ಇಂಡಿ: ಕ್ಷೇತ್ರದಲ್ಲಿ ಅನೇಕ ನೀರಾವರಿ ಯೋಜನೆಗಳನ್ನು ತರುವ ಮೂಲಕ ಈ ಭಾಗದಲ್ಲಿನ ಕೆರೆಗಳನ್ನು ತುಂಬಿ ಕ್ಷೇತ್ರವನ್ನು ನೀರಾವರಿ ಸೇರಿದಂತೆ ಎಲ್ಲ ರಂಗಗಳಲ್ಲೂ ಅಭಿವೃದ್ಧಿ ಪಡಿಸಿದ್ದೇನೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ತಾಲೂಕಿನ ಗುಂದವಾನ ಕೆರೆ ನಂ. 1ರಲ್ಲಿ ಬಾಗಿನ ಅರ್ಪಿಸಿ ಮಾತನಾಡಿದ ಅವರು, ದೇಶದಲ್ಲಿ ಅತಿ ಹೆಚ್ಚು ಕೆರೆಗಳು ಇರುವ ರಾಜ್ಯ ಓರಿಸ್ಸಾ. ಆ ರಾಜ್ಯದಲ್ಲಿ ಒಂದು ದೊಡ್ಡ ಕ್ರಾಂತಿ ನಡೆದಿದೆ. ಅಲ್ಲಿ ಗ್ರಾಮಕ್ಕೊಂದು ಕೆರೆ ಇರಬೇಕು. ಆ ಕೆರೆಗಳೆ ಆ ಗ್ರಾಮದ ಭವಿಷ್ಯವನ್ನು ರೂಪಿಸುತ್ತವೆ. ಕರ್ನಾಟಕ ರಾಜ್ಯದಲ್ಲಿ ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಗುಂದವಾನ ಕೆರೆ ನಂ.1 ಮತ್ತು 2ರಲ್ಲಿ ಕೆರೆಗಳನ್ನು 1979ರಲ್ಲಿ ಅನೇಕ ಜನರ ಮತ್ತು ಗ್ರಾಮಗಳ ಸಹಾಯದಿಂದ ನಿರ್ಮಾಣ ಮಾಡಲಾಗಿದೆ. ಇಂದು ಈ ಕೆರೆ ಸಂಪೂರ್ಣ ತುಂಬಿದ್ದು ರೈತರಿಗೆ ಆಶಾಕಿರಣವಾಗಿದೆ ಎಂದರು.
ಓರಿಸ್ಸಾ ರಾಜ್ಯದ ಪ್ರೇರಣೆಯಿಂದ ನಮ್ಮ ಕರ್ನಾಟಕ ರಾಜ್ಯದಲ್ಲಿ ಈ ಕರೆ ತುಂಬುವ ಯೋಜನೆಯನ್ನು 2009ರಲ್ಲಿ ಪ್ರಾರಂಭ ಮಾಡಲಾಯಿತು. ಹಿಂದಿನ ಸರಕಾರದ ಅವ ಧಿಯಲ್ಲಿ ಕೆರೆ ತುಂಬುವ ಯೋಜನೆಗಳಿಗೆ ಚಾಲನೆ ದೊರಕಿತು. ಅದರ ಫಲವೇ ಈ ಭಾಗದ ಅಣಚಿ ಮತ್ತು ಸಂಖ, ಭೂಂಯ್ಯಾರ ಕೆರೆಗಳು ತುಂಬಲು ಯೋಜನೆ ರೂಪಿಸಿ ನದಿಗಳಿಂದ ಕರೆ ತುಂಬಿಸುವುದು ಸಾಧ್ಯವಾಗಿದೆ ಎಂದರು.
ರೇವಣಸಿದ್ದೇಶ್ವರ ಏತ ನೀರಾವರಿ ಸುಮಾರು 2,600 ಕೋಟಿ ರೂ ವೆಚ್ಚದಲ್ಲಿ ಈ ಭಾಗದ ಇಂಡಿ ಮತ್ತು ಚಡಚಣ ತಾಲೂಕಿನ 18 ಕೆರೆಗಳಿಗೆ ಕಾಲುವೆ ಮೂಲಕ ನೀರು ತುಂಬುವಕೆಲಸ ನಡೆಯುತ್ತಿದೆ. ಇದರಿಂದ 33 ಸಾವಿರ ಹೆಕ್ಟೇರ್ ಪ್ರದೇಶ ನೀರಾವರಿಯಾಗಿ ರೈತರಿಗೆ ಅನಕೂಲವಾಗಲಿದೆ. ಈ ಕಾರ್ಯವನ್ನು ಇಂದಿನ ಸರಕಾರದ ಜಲ ಸಂಪನ್ಮೂಲಸಚಿವ ರಮೇಶ ಜಾರಕಿಹೊಳಿಯವರು ಮಾಡುತ್ತಿದ್ದಾರೆ. ಅವರಿಂದಲೇ ಆ ಕೆರೆಗಳಿಗೆ ಚಾಲನೆ ನೀಡುತ್ತೇನೆ ಎಂದರು.
ಭಾರತೀಯ ಕಿಸಾನ್ ಸಂಘದ ಉತ್ತರ ಪ್ರಾಂತ ಅಧ್ಯಕ್ಷ ಗುರುನಾತ ಬಗಲಿ ಮಾತನಾಡಿದರು. ಜಿಪಂ ಸದಸ್ಯ ಮಹಾದೇವ ಪೂಜಾರಿ, ಬಿ.ಎನ್. ಮಹಿಷಿ, ಶ್ರೀಮಂತ ಇಂಡಿ, ಈರಣ್ಣ ವಾಲಿ, ರವಿ ಖಾನಾಪುರ, ಹನುಮಂತ ಖಡೆಖಡೆ, ಧರ್ಮರಾಜ್ ವಾಲೀಕಾರ, ಶ್ರೀಕಾಂತ ಕನಮಡಿ, ರಮೇಶ ಚವ್ಹಾಣ, ತಾಪಂ ಮಾಜಿ ಅಧ್ಯಕ್ಷ ರುಕ್ಮುದ್ದಿನ್ ತದ್ದೇವಾಡಿ, ಸುನೀಲಗೌಡ ಬಿರಾದಾರ, ರೇವಣಸಿದ್ದ ಗೋಡಕೆ, ಎಂ.ಎಸ್. ಪಾಟೀಲ, ಅಂಬಣ್ಣ ಜಾಧವ, ಗಿರೀಶ ಬಿರಾದಾರ ಇದ್ದರು.