ಬೀಳಗಿ (ಬಾಗಲಕೋಟೆ) : ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಫೇಲ್ ಆದ ವಿದ್ಯಾರ್ಥಿನಿಯೊಬ್ಬಳು, ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಯಡಹಳ್ಳಿಯಲ್ಲಿ ಶನಿವಾರ ಸಂಜೆ ಸಂಭವಿಸಿದೆ.
ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿಯನ್ನು ಪೂಜಾ ರಾಚಪ್ಪ ಚಳಗೇರಿ-ಬಳಿಗಾರ (19) ಎಂದು ಗುರುತಿಸಲಾಗಿದೆ. ಶನಿವಾರ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು, ಫೇಲ್ ಆಗಿರುವ ವಿಷಯ ತಿಳಿಯುತ್ತಿದ್ದಂತೆ ಮನನೊಂದು ಯಡಹಳ್ಳಿ ಗ್ರಾಮದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಇದನ್ನೂ ಓದಿ: ಶ್ರೀರಂಗಪಟ್ಟಣ: ಪಿಯು ಪರೀಕ್ಷೆಯಲ್ಲಿ ಅನುತ್ತೀರ್ಣ; ವಿದ್ಯಾರ್ಥಿನಿ ಆತ್ಮಹತ್ಯೆ
ಪೂಜಾ ರಾಚಪ್ಪ ಚಳಗೇರಿ ಮೂಲತಃ ಹುನಗುಂದ ತಾಲೂಕಿನ ಇಲಾಳ ಗ್ರಾಮದವಳಾಗಿದ್ದು, ಸದ್ಯ ಯಡಹಳ್ಳಿ ಗ್ರಾಮದಲ್ಲಿ ಅಜ್ಜನಾದ ಚಿನ್ನಪ್ಪ ಕಾಜಗಾರ ವಾಸಿಸುತ್ತಿದ್ದಳು. ಮಧ್ಯಾಹ್ನದ ಹೊತ್ತಿಗೆ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು, ಆಗಲೇ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಸಂಜೆಯಾದರೂ ಪೂಜಾ ಮನೆಗೆ ಬಾರದ ಹಿನ್ನೆಲೆಯಲ್ಲಿ ಅಜ್ಜನ ಮನೆಯವರು ಹುಡಕಾಟ ನಡೆಸಿದ್ದು, ಗ್ರಾಮದ ಬಾವಿಯಲ್ಲಿ ಪೂಜಾಳ ಮೃತ ಶವ ಪತ್ತೆಯಾಗಿದೆ. ಬೀಳಗಿಯ ಅಗ್ನಿ ಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ, ಮೃತ ದೇಹ ಹೊರ ತಗೆಯಲು ನೆರವಾದರು.
ಬೀಳಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.