Advertisement

ಮಸ್ತಕಾಭಿಷೇಕ ವೀಕ್ಷಣೆಗೆ 2 ಅಂತಸ್ತಿನ ಗ್ಯಾಲರಿ

12:30 AM Jan 26, 2019 | Team Udayavani |

ಬೆಳ್ತಂಗಡಿ: ಭಗವಾನ್‌ ಶ್ರೀ ಬಾಹು ಬಲಿಯ ಮಹಾಮಸ್ತಕಾಭಿಷೇಕ ನಡೆಯುವುದಾದರೆ ಸಿದ್ಧತಾ ಕಾರ್ಯಗಳಲ್ಲಿ ಪ್ರಮುಖವಾದುದು ಅಟ್ಟಳಿಗೆ ನಿರ್ಮಾಣ. ಬಾಹುಬಲಿಯ ವಿಗ್ರಹಕ್ಕೆ ಅತಿ ಸನಿಹದಲ್ಲಿ ಈ ಕಾರ್ಯ ನಡೆಯುತ್ತದೆ, ಜತೆಗೆ ಕಬ್ಬಿಣದ ಬೃಹತ್‌ ರಾಡ್‌ಗಳನ್ನು ಬಳಸುವುದರಿಂದ ಮೂರ್ತಿ ಅಥವಾ ಇನ್ಯಾವುದೇ ವಿನ್ಯಾಸಗಳಿಗೆ ತಾಕದಂತೆ ಬಹಳ ಎಚ್ಚರಿಕೆಯಿಂದ ನಿರ್ವಹಿಸುವುದೇ ಸವಾಲು.

Advertisement

ಪ್ರಸ್ತುತ ಧರ್ಮಸ್ಥಳ ಕ್ಷೇತ್ರದ ಶ್ರೀ ಬಾಹು ಬಲಿಯ ಮಹಾಮಸ್ತಕಾಭಿಷೇಕಕ್ಕೆ ಡಿ. 1ರಿಂದ ಅಟ್ಟಳಿಗೆ ನಿರ್ಮಾಣ ಕಾರ್ಯ ಆರಂಭಗೊಂಡಿದ್ದು ಭರದಿಂದ ಸಾಗಿದೆ.

ಮಸ್ತಕಾಭಿಷೇಕಕ್ಕಾಗಿ 62 ಅಡಿ ಎತ್ತರದ ಅಟ್ಟಳಿಗೆ ನಿರ್ಮಾಣಗೊಳ್ಳುತ್ತಿದೆ. ಕೊನೆಯ ಮೂರು ಅಂತಸ್ತು ಗಳಲ್ಲಿ ನಿಂತು ವೈರಾಗ್ಯಮೂರ್ತಿಗೆ ಅಭಿಷೇಕ ಮಾಡಲು ಅವಕಾಶವಿದೆ. ಎರಡು ಕಡೆಗಳಲ್ಲಿ ಪ್ರತ್ಯೇಕ ಮೆಟ್ಟಿಲು ಗಳಿರಲಿವೆ. ಒಟ್ಟು ಸುಮಾರು 80 ಟನ್‌ ಕಬ್ಬಿಣ ಬೇಕು. ಹಿಂಬದಿಯಲ್ಲಿ 2 ಲಿಫ್ಟ್‌ಗಳ ವ್ಯವಸ್ಥೆಯೂ ಇರಲಿದೆ. 
ಪ್ರತಿ ಅಂತಸ್ತಿನಲ್ಲಿಯೂ ಸುಮಾರು 1,500 ಚ. ಅಡಿ ಗಳಷ್ಟು ಸ್ಥಳಾವಕಾಶವಿರುತ್ತದೆ. ಕಬ್ಬಿಣದ ರಾಡ್‌ಗಳ ಅಟ್ಟಳಿಗೆಯ ಹಂದರಕ್ಕೆ ಅಡ್ಡಲಾಗಿ ವಿವಿಧ ಅಂತಸ್ತುಗಳಲ್ಲಿ ಪ್ಲೆ„ವುಡ್‌ ಶೀಟ್‌ಗಳ ಬಳಕೆಯಾಗಲಿದ್ದು, ಸುಮಾರು 5,500 ಚ.ಅಡಿ ಪ್ಲೆ„ವುಡ್‌ ಬೇಕು. ರಾಡ್‌ಗಳನ್ನು ಎತ್ತಿನಿಲ್ಲಿಸುವುದರ ಸಹಿತ ವಿವಿಧ ಕೆಲಸ ಗಳಲ್ಲಿ ಕಾರ್ಮಿಕರಿಗೆ ಎರಡು ಕ್ರೇನ್‌ಗಳು ಸಹಾಯ ಮಾಡುತ್ತಿವೆ. ಇವೆಲ್ಲವೂ ಮಂಗಳೂರಿನ ವಿಮಲ್‌ ಅನಿಲ್‌ ಸಂಸ್ಥೆಯ ಎಂಜಿನಿಯರ್‌ಗಳ ನೀಲನಕಾಶೆಯನ್ನು ಆಧರಿಸಿ ನಡೆಯುತ್ತಿವೆ.

ಗ್ಯಾಲರಿ ನಿರ್ಮಾಣ
ಮಹಾ ಮಸ್ತಕಾಭಿಷೇಕವನ್ನು ಭಕ್ತರು, ಸಾರ್ವಜನಿಕರು ವೀಕ್ಷಿಸಲು ವಿಗ್ರಹದ ಎದುರಿನ ಎರಡೂ ಕಡೆಗಳಲ್ಲಿ ಒಟ್ಟು 20 ಅಡಿ ಎತ್ತರದ ಎರಡು ಅಂತಸ್ತಿನ ಗ್ಯಾಲರಿಯನ್ನು  ಕಬ್ಬಿಣ ಮತ್ತು ಪ್ಲೆ„ವುಡ್‌ ಉಪಯೋಗಿಸಿ ರಚಿಸಲಾಗುತ್ತದೆ. 

18 ಮಂದಿಯ ಕಾರ್ಯ
ಬಂಟ್ವಾಳ ತಾಲೂಕಿನ ಮಾಣಿ ಸಮೀಪದ ಬುಡೋಳಿಯ ಮಹಾವೀರ ಪ್ರಸಾದ್‌ ಇಂಡಸ್ಟ್ರಿಯ ಮಾಲಕರಾದ ಮಹಾಪದ್ಮಪ್ರಸಾದ್‌ ಹಾಗೂ ಮಹಾವೀರ ಸಹೋದರರ ನೇತೃತ್ವದಲ್ಲಿ ಸುಮಾರು 18 ಮಂದಿ ಸಿಬಂದಿ ಅಟ್ಟಳಿಗೆ ನಿರ್ಮಾಣದಲ್ಲಿ ನಿರತರಾಗಿದ್ದಾರೆ. ಈ ಸಹೋದರರಿಗೆ ಇದು 3ನೇ ಮಹಾಮಸ್ತಕಾಭಿಷೇಕ ಅಟ್ಟಳಿಗೆ ನಿರ್ಮಾಣದ ಅನುಭವ. ಈ ಹಿಂದೆ ವೇಣೂರು ಹಾಗೂ ಕಾರ್ಕಳದ ಮಹಾಮಸ್ತಕಾಭಿಷೇಕ ಅಟ್ಟಳಿಗೆಗಳನ್ನು ಇವರೇ ನಿರ್ಮಿಸಿ ಯಶಸ್ವಿಯಾಗಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next