ಪುನೀತ್ ರಾಜ್ ಕುಮಾರ್ ಅಭಿನಯದ ಜೇಮ್ಸ್ ಚಿತ್ರವು ಮಾ.17ರಂದು ತೆರೆ ಕಾಣಲಿದೆ. ಅಭಿಮಾನಿಗಳು ತಮ್ಮ ಪವರ್ ಸ್ಟಾರ್ ನ ಕೊನೆಯ ಚಿತ್ರವನ್ನು ಸ್ವಾಗತಿಸಲು ತಯಾರಿ ನಡೆಸುತ್ತಿದ್ದಾರೆ. ಅಪ್ಪು ಅಭಿಮಾನಿಗಳ ಜೊತೆಗೆ ಶಿವಣ್ಣನ ಅಭಿಮಾನಿಗಳಿಗೂ ಇದೀಗ ಸಿಹಿ ಸುದ್ದಿಯೊಂದು ಸಿಕ್ಕಿದೆ.
ಹೌದು, ಜೇಮ್ಸ್ ಚಿತ್ರದ ಪ್ರದರ್ಶನದ ಜೊತೆಗೆ ಶಿವರಾಜ್ ಕುಮಾರ್ ಅವರ ಅಭಿನಯದ ಬೈರಾಗಿ ಚಿತ್ರದ ಟೀಸರ್ ಕೂಡಾ ಪ್ರದರ್ಶನವಾಗಲಿದೆ. ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ನಟನೆಯ 123ನೇ ಸಿನಿಮಾ ‘ಬೈರಾಗಿ’ ಇತ್ತೀಚೆಗಷ್ಟೇ ಶೂಟಿಂಗ್ ಮುಗಿಸಿದೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವ ಈ ಚಿತ್ರದ ಟೀಸರ್ ಜೇಮ್ಸ್ ಚಿತ್ರದ ಪ್ರದರ್ಶನವಾಗಲಿದೆ.
‘ಜೇಮ್ಸ್’ ಬಿಡುಗಡೆಯಾಗುವ ಎಲ್ಲಾ ಪರದೆಗಳಲ್ಲೂ ‘ಬೈರಾಗಿ’ ದರ್ಶನವಾಗಲಿದೆ. ಪುನೀತ್ ಅವರ ಸವಿನೆನಪಿಗಾಗಿ ಈ ಟೀಸರ್ ರಿಲೀಸ್ ಮಾಡುತ್ತಿರುವುದಾಗಿ ಚಿತ್ರತಂಡ ಘೋಷಿಸಿದೆ.
‘ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ನಮ್ಮ ತಂಡದ ಜತೆ ಅಪ್ಪು ಒಡನಾಟವಿದೆ. ಹೀಗಾಗಿ ಅವರ ಹುಟ್ಟುಹಬ್ಬದ ಉಡುಗೊರೆಯಾಗಿ ‘ಬೈರಾಗಿ’ ಟೀಸರ್ ಬಿಡುಗಡೆ ಮಾಡುತ್ತಿದ್ದೇವೆ. ಇದು ಪುನೀತ್ ಹಾಗೂ ಶಿವಣ್ಣನ ಅಭಿಮಾನಿಗಳಿಗೆ ಸಂತಸದ ವಿಷಯ’ ಎನ್ನುವುದು ಚಿತ್ರತಂಡದ ಅನಿಸಿಕೆ.
ಇದನ್ನೂ ಓದಿ:ಪುನೀತ್ ರಾಜಕುಮಾರ್ ಗೆ ಮೈಸೂರು ವಿಶ್ವವಿದ್ಯಾನಿಲಯದಿಂದ ಮರಣೋತ್ತರ ಗೌರವ ಡಾಕ್ಟರೇಟ್
ವಿಜಯ್ ಮಿಲ್ಟನ್ ನಿರ್ದೇಶನವಿರುವ ಬೈರಾಗಿ ಚಿತ್ರವನ್ನು ಕೃಷ್ಣ ಸಾರ್ಥಕ್ ನಿರ್ಮಾಣ ಮಾಡಿದ್ದಾರೆ. ಡಾಲಿ ಧನಂಜಯ್, ಹಿರಿಯ ನಟ ಶಶಿಕುಮಾರ್, ಅಂಜಲಿ, ಯಶ್ ಶಿವಕುಮಾರ್ ಸೇರಿದಂತೆ ಹಲವು ಪ್ರಮುಖರು ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಅನೂಪ್ ಸೀಳಿನ್ ಸಂಗೀತ ಸಂಯೋಜನೆಯಿದೆ.