Advertisement

ಬಾಗಲಕೋಟೆ: ಬನಹಟ್ಟಿ ಠಾಣೆ ಇದ್ರೂ ತೇರದಾಳಕ್ಕೆ ಹೋಗೋದ್ಯಾಕೆ?

05:30 PM Jun 03, 2023 | Team Udayavani |

ರಬಕವಿ-ಬನಹಟ್ಟಿ: ರಬಕವಿ ಬಳಿಯೇ ಬನಹಟ್ಟಿ ಪೊಲೀಸ್‌ ಠಾಣೆ ಇದ್ರೂ ತೇರದಾಳ ಪೊಲೀಸ್‌ ಠಾಣೆಗೆ ಹೋಗೋದು ಯಾಕೆ? ಎಂಬುದು ರಬಕವಿ ನಾಗರಿಕರ ಪ್ರಶ್ನೆ. ಹೌದು. ಕೇವಲ ಒಂದೇ ಕಿ.ಮೀ. ದೂರದಲ್ಲಿ ಬನಹಟ್ಟಿ ಠಾಣೆ ಇದ್ದರೂ ರಬಕವಿ ಜನರು ದೂರು ಇನ್ನಿತರೆ ಕಾರ್ಯಗಳಿಗೆ 10ಕಿ.ಮೀ. ದೂರದ ತೇರದಾಳ ಪೊಲೀಸ್‌ ಠಾಣೆಗೆ ಹೋಗಬೇಕಾದ ಅನಿವಾರ್ಯತೆ ಉಂಟಾಗಿದೆ.

Advertisement

ಹತ್ತಿರವೇ ಸೌಲಭ್ಯವಿದ್ದರೂ ದೂರ ಹೋಗುವುದು ಯಾಕೆ ಎಂಬುದು ಇಲ್ಲಿಯ ಜನರ ಬಲವಾದ ಪ್ರಶ್ನೆಯಾಗಿದೆ. ಇಲ್ಲಿಯ ಜನರು ಚಿಕ್ಕ ಪುಟ್ಟ ಮೊಬೈಲ್‌ ಕಳವು, ಪಾಸ್‌ಪೋರ್ಟ್‌ ಅರ್ಜಿ ಪರಿಶೀಲನೆ, ದಾಖಲೆಗಳ ಕಳುವಿನ ದೂರು ಸೇರಿದಂತೆ ಪ್ರತಿಯೊಂದಕ್ಕೂ ತೇರದಾಳ ಪಟ್ಟಣಕ್ಕೆ ಹೋಗಬೇಕಿದೆ. ಇದರಿಂದಾಗಿ ಈ ಭಾಗದ ನೇಕಾರರು, ರೈತರು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ವ್ಯಾಪಾರಸ್ಥರಿಗೆ ಮತ್ತು ಮಹಿಳೆಯರಿಗೆ ತೊಂದರೆಯಾಗಿದೆ.

ತೇರದಾಳ ಪೊಲೀಸ್‌ ಠಾಣೆಯಲ್ಲಿ ಸಂಬಂಧಿಸಿದ ಸಿಬ್ಬಂದಿ ಇರದೆ ಇದ್ದರೆ ಮರು ದಿವಸ ಮತ್ತೇ ತೇರದಾಳಕ್ಕೆ ಹೋಗಬೇಕಾಗಿದೆ. ಇದು ಇಲ್ಲಿಯ ಜನರಿಗೆ ಆರ್ಥಿಕವಾಗಿ ಹೊರೆಯಾಗಿದೆ. ಹೀಗಾಗಿ ಬಹುತೇಕ ಜನರು ತೇರದಾಳಕ್ಕೆ ಹೋಗೋದೆ ಇಲ್ಲ. ರಬಕವಿ ನಗರದಲ್ಲಿ ಔಟ್‌ಪೋಸ್ಟ್‌ ಠಾಣೆ ಇದ್ದರೂ ಇಲ್ಲದಂತಾಗಿದೆ ಎನ್ನುತ್ತಾರೆ ರಬಕವಿ-ಬನಹಟ್ಟಿ ನಗರಸಭೆ ಸದಸ್ಯ ಬಸವರಾಜ ಗುಡೋಡಗಿ. ರಬಕವಿಯ ಜನರು ಮನೆಯಂಗಳದಲ್ಲಿರುವ ಠಾಣೆ ಸೌಲಭ್ಯ ಪಡೆಯದೇ ತೇರದಾಳಕ್ಕೆ ಅಲೆಯುವಂತಾ ಗಿದೆ.
ಸಂಬಂಧಪಟ್ಟ ಅಧಿಕಾರಿಗಳು ಇಲಾಖೆ ಮೇಲಧಿಕಾರಿಗಳ ಗಮನ ಸೆಳೆಯಬೇಕು ಇಲ್ಲವೇ ಪ್ರತ್ಯೇಕ ಠಾಣೆಗಾಗಿ ನಿರಂತರ-ಗಟ್ಟಿ ಹೋರಾಟದ ನಿಟ್ಟಿನಲ್ಲಿ ಸ್ಥಳೀಯ ಮುಖಂಡರು ಗಮನ ಹರಿಸಬೇಕಿದೆ.

ರಬಕವಿಯಲ್ಲಿ ಪೊಲೀಸ್‌ ಠಾಣೆ ನಿರ್ಮಾಣಕ್ಕೆಂದು ಇಲ್ಲಿನ ದುರಡಿ ಸಹೋದರರು ಹೊಸ ಬಸ್‌ ನಿಲ್ದಾಣ ಮಾರ್ಗದಲ್ಲಿ ಭೂಮಿ ದಾನವಾಗಿ ನೀಡಿದ್ದಾರೆ. ಸದ್ಯ ಇಲ್ಲಿ ರಬಕವಿ ಔಟ್‌ಪೋಸ್ಟ್‌ ಸ್ಥಳ ಎಂದು ನಾಮಫಲಕ ಹಾಕಲಾಗಿದೆ. ಇಲ್ಲಿಯಾದರೂ ಪೊಲೀಸ್‌ ನಿರ್ಮಾಣಗೊಂಡರೆ ರಬಕವಿ ಜನರಿಗೆ ಅನುಕೂಲ ಆಗುವುದರಲ್ಲಿ ಸಂದೇಹವಿಲ್ಲ.

ರಬಕವಿ ಬನಹಟ್ಟಿ ತಾಲೂಕು ವ್ಯಾಪ್ತಿ ವಿಶಾಲವಾಗಿದೆ. ರಬಕವಿಯಲ್ಲಿ ಗ್ರಾಮೀಣ ಪೊಲೀಸ್‌ ಠಾಣೆ ಸ್ಥಾಪನೆಗಾದರೂ ಕ್ರಮ ಕೈಗೊಳ್ಳಬೇಗಿದೆ. ರಬಕವಿಯಲ್ಲಿ ಠಾಣೆ ನಿರ್ಮಿಸುವುದು ಸಾಧ್ಯವಾಗದೆ ಇದ್ದರೆ, ರಬಕವಿಯ ವ್ಯಾಪ್ತಿಯನ್ನು ಬನಹಟ್ಟಿ ಪೊಲೀಸ್‌ ಠಾಣೆಗೆ ಸೇರಿಸುವ ನಿಟ್ಟಿನಲ್ಲಿ ಗಮನ ನೀಡಬೇಕು. ರಬಕವಿಯಲ್ಲಿ ಠಾಣೆ ನಿರ್ಮಾಣದಿಂದ ಇಲ್ಲಿಯ ಜನರಿಗೆ ಅನುಕೂಲವಾಗಲಿದೆ. ತೇರದಾಳ ಠಾಣೆ ಬನಹಟ್ಟಿ ನ್ಯಾಯಾಲಯ ವ್ಯಾಪ್ತಿಯಲ್ಲಿ ಬರುವುದರಿಂದ ವಕೀಲರಿಗೂ, ಕಕ್ಷಿದಾರರಿಗೂ ಅನುಕೂಲವಾಗಲಿದೆ.
*ವಿಜಯ ಹೂಗಾರ, ವಕೀಲರು, ರಬಕವಿ

Advertisement

ಜಿಲ್ಲೆಯ ರಬಕವಿ ಪಟ್ಟಣದ ಜನರು, ಪೊಲೀಸ್‌ ಠಾಣೆಗೆ ಸಂಬಂಧಿಸಿದ ಕೇಸ್‌ ಗಳಿಗಾಗಿ ತೇರದಾಳಕ್ಕೆ ಹೋಗಬೇಕು. ಅದು
ಆ ಠಾಣೆಯ ವ್ಯಾಪ್ತಿಯಲ್ಲಿದೆ. ರಬಕವಿಯಲ್ಲಿ ಸದ್ಯ ಹೊರ ಠಾಣೆ ಮಾತ್ರವಿದೆ. ರಬಕವಿಯಲ್ಲಿ ಹೊಸ ಠಾಣೆ ಸ್ಥಾಪನೆಯಾಗಲಿ, ತೇರದಾಳ ಠಾಣೆ ವ್ಯಾಪ್ತಿಯಿಂದ ಬನಹಟ್ಟಿ ಠಾಣೆ ವ್ಯಾಪ್ತಿಗೆ ಸೇರಿಸುವ ಕುರಿತಾಗಲಿ, ಅಲ್ಲಿಯ ಸಾರ್ವಜನಿಕರು ಮನವಿ ಪತ್ರ ನೀಡಿದರೆ, ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು.
ಜಯಪ್ರಕಾಶ ಹಕ್ಕರಕಿ, ಎಸ್ಪಿ, ಬಾಗಲಕೋಟ

ನಾಲ್ಕೂವರೆ ದಶಕಗಳ ಹಿಂದಿನ ಬೇಡಿಕೆ ಈಡೇರಿಸುವಲ್ಲಿ ಸರ್ಕಾರ ಗಮನ ನೀಡುತ್ತಿಲ್ಲ. ರಬಕವಿ ಜನರಲ್ಲಿ ಪೊಲೀಸ್‌ ಠಾಣೆ ಸ್ಥಾಪನೆಗೆ ಹೋರಾಟದ ಕೊರತೆಯಾಗಿದೆ. ಈ ಭಾಗಕ್ಕೆ ಬರುವ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ, ಸಚಿವರಿಗೆ ಮತ್ತು ಶಾಸಕರಿಗೆ ಮನವಿ ನೀಡುವ ಕಾರ್ಯ ಮಾತ್ರ ನಡೆದಿದೆ ಹೊರತು ನಿರಂತರ ಹೋರಾಟ ನಡೆಯದೆ ಇರುವುದು ವಿಳಂಬಕ್ಕೆ ಕಾರಣವಾಗಿದೆ.

*ಕಿರಣ ಶ್ರೀಶೈಲ ಆಳಗಿ

Advertisement

Udayavani is now on Telegram. Click here to join our channel and stay updated with the latest news.

Next