Advertisement

ಸಹೋದರರಿಗೆ ಪ್ರತ್ಯೇಕ ಮನೆ

12:48 PM Aug 22, 2019 | Team Udayavani |

ಬಾಗಲಕೋಟೆ: ಪ್ರವಾಹದಿಂದ ಹಾನಿಯಾದ ಕುಟುಂಬಗಳಿಗೆ ಪರಿಹಾರ ಹಾಗೂ ಶಾಶ್ವತ ಮನೆ ಕಲ್ಪಿಸಲು 5 ಲಕ್ಷ ನೀಡುವ ಯೋಜನೆಯನ್ನು ಒಂದು ಕುಟುಂಬದಲ್ಲಿ ಅಣ್ಣ-ತಮ್ಮಂದಿರು ಇದ್ದರೆ ಅವರನ್ನು ಪ್ರತ್ಯೇಕ ಕುಟುಂಬವೆಂದು ಪರಿಗಣಿಸಬೇಕು. ಆದರೆ, ಪ್ರತ್ಯೇಕ ಪಡಿತರ ಚೀಟಿ ಇದ್ದರೆ ಮಾತ್ರ ಗಣನೆಗೆ ತೆಗೆದುಕೊಳ್ಳಬೇಕು ಎಂದು ನೂತನ ಸಚಿವ ಗೋವಿಂದ ಕಾರಜೋಳ ಸೂಚಿಸಿದರು.

Advertisement

ಜಿಪಂ ಸಭಾ ಭವನದಲ್ಲಿ ಬುಧವಾರ ನಡೆದ ಪ್ರವಾಹ ಪರಿಸ್ಥಿತಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ಇದು ಶತಮಾನದ ದೊಡ್ಡ ಪ್ರವಾಹ. ಕೃಷ್ಣಾ ನದಿಗೆ 7.30 ಲಕ್ಷ, ಘಟಪ್ರಭಾಕ್ಕೆ 2.27 ಲಕ್ಷ ಹಾಗೂ ಮಲಪ್ರಭಾ ನದಿಗೆ 2 ಲಕ್ಷ ಕ್ಯೂಸೆಕ್‌ ನೀರು ಈ ಬಾರಿ ಹರಿಯಿತು. ಈ ನದಿಗಳಲ್ಲಿ ಇಷ್ಟೊಂದು ಪ್ರಮಾಣದ ನೀರು ಎಂದೂ ಹರಿದಿಲ್ಲ. ಹೀಗಾಗಿ ಇದೊಂದು ದೊಡ್ಡ ದುರಂತ ಎಂದರು.

ಕಳೆದ 2009ರಲ್ಲೂ ಪ್ರವಾಹ ಬಂದಿತ್ತು. ಆಗ ಆಸರೆಯಡಿ 59 ಗ್ರಾಮ ಸ್ಥಳಾಂತರ ಮಾಡಿದ್ದೇವು. ಈಗ 194 ಗ್ರಾಮಗಳು ಪ್ರವಾಹದಿಂದ ಮುಳುಗಡೆ ಆಗಿವೆ. ಅಲ್ಲಿನ ಸಂತ್ರಸ್ತರಿಗೆ ಎಲ್ಲ ರೀತಿಯ ಸೌಲಭ್ಯ ಕಲ್ಪಿಸಲು ಮಾನವೀಯತೆ ಮೇಲೆ ಕೆಲಸ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಹೋಗಲು ಸಿದ್ಧರಿದ್ದರೆ ಸ್ಥಳಾಂತರ: 2009ರಲ್ಲಿ ಪ್ರವಾಹದಿಂದ ಮುಳುಗಡೆ ಆದ ಸಂತ್ರಸ್ತರಿಗೆ ಮನೆ ಕಟ್ಟಿಕೊಟ್ಟರೂ ಹೊಸ ಊರಿಗೆ ಹೋಗಲಿಲ್ಲ. ಈಗಲೂ ಹೊಸ ಮನೆ ಕಟ್ಟಿಕೊಟ್ಟರೂ ಹೋಗದೇ ಇದ್ದರೆ ಸರ್ಕಾರದ ಶ್ರಮ ವ್ಯರ್ಥವಾಗುತ್ತದೆ. ಆದ್ದರಿಂದ ಯಾವ ಗ್ರಾಮದವರು ಹೊಸ ಗ್ರಾಮಗಳಿಗೆ ಹೋಗಲು ಸಿದ್ಧರಿರುತ್ತಾರೋ ಅಂತಹ ಗ್ರಾಮಗಳನ್ನು ತಕ್ಷಣ ಸ್ಥಳಾಂತರ ಮಾಡಲಾಗುವುದು. ಅದಕ್ಕಾಗಿ ಆಯಾ ಗ್ರಾಮ ವ್ಯಾಪ್ತಿಯ ಸರ್ಕಾರಿ ಭೂಮಿ ಗುರುತಿಸಬೇಕು. ಸರ್ಕಾರಿ ಭೂಮಿ ಲಭ್ಯವಿಲ್ಲದಿದ್ದರೆ ಖಾಸಗಿ ಭೂಮಿ ಖರೀದಿಸಬೇಕು ಎಂದರು.

ಪರಿವರ್ತಕ-ವಿದ್ಯುತ್‌ ಲೈನ್‌ ದುರಸ್ತಿ: ಪ್ರವಾಹದಿಂದ ಸಾವಿರಾರು ವಿದ್ಯುತ್‌ ಪರಿವರ್ತಕ, ಲೈನ್‌ ಹಾಳಾಗಿವೆ. ರೈತರ ಪಂಪಸೆಟ್ ಹರಿದು ಹೋಗಿವೆ. ಹೆಸ್ಕಾಂ ಸಿಬ್ಬಂದಿಯಿಂದಷ್ಟೇ ಈ ದುರಸ್ತಿ ಕಾರ್ಯ ಕೈಗೊಳ್ಳಲು ಆಗಲ್ಲ. ಹೀಗಾಗಿ ಬೆಸ್ಕಾಂ ಸೇರಿದಂತೆ ವಿವಿಧ ವಿದ್ಯುತ್‌ ನಿಗಮದ ಸಿಬ್ಬಂದಿಯನ್ನು ಇಲ್ಲಿಗೆ ನಿಯೋಜನೆ ಮಾಡಿಕೊಳ್ಳಬೇಕು ಎಂದು ಸೂಚಿಸಿದರು. ಜಿಲ್ಲೆಯಲ್ಲಿ ಈಗ ಸಂಭವಿಸಿರುವ ಪ್ರವಾಹದಿಂದ 40,292 ಜನ ಸಂತ್ರಸ್ತರಾಗಿದ್ದಾರೆ. ಇವರ ಜೊತೆ ಜಾನುವಾರುಗಳು ಸಹ ಸಂಕಷ್ಟಕ್ಕೀಡಾಗಿದ್ದು, ತುರ್ತಾಗಿ ಪರಿಹಾರ ಕಾರ್ಯ ಕೈಗೊಳ್ಳಲಾಗುತ್ತದೆ. 8-10 ದಿನಗಳಲ್ಲಿ ಮನೆ ಹಾನಿ ಹಾಗೂ ಬೆಳೆ ಹಾನಿ ಕುರಿತು ಸಮೀಕ್ಷೆ ಕಾರ್ಯ ಪೂರ್ಣಗೊಳಿಸಿ ನಿಯಮಾನುಸಾರ ಪರಿಹಾರ ಕಾರ್ಯವಾಗಬೇಕು. ಸಂತ್ರಸ್ತರ ಬದುಕು ವ್ಯವಸ್ಥಿತ ರೀತಿಯಲ್ಲಿ ರೂಪಿಸುವ ಕೆಲಸವಾಗಲಿ ಎಂದರು.

Advertisement

ಸಚಿವ ಕೆ.ಎಸ್‌.ಈಶ್ವರಪ್ಪ ಮಾತನಾಡಿ, ಸರ್ಕಾರ ಸಂತ್ರಸ್ತರಿಗೆ ಕೊಡಮಾಡುವ ತುರ್ತು ಪರಿಹಾರದ ಮೊತ್ತ 10 ಸಾವಿರ ರೂ.ಗಳನ್ನು 3-4 ದಿನಗಳಲ್ಲಿ ಆರ್‌ಟಿಜಿಎಸ್‌ ಮೂಲಕ ಜಮಾ ಮಾಡಬೇಕು. ಮಣ್ಣಿನ ಮನೆಗಳು ಭಾಗಶಃ ಗೋಡೆಗಳು ಕುಸಿದಿದ್ದರೆ ಇನ್ನು ಬೀಳುವ ಸಂಭವಿರುತ್ತವೆ. ಆದ್ದರಿಂದ ಸರ್ವೇ ಮಾಡುವಲ್ಲಿ ಅವುಗಳಿಗೆ ಪೂರ್ಣ ಪ್ರಮಾಣದ ಪರಿಹಾರ ನೀಡುವ ಕೆಲಸವಾಗಬೇಕು. ಬೆಳೆ ಸಮೀಕ್ಷೆಯನ್ನು 10 ದಿನಗಳಲ್ಲಿ ಮುಗಿಸಿ ತುರ್ತಾಗಿ ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು. ಶಾಲೆಗಳು ಪುನರ್‌ ಆರಂಭವಾಗಬೇಕು. ಪ್ರವಾಹದಿಂದ ಶಾಲೆಯ ಕಟ್ಟಡಗಳು ಶಿಥಿಲಗೊಂಡಿರುವುದರಿಂದ ಅವುಗಳನ್ನು ಪರಿಶೀಲಿಸಬೇಕು. ಗೋಡೆ ಬಿದ್ದು ಮಕ್ಕಳಿಗೆ ಪ್ರಾಣಿ ಹಾನಿಯಾದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು. ಜನರಿಗ ಶಾಶ್ವತ ಸೂರು ನೀಡುವ ಕಾರ್ಯ ಸರ್ಕಾರದ ಉದ್ದೇಶವಾಗಿದೆ. ಆದ್ದರಿಂದ ಪರಿಹಾರ ಕಾರ್ಯದಲ್ಲಿ ಹಣದ ಕೊರತೆ ಇಲ್ಲ. ಕೇಂದ್ರದಿಂದ 1028 ಕೋಟಿ ಬಂದಿದೆ ಎಂದು ತಿಳಿಸಿದರು.

ಶಾಸಕರಾದ ಡಾ| ವೀರಣ್ಣ ಚರಂತಿಮಠ, ಸಿದ್ದು ಸವದಿ, ಆನಂದ ನ್ಯಾಮಗೌಡರ, ದೊಡ್ಡನಗೌಡ ಪಾಟೀಲ, ವಿಧಾನಪರಿಷತ್‌ ಸದಸ್ಯರಾದ ಎಸ್‌.ಆರ್‌.ಪಾಟೀಲ, ಸುನೀಲಗೌಡ ಪಾಟೀಲ, ಹಣಮಂತ ನಿರಾಣಿ ಮಾತನಾಡಿದರು. ಜಿಲ್ಲಾಧಿಕಾರಿ ಆರ್‌.ರಾಮಚಂದ್ರನ್‌ ಅವರು ಪ್ರವಾಹದಿಂದ ಜಿಲ್ಲೆಯಲ್ಲಾದ ಹಾನಿ, ಸಮೀಕ್ಷೆ ಕಾರ್ಯ ಹಾಗೂ ಪರಿಹಾರದ ವಿತರಣೆ ಬಗ್ಗೆ ವಿವರವಾಗಿ ಸಭೆಗೆ ತಿಳಿಸಿದರು. ಜಿಪಂ ಅಧ್ಯಕ್ಷೆ ಬಾಯಕ್ಕ ಮೇಟಿ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ತುಷಾರ ಗಿರಿನಾಥ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ, ಜಿಪಂ ಸಿಇಒ ಗಂಗೂಬಾಯಿ ಮಾನಕರ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next