Advertisement

Bagalkote: ಬೀದಿ ಬದಿ ವ್ಯಾಪಾರಸ್ಥರಿಂದ ಪ್ರತಿಭಟನೆ

02:48 PM Dec 08, 2023 | Team Udayavani |

ಇಳಕಲ್ಲ: ನಗರಸಭೆ ಸಿಬ್ಬಂದಿ ಬೆಳಗಿನ ಜಾವ ಬೀದಿ ಬದಿ ಕಪಾಟುಗಳು, ಒತ್ತುವ ಬಂಡಿಗಳನ್ನು ನಗರಸಭೆ ವಾಹನದಲ್ಲಿ ಹಾಕಿಕೊಂಡು ಹೋಗಿರುವುದನ್ನು ವಿರೋಧಿಸಿ ಗುರುವಾರ ಬೀದಿಬದಿ ವ್ಯಾಪಾರಸ್ಥರು ನಗರಸಭೆ ಎದುರಿನ ರಸ್ತೆ ಬಂದ್‌ ಮಾಡಿ ಪ್ರತಿಭಟನೆ ನಡೆಸಿದರು.

Advertisement

ಈ ವಿಷಯ ಪಟ್ಟಣ ವ್ಯಾಪಾರ ಸಮಿತಿ ಗಮನಕ್ಕೂ ತಾರದೇ ಬೀದಿಬದಿ ವ್ಯಾಪಾರಸ್ಥರಿಗೆ ಯಾವುದೇ ನೋಟಿಸ್‌ ನೀಡದೇ ಏಕಾಏಕಿ ಈ ರೀತಿ ತೆರವುಗೊಳಿಸಿರುವುದು ಕಾನೂನು ಉಲ್ಲಂಘನೆಯಾಗಿದ್ದು, ಇದರಿಂದ ವ್ಯಾಪಾರಸ್ಥರಿಗೆ ನಷ್ಟವಾಗಿದ್ದು ಅದಕ್ಕೆ ಸೂಕ್ತ ಪರಿಹಾರ ನೀಡಬೇಕು. ಪದೇ ಪದೆ ಬೀದಿಬದಿ ವ್ಯಾಪಾರಸ್ಥರಿಗೆ ಇಂತಹ ಕಿರುಕುಳವಾಗದಂತೆ ಶಾಶ್ವತ ಪರಿಹಾರ ನೀಡುವಂತೆ ಆಗ್ರಹಿಸಿದರು.

ಬೀದಿಬದಿ ವ್ಯಾಪಾರಸ್ಥರಿಂದ ವಸೂಲಿ ಮಾಡುತ್ತಿರುವ ಸುಂಕ ಬಂದ್‌ ಮಾಡಬೇಕು. ಏಕಾಏಕಿ ಅಂಗಡಿ ಕಿತ್ತಿದ್ದರಿಂದ ಹಾನಿಯಾಗಿದ್ದು, ಈ ಹಾನಿ ತುಂಬಿ ಕೊಡಬೇಕು. ಇನ್ಮುಂದೆ ಪಟ್ಟಣ ವ್ಯಾಪಾರ ಸಮಿತಿ ಗಮನಕ್ಕೆ ತಿಳಿಸದೇ ಯಾವುದೇ ಕಾರಣಕ್ಕೂ ಅಂಗಡಿ ತೆರವುಗೊಳಿಸಕೂಡದು. ವೆಂಡಿಂಗ್‌ ಝೋನ್‌ (ಮಾರಾಟ ವಲಯ)ನ್ನು ಬಸ್‌ ಸ್ಟ್ಯಾಂಡ್‌ ಎದುರಿನ ಜಾಗದಲ್ಲೇ ಮಾಡಿಕೊಡಬೇಕಲ್ಲದೇ ಕೂಡಲೇ ಪಟ್ಟಣ ವ್ಯಾಪಾರ ಸಮಿತಿ ಸಭೆ ಕರೆಯಬೇಕು ಎಂದು ಮನವಿಯಲ್ಲಿ ತಿಳಿಸಿಲಾಗಿದೆ.

ನಗರಸಭೆ ಪೌರಾಯುಕ್ತ ಶ್ರೀನಿವಾಸ ಜಾಧವ ಮನವಿ ಸ್ವೀಕರಿಸಿ ಮಾತನಾಡಿ, ಬೀದಿಬದಿ ವ್ಯಾಪಾರಸ್ಥರು ಸಾರ್ವಜನಿಕರಿಗೆ ತೊಂದರೆ ಆಗದಂತೆ ವ್ಯಾಪಾರ ಮಾಡಬೇಕು. ಸಾರ್ವಜನಿಕರಿಂದ ದೂರುಗಳು ಬಂದರೆ ಇಂತಹ ಕ್ರಮ ಜರುಗಿಸಲಾಗುತ್ತದೆ. ಯಾರೋ ಫುಟಫಾತ್‌ ಅಕ್ರಮಣ ಮಾಡಿ ಸಾರ್ವಜನಿಕರಿಗೆ ತೊಂದರೆ ಕೊಡುವುದರಿಂದ ಎಲ್ಲರೂ ಸಮಸ್ಯೆ ಅನುಭವಿಸಬೇಕಾಗುವುದು. ಅದನ್ನು ಸಮಿತಿಯವರು ಗಮನಿಸಿ ಅಂಥವರಿಗೆ ತಿಳಿಸಿ ಹೇಳಬೇಕು.

ಬಾಗಲಕೋಟ ಜಿಲ್ಲೆಯಲ್ಲೆ ಪ್ರಥಮವಾಗಿ ವೆಂಡಿಂಗ್‌ ಝೋನ್‌(ಮಾರಾಟ ವಲಯ) ಮಾಡುವ ಆಸಕ್ತಿ ಶಾಸಕರು ಮಾಡಿದ್ದು ಶೀಘ್ರ ಕಾರ್ಯರೂಪಕ್ಕೆ ತರುವುದಾಗಿ ತಿಳಿಸಿದ್ದಾರೆ ಎಂದು ತಿಳಿಸಿದರು. ಈ ವೇಳೆ ಪಟ್ಟಣ ವ್ಯಾಪಾರ ಸಮಿತಿ ಸದಸ್ಯರಾದ ಪವಾಡಪ್ಪ ಬಸಪ್ಪ ಚಲವಾದಿ, ಶಾಂತಾ ದೊಡ್ಡಪ್ಪ ಹಡಪದ, ಅಲ್ಲಾಸಾಬ ಬಾಗವಾನ, ರಿಯಾಜ ಮಕಾನದಾರ, ಶಂಕ್ರಪ್ಪ ಜಳಕಿ, ಶಂಕರಪ್ಪ ಕಲ್ಗುಡಿ, ಮುರ್ತುಜಭಿ ಕರುಡಗಿ ಸೇರಿದಂತೆ ಇತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next