ಚಿಕ್ಕಬಳ್ಳಾಪುರ: ರಾಜ್ಯ ಸರ್ಕಾರ ಬಾಗೇಪಲ್ಲಿ ತಾಲೂಕಿನ ಚೇಳೂರು ಹೋಬಳಿಯನ್ನು ಹೊಸ ತಾಲೂಕಾಗಿ ಘೊಷಿಸಿದ ಬೆನ್ನಲೇ ಸ್ಥಳೀಯವಾಗಿ ಪರ, ವಿರೋಧ ವ್ಯಕ್ತವಾಗಿದೆ. ಆಯವ್ಯಯದಲ್ಲಿ ತಾಲೂಕು ಸ್ಥಾನಮಾನ ಸಿಗದ ಜಿಲ್ಲೆಯ ಇತರೇ ಹೋಬಳಿಗಳಲ್ಲಿ ಈಗ ಹೋರಾಟದ ಕಿಚ್ಚು ಆರಂಭಗೊಂಡಿದೆ.
ಜಿಲ್ಲೆಯಲ್ಲಿ ತೀರಾ ಹಿಂದುಳಿದ ತಾಲೂಕಾಗಿರುವ ಬಾಗೇಪಲ್ಲಿಯ ಚೇಳೂರು ಹೋಬಳಿಯನ್ನು ಕಂದಾಯ ಇಲಾಖೆ ಹಿತದೃಷ್ಟಿಯಿಂದ ಪ್ರತ್ಯೇಕ ತಾಲೂಕಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಆಯವ್ಯಯ ದಲ್ಲಿ ಘೋಷಣೆ ಮಾಡಿರುವುದು ಚೇಳೂರು ಹೋಬಳಿ ಸುತ್ತಮುತ್ತ ನಾಗರಿಕರಲ್ಲಿ ಸಂತಸ ಮನೆ ಮಾಡಿದ್ದರೂ ಹೊಸ ತಾಲೂಕಿಗೆ ಸೇರ್ಪಡೆಯಾಗಲು ಸುತ್ತಮುತ್ತಲಿನ ಗ್ರಾಪಂಗಳು ತಗಾದೆ ತೆಗೆದಿವೆ.
ಬಾಗೇಪಲ್ಲಿ, ಚಿಂತಾಮಣಿ ಹಾಗೂ ಶಿಡ್ಲಘಟ್ಟ ತಾಲೂಕಿಗೆ ಸಮಾನಂತರದ ದೂರದಲ್ಲಿರುವ ಚೇಳೂರು ನೆರೆಯ ಆಂಧ್ರಪ್ರದೇಶಕ್ಕೆ ಕೂಗಳತೆಯ ದೂರದಲ್ಲಿದೆ. ಜಿಲ್ಲಾ ಕೇಂದ್ರಕ್ಕೂ 60 ಕಿ.ಮೀ ದೂರದಲ್ಲಿದ್ದರೆ. ಚಿಂತಾಮಣಿ ಹಾಗೂ ಬಾಗೇಪಲ್ಲಿ ತಾಲೂಕಿಗೆ ಚೇಳೂರು 50 ಕಿ.ಮೀ. ಅಂತರದಲ್ಲಿದೆ. ಹೀಗಾಗಿ ಚೇಳೂರು ಹೋಬಳಿಯನ್ನು ಪ್ರತ್ಯೇಕ ತಾಲೂಕು ಮಾಡಬೇಕೆಂಬ ಆ ಭಾಗದ ಜನರ 25 ವರ್ಷಗಳ ಹೋರಾಟಕ್ಕೆ ಕೊನೆಗೂ ರಾಜ್ಯ ಸರ್ಕಾರ ಸ್ಪಂದಿಸಿದೆ. ಈಗ ಚೇಳೂರು ಹೊಸ ತಾಲೂಕಾಗಿ ಘೋಷಣೆಯಾದರೂ ತಾಲೂಕಿಗೆ ಸೇರ್ಪಡೆಗೊಳ್ಳಲು ಗ್ರಾಪಂಗಳು ಹಿಂದೇಟು ಹಾಕಿ ಪ್ರತಿಭಟನೆ ಹಾದಿ ಹಿಡಿದಿವೆ.
ಹೊಸ ತಾಲೂಕಿಗೆ ಸೇರಲು ವಿರೋಧ: ಹೊಸ ತಾಲೂಕು ಚೇಳೂರುಗೆ ಪಾತಪಾಳ್ಯದ ಹಲವು ಗ್ರಾಪಂಗಳ ಸೇರ್ಪಡೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಈ ಪೈಕಿ ಬಿಳ್ಳೂರು ಹಾಗೂ ಪಾತಪಾಳ್ಯ ಗ್ರಾಪಂಗಳ ವ್ಯಾಪ್ತಿಯಲ್ಲಿ ಬಂದ್ ಸೇರಿದಂತೆ ಪ್ರತಿಭಟನೆಗಳು ಶುರುವಾಗಿವೆ. ಅಲ್ಲದೇ, ಚಿಂತಾಮಣಿ ತಾಲೂಕಿನ ಹಲವು ಗ್ರಾಪಂಗಳು ಚೇಳೂರಿಗೆ ಸೇರ್ಪಡೆ ಗೊಳಿಸುವ ಪ್ರಸ್ತಾಪಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿವೆ. ಹೀಗಾಗಿ ಚೇಳೂರು ಹೊಸ ತಾಲೂಕಿಗೆ ಯಾವೆಲ್ಲಾ ಗ್ರಾಪಂಗಳು ಸೇರಿಕೊಳ್ಳುತ್ತೇವೆ. ಯಾವ ಸೇರ್ಪಡೆಗೊಳ್ಳುತ್ತೇವೆಂಬ ಸ್ಪಷ್ಟ ಮಾಹಿತಿ ಇಲ್ಲದೇ ಜನರು ಗೊಂದಲದಲ್ಲಿದ್ದಾರೆ.
ಇನ್ನೂ ಭಾವನಾತ್ಮಕವಾಗಿ ಬಾಗೇಪಲ್ಲಿ, ಚಿಂತಾಮಣಿ ತಾಲೂಕುಗಳ ಸಂಬಂಧ ಕಡಿದುಕೊಳ್ಳಲಾಗದ ಗ್ರಾಪಂಗಳ ಜನತೆ ತಾವು ಚೇಳೂರು ತಾಲೂಕಿಗೆ ಸೇರುವುದಿಲ್ಲ ಎಂದು ಹೇಳುತ್ತಿದ್ದಾರೆ. ಒಮ್ಮೆ ನಮ್ಮನ್ನು ಸೇರಿದರೆ ಉಗ್ರ ಹೋರಾಟ ನಡೆಸುತ್ತೇವೆಂದು ಹೇಳುತ್ತಿರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದ್ದು, ಸರ್ಕಾರ ಯಾವ ರೀತಿಯಲ್ಲಿ ಹೊಸ ತಾಲೂಕು ರಚನೆಗೆ ಮುಂದಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ಅಭಿವೃದ್ಧಿಗೆ ಬೇಕು ಕೋಟಿ ಕೋಟಿ ಅನುದಾನ: ಬಾಗೇಪಲ್ಲಿ ತಾಲೂಕಿನ ಚೇಳೂರು ಹೋಬಳಿಯನ್ನು ಸರ್ಕಾರ ಹೊಸ ತಾಲೂಕಾಗಿ ಬಜೆಟ್‌ನಲ್ಲಿ ಘೋಷಿಸಿದರೂ ತಾಲೂಕು ರಚನೆಗೆ ಬೇಕಾದ ಮೂಲ ಸೌಕರ್ಯಕ್ಕೆ ಯಾವುದೇ ಅನುದಾನ ಮೀಸಲಿಟ್ಟಿಲ್ಲ. ಚೇಳೂರು ಆಂಧ್ರಕ್ಕೆ ಸಮೀಪವಿದೆ. ಯಾವುದೇ ರೀತಿ ಮೂಲ ಸೌಕರ್ಯಗಳು ಇಲ್ಲ. ಎಲ್ಲಾ ಗ್ರಾಮಗಳು ಕುಗ್ರಾಮಗಳಂತೆ ಭಾಸವಾಗುತ್ತಿದೆ. ಕನ್ನಡ ಶಾಲೆಗಳ ಪರಿಸ್ಥಿತಿ ಅಂತೂ ಮುಚ್ಚುವ ಹಂತಕ್ಕೆ ಬಂದಿವೆ. ಹೇಳಿಕೊಳ್ಳುವ ರೀತಿಯಲ್ಲಿ ಸರ್ಕಾರಿ ಕಟ್ಟಡಗಳು ಇಲ್ಲ. ನಾಡ ಕಚೇರಿ ಕೂಡ ಕುಸಿದು ಬೀಳುವ ಸ್ಥಿತಿಯಲ್ಲಿದೆ.
ಈಗಾಗಿ ಹೊಸ ತಾಲೂಕು ಕಚೇರಿ ಸೇರಿದಂತೆ, ಆಸ್ಪತ್ರೆ, ಪೊಲೀಸ್ ಠಾಣೆ, ಶಾಲಾ, ಕಾಲೇಜು ನಿರ್ಮಾಣ, ವಿವಿಧ ಇಲಾಖೆಗಳಿಗೆ ಸರ್ಕಾರಿ ಕಚೇರಿ ಅವುಗಳಿಗೆ ಮೂಲ ಸೌಕರ್ಯ ಒದಿಸಲು ಕೋಟ್ಯಂತರ ರೂ. ಅನುದಾನ ಬೇಕಿದೆ. ಹಿಂದಿನ ಸಿದ್ದರಾಮಯ್ಯ ಸರ್ಕಾರದಲ್ಲಿ ಘೋಷಣೆಯಾದ ಹಲವು ಹೊಸ ತಾಲೂಕುಗಳಿಗೆ ಇಂದಿಗೂ ಮೂಲ ಸೌಕರ್ಯಗಳ ಭಾಗ್ಯವಿಲ್ಲ. ಹೀಗಾಗಿ ಜಿಲ್ಲೆಯಲ್ಲಿ 7ನೇ ತಾಲೂಕಾಗಿ ಉದಯವಾಗುತ್ತಿರುವ ಚೇಳೂರಿಗೆ ಸರ್ಕಾರ ಬಜೆಟ್ ಅಧಿವೇಶನದಲ್ಲಿ ಏನಾದರೂ ಅನುದಾನ ಒದಗಿಸುತ್ತಾ ಎಂಬುದನ್ನು ಕಾದು ನೋಡಬೇಕಿದೆ.