Advertisement

“ಕೋವಿಡ್ ದಿಂದ ಬಹ್ರೈನ್‌ ಕನ್ನಡಿಗರು ಸುರಕ್ಷಿತ’

10:53 AM May 14, 2020 | mahesh |

ಮುಂಬಯಿ: ವಿಶ್ವದೆಲ್ಲೆಡೆ ತನ್ನ ಕಬಂಧ ಬಾಹುಗಳನ್ನು ಚಾಚುತ್ತಾ ಮಾನವ ಕುಲದ ಮಾರಣ ಹೋಮ ನಡೆಸುತ್ತಿರುವ ಮಹಾಮಾರಿ ಕೋವಿಡ್ ದಿಂದ ಬಹ್ರೈನ್‌ ಮೂಲದ ಕನ್ನಡಿಗರು ಈವರೆಗೆ ಸುರಕ್ಷಿತರಾಗಿದ್ದಾರೆ ಎಂದು ಕರ್ನಾಟಕ ಅನಿವಾಸಿ ಭಾರತೀಯ ಸಮಿತಿ, ಬಹ್ರೈನ್‌ ಇದರ ಅಧ್ಯಕ್ಷ ಲೀಲಾಧರ್‌ ಬೈಕಂಪಾಡಿಯವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿರುತ್ತಾರೆ.

Advertisement

ಸ್ಥಳೀಯ ಸರಕಾರ ಆರಂಭದಿಂದಲೇ ಕೋವಿಡ್ ಪಿಡುಗಿನ ವಿಷಯದಲ್ಲಿ ಎಲ್ಲ ಅಗತ್ಯ ಸುರಕ್ಷಾ ಕ್ರಮಗಳನ್ನು ಕೈಗೊಂಡಿರುವ ಕಾರಣದಿಂದಾಗಿ ಈ ದ್ವೀಪರಾಷ್ಟ್ರದಲ್ಲಿ ಕೋವಿಡ್ ಹರಡುವಿಕೆಯು ಹೆಚ್ಚು ನಿಯಂತ್ರಣದಲ್ಲಿದ್ದು, ಅದು ವಿಶ್ವಸಂಸ್ಥೆಯ ಪ್ರಶಂಸೆಗೂ ಪಾತ್ರವಾಗುವಂತಾಗಿದೆ. ಇಲ್ಲಿ ಈತನಕ ಸಾಧಾರಣ ಸಂಖ್ಯೆಯ ಕೋವಿಡ್ ಸೋಂಕಿತರಷ್ಟೇ ಕಂಡುಬಂದಿದ್ದು, ಮೃತರ ಸಂಖ್ಯೆಯೂ ಕೇವಲ

ಬೆರಳೆಣಿಕೆಯಷ್ಟಿದೆ. ಹೆಚ್ಚಿನ ಸೋಂಕಿತರು ಈಗಾಗಲೇ ಗುಣಮುಖರಾಗಿರುತ್ತಾರೆ. ಸದ್ಯ ಚಿಕಿತ್ಸೆ ಪಡೆಯುತ್ತಿರುವವರಲ್ಲಿ ಕೆಲವು ಭಾರತೀಯರೂ ಇದ್ದು, ಈ ಪೈಕಿ ಯಾವುದೇ ಕನ್ನಡಿಗರು ಇಲ್ಲವೆಂಬುದೂ ಸ್ಪಷ್ಟವಾಗಿ ತಿಳಿದು ಬಂದಿರುತ್ತದೆ. ಹಾಗೆಯೇ ಈ ಪರಿಸ್ಥಿತಿಯಲ್ಲಿ ಅದೇನೇ ಸಮಸ್ಯೆಗಳು ಕಂಡುಬಂದರೂ ಸ್ಥಳೀಯ ಸರಕಾರದವರು, ಭಾರತೀಯ ರಾಯಭಾರಿ ಕಚೇರಿಯವರು ಅವನ್ನು ಕ್ಲಪ್ತ ಸಮಯದಲ್ಲಿ ಪರಿಹರಿಸುತ್ತಿದ್ದಾರೆ.

ಆದರೆ ಈ ಕೋವಿಡ್ ಅಟ್ಟಹಾಸದ ಸಂದಿಗ್ಧ ಪರಿಸ್ಥಿತಿಯಲ್ಲಿ ಕೆಲವು ಅನಿವಾಸಿಯರು ಪ್ರಯಾಣಕ್ಕಾಗಿ ಹಾತೊರೆಯುವುದು ನಿಜ ವಾಗಿದ್ದು, ಸದ್ಯ ಯಾವುದೇ ವಿಮಾನ ಯಾನದ ವ್ಯವಸ್ಥೆಯಿಲ್ಲದೆ ಅವರು ಸಂಕಷ್ಟಕ್ಕೀಡಾಗಿರುತ್ತಾರೆ. ಅಂಥವರಲ್ಲಿ ಗರ್ಭಿಣಿ ಮಹಿಳೆಯರು, ತಾಯಿನಾಡಿನಲ್ಲಿ ವೈದ್ಯಕೀಯ ಸೇವೆಯ ಅಗತ್ಯವಿರುವವರು, ಹಿರಿಯ ನಾಗರಿಕರು, ಪ್ರವಾಸ ಅಥವಾ ವ್ಯವಹಾರಕ್ಕಾಗಿ ಬಂದವರು, ನೆಂಟರಿಷ್ಟರನ್ನು ಭೇಟಿಯಾಗಲು ಬಂದವರು, ಉದ್ಯೋಗದ ರಜೆಯ ಮೇಲೆ ಅಥವಾ ಉದ್ಯೋಗ ಸ್ಥಳದ ಸದ್ಯದ ತಾತ್ಕಾಲಿಕ ಪ್ರತಿಕೂಲ ಪರಿ

ಸ್ಥಿತಿಯ ಕಾರಣಕ್ಕಾಗಿ ತಾಯಿನಾಡಿಗೆ ತೆರಳಬೇಕಾದ ಅನಿವಾಸಿಯರೆಲ್ಲಾ ಸೇರಿರುತ್ತಾರೆ. ಅಷ್ಟೇ ಅಲ್ಲದೆ ಲಾಕ್‌ಡೌನ್‌ನಿಂದಾದ ಬಿಡುವಿನ ಸದ್ವಿನಿಯೋಗ ಬಯಸಿ ಪ್ರಯಾಣಿಸಬಯಸುವ ಕೆಲವು ಅನಿವಾಸಿಯರೂ ಈಗ ಪ್ರಯಾಣದ  ನಿರೀಕ್ಷೆಯಲ್ಲಿರುವುದು ಕಂಡುಬರುತ್ತಿದೆ. ಈ ಬಿಕ್ಕಟ್ಟಿನ ಸಂದರ್ಭದಲ್ಲಿ ಕೇಂದ್ರ  ಸರಕಾರವು ವಿಶ್ವದೆಲ್ಲೆಡೆಯಿಂದ ಅತಂತ್ರ ಸ್ಥಿತಿಯಲ್ಲಿರುವ ಅನಿವಾಸಿಯರನ್ನು ಆದ್ಯತೆಯ ಆಧಾರದ ಮೇಲೆ ತಾಯಿನಾಡಿಗೆ ಸ್ಥಳಾಂತರಿಸುವ ತುರ್ತು ವ್ಯವಸ್ಥೆಯನ್ನು ಮಾಡಿದ್ದು, ಈ ಹಿನ್ನೆಲೆಯಲ್ಲಿ ಬಹ್ರೈನ್‌ನಲ್ಲಿರುವ ಭಾರತೀಯರನ್ನೂ ಕರೆತರಲು ಕನಿಷ್ಠ ಎರಡು ವಿಮಾನಗಳ ವ್ಯವಸ್ಥೆಯನ್ನು ಮಾಡಿರುವುದು ತುಸು ಸಮಾಧಾನದ ವಿಚಾರವಾಗಿದೆ. ಇವೆಲ್ಲದರ ಮಧ್ಯೆ ಬಹ್ರೈನ್‌ ಅಥವಾ ಕೊಲ್ಲಿ ಕನ್ನಡಿಗರ ಭವಿಷ್ಯವನ್ನು ಊಹಿಸುವುದಾದರೆ ಅದು ಖಂಡಿತವಾಗಿಯೂ ಅತಂತ್ರ ವಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಅವರು ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next