Advertisement

ಬಾಗಲಕೋಟೆ: ಕೋಟೆ ನಾಡಿನ ಭರವಸೆಗೆ ಸಿದ್ದರಾಮಯ್ಯ ತಣ್ಣೀರು

04:49 PM Feb 17, 2024 | Team Udayavani |

ಉದಯವಾಣಿ ಸಮಾಚಾರ
ಬಾಗಲಕೋಟೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್‌ ನಲ್ಲಿ ಜಿಲ್ಲೆಗೆ ಹೇಳಿಕೊಳ್ಳುವಂತ ಯೋಜನೆ
ಘೋಷಣೆ ಮಾಡದೇ ಇರುವುದು, ತೀವ್ರ ನಿರಾಶೆ ಮೂಡಿಸಿದೆ. ಚುನಾವಣೆಗೂ ಮುನ್ನ ಹಾಗೂ ಕಾಂಗ್ರೆಸ್‌ ಸರ್ಕಾರ ರಚನೆಯ ಬಳಿಕ ಸ್ವತಃ ಮುಖ್ಯಮಂತ್ರಿಗಳೇ ಜಿಲ್ಲೆಗೆ ಬಂದಾಗ ಹಲವು ಭರವಸೆ ನೀಡಿದ್ದರು. ಅವರು ನೀಡಿದ ಭರವಸೆಗಳಲ್ಲೂ ಒಂದನ್ನೂ ಘೋಷಣೆ ಮಾಡಿಲ್ಲ ಎಂಬ ಅಸಮಾಧಾನ, ಸ್ವತಃ ಆಡಳಿತ ಪಕ್ಷ ಕಾಂಗ್ರೆಸ್‌ನವರಿಂದಲೇ ಕೇಳಿ ಬಂದಿದೆ.

Advertisement

ಪ್ರಮುಖವಾಗಿ ಯುಕೆಪಿಗೆ ಕನಿಷ್ಠ 25 ಸಾವಿರ ಕೋಟಿ ಘೋಷಣೆ ಮಾಡುತ್ತಾರೆ ಎಂಬ ಭರವಸೆ ಇತ್ತು. ಈಗಾಗಲೇ
ಭೂಸ್ವಾಧೀನಪಡಿಸಿಕೊಂಡ ರೈತರಿಗೆ ಸುಮಾರು 1600 ಕೋಟಿ ರೂ. ಪರಿಹಾರ ನೀಡಬೇಕಿದ್ದು, ಇನ್ನೂ ಸುಮಾರು 87 ಸಾವಿರ
ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳಬೇಕಿದೆ.

ಸುಪ್ರೀಂ ಕೋರ್ಟ್‌ನಲ್ಲಿ ವ್ಯಾಜ್ಯ ಇತ್ಯರ್ಥ ಆಗಬೇಕಿದ್ದರೂ, ಯುಕೆಪಿ 3ನೇ ಹಂತ ಜಾರಿಗೊಳಿಸಲು, ಪುನರ್‌ವಸತಿ, ಪುನರ್‌
ನಿರ್ಮಾಣ ಕೈಗೊಳ್ಳಲೇಬೇಕಿದೆ. ಇದಕ್ಕಾಗಿ ಸರ್ಕಾರ, ಬದ್ಧತೆ ತೋರಿಸುತ್ತದೆ ಎಂಬ ಕೃಷ್ಣೆಯ ನೆಲದ ಸಂತ್ರಸ್ತರ ಬಯಕೆ ಈಡೇರಿಲ್ಲ.

ಇನ್ನು ಸ್ವತಃ ಸಿದ್ದರಾಮಯ್ಯ ಅವರು, 2014-15ನೇ ಸಾಲಿನಲ್ಲಿ ಘೋಷಣೆ ಮಾಡಿದ್ದ ಸರ್ಕಾರಿ ವೈದ್ಯಕೀಯ ಕಾಲೇಜು ಆರಂಭಕ್ಕೆ ಇನ್ನೂ ಮುಹೂರ್ತ ಬಂದಂತಿಲ್ಲ. ಚುನಾವಣೆ ಸಂದರ್ಭದಲ್ಲಿ ನಾನು ಘೋಷಣೆ ಮಾಡಿದ ವೈದ್ಯಕೀಯ ಕಾಲೇಜಿಗೆ ನಾನೇ ಭೂಮಿಪೂಜೆ ನೆರವೇರಿಸುವೆ, ನಾನೇ ಉದ್ಘಾಟಿಸುವೆ ಎಂದು ಹೇಳಿದ್ದರು. ಕಳೆದ ವರ್ಷ ಸರ್ಕಾರ ರಚನೆಯಾದ ಮೊದಲ
ಬಜೆಟ್‌ನಲ್ಲಿ ಈ ಕುರಿತ ಶಾಸಕರ ಹಾಗೂ ಹೋರಾಟಗಾರರ ಮನವಿ ವೇಳೆ, ಮುಂದಿನ ವರ್ಷ ಘೋಷಣೆ ಮಾಡುವುದಾಗಿ
ಹೇಳಿದ್ದರು. ಆದರೆ, ಈ ವರ್ಷದ ಬಜೆಟ್‌ನಲ್ಲಿ ವೈದ್ಯಕೀಯ ಕಾಲೇಜಿನ ಪ್ರಸ್ತಾಪವೇ ಇಲ್ಲ. ಇದು ಬಾಗಲಕೋಟೆಯ ಜನರಿಗೆ ಬಹಳ ನಿರಾಶೆ ಮೂಡಿಸಿದೆ ಎಂದು ಹೋರಾಟಗಾರ ರಮೇಶ ಬದ್ನೂರ ಉದಯವಾಣಿಗೆ ತಿಳಿಸಿದರು.

ಅಲ್ಲದೇ ಅಕ್ಷರಧಾಮ ಮಾದರಿ ಕೂಡಲಸಂಗಮ ಅಭಿವೃದ್ಧಿ, ಪ್ರವಾಸಿ ತಾಣಗಳ ಸಮಗ್ರ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್‌,
ಜವಳಿ ಪಾರ್ಕ ಸ್ಥಾಪನೆ ವಿಷಯಗಳ ಬಗ್ಗೆ ಮಾತೇ ಆಡಿಲ್ಲ. ಒಟ್ಟಾರೆ, ಸಿದ್ದರಾಮಯ್ಯ ಅವರು ದಾಖಲೆಯ 15ನೇ ಬಜೆಟ್‌
ಮಂಡಿಸಿದರೂ, ರಾಜಕೀಯ ಪುನರ್‌ಜನ್ಮ ಪಡೆದ ಬಾಗಲಕೋಟೆ ಜಿಲ್ಲೆ ಮರೆತಿದ್ದಾರೆ ಎಂಬ ಅಸಮಾಧಾನ ಕೇಳಿ ಬರುತ್ತಿದೆ.

Advertisement

ಜಿಲ್ಲೆಗೆ ಸಿಕ್ಕಿದ್ದೇನು
*ಯುಕೆಪಿ 3ನೇ ಹಂತದ ಯೋಜನೆ ಪೂರ್ಣಗೊಳಿಸಲು ಆದ್ಯತೆ
*ಕೃಷ್ಣಾ ನ್ಯಾಯಾಧೀಕರಣ-2 ರ ಅಂತಿಮ ತೀರ್ಪಿನ ಬಾಕಿಯಿರುವ ಗೆಜೆಟ್‌ ಅಧಿಸೂಚನೆ ಹೊರಡಿಸಲು ಕೇಂದ್ರ ಸರಕಾರದ ಮೇಲೆ ಒತ್ತಡ ಹೇರುವ ಬದ್ಧತೆ.
*ಕರ್ನಾಟಕ ನೀರಾವರಿ ನಿಗಮದಡಿ ಜಿಲ್ಲೆಯ ಮೆಳ್ಳಿಗೇರಿ-ಹಲಗಲಿ, ಸಸಾಲಟ್ಟಿ- ಶಿವಲಿಂಗೇಶ್ವರ, ಶಿರೂರ ಸೇರಿದಂತೆ ಉತ್ತರದ
ವಿವಿಧ ಏತ ನೀರಾವರಿ ಯೋಜನೆಗೆ ಜಾರಿಗೆ 7,280 ಕೋಟಿ.
* ಯುಕೆಪಿಯಡಿ ಜಿಲ್ಲೆಯ ಕೆರೂರ ಸೇರಿ ವಿಜಯಪುರ ಜಿಲ್ಲೆಯ ವಿವಿಧ ಏತ ನೀರಾವರಿ ಯೋಜನೆಗೆ 9,779 ಕೋಟಿ.
*2025-26ನೇ ಸಾಲಿನಲ್ಲಿ ಬಾಗಲಕೋಟೆಯ ಜಿಲ್ಲಾ ಸ್ಪತ್ರೆಯಲ್ಲಿ ಸಂಯೋಜಿತ ಮತ್ತು ಸಾರ್ವಜನಿಕ ಆರೋಗ್ಯ ಪ್ರಯೋಗಾಲಯ
ಸ್ಥಾಪನೆ.
*ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ವಿಜ್ಞಾನ ಮತ್ತು ತಂತ್ರಜ್ಞಾನದ ಬೆಳವಣಿಗೆ ಉತ್ತೇಜಿಸಲು ಬಾಗಲಕೋಟೆಯಲ್ಲಿ ವಿಜ್ಞಾನ ಕೇಂದ್ರ/ತಾರಾಲಯ ಸ್ಥಾಪನೆ.
*ಜಿಲ್ಲೆಯ ಐಹೊಳೆಯಲ್ಲಿ ಕೆ.ಎಸ್‌.ಟಿ.ಡಿ.ಸಿಯಿಂದ ಸುಸಜ್ಜಿತ ಹೋಟೆಲ್‌ ನಿರ್ಮಾಣ.
*ಹುನಗುಂದದಲ್ಲಿ ಆರೋಗ್ಯ ಪ್ರಯೋಗಾಲಯ ಸ್ಥಾಪನೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಾಖಲೆಯ 15ನೇ ಬಜೆಟ್‌ ಮಂಡಿಸಿದ್ದು, ಇದೊಂದು ಅತ್ಯಂತ ಜನಸ್ನೇಹಿ, ರೈತಪರ, ಮಹಿಳಾ ಪರವಾಗಿದೆ. ರಾಜ್ಯದ ಸಮಗ್ರ ಅಭಿವೃದ್ಧಿಯ ಗ್ಯಾರಂಟಿ ಬಜೆಟ್‌ ಇದಾಗಿದೆ. ಪ್ರತಿಯೊಂದು ವರ್ಗಕ್ಕೂ ನ್ಯಾಯ ಒದಗಿಸುವ ದೂರದೃಷ್ಟಿ ಹೊಂದಿದೆ.
*ಆರ್‌.ಬಿ. ತಿಮ್ಮಾಪುರ, ಅಬಕಾರಿ ಮತ್ತು
ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವರ

ರಾಜ್ಯದ ಜನರ ನಿರೀಕ್ಷೆಯಂತೆ ಎಲ್ಲ ಇಲಾಖೆಗಳಿಗೂ ಸಮತೋಲನವಾಗಿ ಹಣ ಹಂಚಿಕೆ ಮಾಡಿ, ಆರ್ಥಿಕ ಶಿಸ್ತನ್ನು
ಕಾಪಾಡಿದ್ದಾರೆ. ಅಖಂಡ ಕರ್ನಾಟಕವನ್ನು ಎತ್ತಿ ಹಿಡಿಯುವ ಸಮಗ್ರ ಅಭಿವೃದ್ಧಿಗೆ ಪೂರಕವಾದ ಯೋಜನೆಗಳನ್ನು ನೀಡಿದ್ದಾರೆ.
ಜನಮೆಚ್ಚುಗೆಯ ಬಜೆಟ್‌ ಇದಾಗಿದೆ.
*ಎಚ್‌.ವೈ. ಮೇಟಿ, ಶಾಸಕರು, ಬಾಗಲಕೋಟೆ

Advertisement

Udayavani is now on Telegram. Click here to join our channel and stay updated with the latest news.

Next