Advertisement

ಬಾಗಲಕೋಟೆ-ಬೀದಿ ವ್ಯಾಪಾರಸ್ಥರ ಚಿಲ್ಲರೆ ವಂತಿಗೆ: ಹೊಸ ದಾಖಲೆ!

03:59 PM Feb 14, 2023 | Team Udayavani |

ಬಾಗಲಕೋಟೆ: ಇಲ್ಲಿನ ನಗರಸಭೆ ವ್ಯಾಪ್ತಿಯ ಬೀದಿಬದಿ ವ್ಯಾಪಾರಸ್ಥರಿಂದ ವಂತಿಗೆ ಸಂಗ್ರಹಿಸುವ ಟೆಂಡರ್‌ಗೆ ಭಾರಿ ಡಿಮ್ಯಾಂಡ್‌ ಬಂದಿದ್ದು, ನಗರಸಭೆ ಇತಿಹಾಸದಲ್ಲೇ ಹೊಸ ದಾಖಲೆ ಸೃಷ್ಟಿಯಾಗಿದೆ. ಹೌದು, ಬಾಗಲಕೋಟೆ ನಗರಸಭೆ ವ್ಯಾಪ್ತಿಯ ಹಳೆಯ ಬಾಗಲಕೋಟೆ, ವಿದ್ಯಾಗಿರಿ, ನವನಗರ ವ್ಯಾಪ್ತಿಯ ರಸ್ತೆಬದಿ ವ್ಯಾಪಾರ ಮಾಡುವ ವ್ಯಾಪಾರಸ್ಥರಿಗೆ ನಿತ್ಯ ಹಾಗೂ ಸಂತೆಯ ದಿನ ವಾರಕ್ಕೊಮ್ಮೆ ಚಿಲ್ಲರೆ ವಂತಿಗೆ ಹಣ ಸಂಗ್ರಹದ ಟೆಂಡರ್‌ ಸವಾಲು
ಸೋಮವಾರ ಕರೆದಿದ್ದು, ಇದು ದಾಖಲೆ ಮೊತ್ತಕ್ಕೆ ಬಿಡ್‌ ಮಾಡಲಾಗಿದೆ.

Advertisement

ಬಾಗಲಕೋಟೆ ನಗರಸಭೆ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಇಷ್ಟೊಂದು ಬೃಹತ್‌ ಮೊತ್ತಕ್ಕೆ ಟೆಂಡರ್‌ ಬಿಡ್‌ ಆಗಿದ್ದು, ಈ ವಿಷಯದಲ್ಲಿ ನಗರಸಭೆಗೆ ಎರಡೂವರೆ ಪಟ್ಟು ಹೆಚ್ಚು ಆದಾಯ ಬಂದಿದೆ. ಸೋಮವಾರ ನಡೆದ ಟೆಂಡರ್‌ ಸವಾಲು ಪ್ರಕ್ರಿಯೆಯಲ್ಲಿ ಸೊನ್ನದ, ಹೆಬ್ಬಳ್ಳಿ, ಮಹಾಂತೇಶ ಎಂಬುವವರು ಸೇರಿ ಒಟ್ಟು ನಾಲ್ವರು ಗುತ್ತಿಗೆದಾರರು ಭಾಗವಹಿಸಿದ್ದು, ಅದರಲ್ಲಿ ಮಹಾಂತೇಶ ಚಲವಾದಿ ಎಂಬುವವರು ಒಟ್ಟು 25 ಲಕ್ಷ ಮೊತ್ತ ಬಿಡ್‌ ಮಾಡಿದ್ದಾರೆ ಎಂದು
ನಗರಸಭೆ ಪೌರಾಯುಕ್ತ ವಾಸಣ್ಣ ಅವರು ಉದಯವಾಣಿಗೆ ತಿಳಿಸಿದರು.

ಏನಿದು ಚಿಲ್ಲರೆ ವಂತಿಗೆ: ಬಾಗಲಕೋಟೆ ನಗರಸಭೆ ವ್ಯಾಪ್ತಿಯ ಹಳೆಯ ಬಸ್‌ ನಿಲ್ದಾಣ, ರೇಲ್ವೆ ನಿಲ್ದಾಣ, ಎಂಜಿ ರಸ್ತೆ, ವಲ್ಲಭಬಾಯಿ ವೃತ್ತ, ಹಳೆಯ ಪ್ರವಾಸಿ ಮಂದಿರ ರಸ್ತೆ, ವಿದ್ಯಾಗಿರಿಯ 19ನೇ ಕ್ರಾಸ್‌, ರೂಪಲ್ಯಾಂಡ ರಸ್ತೆ, ಬಿಪ್ಸ ಸ್ಕೂಲ್‌ ರಸ್ತೆ, ನವನಗರದ ಎಲ್‌ ಐಸಿ ವೃತ್ತ, ಬಸ್‌ ನಿಲ್ದಾಣ ರಸ್ತೆ ಹೀಗೆ ಪ್ರಮುಖ ರಸ್ತೆಗಳ ಇಕ್ಕೆಲಗಳಲ್ಲಿ ತಳ್ಳುವ ಗಾಡಿ, ಎಳೆನೀರು, ಟೀ ಸ್ಟಾಲ್‌, ರೈಸ್‌ಬಜಿ ಅಂಗಡಿ ಸಹಿತ ವಿವಿಧ ರೀತಿಯ ವ್ಯಾಪಾರಸ್ಥರು, ನಿತ್ಯ ವ್ಯಾಪಾರ ಮಾಡಿ ಜೀವನ ನಡೆಸುತ್ತಾರೆ. ಇವರೆಲ್ಲ ವ್ಯಾಪಾರ ಮಾಡಿಕೊಳ್ಳಲು ತಾವು ನಿಂತು ಅಥವಾ ತಳ್ಳುವ ಗಾಡಿಯಲ್ಲಿ ವ್ಯಾಪಾರ ಮಾಡಲು ನಗರಸಭೆಗೆ ನಿತ್ಯವೂ ತೆರಿಗೆ ರೂಪದ
ವಂತಿಗೆ ಪಾವತಿಸುತ್ತಾರೆ.

ಅಲ್ಲದೇ ಹಳೆಯ ನಗರದ ತರಕಾರಿ ಮಾರುಕಟ್ಟೆ, ನವನಗರದ ಸೆಕ್ಟರ್‌ ನಂಬರ್‌ 4ರ ಸಂಡೆ ಮಾರುಕಟ್ಟೆ, ಸೆಕ್ಟರ್‌ ನಂ.27ರ ಗುರುವಾರ ಮಾರುಕಟ್ಟೆ ಹೀಗೆ ವಿವಿಧೆಡೆ ವಾರಕ್ಕೊಮ್ಮೆ ತರಕಾರಿ ಮಾರಾಟಕ್ಕೆ ಸ್ಥಳೀಯ ವ್ಯಾಪರಸ್ಥರು, ಹಳ್ಳಿಯ ರೈತರೂ ಬರುತ್ತಾರೆ. ಅವರೆಲ್ಲ ಕನಿಷ್ಠ 10 ರೂ.ನಿಂದ ಗರಿಷ್ಠ 25 ರೂ. ವರೆಗೆ ಹಣ ಪಾವತಿಸುತ್ತಾರೆ. ಇದುವೇ ನಗರಸಭೆಗೆ ಪಾವತಿಸುವ ಚಿಲ್ಲರೆ ವಂತಿಗೆ.

ಇತಿಹಾಸದಲ್ಲೇ ಮೊದಲು: ಬಾಗಲಕೋಟೆ ನಗರಸಭೆ ಇತಿಹಾಸದಲ್ಲಿ ಇಷ್ಟೊಂದು ಬೃಹತ್‌ ಮೊತ್ತಕ್ಕೆ ಟೆಂಡರ್‌ ಬಿಡ್‌ ಆಗಿರಲಿಲ್ಲ. ಈ ವರೆಗೆ ಕನಿಷ್ಠ 1.50 ಲಕ್ಷದಿಂದ 8 ಲಕ್ಷ ವರೆಗೆ ಬಿಡ್‌ ಆಗಿತ್ತು. ಟೆಂಡರ್‌ ಬಿಡ್‌ ಪಡೆದವರು, ಪ್ರಸಕ್ತ ಮಾರ್ಚ್‌ನಿಂದ ಮುಂದಿನ ಮಾರ್ಚ್‌ (ಒಂದು ವರ್ಷ)ವರೆಗೆ ಬೀದಿಬದಿ ವ್ಯಾಪಾರಸ್ಥರಿಂದ ಹಣ ವಸೂಲಿ ಮಾಡಿಕೊಳ್ಳುತ್ತಾರೆ. ಆದರೆ, ಅವರು ನಗರಸಭೆಗೆ ಬಿಡ್‌ನ‌ಲ್ಲಿ ದಾಖಲಿಸಿದ ಹಣವನ್ನು ಏಕಕಾಲಕ್ಕೆ ಪಾವತಿ ಮಾಡುತ್ತಾರೆ.
ಈ ವರ್ಷದ ಬೀದಿಬದಿ ವ್ಯಾಪಾರಸ್ಥರ ವಂತಿಗೆಯ ಬಿಡ್‌ ಬರೋಬ್ಬರಿ 25 ಲಕ್ಷಕ್ಕೆ ಹೋಗಿರುವುದು ದೊಡ್ಡ ದಾಖಲೆ ಎಂದು ಸ್ವತಃ ನಗರಸಭೆ ಅಧಿಕಾರಿಗಳೂ ಹರ್ಷದಿಂದ ಹೇಳಿಕೊಳ್ಳುತ್ತಿದ್ದಾರೆ.

Advertisement

ನಿಯಮ ಮೀರಿದರೆ ಕ್ರಮ: ಬೀದಿಬದಿ ವ್ಯಾಪಾರಸ್ಥರಿಂದ ಇಂತಿಷ್ಟೇ ಹಣ ವಸೂಲಿ ಮಾಡಬೇಕು ಎಂಬ ನಿಯಮವಿದೆ. ಬುಟ್ಟಿಯಲ್ಲಿ ಹಣ್ಣು-ತರಕಾರಿ ಇಟ್ಟು ಮಾರುವವರಿಗೆ ಇಷ್ಟು, ತಳ್ಳುವ ಗಾಡಿಯವರಿಗೆ ಇಷ್ಟು, ಅದರಲ್ಲೇ ಕೊಂಚ ದೊಡ್ಡ ಜಾಗದಲ್ಲಿ ಗಾಡಿ ನಿಲ್ಲಿಸಿ ವ್ಯಾಪಾರ ಮಾಡುವವರಿಗೆ ಮತ್ತೂಂದಿಷ್ಟು ನಿಗದಿ ಹಣ ವಸೂಲಿ ಮಾಡಬೇಕು ಎಂದು ದರ ನಿಗದಿ ಮಾಡಲಾಗುತ್ತದೆ. ಆ ದರದ ಪ್ರಕಾರವೇ ವಸೂಲಿ ಮಾಡಬೇಕು. ಒಂದುವೇಳೆ ಹೆಚ್ಚಿಗೆ ಹಣ ವಸೂಲಿ ಮಾಡಿದರೆ ಅಂತವರ ಟೆಂಡರ್‌ ರದ್ದುಪಡಿಸಲಾಗುವುದು ಎಂದು ನಗರಸಭೆಯ ಪೌರಾಯಕ್ತ ವಾಸಣ್ಣ ತಿಳಿಸಿದರು.

ಬೀದಿಬದಿ ವ್ಯಾಪಾರಸ್ಥರ ವಂತಿಗೆ ಪಡೆಯುವ ಟೆಂಡರ್‌ 25 ಲಕ್ಷಕ್ಕೆ ಬಿಡ್‌ ಮಾಡಿರುವುದು ನಮಗೂ ಶಾಕ್‌. ಪ್ರಸ್ತುತ ಇರುವ ದರವೇ ವಸೂಲಿ ಮಾಡಬೇಕು. ಬೀದಿಬದಿ ವ್ಯಾಪಾರಸ್ಥರಿಗೆ ಕಿರುಕುಳ ನೀಡಿ, ಹೆಚ್ಚುವರಿ ಹಣ ವಸೂಲಿ ಮಾಡಿದರೆ ನಾವೆಲ್ಲ ಕಷ್ಟ ಎದುರಿಸಬೇಕಾಗುತ್ತದೆ. ಈ ವಿಷಯದಲ್ಲಿ ಪ್ರತಿಭಟನೆ ನಡೆಸಲೂ ಹಿಂಜರಿಯಲ್ಲ.
ಯಲ್ಲಪ್ಪ ಸನಕ್ಯಾನವರ,
ಬೀದಿಬದಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ

ವಿಶೇಷ ವರದಿ

Advertisement

Udayavani is now on Telegram. Click here to join our channel and stay updated with the latest news.

Next