ಕಲಬುರಗಿ: ಪಿಎಸ್‌ಐ ನೇಮಕಾತಿಯ ಪರೀಕ್ಷೆ ಅಕ್ರಮದಲ್ಲಿ ಬಂಧಿತರಾಗಿರುವ ಅಭ್ಯರ್ಥಿ ಪ್ರಭು ಹಾಗೂ ಅವರ ತಂದೆ ಶರಣಪ್ಪ ಅವರ ಜಾಮೀನು ಅರ್ಜಿಯನ್ನು ಇಲ್ಲಿನ ಮೂರನೇ ಜೆಎಂಎಫ್ ನ್ಯಾಯಾಲಯವು ಬುಧವಾರ ತಿರಸ್ಕರಿಸಿದೆ.
ಕಲಬುರಗಿಯ ಎಂ.ಎಸ್. ಇರಾನಿ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಬ್ಲೂಟೂತ್ ಬಳಸಿ ಪರೀಕ್ಷೆ ಬರೆದ ಪ್ರಭು ಹಾಗೂ ಈ ಅಕ್ರಮಕ್ಕಾಗಿ ಪ್ರಮುಖ ಆರೋಪಿಗಳಿಗೆ ಹಣ ಕೊಟ್ಟಿದ್ದ ಶರಣಪ್ಪ ಅವರನ್ನು ಸಿಐಡಿ ಅಧಿಕಾರಿಗಳು ಎರಡು ವಾರಗಳ ಹಿಂದೆ ಬಂಧಿಸಿದ್ದರು. ಅಭ್ಯರ್ಥಿ ಪ್ರಭು ಹೆಸರು ಪಿಎಸ್‌ಐ ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ಪ್ರಕಟವಾಗಿತ್ತು.
ವಿಚಾರಣೆ ವೇಳೆ ಸಿಐಡಿ ತನಿಖಾಧಿಕಾರಿ ಶಂಕರಗೌಡ ಪಾಟೀಲ ಎದುರು ಅಕ್ರಮ ನಡೆಸಿದ್ದರ ಬಗ್ಗೆ ತಂದೆ, ಮಗ ಇಬ್ಬರೂ ಒಪ್ಪಿಕೊಂಡಿದ್ದರು. ಮೂರನೇ ಜೆಎಂಎಫ್ ನ್ಯಾಯಾಲಯದ ನ್ಯಾಯಾಧೀಶ ಬಸವರಾಜ ನೇಸರಗಿ ಅವರು ಜಾಮೀನು ಅರ್ಜಿಯನ್ನು ತಿರಸ್ಕರಿಸಿದರು.
ಇದರೊಂದಿಗೆ ಪಿಎಸ್‌ಐ ಅಕ್ರಮ ನೇಮಕಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾದ ಎಲ್ಲ ಆರೋಪಿಗಳ ಜಾಮೀನು ಅರ್ಜಿಗಳನ್ನೂ ತಿರಸ್ಕರಿಸಿದಂತಾಗಿದೆ. ಸಿಐಡಿ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕ ಶಿವಶರಣಪ್ಪ ಹೋತಪೇಟ ಹಾಜರಾಗಿದ್ದರು.
ಹಗರಣದ ಪ್ರಮುಖ ಕಿಂಗ್ ಪಿನ್ ಗಳಾದ ರುದ್ರಗೌಡ ಪಾಟೀಲ್, ಮಂಜುನಾಥ ಮೇಳಕುಂದಿ, ಬಿಜೆಪಿ ನಾಯಕಿ ದಿವ್ಯಾ ಹಾಗರಗಿ, ಅಮಾನತು ಗೊಂಡಿರುವ ಡಿವೈಎಸ್ಪಿ ಮಂಜುನಾಥ ಸಾಲಿ ಸೇರಿ ಎಲ್ಲರ ಜಾಮೀನು ಅರ್ಜಿ ತಿರಸ್ಕಾರಗೊಂಡಿದ್ದು, ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾರೆ.
ಇದನ್ನೂ ಓದಿ : ತೆಂಕುತಿಟ್ಟಿನ ಹಿರಿಯ ಭಾಗವತ ಕಾಟುಕುಕ್ಕೆ ಕೊರಗಪ್ಪ ನಾಯ್ಕ ವಿಧಿವಶ