Advertisement
ನೇತ್ರಾವತಿ ನದಿ ನೀರಿನ ಮಟ್ಟ ಕುಸಿತದಿಂದ ಶಂಭೂರು ಡ್ಯಾಂನಿಂದ ತುಂಬೆ ಡ್ಯಾಂಗೆ ನೀರು ಹರಿಯ ಬಿಡಲಾಗಿತ್ತು. ಇದರಿಂದ ಮಾಣಿ ಬಹುಗ್ರಾಮ ಯೋಜನೆಯ ಜ್ಯಾಕ್‌ವೆಲ್‌ಗೆ ನೀರಿನ ಹರಿವು ನಿಲುಗಡೆ ಆಗಿತ್ತು. ಈ ಸಂದರ್ಭ ಇನ್‌ಟೆಕ್ ವೆಲ್‌ನಿಂದ ನೀರು ಮೇಲಕ್ಕೆತ್ತಬೇಕಿತ್ತು. ಆದರೆ ಅಲ್ಲಿ ಮರಳು ತುಂಬಿ ಅದು ಸಾಧ್ಯವಾಗದೆ ಸಮಸ್ಯೆ ಸೃಷ್ಟಿಯಾಗಿತ್ತು. ಕೇವಲ ಆರು ತಿಂಗಳ ಹಿಂದೆಯಷ್ಟೇ ಉದ್ಘಾಟನೆಗೊಂಡಿದ್ದ ಈ ಯೋಜನೆ ರೂಪಿಸುವಾಗ ಎಡವಿದ್ದೆ ಸಮಸ್ಯೆಗೆ ಕಾರಣ ಎನ್ನಲಾಗಿದೆ. ಹರಿಯುವ ನೀರನ್ನು ನಂಬಿ ಯೋಜನೆ ರೂಪಿಸಿದಂತಿತ್ತು. ಈ ನೀರು ನಿಂತಾಗ ನೀರು ಇಲ್ಲವಾಗಿತ್ತು.
ನದಿಯ ನಡುವೆ ಆಳ ಪ್ರದೇಶದಲ್ಲಿ ಮಾಡಿದ್ದ ಇನ್‌ಟೆಕ್ ವೆಲ್‌ನಿಂದ ಜಾಕ್‌ವೆಲ್‌ಗೆ ಸಂಪರ್ಕಿಸುವ ಕೊಳವೆಯಲ್ಲಿ ಹೂಳು ತುಂಬಿಕೊಂಡಿದ್ದು ನೀರು ಹರಿಯದಿರಲು ಕಾರಣವಾಗಿತ್ತು. ಕಡೇ ಶ್ವಾಲ್ಯ-ಅಜಿಲಮೊಗರು ಸಂಪರ್ಕದ ಸೇತುವೆ ನಿರ್ಮಾಣಕ್ಕೆ ನದಿಯಲ್ಲಿ ಹಾಕಿದ್ದ ಮಣ್ಣು ಕೊಳವೆಯಲ್ಲಿ ಸೇರಿಕೊಂಡಿದ್ದು ಇದಕ್ಕೆ ಕಾರಣವಾಗಿತ್ತು. ಈ ಮಣ್ಣನ್ನು ಮೊದಲೇ ತೆರವುಗೊಳಿಸುತ್ತಿದ್ದರೆ ಸಮಸ್ಯೆ ಆಗುತ್ತಿರಲಿಲ್ಲ. ಜ್ಯಾಕ್‌ವೆಲ್‌ಗಿಂತ ನೀರಿನ ಮಟ್ಟ ಎತ್ತರದಲ್ಲಿದ್ದಾಗ ಈ ಸಮಸ್ಯೆ ಇರಲಿಲ್ಲ. ನದಿಯ ಮದ್ಯದಲ್ಲಿ ಇರುವ ಇನ್‌ಟೆಕ್ ವೆಲ್‌ನಿಂದ ಜ್ಯಾಕ್‌ವೆಲ್‌ಗೆ ನೀರು ಹರಿದು ಬರುವ ಸಂಪರ್ಕ ಕೊಳವೆಯಲ್ಲಿ ಮರಳು ತುಂಬಿ ಅಡಚಣೆಗೆ ಕಾರಣವಾಗಿತ್ತು. ಇನ್‌ಟೆಕ್ ವೆಲ್ ಐದು ಮೀಟರ್ ಆಳವಾಗಿದ್ದು. ಈಗ ನೀರಿದೆ. ಜಿಲ್ಲಾಧಿಕಾರಿಗಳ ಅನುಮತಿಯಂತೆ ಹೂಳು ತೆರವು ಮಾಡಲಾಗಿದೆ. ಈಗ ವ್ಯವಸ್ಥೆಯನ್ನು ಪುನರ್ ಸ್ಥಾಪಿಸಲಾಗಿದೆ ಎಂದು ಗ್ರಾ.ಕು.ನೀ. ಮತ್ತು ನೈರ್ಮಲ್ಯ ಉಪವಿಭಾಗ ಬಂಟ್ವಾಳ ಇದರ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಮಹೇಶ್ ಹೇಳಿದ್ದಾರೆ