ಲಕ್ನೋ:ಇತ್ತೀಚೆಗೆ ನಡೆದ ಪಂಚಾಯತ್ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಆರೋಪದಲ್ಲಿ ಬಹುಜನ್ ಸಮಾಜ ಪಕ್ಷದ ಉತ್ತರಪ್ರದೇಶ ಶಾಸಕಾಂಗ ಪಕ್ಷದ ನಾಯಕ ಲಾಲ್ಜಿ ವರ್ಮಾ ಮತ್ತು ಶಾಸಕರನ್ನು ಪಕ್ಷದಿಂದ ವಜಾ ಮಾಡಲಾಗಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ಕೋವಿಡ್ ನಿಂದ ಸಾವನ್ನಪ್ಪಿದ ವ್ಯಕ್ತಿಯ ಕುಟುಂಬಸ್ಥರಿಗೆ 2 ಲಕ್ಷ ರೂ. ಸಹಾಯಧನ ಘೋಷಿಸಿದ ಸರ್ಕಾರ
ಬಿಎಸ್ಪಿ ಪಕ್ಷದ ವರಿಷ್ಠೆ ಮಾಯಾವತಿ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ, ಪಕ್ಷದ ಇಬ್ಬರು ಶಾಸಕರಾದ ಲಾಲ್ಜಿ ವರ್ಮಾ ಮತ್ತು ರಾಮ್ ಅಚಲ್ ರಾಜ್ಬರ್ ಅವರನ್ನು ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಪಕ್ಷದಿಂದ ಉಚ್ಛಾಟಿಸಲಾಗಿದೆ ಎಂದು ವಿವರಿಸಿದೆ.
ಉತ್ತರಪ್ರದೇಶ ಶಾಸಕಾಂಗ ಪಕ್ಷದ ಸ್ಥಾನದಿಂದ ವರ್ಮಾ ಅವರನ್ನು ವಜಾಗೊಳಿಸಿರುವ ಹಿನ್ನೆಲೆಯಲ್ಲಿ ರಾಜ್ಯ ವಿಧಾನಸಭೆಯ ಪಕ್ಷದ ಮುಖಂಡರನ್ನಾಗಿ ಶಾ ಅಲಾಂ ಅಲಿಯಾಸ್ ಗುಡ್ಡು ಜಮಾಲಿ ಅವರನ್ನು ನೇಮಕ ಮಾಡಲಾಗಿದೆ ಎಂದು ವರದಿ ತಿಳಿಸಿದೆ.
ವರ್ಮಾ ಕಟೇಹಾರಿ ವಿಧಾನಸಭಾ ಕ್ಷೇತ್ರದ ಬಿಎಸ್ಪಿ ಶಾಸಕರಾಗಿದ್ದು, ರಾಜ್ಬರ್ ಅವರು ಅಂಬೇಡ್ಕರ್ ನಗರ ಜಿಲ್ಲೆಯ ಅಕ್ಬರ್ ಪುರ್ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದಾರೆ. ನೂತನವಾಗಿ ಆಯ್ಕೆಗೊಂಡ ಶಾಸಕಾಂಗ ಪಕ್ಷದ ನಾಯಕ ಶಾ ಅಲಾಂ ಅವರು ಅಜಂಗಢ್ ಜಿಲ್ಲೆಯ ಮುಬಾರಖ್ ಪುರ್ ಕ್ಷೇತ್ರದ ಶಾಸಕರಾಗಿದ್ದಾರೆ ಎಂದು ವರದಿ ಹೇಳಿದೆ.