ಬಾಗಲಕೋಟೆ: ಜಿಲ್ಲೆಯಲ್ಲಿ ಮಳೆಗಾಲದಲ್ಲೂ ಕುಡಿಯುವ ನೀರಿಗೆ ಸೃಷ್ಟಿಯಾಗಿದ್ದ ತೀವ್ರ ಆತಂಕ ಮಹಾರಾಷ್ಟ್ರದಲ್ಲಿ ಸುರಿದ ಮಳೆ ದೂರು ಮಾಡಿದೆ. ನಿಜ, ಜಿಲ್ಲೆಯಲ್ಲಿ ಪ್ರಸ್ತುತ ಉತ್ತಮ ಮಳೆಯಾಗಿಲ್ಲ. ಕಬ್ಬು ಹೊರತುಪಡಿಸಿದರೆ, ಜಿಲ್ಲೆಯ ಯಾವುದೇ ಭಾಗದಲ್ಲಿ ಮುಂಗಾರು ಬಿತ್ತನೆಯಾಗಿಲ್ಲ. ಕನಿಷ್ಠ ಪಕ್ಷ ಕುಡಿಯುವ ನೀರಿಗೂ ತೀವ್ರ ಸಮಸ್ಯೆ ಎದುರಾಗಿತ್ತು.
ನದಿಯ ಅಲ್ಲಲ್ಲಿ, ತಗ್ಗು-ದಿನ್ನೆಯಲ್ಲಿ ನಿಂತಿದ್ದ ನೀರನ್ನು ಶುದ್ಧೀಕರಿಸಿ ಪೂರೈಸುವ ಅನಿವಾರ್ಯತೆ ಎದುರಾಗಿತ್ತು. ಆದರೆ, ಕಳೆದೊಂದು ವಾರದಿಂದ ಮಹಾರಾಷ್ಟ್ರದ ಸಹ್ಯಾದ್ರಿ ಘಟ್ಟ (ಕೃಷ್ಣಾ ನದಿ ಜಲಾನಯನ ಪ್ರದೇಶ)ದಲ್ಲಿ ಉತ್ತಮ ಮಳೆಯಾಗಿದೆ. ಹೀಗಾಗಿ ಕೃಷ್ಣೆಗೆ ನೀರು ಹರಿದು ಬರುತ್ತಿದೆ.
ವಾರದಲ್ಲೇ ನಾಲ್ಕು ಟಿಎಂಸಿ ಸಂಗ್ರಹ: ಜಿಲ್ಲೆಯ ಗಲಗಲಿ, ಹಿಪ್ಪರಗಿ, ಪಡಸಲಗಿ ಬ್ಯಾರೇಜ್‌ಗಳು, ಆಲಮಟ್ಟಿ ಡ್ಯಾಂ, ಜಿಲ್ಲೆಯ ಬಹುಭಾಗ ಗ್ರಾಮಗಳಿಗೆ ಕುಡಿಯುವ ನೀರಿನ ಜಲಮೂಲಗಳು. ಈ ಎಲ್ಲ ಜಲ ಮೂಲಗಳು ಡೆಡ್‌ಸ್ಟೋರೇಜ್ ತಲುಪಿ, ಬಹುಹಳ್ಳಿ ಕುಡಿಯುವ ನೀರು ಪೂರೈಕೆ ಯೋಜನೆಗಳಡಿ ನೀರು ಪೂರೈಕೆಗೆ ತೀವ್ರ ಸಮಸ್ಯೆಯಾಗಿತ್ತು. ಬಾದಾಮಿ, ಜಮಖಂಡಿ, ರಬಕವಿ-ಬನಹಟ್ಟಿ ತಾಲೂಕಿನ ಕೆಲವೆಡೆ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಕೆಗೆ ವ್ಯವಸ್ಥೆ ಮಾಡಲು ಜಿಲ್ಲಾಡಳಿತ ತಯಾರಿ ಕೂಡ ಮಾಡಿಕೊಂಡಿತ್ತು. ಅಷ್ಟರೊಳಗೆ ಜಿಲ್ಲೆಯ ಮೂರು ನದಿಗಳಿಗೆ ನೀರು ಹರಿದು ಬರುತ್ತಿದ್ದು, ಕುಡಿಯುವ ನೀರಿನ ತೀವ್ರ ಆತಂಕ ದೂರಾಗಿದೆ. ಹಿಪ್ಪರಗಿ ಬ್ಯಾರೇಜ್ ಸಂಪೂರ್ಣ ಖಾಲಿಯಾಗಿತ್ತು.
524.87 ಮೀಟರ್ (6 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯ) ಎತ್ತರವಿದ್ದು, ಒಂದೇ ವಾರದಲ್ಲಿ 522.35 ಮೀಟರ್ ವರೆಗೆ ನೀರು ಸಂಗ್ರಹವಾಗಿದೆ. ಅಂದರೆ ಒಟ್ಟು 3.780 ಟಿಎಂಸಿ ಅಡಿ ನೀರು ಸಂಗ್ರಹವಾಗಿದ್ದು, ಕುಡಿಯುವ ನೀರಿನ ಆತಂಕ ಸಧ್ಯಕ್ಕಿಲ್ಲ. ಹಿಪ್ಪರಗಿ ಬ್ಯಾರೇಜ್‌ಗೆ ರವಿವಾರ 14,500 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, 200 ಕ್ಯೂಸೆಕ್ ನೀರನ್ನು ನಿತ್ಯ ಕುಡಿಯುವ ನೀರಿಗಾಗಿ ಬಳಕೆ ಮಾಡಲಾಗುತ್ತಿದೆ.
ಇನ್ನು 12 ಸಾವಿರ ಕ್ಯೂಸೆಕ್ ನೀರನ್ನು ಬ್ಯಾರೇಜ್ ಮೂಲಕ ಕೃಷ್ಣಾ ನದಿಗೆ ಹರಿಬಿಡಲಾಗುತ್ತಿದೆ. ಒಂದು ವಾರದಲ್ಲಿ ಹಿಪ್ಪರಗಿ ಬ್ಯಾರೇಜ್ ಶೇ.60ರಷ್ಟು ಭರ್ತಿಯಾಗಿದೆ. ಕಳೆದ ವರ್ಷ ಹಿಪ್ಪರಗಿ ಬ್ಯಾರೇಜ್‌ಗೆ ಇದೇ ದಿನ 73 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿತ್ತು. ಆದರೆ, ಪ್ರವಾಹ ಮುನ್ನೆಚ್ಚರಿಕೆಯಾಗಿ ಬ್ಯಾರೇಜ್‌ನಲ್ಲಿ 2.42 ಟಿಎಂಸಿ (520.20 ಮೀಟರ್) ಅಡಿ ನೀರು ಮಾತ್ರ ನೀರು ಸಂಗ್ರಹ ಮಾಡಲಾಗಿತ್ತು.
ಮಹಾದಲ್ಲಿ ಮಳೆ ಕಡಿಮೆ: ಕಳೆದ ವಾರಕ್ಕೆ ಹೋಲಿಸಿದರೆ, ಮಹಾರಾಷ್ಟ್ರದ ಕೃಷ್ಣಾ ನದಿ ಪಾತ್ರದಲ್ಲಿ ಮಳೆ ಪ್ರಮಾಣ ಕೊಂಚ ಕಡಿಮೆಯಾಗಿದೆ. ಕೃಷ್ಣಾ ನದಿ ಉಗಮ ಸ್ಥಾನ ಮಹಾಬಲೇಶ್ವರದಲ್ಲಿ ಶನಿವಾರ 43 ಎಂಎಂ, ಕೋಯ್ನಾದಲ್ಲಿ 61 ಎಂಎಂ, ನವಜಾದಲ್ಲಿ 69 ಎಂಎಂ ಮಳೆಯಾಗಿದೆ. ಕಳೆದ ವಾರ ಈ ಪ್ರದೇಶಗಳಲ್ಲಿ ಸರಾಸರಿ 110 ಎಂಎಂನಷ್ಟು ಮಳೆಯಾಗಿತ್ತು.
ಕೃಷ್ಣಾ ನದಿ ಸಂಪೂರ್ಣ ಬತ್ತಿತ್ತು. ಇನ್ನೇನು ನದಿಗೆ ನೀರು ಬರದಿದ್ದರೆ ಕುಡಿಯುವ ನೀರಿಗೆ ತೀವ್ರ ತೊಂದರೆ ಇತ್ತು. ನದಿ ಪಾತ್ರದಲ್ಲಿ ಹಚ್ಚಿದ್ದ ಕಬ್ಬು ಕೂಡ ಒಣಗಿ ಹೊರಟಿತ್ತು. ಇದೀಗ ನದಿಗೆ ನೀರು ಬಂದಿದ್ದು, ರೈತರಲ್ಲಿ ಸಂಭ್ರಮ ಮನೆ ಮಾಡಿದೆ. ಕುಡಿಯುವ ನೀರಿನ ಸಮಸ್ಯೆಯೂ ನಿವಾರಣೆಯಾಗಿದೆ.
ಸುರೇಶ, ಹಿಪ್ಪರಗಿ ಗ್ರಾಮದ ರೈತ
*ಶ್ರೀಶೈಲ ಕೆ. ಬಿರಾದಾರ