Advertisement

ವಿಭಿನ್ನ ಜಾತಿಯ ಸಸಿಗಳಿಂದ ನಳನಳಿಸುತ್ತಿದೆ ಬೈಕಾಡಿ ಸಸ್ಯಕ್ಷೇತ್ರ

11:14 PM May 06, 2019 | sudhir |

ಬ್ರಹ್ಮಾವರ: ಕಡುಬೇಸಗೆಯಲ್ಲೂ ಅರಣ್ಯ ಇಲಾಖೆಯ ಬೈಕಾಡಿ ಸಸ್ಯಕ್ಷೇತ್ರದಲ್ಲಿ ವಿಭಿನ್ನ ಜಾತಿಯ ಸಸಿಗಳು ನಳನಳಿಸುತ್ತಿವೆ. ಮಳೆಗಾಲದ ನಾಟಿಗಾಗಿ ಈಗಾಗಲೇ 50,000ಕ್ಕೂ ಮಿಕ್ಕಿ ಗಿಡಗಳನ್ನು ಸಿದ್ಧಗೊಳಿಸಲಾಗಿದೆ.
ಆರ್‌.ಎಸ್‌.ಪಿ.ಡಿ., ಮಗುವಿಗೊಂದು ಮರ ಶಾಲೆಗೊಂದು ವನ, ಕೆ.ಎಫ್‌.ಡಿ.ಎಫ್‌., ನಗರ ಹಸುರೀಕರಣ, ಹಸಿರು ಕರ್ನಾಟಕ, ರಸ್ತೆ ಬದಿ ನಡುತೋಪು ಮೊದಲಾದ ಯೋಜನೆಗಳಿಗೆ ಸಸಿ ತಯಾರಿಸಲಾಗಿದೆ.

Advertisement

ಮುಖ್ಯವಾಗಿ ಮಹಾಘನಿ, ಬೇಂಗ, ಹಲಸು, ಹೆಬ್ಬಲಸು, ಪುನರ್ಪುಳಿ, ಕಕ್ಕೆ, ಬಿಲ್ವಪತ್ರೆ, ರೆಂಜ, ವಾಟೆಹುಳಿ, ಸಾಗುವಾನಿ, ಶ್ರೀಗಂಧ, ಶಿವಾನಿ, ನಾಗಲಿಂಗಪುಷ್ಪ, ಸಂಪಿಗೆ, ಕಹಿಬೇವು, ದೂಪ, ನೇರಳೆ, ಬಾದಾಮಿ ಹೀಗೆ ಸುಮಾರು 30 ಬಗೆಯ ಗಿಡಗಳನ್ನು ಮಳೆಗಾಲದ ನಾಟಿಗೆ ತಯಾರುಗೊಳಿಸಲಾಗಿದೆ.

ಸಾರ್ವಜನಿಕರಿಗೆ ಲಭ್ಯ
ಬೈಕಾಡಿ ಸಸ್ಯಕ್ಷೇತ್ರದಲ್ಲಿ ಸಸಿಗಳು ಕನಿಷ್ಠ ದರದಲ್ಲಿ ಸಾರ್ವಜನಿಕರಿಗೆ ದೊರೆಯಲಿದೆ. ಜೂನ್‌ ಪ್ರಥಮ ವಾರದಿಂದ ವಿತರಣೆ ಆರಂಭವಾಗಲಿದೆ.

ಪ್ರೋತ್ಸಾಹಧನ
ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯಡಿ ಪ್ರೋತ್ಸಾಹಧನವೂ ದೊರೆಯಲಿದೆ. ಪ್ರೋತ್ಸಾಹಧನ ಪಡೆಯಲು ಇಚ್ಚಿಸುವವರು ಭೂಮಿಯ ಆರ್‌.ಟಿ.ಸಿ. ಜತೆಗೆ ಬ್ಯಾಂಕ್‌ ಪಾಸ್‌ಬುಕ್‌ ಪ್ರತಿ, ಭಾವಚಿತ್ರ, ಆಧಾರ್‌ಕಾರ್ಡ್‌ ನೀಡಬೇಕು.

ಬದುಕುಳಿದ ಸಸಿಗಳಿಗೆ ಮುಂದಿನ ಮೊದಲ ವರ್ಷ ತಲಾ ರೂ. 30, ಮುಂದಿನ ವರ್ಷ ಮತ್ತೆ ರೂ. 30 ಹಾಗೂ 3ನೇ ವರ್ಷ ರೂ. 40 ಸಹಾಯಧನ ಬ್ಯಾಂಕ್‌ ಖಾತೆಗೆ ಜಮೆಯಾಗಲಿದೆ. ಒಂದು ಎಕ್ರೆ ವಿಸ್ತೀರ್ಣ ಹೊಂದಿರುವವರು ವಿಭಿನ್ನ ತಳಿಯ 500 ಸಸಿ ಪಡೆಯಬಹುದು.

Advertisement

ಇತರ ಸಸ್ಯಕ್ಷೇತ್ರಗಳು
ಉಡುಪಿ ಜಿಲ್ಲೆಯಲ್ಲಿ ಬೈಂದೂರಿನ ಸರ್ಪನಕಟ್ಟೆ, ಕುಂದಾಪುರದ ಮಾವಿನಗುಳಿ ನೇರಳಕಟ್ಟೆ, ಶಂಕರನಾರಾಯಣ, ಹೆಬ್ರಿಯ ಮಡಾಮಕ್ಕಿ, ಕಾರ್ಕಳದ ಶಿರ್ಲಾಲಿನಲ್ಲಿ ಸಸ್ಯ ಕ್ಷೇತ್ರಗಳಿವೆ.

ಸಸಿಗಳ ಪೋಷಣೆ
ಹೊಸ ಮಣ್ಣು ಹಾಗೂ ಗೊಬ್ಬರವನ್ನು ಮಿಶ್ರಣ ಮಾಡಲಾಗುತ್ತದೆ. ಪ್ಲಾಸ್ಟಿಕ್‌ ಲಕೋಟೆಯಲ್ಲಿ ಗಿಡವನ್ನು ಮಾಡಿ ಪ್ರತಿನಿತ್ಯ ನಿರುಣಿಸಿ ಜೋಪಾನ ಮಾಡಲಾಗುತ್ತದೆ. ಕೆಲವು ತಳಿಯ ಸಸಿಗಳಿಗೆ ಒಂದು ವರ್ಷದ ಮೊದಲೇ ಬೀಜ ಹಾಕಿ ಆರೈಕೆ ಪ್ರಾರಂಭಿಸಲಾಗುತ್ತದೆ. ಆಗಸ್ಟ್‌ ಅನಂತರ ನಿರಂತರ ಅಭಿವೃದ್ದಿ ಪಡಿಸಿ ಜೂನ್‌ನಲ್ಲಿ ನಾಟಿಗೆ ಸಿದ್ಧಗೊಳ್ಳುತ್ತದೆ. ಕಡು ಬೇಸಗೆಯಾದ್ದರಿಂದ ನೀರಿನ ಅಭಾವವಿದ್ದರೂ ನಿಭಾಯಿಸಲಾಗುತ್ತಿದೆ.

ಮಾರ್ಗಸೂಚಿ
ಬ್ರಹ್ಮಾವರ ದೂಪದಕಟ್ಟೆಯಿಂದ ಹಾರಾಡಿ ಮಾರ್ಗದಲ್ಲಿ ಕೇವಲ 200 ಮೀ. ತೆರಳಿದರೆ ಬೈಕಾಡಿ ಸಸ್ಯಕ್ಷೇತ್ರ ಸಿಗುತ್ತದೆ. ರಾ.ಹೆ. 66ರ ಸಮೀಪ ದಲ್ಲಿರುವುದರಿಂದ ಗಿಡಗಳನ್ನು ಕೊಂಡುಹೋಗಲು ಸಾರ್ವಜನಿಕರಿಗೆ ಸಹಕಾರಿಯಾಗಿದೆ.

ಕಾಳಜಿ ವಹಿಸಿ
ಸಾರ್ವಜನಿಕರು ಬೆರಳೆಣಿಕೆಯ ಗಿಡಗಳನ್ನು ನಾಟಿ ಮಾಡಿದರೂ ಮುತುವರ್ಜಿ ವಹಿಸಿ ಸಾಕಾಣಿಕೆ ಮಾಡಿದರೆ ಸಾರ್ಥಕವಾಗುತ್ತದೆ. ಸಂಘ ಸಂಸ್ಥೆಗಳು ಆಸಕ್ತಿ ವಹಿಸಿ ಖಾಲಿ ಇರುವ ಜಾಗದಲ್ಲಿ ಗಿಡಗಳನ್ನು ನಾಟಿ ಮಾಡಿದರೆ ಹಸಿರು ಹೊದಿಕೆ ರಚನೆಗೆ ಅರಣ್ಯ ಇಲಾಖೆಯೊಂದಿಗೆ ಕೈ ಜೋಡಿಸಿದಂತಾಗುತ್ತದೆ.
-ಜೀವನ್‌ದಾಸ್‌ ಶೆಟ್ಟಿ, ಉಪವಲಯ ಅರಣ್ಯಾಧಿಕಾರಿ, ಬ್ರಹ್ಮಾವರ

– ಪ್ರವೀಣ್‌ ಮುದ್ದೂರು

Advertisement

Udayavani is now on Telegram. Click here to join our channel and stay updated with the latest news.

Next