ಬಹರೈನ್: ಇಲ್ಲಿನ ರಾಜ್ಯಪ್ರಶಸ್ತಿ ವಿಜೇತ ಕನ್ನಡ ಸಂಘದ ನೂತನ ಆಡಳಿತ ಮಂಡಳಿಯ ವಿದ್ಯುಕ್ತ ಪದಗ್ರಹಣ ಕಾರ್ಯಕ್ರಮ ಹಾಗು ನೂತನವಾಗಿ ನಿರ್ಮಿಸಿರುವ ರೊನಾಲ್ಡ್ ಕುಲಾಸೊ ಲಾಂಜ್ ನ ಉದ್ಘಾಟನಾ ಸಮಾರಂಭವು ಅಕ್ಟೋಬರ್ 6ರಂದು ಜರುಗಲಿದೆ .
ಅಕ್ಟೋಬರ್ 6ರಂದು ಬೆಳಿಗ್ಗೆ 10.00 ಗಂಟೆಗೆ ಕನ್ನಡ ಭವನದಲ್ಲಿ ನೂತನ ರೊನಾಲ್ಡ್ ಕುಲಾಸೊ ಲೌಂಜ್ ಅನ್ನು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಲೋಕಾರ್ಪಣೆ ಮಾಡಲಿದ್ದಾರೆ . ಅದೇ ದಿನ ಸಂಜೆ 5.00 ಗಂಟೆಗೆ ಮೂವ್ ಎನ್ ಪಿಕ್ ಹೋಟೆಲ್ ನಲ್ಲಿ ನೂತನ ಆಡಳಿತ ಮಂಡಳಿಯ ವಿದ್ಯುಕ್ತ ಪದಗ್ರಹಣ ಸಮಾರಂಭವು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರುಗಲಿರುವುದು .
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಇಲ್ಲಿನ ಭಾರತೀಯ ರಾಯಭಾರಿ ವಿನೋದ್ ಕೆ. ಜಾಕೊಬ್ ಮತ್ತು ಅತಿಥಿಗಳಾಗಿ ಗೃಹ ಮಂತ್ರಿ ಡಾ. ಜಿ. ಪರಮೇಶ್ವರ ಭಾಗವಹಿಸಲಿದ್ದಾರೆ.
ರವಿ ಕುಮಾರ್‌ಗೌಡ, ಶಾಸಕರು, ಡಾ.ಆರತಿ ಕೃಷ್ಣ, AICC ಕಾರ್ಯದರ್ಶಿ ಹಾಗೂ ಅನಿವಾಸಿ ಭಾರತೀಯ ಘಟಕದ ಮಾಜಿ ಉಪಾಧ್ಯಕ್ಷರು, ನಾಡಿನ ಖ್ಯಾತ ಉದ್ಯಮಿ ಹಾಗೂ ಸಮಾಜ ಸೇವಕ ಡಾ. ರೊನಾಲ್ಡ್ ಕುಲಾಸೊ , ಕರ್ನಾಟಕ ಪ್ರದೇಶ ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿ ಹಾಗೂ ದ.ಕ. ಜಿಲ್ಲಾ ಯುವ ಕಾಂಗ್ರೆಸ್ ನ ಮಾಜಿ ಅಧ್ಯಕ್ಷ ಮಿಥುನ್ ರೈ ಹಾಗೂ ಇನ್ನಿತರ ಅನೇಕ ಗಣ್ಯರು ಕೂಡಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಕರ್ನಾಟಕದ ಖ್ಯಾತ ನೃತ್ಯ ಪಟು ಶ್ರೀ ಸುಜಯ್ ಶಾನಭಾಗ್ ಮತ್ತು ತಂಡದವರಿಂದ ವಿವಿಧ ನೃತ್ಯಪ್ರದರ್ಶನಗಳು ರಂಗದಲ್ಲಿ ಮೂಡಿಬರಲಿದೆ . ಅಲ್ಲದೆ ಸಂಘದ ಪ್ರತಿಭಾನ್ವಿತ ಕಲಾವಿದರು ರಂಗದಲ್ಲಿ ತಮ್ಮ ಪ್ರತಿಭೆಯ ಅನಾವರಣ ಮಾಡಲಿದ್ದಾರೆ . ಸಂಘದ ಎಲ್ಲಾ ಸದಸ್ಯರು ಈ ಕಾರ್ಯಕ್ರಮದಲ್ಲಿ ತಮ್ಮ ಪರಿವಾರದೊಂದಿಗೆ ಪಾಲ್ಗೊಳ್ಳಬೇಕೆಂದು ಸಂಘದ ಅಧ್ಯಕ್ಷರಾದ ಅಮರನಾಥ್ ರೈ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಶ್ರೀ ಅಮರನಾಥ್ ರೈ ಯವರನ್ನು ದೂರವಾಣಿ ಸಂಖ್ಯೆ 00973 39468624 ಸಂಪರ್ಕಿಸಬಹುದು.
ವರದಿ-ಕಮಲಾಕ್ಷ ಅಮೀನ್