ಬೈಲಹೊಂಗಲ: ಅನೈತಿಕ ಸಂಬಂಧದ ಹಿನ್ನೆಲೆ ಯುವಕನೋರ್ವನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆಗೆ ಯತ್ನ ಮಾಡಿದ ಘಟನೆ ತಾಲೂಕಿನ ಮಲ್ಲಮ್ಮನ ಬೆಳವಡಿ ಗ್ರಾಮದ ಬಸ್ ನಿಲ್ದಾಣದ ಬಳಿ ಡಿ.24ರ ಮಂಗಳವಾರ ಸಂಜೆ ನಡೆದಿದೆ.
ತಾಲೂಕಿನ ಅರವಳ್ಳಿ ಗ್ರಾಮದ ಮಕ್ತುಂಮಸಾಬ ನಜೀರಸಾಬ ತಟಗಾರ (23) ಹಲ್ಲೆಗೊಳಗಾದ ಯುವಕ ಎಂದು ಗುರುತಿಸಲಾಗಿದೆ.
ಸವಟಗಿ ಗ್ರಾಮದ ಮುತ್ತು ಗಣಾಚಾರಿ (37) ಎಂಬವರು ಮಕ್ತುಂಸಾಬ ಎಂಬವರ ಕುತ್ತಿಗೆಗೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದರಿಂದ ತೀವ್ರವಾಗಿ ಗಾಯಗೊಂಡಿದ್ದರು. ರಕ್ತದ ಮಡುವಿನಲ್ಲಿ ನರಳಾಡುತ್ತಿದ್ದ ಯುವಕನನ್ನು ಅಂಬ್ಯಲೆನ್ಸ್ ಮೂಲಕ ಚಿಕಿತ್ಸೆಗಾಗಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನಾ ಸ್ಥಳಕ್ಕೆ ಡಿ.ವೈ.ಎಸ್.ಪಿ. ರವಿ ನಾಯ್ಕ, ಸಿ.ಪಿ.ಐ. ಶಿವಾನಂದ ಗುಡಗನಟ್ಟಿ, ಪಿ.ಎಸ್.ಐ. ಸುಮಾ ಗೊರಾಬಾಳ ಭೇಟಿ ನೀಡಿ ತನಿಖೆ ನಡೆಸಿದ್ದಾರೆ.
ಆರೋಪಿ ಪರಾರಿಯಾಗಿದ್ದು, ಆತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ದೊಡವಾಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.