Advertisement

ಸೊರಗುತ್ತಿದೆ ಬೈಲಹೊಂಗಲ ಎಪಿಎಂಸಿ

04:01 PM Feb 24, 2021 | Team Udayavani |

ಬೈಲಹೊಂಗಲ: ಪಟ್ಟಣದಲ್ಲಿ 1936ರಲ್ಲಿ ಆರಂಭಗೊಂಡ ರಾಜ್ಯದ ಪ್ರಥಮ ಕೃಷಿ ಉತ್ಪನ್ನ ಮಾರುಕಟ್ಟೆ (ಎಪಿಎಂಸಿ) ಇಂದು ಕಾಯ್ದೆ ತಿದ್ದುಪಡಿ ಹಾಗೂ ನಿರೀಕ್ಷಿತ ಆದಾಯವಿಲ್ಲದೆ ಸೊರಗುತ್ತಿದೆ.

Advertisement

ಈ ಹಿಂದೆ ರಾಶಿರಾಶಿಯಾಗಿ ಬಿದ್ದಿರುತ್ತಿದ್ದ ಹತ್ತಿ ಅಂಡಿಗೆಗಳು, ಕಿಕ್ಕಿರಿದು ನೆರೆಯುತ್ತಿದ್ದ ರೈತ ಸಮೂಹ, ವಾಹನಗಳ ಭರ್ಜರಿ ಓಡಾಟ, ದಟ್ಟಣೆಎಲ್ಲವೂ ಸ್ತಬ್ಧವಾಗಿದೆ. ಉದ್ದಳೆಯ ಹತ್ತಿಯಿಂದಾಗಿತಮಿಳುನಾಡು, ಮಹಾರಾಷ್ಟ್ರ, ಆಂಧ್ರ, ಗುಜರಾತದ ಪ್ರಸಿದ್ಧ ಬಟ್ಟೆ ಮಿಲ್‌ಗ‌ಳಿಗೆ ಅಚ್ಚುಮೆಚ್ಚಾಗಿ ಭಾರತದಲ್ಲೇ ಪ್ರಸಿದ್ಧಿ ಪಡೆದಿದ್ದ ಈ ಮಾರುಕಟ್ಟೆಯಲ್ಲಿ ಯಾವುದೇ ವಹಿವಾಟಿಲ್ಲದೆ ಬೀಕೊ ಎನ್ನುತ್ತಿದೆ. ಡಿಸಿಹೆಚ್‌-32 ಉದ್ದಳೆಯ ಹತ್ತಿ ದೇಶದಲ್ಲೆ ಇತಿಹಾಸ ಸೃಷ್ಟಿಸಿತ್ತು. ಸುಮಾರು ಐವತ್ತು ಎಕರೆ ವಿಸ್ತೀರ್ಣದ ಮಾರುಕಟ್ಟೆಯಲ್ಲಿ ಮೂವತ್ತು ವರ್ಷಗಳ ಕಾಲ ಈಹತ್ತಿ ವಹಿವಾಟು ಚೆನ್ನಾಗಿತ್ತು. ವಿಪರೀತ ಕ್ರಿಮಿನಾಶಕಗಳ  ಖರ್ಚು-ವೆಚ್ಚದಿಂದ ರೈತರು ಹತ್ತಿ ಬೆಳೆಯುವುದನ್ನು ನಿಲ್ಲಿಸಿದ್ದರಿಂದ ಎಪಿಎಂಸಿಗೆ ಹತ್ತಿ ಬರದೆ ಇರುವ ಕಾರಣ 150 ಕ್ಕಿಂತ ಹೆಚ್ಚಿದ್ದ ಅಂಗಡಿಗಳು ಮುಚ್ಚಿ ಕೇವಲ 15 ಅಂಗಡಿಗಳು ಇಂದು ಕಾರ್ಯ ನಿರ್ವಹಿಸುವಂತಾಗಿದೆ. ಮೂಲಭೂತ ಸೌಕರ್ಯಗಳಿಲ್ಲದೆ ಜಾನುವಾರು ಪೇಟೆ, ರೈತ ಭವನವೂ ಸುವ್ಯವಸ್ಥಿತವಾಗಿಲ್ಲ. ಬೈಲಹೊಂಗಲ, ನೇಸರಗಿ ಎಪಿಎಂಸಿಯಲ್ಲಿ ನಡೆಯುತ್ತಿದ್ದ ದನಗಳಪೇಟೆ ಬಂದಾಗಿದೆ. ಕಿತ್ತೂರ ಎಪಿಎಂಸಿಯಲ್ಲಿ ಮಾತ್ರ ಸೋಮವಾರ ದನಗಳ ಸಂತೆ ನಡೆಯುತ್ತಿದೆ.

ಮೂಲಸೌಕರ್ಯಕ್ಕೆ ಕತ್ತರಿ: ರೈತರು ಹೆಚ್ಚಿನ ಸಂಖ್ಯೆಯಲ್ಲಿ ಮಾರುಕಟ್ಟೆಗೆ ಬಾರದಿರುವುದರಿಂದ ಎಪಿಎಂಸಿ ಆಡಳಿತ ಮಂಡಳಿ ಮತ್ತು ಅಧಿಕಾರಿಗಳು ಮೂಲ ಸೌಕರ್ಯಗಳ ಬಗ್ಗೆ ಗಮನಹರಿಸುತ್ತಿಲ್ಲ. ಕಾಂಕ್ರೀಟ್‌ ನಿಂದ ನಿರ್ಮಾಣವಾದ ದಲಾಲಿ ಅಂಗಡಿಗಳು ಇಲಿ, ಹೆಗ್ಗಣಗಳ ಆವಾಸ ಸ್ಥಾನವಾಗಿ ಪರಿಣಮಿಸಿವೆ. ವಹಿವಾಟು ಇಲ್ಲದೆ, ಕಸವನ್ನು ಗೂಡಿಸುವವರು ಇಲ್ಲದೆ ಕಸಕಡ್ಡಿಯ ತಾಣವಾಗಿ ಪರಿಣಮಿಸಿದೆ.

ವಹಿವಾಟು ವಿವರ: ಸೋಯಾಬೀನ್‌, ಶೇಂಗಾ, ಕಡಲೆ ಬಿಟ್ಟರೆ ಇನ್ನಾವದೆ ಕೃಷಿ ಉತ್ಪನ್ನಗಳ ಮಾರಾಟ ಇಲ್ಲಿ ನಡೆಯುತ್ತಿಲ್ಲ. 2015-16ರಲ್ಲಿ 94.21 ಕೋಟಿ ರೂ.ಗಳ ವಹಿವಾಟು ನಡೆಸಿರುವ ಮಾರುಕಟ್ಟೆ 1.41ಕೋಟಿ ಸೆಸ್‌ ಸಂಗ್ರಹಿಸಿದೆ. 2014-15ರಲ್ಲಿ 193.04 ಕೋಟಿ ರೂ.ವಹಿವಾಟು ನಡೆಸಿ 2.89 ಕೋಟಿ ರೂ. ಆದಾಯ ಗಳಿಸಿತ್ತು. 2013-14ರಲ್ಲಿ 197.96 ಕೋಟಿ ವಹಿವಾಟದೊಂದಿಗೆ 2.96 ಕೋಟಿ ರೂ.ಆದಾಯ ಗಳಿಸಿತ್ತು. 2016-17ರಲ್ಲಿ 2.37 ಕೋಟಿ ಆದಾಯ ಗಳಿಸಿತ್ತು. 2017-18 ರಲ್ಲಿ 2.96 ಕೋಟಿ ರೂ. ಆದಾಯಗಳಿಸಿತ್ತು. 2018-19ರಲ್ಲಿ 3.42 ಕೋಟಿ ರೂ. ಆದಾಯ ಬಂದಿತ್ತು. 2019-20 ರಲ್ಲಿ 3.10 ಕೋಟಿ ರೂ. ಆದಾಯ ಬಂದಿತ್ತು. 2020-21 (ಜನವರಿ 2021 ರವರೆಗೆ)ರಲ್ಲಿ 1.39 ಕೋಟಿ ರೂ. ಆದಾಯ ಬಂದಿದೆ. ಹಣಕಾಸು ವರ್ಷ ಅಂತ್ಯಕ್ಕೆ ಇನ್ನೂ ಮೂರು ತಿಂಗಳು ಮಾತ್ರ ಬಾಕಿ ಇದ್ದು, ಹಿಂದಿನ ವರ್ಷಗಳಿಗೆ ಹೋಲಿಸಿದರೆ ಆದಾಯ ಕಡಿಮೆಯಾಗುವುದು ಖಚಿತವಾಗಿದೆ.

ಸಿಬ್ಬಂದಿ ಕೊರತೆ: ಬೈಲಹೊಂಗಲ ಎಪಿಎಂಸಿ ಕಚೇರಿ ಸಿಬ್ಬಂದಿ ಕೊರತೆ ಎದುರಿಸುತ್ತಿದೆ. ಸುಮಾರು 33 ಸಿಬ್ಬಂದಿಗಳಲ್ಲಿ 10 ಜನ ಮಾತ್ರ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇದರಿಂದ ಕಚೇರಿ ಕೆಲಸಕ್ಕೆತೊಂದರೆಯಾಗಿದೆ. ಸರಕಾರ ನಿಗದಿತ ಸಿಬ್ಬಂದಿ ತುಂಬಿ ಅನುಕೂಲ ಮಾಡಿಕೊಡಬೇಕಿದೆ.

Advertisement

ಈ ಮೊದಲು ಎಪಿಎಂಸಿಯಲ್ಲಿ ವಹಿವಾಟು ಆಗುತ್ತಿದ್ದಾಗ ತೂಕದಲ್ಲಿ ಮೋಸ ಆಗುತ್ತಿರಲಿಲ್ಲ. ಹೊರಗಡೆ ಮಾರಾಟವಾಗುತ್ತಿರುವುದರಿಂದ ತೂಕದಲ್ಲಿ ಮೋಸ, ರೈತರಿಗೆ ತಕ್ಕ ಧಾರಣೆ ಸಿಗುತ್ತಿಲ್ಲ. ಎಪಿಎಂಸಿ ಮುಚ್ಚುವ ಹಂತದಲ್ಲಿದ್ದು, ಎಪಿಎಂಸಿ ಕಾಯ್ದೆ ತಿದ್ದುಪಡಿಯಿಂದ ರೈತರನ್ನು ಕಾರ್ಮಿಕರನ್ನಾಗಿ ಮಾಡುವ ಹುನ್ನಾರ ಇದರಲ್ಲಿ ಅಡಗಿದೆ.  –ಮಹಾಂತೇಶ ಕಮತ, ರಾಜ್ಯ ಪ್ರಧಾನ ಕಾರ್ಯದರ್ಶಿ, ರಾಜ್ಯ ರೈತ ಸಂಘ

ಹೊಸ ಕಾಯ್ದೆ ಪರಿಣಾಮ ಎಪಿಎಂಸಿ ನಿರ್ವಹಣೆ ಕಷ್ಟದಾಯಕವಾಗಿದೆ. ಇಲ್ಲಿಯಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲುತೊಂದರೆಯಾಗಿದೆ. ಈ ಬಗ್ಗೆ ಸರಕಾರಕ್ಕೆ ತಿಳಿಸಲಾಗಿದೆ. ಎಸ್‌.ಎಸ್‌.ಅರಳಿಕಟ್ಟಿ, ಕಾರ್ಯದರ್ಶಿ ಎಪಿಎಂಸಿ, ಬೈಲಹೊಂಗಲ.

ಎಪಿಎಂಸಿಯಲ್ಲಿ ಹೆಚ್ಚಿನ ವಹಿವಾಟು ಆಗುವಂತೆ ಹೊರಗಡೆ ಹತ್ತಿ ಮಾರಾಟ ಬಂದ್‌ ಮಾಡಿ ಎಪಿಎಂಸಿ ವರ್ತಕರ ನಷ್ಟ ತಪ್ಪಿಸಬೇಕು. ಕಾಯ್ದೆ ತಿದ್ದುಪಡಿ ರದ್ದುಪಡಿಸಿಮೊದಲಿದ್ದ ವ್ಯವಸ್ಥೆ ತರಬೇಕು. –ಮಹಾಂತೇಶ ಹಿರೇಮಠ, ತಾಲೂಕಾ ಅಧ್ಯಕ್ಷರು, ರೈತ ಸಂಘ ಮತ್ತು ಹಸಿರುಸೇನೆ

 

ಸಿ.ವೈ.ಮೆಣಶಿನಕಾಯಿ

Advertisement

Udayavani is now on Telegram. Click here to join our channel and stay updated with the latest news.

Next