ತನ್ನ ಜೀವದ ಹಂಗು ತೊರೆದು ಸಮಾಜವನ್ನು ರಕ್ಷಿಸಲು ನಿಲ್ಲುವ ನಿಮ್ಮಪ್ಪನೂ ಸೂಪರ್ ಹೀರೋ… -ಪುಟ್ಟ ಮಗನಿಗೆ ತಾಯಿ ಹೀಗೆ ಹೇಳುತ್ತಲೇ ತಂದೆಯಂತೆ ತಾನು ಕೂಡಾ ಖಡಕ್ ಪೊಲೀಸ್ ಆಫೀಸರ್ ಆಗಬೇಕೆಂಬ ಕನಸು ಕಾಣುತ್ತಾನೆ. ಅದರಂತೆ ದೊಡ್ಡವನಾಗಿ ಪೊಲೀಸ್ ಆಗುತ್ತಾನೆ ಕೂಡಾ. ವೇದಾಂತ್ ಎಂದರೆ ಖಡಕ್ ಪೊಲೀಸ್ ಆಫೀಸರ್ ಎಂಬ ಮಾತು… ಜೀಪ್ ಹತ್ತಿ ಮಂಗಳೂರು ಸಿಟಿ ರೌಂಡ್ಸ್ ಹೊರಟರೆ ಸಮಾಜ ದ್ರೋಹಿಗಳು ಸೈಲೆಂಟ್ ಆಗಿ ಸೈಡಾಗುತ್ತಾರೆ. ಆದರೆ, ಎಲ್ಲವೂ ಹೀಗೆ ಮುಂದುವರೆಯುವುದಿಲ್ಲ. ಮಾತಿನ ತಡೆಗೋಡೆ ವೇದಾಂತ್‌ನ ತಡೆಯಲು ಮುಂದಾಗುತ್ತದೆ. ಅಲ್ಲಿಂದ ವೇದಾಂತ್ ಆಟ ಶುರು. ದುಷ್ಟ ಸಂಹಾರಕ, ಶಿಷ್ಟ ರಕ್ಷಕ ಆಗಿ ಬದಲಾಗುತ್ತಾನೆ. ಅದು ಹೇಗೆ… ಅದೇ ಸಿನಿಮಾದ ಹೈಲೈಟ್.
ಇಷ್ಟು ಹೇಳಿದ ಮೇಲೆ ಇದೊಂದು ಆ್ಯಕ್ಷನ್ ಸಿನಿಮಾ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಸಿನಿಮಾ ಆರಂಭದಿಂದ ಕೊನೆಯವರೆಗೂ ಮಾಸ್ ಪ್ರಿಯರನ್ನು ರಂಜಿಸಲು ಏನೇನು ಬೇಕೋ ಅವೆಲ್ಲವೂ ಈ ಸಿನಿಮಾದಲ್ಲಿ ಹೇರಳವಾಗಿವೆ. ಹಾಗಂತ ಸುಖಾಸುಮ್ಮನೆ ಹೊಡೆದಾಟ, ಬಡಿದಾಟವಿಲ್ಲ. ಅದಕ್ಕೊಂದು ಸೂಕ್ತ ವೇದಿಕೆ ಒದಗಿಸಲಾಗಿದೆ. ಇದೊಂದು ಸೂಪರ್ ಹೀರೋ ಕಾನ್ಸೆಪ್ಟ್ನಲ್ಲಿ ಮೂಡಿಬಂದ ಸಿನಿಮಾ.
ಇಲ್ಲಿ ನಾಯಕ ಬಲಾಡ್ಯ. ಎಲ್ಲಿ ಬೇಕಾದರೂ ನುಗ್ಗಬಲ್ಲ, ಯಾರ ಹಣೆಗಾದರೂ ಗನ್ ಇಡಬಲ್ಲ ನಿಪುಣ. ಆತನ ಸೂಪರ್ ಅವತಾರವನ್ನು ಮತ್ತಷ್ಟು ಬಲಗೊಳಿಸಲು ಒಂದಷ್ಟು ಅಂಶಗಳನ್ನು ಜೊತೆಗಿಟ್ಟುಕೊಂಡಿರುತ್ತಾನೆ. ಹೀಗೆ ಸಾಗುವ ಸಿನಿಮಾ ಆಗಾಗ ಟ್ವಿಸ್ಟ್, ಟರ್ನ್ಗಳ ಮೂಲಕ ಒಂದಷ್ಟು ಕುತೂಹಲ ಹೆಚ್ಚಿಸುತ್ತದೆ. ಇದೊಂದು ಮೇಕಿಂಗ್ ಸಿನಿಮಾ ಎನ್ನಬಹುದು. ಕಥೆ ತೀರಾ ಹೊಸದಲ್ಲದೇ ಹೋದರೂ ಸಿನಿಮಾವನ್ನು ಕಟ್ಟಿಕೊಟ್ಟ ರೀತಿ ಇಷ್ಟವಾಗುತ್ತದೆ.
ಸಾಮಾನ್ಯವಾಗಿ ಸ್ಟಾರ್, ಕಮರ್ಷಿಯಲ್ ಸಿನಿಮಾಗಳಲ್ಲಿ ಕಾಣುವ ಬಿಲ್ಡಪ್‌ಗ್ಳಿಂದ “ಬಘೀರ’ ಮುಕ್ತ. ಸಿನಿಮಾ ಆರಂಭದಿಂದಲೇ ಕಥೆ ತೆರೆದುಕೊಳ್ಳುತ್ತಾ ಹೋಗುವ ಮೂಲಕ ಪ್ರೇಕ್ಷಕನನ್ನು ಮೊದಲ ದೃಶ್ಯದಿಂದಲೇ ತನ್ನ ಜೊತೆ ಹೆಜ್ಜೆ ಹಾಕಿಸುತ್ತಾನೆ
ಬಘೀರ. ಚಿತ್ರದಲ್ಲಿ ಭರ್ಜರಿ ಆ್ಯಕ್ಷನ್ ಇದೆ. ಅದನ್ನು ಅಷ್ಟೇ ಅದ್ಧೂರಿಯಾಗಿ ಕಟ್ಟಿಕೊಡಲಾಗಿದೆ ಕೂಡಾ. ನಿರ್ದೇಶಕ ಸೂರಿ ಚಿತ್ರಕಥೆಯ ಜೊತೆಗೆ ಇಡೀ ಸಿನಿಮಾವನ್ನು ತುಂಬಾ ನೀಟಾಗಿ, ಗೊಂದಲ ಮುಕ್ತವಾಗಿ ಕಟ್ಟಿಕೊಟ್ಟಿರೋದು ಈ ಸಿನಿಮಾದ ಪ್ಲಸ್. ಚಿತ್ರದಲ್ಲಿ ಅತಿಯಾದ ಮಾತುಗಳಿಲ್ಲ. ಆದರೆ, ತೂಕದ ಮಾತುಗಳಿವೆ.
ನಟ ಶ್ರೀಮುರುಳಿ ಈ ಸಿನಿಮಾದ ಹೈಲೈಟ್. ವೇದಾಂತ್ ಎಂಬ ಖಡಕ್ ಪೊಲೀಸ್ ಆμàಸರ್ ಜೊತೆಗೆ ಸೂಪರ್ ಹೀರೋ ಆಗಿ ಅವರ ಅಭಿನಯ ಇಷ್ಟವಾಗುತ್ತದೆ. ಪಾತ್ರಕ್ಕೆ ಬೇಕಾದ ಗತ್ತು ಗಾಂಭೀರ್ಯ, ಮ್ಯಾನರಿಸಂ ಎಲ್ಲವೂ ಹೊಂದಿಕೊಂಡಿದೆ. ನಾಯಕಿ ರುಕ್ಮಿಣಿ ವಸಂತ್ ಇಲ್ಲಿ ಸರಳ ಸುಂದರಿ. ಅವರ ಪಾತ್ರಕ್ಕೆ ಹೆಚ್ಚೇನು ಮಹತ್ವವಿಲ್ಲ. ಆದರೆ, ಪ್ರಕಾಶ್ ರೈ, ರಂಗಾಯಣ ರಘು, “ಸಿದ್ಲಿಂಗು’ ಶ್ರೀಧರ್, ಅಶ್ವಿನ್ ಹಾಸನ್, ರಘು ರಾಮನಕೊಪ್ಪ, ಗರುಡ ರಾಮ್, ಪ್ರಕಾಶ ತುಮ್ಮಿನಾಡು, ಅಚ್ಯುತ್‌ಕುಮಾರ್ ಪಾತ್ರಗಳು ಗಮನ ಸೆಳೆಯುತ್ತವೆ.
ರವಿಪ್ರಕಾಶ್ ರೈ