Advertisement

Bagalkote: ಬ್ಯಾಂಕ್‌ಗಳಲ್ಲಿ ಹೊರ ಗುತ್ತಿಗೆ ನಿಲ್ಲಲಿ- ರಾಘವೇಂದ್ರ

05:47 PM Nov 10, 2023 | Team Udayavani |

ಬಾಗಲಕೋಟೆ: ಸಾರ್ವಜನಿಕ ಬ್ಯಾಂಕಿಂಗ್‌ ವ್ಯವಸ್ಥೆ ಬಲಪಡಿಸುವ ನಿಟ್ಟಿನಲ್ಲಿ ಬ್ಯಾಂಕುಗಳಲ್ಲಿ ಅಗತ್ಯ ಪ್ರಮಾಣದ ಅಧಿಕಾರಿ-ಸಿಬ್ಬಂದಿ ನೇಮಕಾತಿ ಆಗಬೇಕು ಮತ್ತು ಬ್ಯಾಂಕಿನ ಕೆಲಸಗಳನ್ನು ಹೊರಗುತ್ತಿಗೆ ನೀಡುವುದನ್ನು ನಿಲ್ಲಿಸಬೇಕು ಎಂದು ಕರ್ನಾಟಕ ಪ್ರದೇಶ ಬ್ಯಾಂಕ್‌ ಎಂಪ್ಲಾಯಿಸ್‌ ಫೆಡರೇಶನ್‌ ಜಂಟಿ ಕಾರ್ಯದರ್ಶಿ ಕಾಂಮ್ರೆಡ್‌ ಕೆ.ರಾಘವೇಂದ್ರ ನಾಯರಿ ಒತ್ತಾಯಿಸಿದರು.

Advertisement

ನವನಗರದ ಹರಿಪ್ರಿಯಾ ಹೊಟೇಲ್‌ನಲ್ಲಿ ಕರ್ನಾಟಕ ಪ್ರದೇಶ ಬ್ಯಾಂಕ್‌ ಎಂಪ್ಲಾಯಿಸ್‌ ಫೆಡರೇಶನ್‌ ಮತ್ತು ಬಾಗಲಕೋಟೆ ಜಿಲ್ಲಾ ಬ್ಯಾಂಕ್‌ ನೌಕರರ ಸಂಘದಿಂದ ನಡೆದ ಜಿಲ್ಲಾ ಮಟ್ಟದ ಬ್ಯಾಂಕ್‌ ನೌಕರರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ಅಖಿಲ ಭಾರತ ಬ್ಯಾಂಕ್‌ ನೌಕರರ ಸಂಘವು ಸಾಮಾಜಿಕ ಜವಾಬ್ದಾರಿ ಹೊಂದಿರುವ ಬ್ಯಾಂಕ್‌ ನೌಕರರ ಸಂಘಟನೆಯಾಗಿದೆ. 1946ರಲ್ಲಿ ಬ್ಯಾಂಕ್‌ ನೌಕರರ ಹಿತರಕ್ಷಣೆ ಮತ್ತು ಬ್ಯಾಂಕ್‌ ರಾಷ್ಟ್ರೀಕರಣದ ಉದ್ದೇಶದಿಂದ ಸ್ಥಾಪನೆಗೊಂಡು, 1969ರಲ್ಲಿ ಬ್ಯಾಂಕ್‌
ರಾಷ್ಟ್ರೀಕರಣ ಮಾಡಲು ಕಾರಣೀಕರ್ತವಾಯಿತು. ಆದರೆ, ಇಂದು ಬ್ಯಾಂಕ್‌ಗಳ ಉಳಿವಿಗಾಗಿ ಹೋರಾಟ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ಹೇಳಿದರು.

ಬ್ಯಾಂಕ್‌ಗಳ ವಿಸ್ತಾರತೆ ಮತ್ತು ಹೆಚ್ಚುತ್ತಿರುವ ವ್ಯವಹಾರದ ಪ್ರಮಾಣಕ್ಕೆ ತಕ್ಕಂತೆ ಅಧಿಕಾರಿ-ಸಿಬ್ಬಂದಿ ನೇಮಕಾತಿ ಮಾಡುತ್ತಿಲ್ಲ. ಸುಮಾರು 2 ಲಕ್ಷಕ್ಕೂ ಹೆಚ್ಚಿನ ಹುದ್ದೆಗಳು ಖಾಲಿಯಿವೆ. ಇದರಿಂದ ಗ್ರಾಹಕರಿಗೆ ಸಮರ್ಪಕವಾದ ಸೇವೆ ನೀಡಲು ಸಾಧ್ಯವಿಲ್ಲ. ಇನ್ನೊಂದೆಡೆ ವಿದ್ಯಾವಂತ ಯುವಜನರ ನಿರುದ್ಯೋಗದ ಪ್ರಮಾಣ ಸಾರ್ವಕಾಲಿಕ ದಾಖಲೆ ಮಟ್ಟದಲ್ಲಿದೆ. ದೇಶದ ಸ್ವಾತಂತ್ರ್ಯದ ಅಮೃತ ಕಾಲದಲ್ಲಿಯಾದರೂ ಸರಕಾರವು ಬ್ಯಾಂಕ್‌ಗಳಲ್ಲಿ ಅಗತ್ಯವಿರುವ ಸಿಬ್ಬಂದಿಗಳ ನೇಮಕಾತಿ ಮಾಡಿ, ಬ್ಯಾಂಕ್‌ಗಳನ್ನು ಅಭಿವೃದ್ಧಿ ಮುಂದಾಗಬೇಕು.ಮುಖ್ಯವಾಗಿ ಯುವಕರಿಗೆ ಉದ್ಯೋಗ ನೀಡಬೇಕು.

ಈ ನಿಟ್ಟಿನಲ್ಲಿ ನಾವು ಬ್ಯಾಂಕ್‌ಗಳನ್ನು ಉಳಿಸಿ-ದೇಶ ಉಳಿಸಿ ಎನ್ನುವ ಅಭಿಯಾನ ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದರು. ಕರ್ನಾಟಕ ಪ್ರದೇಶ ಬ್ಯಾಂಕ್‌ ಎಂಪ್ಲಾಯಿಸ್‌ ಫೆಡರೇಶನ್‌ ಜಂಟಿ ಕಾರ್ಯದರ್ಶಿ ಜಿ.ಜಿ.ಗಾಂಧಿ ಮಾತನಾಡಿ, ಬ್ಯಾಂಕ್‌ಗಳಲ್ಲಿ ಖಾಲಿ
ಇರುವ ಹುದ್ದೆಗಳಿಗೆ ನೇಮಕಾತಿ ಮಾಡಲು ಒತ್ತಾಯಿಸಿ, ಹಳೆಯ ಪಿಂಚಣಿ ಯೋಜನೆ ಮರು ಜಾರಿಗೊಳಿಸಲು ಮತ್ತು ಹೊರ ಗುತ್ತಿಗೆ ಪದ್ಧತಿಯನ್ನು ವಿರೋಧಿಸಿ ಅಖಿಲ ಭಾರತ ಬ್ಯಾಂಕ್‌ ನೌಕರರ ಸಂಘವು ಇತಿಹಾಸದಲ್ಲೇ ಪ್ರಪ್ರಥಮವಾಗಿ ಸೆಪ್ಟೆಂಬರ್‌ 2023 ರಿಂದ ಜನವರಿ 2024ರವರೆಗೆ 4 ತಿಂಗಳುಗಳ ಕಾಲದ ಸುದೀರ್ಘ‌ವಾದ ಹೋರಾಟಕ್ಕೆ ಚಾಲನೆ ನೀಡಿದೆ. ಸರಕಾರವು ನಮ್ಮ ನ್ಯಾಯಯುತ ಬೇಡಿಕೆ ಈಡೇರಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಹೋರಾಟದ ಸ್ವರೂಪ ತೀವ್ರಗೊಳ್ಳಲಿದೆ ಎಂದು ಎಚ್ಚರಿಕೆ ನೀಡಿದರು.

Advertisement

ಜಿಲ್ಲಾ ಬ್ಯಾಂಕ್‌ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ರಾಕೇಶ ಮನಹಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿ, ನಮ್ಮ ಬೇಡಿಕೆಗಳ ಈಡೇರಿಕೆಗಾಗಿ ಸರಕಾರವನ್ನು ಒತ್ತಾಯಿಸಲು ಬ್ಯಾಡ್ಜ್ ಧರಿಸುವುದು, ಟ್ವಿಟರ್‌ ಅಭಿಯಾನ, ಜಿಲ್ಲಾವಾರು ಸದಸ್ಯರ ಸಭೆ, ಸರಕಾರಕ್ಕೆ ಮನವಿ ಸಲ್ಲಿಸುವುದು, ಬ್ಯಾಂಕ್‌ವಾರು ಮುಷ್ಕರ, ರಾಜ್ಯವಾರು ಮುಷ್ಕರ, ಅಖಿಲ ಭಾರತ ಬ್ಯಾಂಕ್‌ ಮುಷ್ಕರ ಮೊದಲಾದ ವಿವಿಧ ರೀತಿಯ ಹೋರಾಟ ಹಮ್ಮಿಕೊಳ್ಳಲಾಗಿದೆ. ರಾಷ್ಟ್ರೀಕೃತ ಬ್ಯಾಂಕ್‌ಗಳ ಉಳಿವಿಗಾಗಿ ಅಖಿಲ ಭಾರತ ಬ್ಯಾಂಕ್‌ ನೌಕರರ ಸಂಘದ ಈ ದೇಶಪ್ರೇಮಿ ಹೋರಾಟದಲ್ಲಿ ಸಾರ್ವಜನಿಕರೂ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ಜಿಲ್ಲಾ ಬ್ಯಾಂಕ್‌ ನೌಕರರ ಸಂಘದ ಅಧ್ಯಕ್ಷ ಆನಂದ ರಾಜಾಪುರ ಅಧ್ಯಕ್ಷತೆ ವಹಿಸಿದ್ದರು. ಕಾರ್ಮಿಕ ನಾಯಕ ಯು.ವಿ. ಜೆರೆ, ಶ್ರೀನಿವಾಸ ಕೆ. ಸಂಗಮ್‌ ಹಾಗೂ ಜಿಲ್ಲಾ ಬ್ಯಾಂಕ್‌ ನೌಕರರ ಸಂಘದ ಪದಾಧಿಕಾರಿಗಳಾದ ಆನಂದ ಕುಲಕರ್ಣಿ, ಜಿ.ಕೆ. ವಿನಯ್‌, ಪವನ್‌ ದೇಶಪಾಂಡೆ, ಜಿ.ಕೆ. ವಿನಾಯಕ, ಶ್ರೀಮಂತ ನಿರಗುಂದಿ, ಪ್ರಕಾಶ್‌ ನಗರೇಶಿ, ರಾಘವೇಂದ್ರ ಗಂಗಲ್‌, ಟಿ.ಶಿವಕುಮಾರ್‌, ಪಾಂಡುರಂಗ ದೇಸಾಯಿ, ಎಸ್‌.ಸಂದೇಶ, ಅಂಜನಾ ಝಳಕಿ, ಲಕ್ಷ್ಮೀ ಕದಾಂಪುರ ಮುಂತಾದವರು ಉಪಸ್ಥಿತರಿದ್ದರು.

ನಮ್ಮ ಬೇಡಿಕೆಗಳ ಈಡೇರಿಕೆಗೆ ಬ್ಯಾಡ್ಜ್ ಧರಿಸುವುದು, ಟ್ವಿಟರ್‌ ಅಭಿಯಾನ, ಜಿಲ್ಲಾವಾರು ಸದಸ್ಯರ ಸಭೆ, ಬ್ಯಾಂಕ್‌ವಾರು ಮುಷ್ಕರ ಸೇರಿದಂತೆ ವಿವಿಧ ರೀತಿಯ ಹೋರಾಟ ಹಮ್ಮಿಕೊಳ್ಳಲಾಗಿದೆ. ರಾಷ್ಟ್ರೀಕೃತ ಬ್ಯಾಂಕುಗಳ ಉಳಿವಿಗಾಗಿ ಅಖಿಲ ಭಾರತ ಬ್ಯಾಂಕ್‌ ನೌಕರರ ಸಂಘದ ಈ ದೇಶಪ್ರೇಮಿ ಹೋರಾಟದಲ್ಲಿ ಸಾರ್ವಜನಿಕರೂ ಕೈ ಜೋಡಿಸಬೇಕು.
ರಾಕೇಶ ಮನಹಳ್ಳಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ,
ಬ್ಯಾಂಕ್‌ ನೌಕರರ ಸಂಘ

Advertisement

Udayavani is now on Telegram. Click here to join our channel and stay updated with the latest news.

Next