Advertisement

ಭಲೇ ಬಾಹುಬಲಿಗಳು

03:33 PM Dec 02, 2017 | |

ನಮ್ಮ ರಾಜ್ಯದಲ್ಲಿ ಒಟ್ಟು ಹತ್ತು ಬಾಹುಬಲಿಗಳಿವೆ. ಒಂದೊಂದೂ ಒಂದೊಂದು ರೀತಿಯ ಕಲಾ ವೈಭವದಿಂದ ಕೂಡಿವೆ. ಇಡೀ ನಾಡಿನಲ್ಲಿ ಅಷ್ಟೇ ಅಲ್ಲ, ದೇಶದಲ್ಲೇ ಹಳೆಯ ಮೂರ್ತಿ ಯಾವುದೆಂದರೆ, ಅದು ಬಾದಾಮಿಯ ಗುಹಾಂತರ ದೇವಾಲಯದಲ್ಲಿದೆ. ಹೀಗೆ ಬಾಹುಬಲಿಗಳನ್ನು ಹುಡುಕುತ್ತಾ ಹೋದರೆ ರೋಚಕ ಕತೆಗಳು ತೆರೆದುಕೊಳ್ಳುತ್ತಾ ಹೋಗುತ್ತವೆ.

Advertisement

ಪ್ರಥಮ ತೀರ್ಥಂಕರ ಆದಿನಾಥನ ಮಗ ಬಾಹುಬಲಿಯ ಮೂರ್ತಿಗಳು ಕನ್ನಡನಾಡಿನಲ್ಲಿ ಬಹಳ ವಿಶೇಷವಾಗಿ ಅನೇಕ ಸ್ಥಳಗಳಲ್ಲಿವೆ. ವೃಷಭನಾಥನ ಮಕ್ಕಳಾದ ಭರತ-ಬಾಹುಬಲಿಯರ ನಡುವೆ ರಾಜ್ಯಕ್ಕಾಗಿ ಯುದ್ಧವಾಗುತ್ತದೆ. ಭರತನನ್ನು ಸೋಲಿಸಿದ ಬಾಹುಬಲಿಗೆ ರಾಜ್ಯದ ಮೇಲೆ ವೈರಾಗ್ಯ ಮೂಡಿ, ತಾನು ಗೆದ್ದ ರಾಜ್ಯವನ್ನು ಭರತನಿಗೊಪ್ಪಿಸಿ ತಪೋನಿರತನಾಗುತ್ತಾನೆ. ಕಠಿಣ ತಪೋನಿರತನಾದ ಅವನ ಸುತ್ತಲೂ ಹುತ್ತ ಬೆಳೆಯುತ್ತದೆ, ದೇಹದ ಮೇಲೆ ಮಾಧವಿಲತೆಗಳು ಹರಡುತ್ತವೆ. ಕಾಲ ಕೆಳಗೆ ಕುಕ್ಕುಟ ಸರ್ಪಗಳು ಸುತ್ತುವರೆದಿರುತ್ತವೆ. ಇವಾವುದನ್ನೂ ಲಕ್ಷಿಸದೆ ಬಾಹುಬಲಿಯು ಕಠಿಣ ತಪಸ್ಸಿನಿಂದ ಜ್ಞಾನವನ್ನು ಪಡೆಯುತ್ತಾನೆ. 

ಬಾಹುಬಲಿಗೆ ಭುಜಬಲಿ, ಕುಕ್ಕಟದೇವ, ಮನ್ಮಥ ಗೊಮ್ಮಟೇಶ್ವರ ಮುಂತಾದ ಹೆಸರುಗಳಿವೆ. ಕರ್ನಾಟಕದಲ್ಲಿ ಬಾಹುಬಲಿಯ ಆರಾಧನೆಯು ಸುಮಾರು 1,500 ಸಾವಿರ ವರ್ಷಗಳಿಂದಲೂ ಪ್ರಚಲಿತದಲ್ಲಿದೆ.  ಬಾದಾಮಿ, ಐಹೊಳೆ, ಹುಂಚ, ಅರೆತಿಪ್ಪೂರು, ಶ್ರವಣ ಬೆಳಗೊಳ, ಮೈಸೂರು ಸಮೀಪದ ಗೊಮ್ಮಟಗಿರಿ, ಮಂಡ್ಯ ಜಿಲ್ಲೆ ಬಸ್ತಿ ಹೊಸಕೋಟೆ, ಉಡುಪಿ ಜಿಲ್ಲೆಯ ಕಾರ್ಕಳ, ದಕ್ಷಿಣಕನ್ನಡ ಜಿಲ್ಲೆಯ ವೇಣೂರು, ಧರ್ಮಸ್ಥಳಗಳಲ್ಲಿ ಗೊಮ್ಮಟನ ಮೂರ್ತಿಗಳಿವೆ.

ಬಾದಾಮಿಯ ಗುಹಾಂತರ ದೇವಾಲಯಗಳಲ್ಲಿ ನಾಲ್ಕನೆ ಗುಹೆಯಲ್ಲಿರುವ ಬಾಹುಬಲಿಯ ಮೂರ್ತಿಯು ಇಡೀ ಭಾರತದಲ್ಲಿರುವ ಗೊಮ್ಮಟ ವಿಗ್ರಹಗಳಲ್ಲೇ ಪ್ರಾಚೀನವಾದುದು.  ಬಾದಾಮಿಯ ಚಾಲುಕ್ಯರ ಕಾಲದ ಈ ಸುಂದರಮೂರ್ತಿಯ ಕಾಲ ಏಳನೆಯ ಶತಮಾನ.  ನಿಲುವಿನ ಭಂಗಿಯಲ್ಲಿರುವ ಈ ಬಾಹುಬಲಿಯ ತಲೆಯ ಕೂದಲು ಭುಜದ ಮೇಲೆ ಹರಡಿದರೆ, ಪಾದದ ಬಳಿ ಸರ್ಪಗಳಿವೆ, ದೇವನ ಸಹೋದರಿಯರಾದ ಬ್ರಾಹ್ಮಿ ಮತ್ತು ಸುಂದರಿಯರು ತನ್ನ ಅಣ್ಣನನ್ನು ಕಂಡು ದುಃಖೀತರಾದಂತೆ ಹಾಗೂ ಬಾಹುಬಲಿಯ ಅಣ್ಣ ಭರತನು ಪಶ್ಚಾತ್ತಾಪದಿಂದ ತಮ್ಮನೆಡೆಗೆ ನೋಡುತ್ತಿರುವಂತೆ ಚಿತ್ರಿಸಲಾಗಿದೆ. ಪ್ರಾಚೀನತೆಯ ದೃಷ್ಟಿಯಿಂದಲೂ ಇದೊಂದು ವಿಶೇಷ ಕಲಾಕೃತಿ.

 ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಅರೆತಿಪ್ಪೂರು ಅಥವಾ ಬಿತ್ತಿ ತಿಪ್ಪೂರು ಸಹ ಪ್ರಾಚೀನ ಜೈನ ಕ್ಷೇತ್ರ. ಇಲ್ಲಿಯೂ ಸಹ ಶ್ರವಣಬೆಳಗೊಳದಂತೆ ಎರಡು ಬೆಟ್ಟಗಳಿವೆ. ಒಂದರಲ್ಲಿ ಗೊಮ್ಮಟನ ವಿಗ್ರಹವಿದ್ದರೆ, ಇನ್ನೊಂದರಲ್ಲಿ ಹಲವಾರು ಬಸದಿಗಳಿದ್ದುದಕ್ಕೆ ಕುರುಹುಗಳಿವೆ. ಇತ್ತೀಚೆಗೆ ನಡೆದ ಉತVನನದಲ್ಲಿ ಸಾಕಷ್ಟು ಜಿನಬಿಂಬಗಳು ದೊರೆತಿವೆ. ಶ್ರವಣಪ್ಪನಗುಡ್ಡ ಎಂದು ಕರೆಯುವ ಬೆಟ್ಟದ ಮೇಲೆ ಸುಮಾರು ಹತ್ತು ಅಡಿ ಎತ್ತರವಿರುವ ಬಾಹುಬಲಿಯು ಗಂಗರ ಕಾಲದ್ದಾಗಿದ್ದು, ಶ್ರವಣ ಬೆಳಗೊಳದ ಗೊಮ್ಮಟನಿಗಿಂತ ಸ್ವಲ್ಪ ಪ್ರಾಚೀನ ಶಿಲ್ಪವಾಗಿದೆ.  

Advertisement

ಒಂದು ಸಣ್ಣಗುಡ್ಡದ ಮೇಲೆ ಪ್ರಶಾಂತವಾದ ವಾತಾವರಣದಲ್ಲಿರುವ ಬಾಹುಬಲಿಯ ಮೂರ್ತಿಯು ಶ್ರವಣಬೆಳಗೊಳ ಮೂರ್ತಿಯಷ್ಟೇ ಸೊಗಸಾಗಿದೆ. ಕಾಲುಗಳು ಹಾಗೂ ಭುಜಗಳ ಮೇಲೆ ಲತಾಬಳ್ಳಿಗಳು ಹರಡಿವೆ. ದೇವನ ಇಕ್ಕಡೆಗಳಲ್ಲಿ ಸರ್ಪಗಳು ಗೊಮ್ಮಟನ ಕೈಯನ್ನು ಸ್ಪರ್ಶಿಸುತ್ತಿರುವಂತೆ ಚಿತ್ರಿಸಲಾಗಿರುವುದು ಬೇರಾವ ಮೂರ್ತಿಗಳಲ್ಲೂ ಕಾಣದಿರುವುದೇ ಇಲ್ಲಿನ ವಿಶೇಷ. ಹನ್ನೆರಡನೆಯ ಶತಮಾನದ ಅಂತ್ಯಭಾಗದಲ್ಲಿ ಕಡುಶಿಲೆಯಲ್ಲೇ (ಗ್ರಾನೈಟ್‌) ಗೊಮ್ಮಟಗಿರಿಯ ಬಾಹುಬಲಿಯನ್ನು ನಿರ್ಮಿಸಲಾಗಿದೆ. ಗೊಮ್ಮಟಗಿರಿಯ ಬಾಹುಬಲಿಗೆ 66 ವರ್ಷಗಳಿಂದ ಪ್ರತಿವರ್ಷ ಮಹಾಮಜ್ಜನವಾಗುತ್ತಿರುವುದು ವಿಶೇಷ. 

ಮಂಡ್ಯ ಜಿಲ್ಲೆಯು ಮತ್ತೂಂದು ಬಾಹುಬಲಿ ಮೂರ್ತಿಯನ್ನು ಲೋಕಕ್ಕೆ ನೀಡಿದೆ. ಕೃಷ್ಣರಾಜಪೇಟೆ ತಾಲೂಕಿನ, ಕೃಷ್ಣರಾಜ ಸಾಗರ ಹಿನ್ನೀರಿನ ಸಮೀಪ ಮಾವಿನಕೆರೆ ಗ್ರಾಮದ ಸಮೀಪವಿರುವ ಬತ್ತಿ ಹೊಸಕೋಟೆ ಎಂಬ ಹಳ್ಳಿಯಲ್ಲಿ ಗೊಮ್ಮಟೇಶ್ವರ ವಿಗ್ರಹವಿದೆ. ಸುಮಾರು 18 ಅಡಿ ಎತ್ತರವಿರುವ ಬಾಹುಬಲಿಯನ್ನು ಹೊಯ್ಸಳ ದೊರೆ  ವಿಷ್ಣುವರ್ಧನನ ದಂಡನಾಯಕ  ಪ್ರತಿಷ್ಠಾಪಿಸಿದ್ದಾರೆ. ಸರಳವಾಗಿರುವ ಮೂರ್ತಿಯ ಮೊಣಕಾಲಿನವರೆಗೂ ಮಾಧವಿಲತೆಗಳು ಹಬ್ಬಿವೆ. 

ಬಾಹುಬಲಿ ಮೂರ್ತಿಯ ಸ್ಥಾಪನೆಯ ಪರಂಪರೆ, ನಂತರ ಬಂದ ವಿಜಯನಗರದ ಅರಸರು ಮತ್ತು ನಂತರದ ಅರಸರವರೆಗೂ ಮುಂದುವರಿಯಿತು. ಉಡುಪಿ ಜಿಲ್ಲೆಯ ಕಾರ್ಕಳದ ಗೊಮ್ಮಟ ಗುಡ್ಡದ ಮೇಲೆ 42 ಅಡಿಗಳಷ್ಟು ಎತ್ತರವಿರುವ ಮನೋಹರವಾದ ಮೂರ್ತಿ ಇದೆ. ಇದನ್ನು ಕ್ರಿ.ಶ. 1432ರಲ್ಲಿ ಭೈರಸನ ಮಗ ವೀರ ಪಾಂಡ್ಯನು ಪ್ರತಿಷ್ಠಾಪಿಸಿದರು. ಗ್ರಾನೈಟ್‌ ಶಿಲೆಯಲ್ಲಿ ಕೆತ್ತಲಾಗಿರುವ ದಿವ್ಯವಾದ ಈ ಗೊಮ್ಮಟನಿಗೂ ಮಹಾಮಸ್ತಕಾಭಿಷೇಕವು ಬಹು ವೈಭವದಿಂದ ಜರುಗುತ್ತಿದೆ. 

ಇಡೀ ಬಾಹುಬಲಿ ಮೂರ್ತಿಗಳಲ್ಲೇ ತನ್ನ ಬೃಹದಾಕಾರದಿಂದಲೂ, ಭವ್ಯತೆಯಿಂದಲೂ, ಅತ್ಯಂತ ಮನೋಹರವಾದ ಮೂರ್ತಿ ಇರುವುದು ಶ್ರವಣಬೆಳಗೊಳದ ಇಂದ್ರಗಿರಿ ಬೆಟ್ಟದ ಮೇಲೆ. ಗಂಗರ ಸಾಮ್ರಾಜ್ಯದ ಮಂತ್ರಿ ಚಾವುಂಡರಾಯನು ತನ್ನ ತಾಯಿಯ ಮನೋಭಿಲಾಷೆಯಂತೆ ಪವಮಾನಪುರಿಯಲ್ಲಿರುವ ಗೊಮ್ಮಟನಂತೆ, ಶ್ರವಣ ಬೆಳಗೊಳದಲ್ಲಿ ನಿರ್ಮಿಸಿ ಇದರ ಖ್ಯಾತಿಯು ಇಡೀ ವಿಶ್ವದಲ್ಲೇ ಹಬ್ಬುವಂತೆ ಮಾಡಿದ. ಇಂದ್ರಗಿರಿಯ ತುದಿಯ ಮೇಲೆ ನಿಂತಿರುವ ಸುಮಾರು 57 ಅಡಿ ಎತ್ತರವಿರುವ ಗೊಮ್ಮಟನ ಅನುಪಮ ಸೌಂದರ್ಯ ವರ್ಣನಾತೀತ. ತಿಳಿನಗೆಯನ್ನು ಸೂಸುತ್ತಿರುವ, ಅಜಾನುಬಾಹು ಮೂರ್ತಿಯು ತಾವರೆಯ ಮೇಲೆ ನಿಂತಂತೆ ಚಿತ್ರಿಸಲಾಗಿದೆ. ಕಾಲಿನಿಂದ ಮೇಲೇರುತ್ತಿರುವ ಮಾಧವೀಲತೆಗಳು ಮೇಲೇರಿ ಭುಜದ ಮೇಲೆ ಹರಡಿವೆ. ಇಂಥ ಉನ್ನತಮೂರ್ತಿಗೆ 12 ವರ್ಷಕ್ಕೊಮ್ಮೆ  ಅತ್ಯಂತ ವೈಭವವಾಗಿ ನಡೆಯುವ ಮಹಾಮಸ್ತಕಾಭಿಷೇಕ ಜಗತøಸಿದ್ಧ. ಕ್ರಿ.ಶ. 981ರಲ್ಲಿ ನಿರ್ಮಿತವಾದ ಈ ದಿವ್ಯಮೂರ್ತಿಯು ಕಡು ಶಿಲೆಯಲ್ಲಿ ನಿರ್ಮಿತವಾಗಿ ಸಾವಿರ ವರ್ಷಗಳಿಂದ ಬಿಸಿಲು, ಮಳೆ, ಚಳಿ ಲೆಕ್ಕಿಸದೆ ಭವ್ಯವಾಗಿ ನಿಂತಿದೆ. 

ದಕ್ಷಿಣಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನಲ್ಲಿರುವ ವೇಣೂರಿನ ಬಾಹುಬಲಿ 37 ಅಡಿ ಎತ್ತರವಿದೆ.  ಮುಖದಲ್ಲಿ ಕಾಣುವ ತಿಳಿನಗೆಯಿಂದಾಗಿ ಇದನ್ನು ನಗುವ ಗೊಮ್ಮಟನೆಂದು ಕರೆಯುತ್ತಾರೆ. ಈ ಆಕರ್ಷಕ ಮೂರ್ತಿಯನ್ನು ಅಜಿಲರಾಜ ನಾಲ್ವಡಿ ವೀರ ತಿಮ್ಮರಾಜನು ಕ್ರಿ.ಶ. 1604ರಲ್ಲಿ ನಿರ್ಮಿಸಿದ್ದಾನೆ ಎಂದು ಶಾಸನ ಹೇಳುತ್ತದೆ. ಕಾಲಿನಿಂದ ಭುಜದವರೆಗೂ ಹಬ್ಬಿರುವ ಬಳ್ಳಿಗಳಲ್ಲಿ, ಎಲೆಗಳನ್ನು ಕೂಡ ಸ್ಪಷ್ಟವಾಗಿ ಬಿಡಿಸಲಾಗಿದೆ. ವೇಣೂರಿನ ಬಾಹುಬಲಿಯನ್ನು ದರ್ಶಿಸಲು ಬರುವ ಪ್ರವಾಸಿಗರು “ಕಲ್ಲು ಬಸದಿ’ ವಠಾರದಲ್ಲಿರುವ ಅನೇಕ ಬಸದಿಗಳನ್ನು ನೋಡಲು ಮರೆಯಬಾರದು.  

ಬಾಹುಬಲಿ ಮೂರ್ತಿ ಪ್ರತಿಷ್ಠಾಪನೆಯ ಸತ್ಕಾರ್ಯವನ್ನು ಮುಂದುವರಿಸಿಕೊಂಡು ಬಂದ ಕೀರ್ತಿ ಧರ್ಮಸ್ಥಳದ ಧರ್ಮಾಧಿಕಾರಿಗಳ ಕುಟುಂಬಕ್ಕೆ ಸಲ್ಲುತ್ತದೆ. ಧರ್ಮಾಧಿಕಾರಿಗಳಾದ ಡಾ. ವೀರೇಂದ್ರ ಹೆಗ್ಗಡೆಯವರ ಆಶಯದಂತೆ ನಿರ್ಮಿತವಾದ ಸುಂದರ, ವಿರಾಟ್‌ ಮೂರ್ತಿಯು ಧರ್ಮಸ್ಥಳವನ್ನು ಪ್ರವೇಶಿಸುವ ಆರಂಭದಲ್ಲಿ ಬಾಹುಬಲಿ ವಿಹಾರ ಎಂಬ ಗುಡ್ಡದ ಮೇಲೆ ವಿರಾಜಮಾನವಾಗಿದೆ. 39 ಅಡಿ ಎತ್ತರದ ಈ ದಿವ್ಯಮೂರ್ತಿಯ ರೂವಾರಿ, ಮಹಾಶಿಲ್ಪಿ ರಂಜಾಳ ಗೋಪಾಲಕೃಷ್ಣ ಜನಾರ್ಧನ ಶೆಣೈ. ಕಾರ್ಕಳದ ಸಮೀಪ ಮಂಗಲ ಪಾರೆಯ ಬೃಹತ್‌ ಶಿಲೆಯೊಂದು ಬಾಹುಬಲಿಯಾಗಿ ರೂಪುಗೊಂಡು ಕ್ರಿ.ಶ. 1982ರಲ್ಲಿ ಪ್ರತಿಷ್ಠಾಪನೆಗೊಂಡಿತು. ಸುಮಾರು 15 ಅಡಿ ಎತ್ತರದ ಪೀಠದ ಮೇಲಿರುವ ಗೊಮ್ಮಟೇಶ್ವರನ ಪಾದದಡಿಯಲ್ಲಿ ಹುಲಿ-ಹಸುಗಳ ಒಟ್ಟಿಗಿರುವಂತೆ ಹಾಗೂ ಶ್ರೀಪಾದಗಳನ್ನು ಆನೆಗಳನ್ನು ಅರಸುತ್ತಿರುವಂತೆ, ದೇವನ ಸಹೋದರಿಯರು ಆತನ ಮೇಲಿನ ಲತಾಬಳ್ಳಿಗಳನ್ನು ಬಿಡಿಸುತ್ತಿರುವಂತೆ ಮನೋಜ್ಞವಾಗಿ ಬಿಡಿಸಲಾಗಿದೆ. ದೇಹದ ಮೇಲೆ ಹರಡಿರುವ ಬಳ್ಳಿಗಳು ಕಾಲ ಬಳಿಯಿರುವ ಹುತ್ತ, ತಪೋನಿರತನಾಗಿರುವ ಸ್ವಾಮಿಯ ನಿಲುವು ಬಹಳ ನೈಜವಾಗಿ ಮೂಡಿಬಂದಿದೆ. ಧರ್ಮಸ್ಥಳದ ಬಾಹುಬಲಿಗೂ ಸಹ 12 ವರ್ಷಕ್ಕೊಮ್ಮೆ ಮಹಾಮಜ್ಜನ ಜರುಗುತ್ತದೆ.  

ಕೆಂಗೇರಿ ಚಕ್ರಪಾಣಿ 

Advertisement

Udayavani is now on Telegram. Click here to join our channel and stay updated with the latest news.

Next