Advertisement

Bagalkote-ಕೇಂದ್ರದಿಂದ ಇನ್ನೂ ಬಾರದ ಬರದ ಹಣ

06:10 PM Nov 22, 2023 | Team Udayavani |

ಬಾಗಲಕೋಟೆ: ರಾಜ್ಯದಲ್ಲಿ 216 ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಣೆ ಮಾಡಲಾಗಿದ್ದು, ಕೇಂದ್ರ ಈವರೆಗೆ ಬಿಡಿಗಾಸು ಪರಿಹಾರ ನೀಡಿಲ್ಲ ಎಂದು ಗೃಹ ಸಚಿವ ಡಾ|ಜಿ. ಪರಮೇಶ್ವರ ಆಕ್ರೋಶ ವ್ಯಕ್ತಪಡಿಸಿದರು.

Advertisement

ನಗರದ ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬರದಿಂದ ಹಾನಿಯಾಗಿರುವುದಕ್ಕೆ ನಾವು ಕೇಳಿದ್ದು 16 ಸಾವಿರ ಕೋಟಿ ರೂ. ಆದರೆ, ಕೇಂದ್ರ ಸರ್ಕಾರ ನಮಗೆ ಎನ್‌ಡಿಆರ್‌ಎಫ್‌ ಹಣವನ್ನೂ
ಸಹ ನೀಡಿಲ್ಲ. ಜತೆಗೆ ರೈತರು ತುಂಬಿದ ಬೆಳೆ ವಿಮೆಗೂ ಪರಿಹಾರ ನೀಡಿಲ್ಲ ಎಂದು ಕೇಂದ್ರದ ಧೋರಣೆ ವಿರುದ್ಧ ಕಿಡಿಕಾರಿದರು.

ಗ್ಯಾರಂಟಿ ಮೂಲಕ ನಾವು ಹಣವನ್ನು ಪೋಲು ಮಾಡುತ್ತಿಲ್ಲ. ಗ್ಯಾರಂಟಿಯಿಂದ ರಾಜ್ಯದ ಜನರಿಗೆ ಶಕ್ತಿ ತುಂಬುವ ಕೆಲಸ ಮಾಡುತ್ತಿದ್ದೇವೆ. ನಮ್ಮ ಇಂತಹ ಜನಪ್ರಿಯ ಕಾರ್ಯಕ್ರಮಗಳಿಗೆ ಟೀಕೆ-ಟಿಪ್ಪಣಿ ಬರುವುದು ಸಹಜ. ಮಾಜಿ ಸಿಎಂ ಕುಮಾರಸ್ವಾಮಿ ಸೇರಿದಂತೆ ಬಿಜೆಪಿಯ ಅನೇಕ ನಾಯಕರುಗಳು ದಿನ ನಿತ್ಯ ನಮ್ಮನ್ನು ಟೀಕಿಸುತ್ತಾರೆ.

ಅವುಗಳಿಂದ ನಾವು ಧೃತಿಗೇಡುವ ಅವಶ್ಯಕತೆಯಿಲ್ಲ. ಜನರಿಗೆ ಕೊಟ್ಟ ಭರವಸೆಗಳನ್ನು ಈಡೇರಿಸುವ ಮೂಲಕ ರಾಜ್ಯಕ್ಕೆ ಒಳ್ಳೆಯ ಆಡಳಿತ ನೀಡಬೇಕಿದೆ ಎಂದರು.

ಬಿಜೆಪಿ ಅಧಿಕಾರದಿಂದ ಹೋಗುವಾಗ ಟ್ರೇಸರಿ ಖಾಲಿ ಮಾಡಿದೆ. ಕಾರಣ, ಅಭಿವೃದ್ಧಿಗೆ ಅನುದಾನ ಕೊರತೆಯಾಗುತ್ತಿದೆ. ಮುಂದಿನ ದಿನಗಳಲ್ಲಿ ಅಭಿವೃದ್ಧಿಗೂ ಹಣ ನೀಡಲಾಗುತ್ತದೆ. ಸಾಮಾಜಿಕ ನ್ಯಾಯ ಒದಗಿಸುವ ಮೂಲಕ ಉತ್ತಮ ಆಡಳಿತ ನೀಡೋಣ ಎಂದರು.

Advertisement

ನರೇಂದ್ರ ಮೋದಿ ದೇಶದ ಪ್ರಧಾನಿಯಾದ ಬಳಿಕ ದೇಶ ಆರ್ಥಿಕವಾಗಿ ಹಿಂದುಳಿದಿದೆ. ದೇಶ ಮುಂದೆ ಬರಬೇಕಾದರೆ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಕೇಂದ್ರದಿಂದ ಹೋಗಲಾಡಿಸಬೇಕಿದೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಪಕ್ಷ ಯಾರಿಗೆ ಟಿಕೆಟ್‌ ನೀಡಿದರೂ ಅವರ ಪರವಾಗಿ ಕಾರ್ಯಕರ್ತರು ಕೆಲಸ ಮಾಡುವ ಮೂಲಕ ಕಾಂಗ್ರೆಸ್‌ಗೆ ಹೆಚ್ಚಿನ ಸ್ಥಾನ ಗೆಲ್ಲಿಸುವ ಮೂಲಕ ಕೇಂದ್ರದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಬೇಕಿದೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಆರ್‌.ಬಿ.ತಿಮ್ಮಾಪುರ, ಶಾಸಕರಾದ ಎಚ್‌.ವೈ. ಮೇಟಿ, ಜೆ.ಟಿ. ಪಾಟೀಲ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಎಸ್‌.ಜಿ. ನಂಜಯ್ಯನಮಠ, ಜಿಲ್ಲಾ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ರಕ್ಷಿತಾ ಈಟಿ, ಮಾಜಿ ಶಾಸಕ ಆನಂದ ನ್ಯಾಮಗೌಡ, ಮುಖಂಡರಾದ ಸಿದ್ದು ಕೊಣ್ಣೂರ, ನಾಗರಾಜ ಹದ್ಲಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next