ಬೈಲಹೊಂಗಲ: ಪಟ್ಟಣದ ಐತಿಹಾಸಿಕ ಮರಡಿ ಬಸವೇಶ್ವರ ಜಾತ್ರೆ ನಿಮಿತ್ತ ಕೃಷಿ ಮೇಳ ಹಾಗೂ ಜಾನುವಾರ ಜಾತ್ರೆ ನಡೆಸಲು ನಿಶ್ಚಯ ಮಾಡಿರುವ ಜಾತ್ರಾ ಕಮೀಟಿಗೆ ಸರ್ಕಾರ ಸಂಪೂರ್ಣವಾಗಿ ಸ್ಪಹಕರಿಸಲಿದೆ ಎಂದು ಶಾಸಕ ಮಹಾಂತೇಶ ಕೌಜಲಗಿ ಹೇಳಿದರು.
ಪಟ್ಟಣದ ಎಪಿಎಂಸಿ ಸಭಾಭವನದಲ್ಲಿ ನಡೆದ ಜಾನುವಾರ ಜಾತ್ರೆ ಹಾಗೂ ಕೃಷಿಮೇಳದ ಪೂರ್ವಭಾವಿ ಸಭೆಯಲ್ಲಿ ಶಾಸಕರು ಮಾತನಾಡಿ, ಬರಗಾಲದಲ್ಲಿ ರೈತರು ಸಂಕಷ್ಟದಲ್ಲಿದ್ದು ಅವರಿಗೆ ಆತ್ಮಸ್ಥೈರ್ಯ ತುಂಬಲು, ಯುವ ಜನತೆಯಲ್ಲಿ ಜಾನುವಾರುಗಳ ಬಗ್ಗೆ ಆಸಕ್ತಿ ಮೂಡಿಸುವ ಮತ್ತು ಕೃಷಿಯಲ್ಲಿ ಆಧುನಿಕತೆಯ ತಂತ್ರಜ್ಞಾನ ಅಳವಡಿಸಿಕೊಳ್ಳಲು ಅನುಕೂಲವಾಗುವಂತೆ ಹಾಗೂ ಕೃಷಿ ಆದಾಯ ಹೆಚ್ಚಿಸಲು ಉಪಕಸುಬು ಕೈಗೊಳ್ಳುವ ಕ್ರಮಗಳ ಬಗ್ಗೆ ನುರಿತ ತಜ್ಞರಿಮದ ಪ್ರಾತ್ಯಕ್ಷಿಕೆ ನಡೆಯಲಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಿವರಂಜನ ಬೋಳಣ್ಣವರ ಮಾತನಾಡಿ, ಬರಗಾಲದಲ್ಲಿ ರೈತರು ಎದೆಗುಂದದೆ ಕಡಿಮೆ ನೀರಿನಲ್ಲಿ ಕೃಷಿ ಹಾಗೂ ಇತರ ಉಪಕಸಬುಗಳಾದ ಜೇನು ಸಾಕಾಣಿಕೆ, ಮೊಲ, ಆಡು, ಕುರಿ, ಕೋಳಿ ಸಾಕಾಣಿಕೆ ಮತ್ತು ಸರ್ಕಾರದಿಂದ ಕೃಷಿಕರಿಗೆ ಸಿಗುವ ಎಲ್ಲ ಸಹಾಯಗಳ ಬಗ್ಗೆ ಐತಿಹಾಸಿಕ ಮರಡಿ ಬಸವೇಶ್ವರ ಜಾತ್ರೆಯಲ್ಲಿ ಜಾನುವಾರು, ಶ್ವಾನ ಪ್ರದರ್ಶನ ಹಾಗೂ ಕೃಷಿ ಮೇಳ ಆಯೊಜಿಸಲಾಗಿದ್ದು ಜಿಲ್ಲೆಯ ಜನತೆ ಇದರ ಸದುಪಯೋಗ ಪಡೆದುಕೊಳ್ಳಬೇಕೆಂದರು.
ಸಭೆಯಲ್ಲಿ ಜಿಲ್ಲಾ ಕೃಷಿ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ, ಹಿರಿಯ ಕನ್ನಡ ಹೋರಾಟಗಾರ ಮಹಾಂತೇಶ ತುರಮರಿ
ಮಾತನಾಡಿ, ಕೃಷಿ ಬಗ್ಗೆ ಜ್ಞಾನ ಹಾಗೂ ಹೊಸ ಉದ್ಯೋಗಕ್ಕೆ ಯುವಕರನ್ನ ಸನ್ನದ್ದಗೊಳಿಸಲು ಈ ಮೇಳವನ್ನು ಆಯೋಜಿಸಲಾಗಿದೆ ಎಂದರು.
ಸಭೆಯಲ್ಲಿ ಸಿ.ಕೆ.ಮೆಕ್ಕೇದ, ರಾಜು ಜನ್ಮಟ್ಟಿ, ಎಫ್. ಎಸ್.ಸಿದ್ದನಗೌಡರ, ಗುರು ಮೆಟಗುಡ್, ಮಡಿವಾಳಪ್ಪ ಹೋಟಿ, ಶ್ರೀಶೈಲ ಯಡಳ್ಳಿ, ಬಾಬು ಸಂಗೋಳ್ಳಿ, ಮಹಾಂತೇಶ ಮತ್ತಿಕೊಪ್ಪ, ಬಸವರಾಜ ಭರಮಣ್ಣವರ, ಮಹೇಶ ಬೆಲ್ಲದ, ಇರಣ್ಣ ಬೆಟಗೇರಿ, ಶೇಖರ ಜತ್ತಿ, ಎಪಿಎಂಸಿ ಜಿಲ್ಲಾ ನಿರ್ದೇಶಕ, ತಹಶಿಲ್ದಾರ, ಕೃಷಿ, ತೊಟಗಾರಿಕೆ, ಕೃಷಿ ವಿವಿ ಹಾಗೂ ಪಶು ಇಲಾಖೆ ಅಧಿಕಾರಿಗಳು, ರೈತ ಮುಖಂಡರು ಇದ್ದರು.