲ್ದಾಣ, ಕೊಳವೆಬಾವಿ ಸೇರಿ ಇತರೆ ಆಸ್ತಿಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ವಹಿಸಿಕೊಂಡು 15 ಲಕ್ಷ ರೂ. ಬಿಡುಗಡೆ ಆಗಿದೆ. ಅದರ ಹಣದ ಬಗ್ಗೆ ಮಾಜಿ ಅಧ್ಯಕ್ಷರು, ಸದಸ್ಯರು ಸುದ್ದಿಗೋಷ್ಠಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಹೇಳಿದ್ದಾರೆ. ನಾವು ಕೂಡ ಮುಂದಿನ ಸಭೆಯಲ್ಲಿ ಚರ್ಚೆ ನಡೆಸಿ ತನಿಖೆ ನಡೆಸುವಂತೆ ಹಿರಿಯ ಅಧಿಕಾರಿಗಳನ್ನು ಒತ್ತಾಯಿಸುತ್ತೇವೆ.

( ರುದ್ರೇಗೌಡ, ಸದಸ್ಯರು, ಬೈರಾಪುರ ಗ್ರಾಪಂ )

ಈಗಾಗಲೇ ಅಧ್ಯಕ್ಷರು ಹಾಗೂ ಪಿಡಿಒ ಅವೈಜ್ಞಾನಿಕ ಕಾಮಗಾರಿ ಪಟ್ಟಿಯನ್ನು ತಡೆಹಿಡಿದು ತುರ್ತು ಸಭೆ ಕರೆಯುವಂತೆ  ಜಿಲ್ಲಾ ಹಾಗೂ ತಾಲೂಕಿನ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ. ಅವರು ಕ್ರಮ ಕೈಗೊಳ್ಳುವ ಭರವಸೆ ಇದೆ. ಜವಾಬ್ದಾರಿ ಸ್ಥಾನದಲ್ಲಿರುವವರು ಗ್ರಾಪಂನ ಎಲ್ಲಾ ಸದಸ್ಯರನ್ನು ಒಗ್ಗಟ್ಟಾಗಿ ತಗೆದುಕೊಂಡು ಹೋಗಬೇಕು.

(ಮೋಹನ್‌, ಸದಸ್ಯ. ಬೈರಾಪುರ ಗ್ರಾಪಂ.)

ಕೆಲವರು ಹಣ ಮಾಡುವ ಉದ್ದೇಶ ದಿಂದ ಗ್ರಾಪಂಗೆ ಸಂಬಂಧ ವಿಲ್ಲದವರೂ ಮೂಗು ತೂರಿಸುತ್ತಿದ್ದಾರೆ. ಇದರಿಂದ ಗ್ರಾಮಗಳ ಅಭಿವೃದ್ಧಿಗೆ ತೊಡಕಾಗುತ್ತಿದೆ. ಅವರಿಗೆ ಬೆಂಬಲ ನೀಡಿದವರೇ ಈಗ ತಿರುಗಿ ಬಿದ್ದಿದ್ದಾರೆ. ಅವರು ಒಳ್ಳೆಯ ಕೆಲಸಗಳಿಗೆ ಸಂಪೂರ್ಣವಾಗಿ ಸಹಕಾರ ನೀಡಲಾಗುವುದು, ಗ್ರಾಮಗಳ ಅಭಿವೃದ್ಧಿ ದೃಷ್ಟಿಯಿಂದ ಸಭೆ ಕರೆದು ಚರ್ಚಿಸುವ ಅವಶ್ಯಕತೆ ಇದೆ. ಹಿರಿಯ ಅಧಿಕಾರಿಗಳ ಅದೇಶದಂತೆ ಪಿಡಿಒ ತಕ್ಷಣವೇ ಸಭೆ ಕರೆಯಬೇಕು.

(ಗಣೇಶ್‌, ಸದಸ್ಯ, ಬೈರಾಪುರ ಗ್ರಾಪಂ )

ಬೈರಾಪುರ ಗ್ರಾಪಂ ಎಂದರೆ ಭ್ರಷ್ಟಾಚಾರ ಎಂದು ಜನ ಸಾಮಾನ್ಯರು ಅಸಹ್ಯ ಪಡುತ್ತಾರೆ. ಶಾಸಕರು ಹಾಗೂ ಜೆಡಿಎಸ್‌ ಅಧ್ಯಕ್ಷರ ಬಗ್ಗೆ ವೈಯಕ್ತಿಕವಾಗಿ ಗೌರವವಿದೆ. ಆದರೆ, ಗ್ರಾಮ ಪಂಚಾಯ್ತಿಯಲ್ಲಿ ಜೆಡಿಎಸ್‌ ಬೆಂಬಲಿತ ರವಿಕುಮಾರ್‌ ಅಧ್ಯಕ್ಷರಾಗಿದ್ದಾರೆ. ಅವರು ಕೇವಲ 20 ದಿನದಲ್ಲೇ ಅಧಿಕಾರ ದುರ್ಬಳಕೆ ಮಾಡಿಕೊಂಡು, ಬೆಂಬಲ ನೀಡಿದ ಸದಸ್ಯರೇ ತಿರುಗಿ ಬೀಳುವಂತೆ ಮಾಡಿದ್ದಾರೆ. ಅದ್ದರಿಂದ ಶಾಸಕರು ಇತ್ತ ಗಮನ ಹರಿಸಬೇಕಿದೆ.

(ಬಿ.ಎಚ್‌.ಧರ್ಮಪ್ಪ, ಕಾಂಗ್ರೆಸ್‌ ಹಿರಿಯ ಮುಖಂಡ.)

  • ಟಿ.ಕೆ.ಕುಮಾರಸ್ವಾಮಿ

 

Advertisement

Udayavani is now on Telegram. Click here to join our channel and stay updated with the latest news.

Next