Advertisement

ಹೊಸ ತಾಲೂಕುಗಳು ಇಲಾಖೆಗೆ ಸೀಮಿತ

01:29 PM Sep 28, 2019 | Naveen |

ಶ್ರೀಶೈಲ ಕೆ. ಬಿರಾದಾರ
ಬಾಗಲಕೋಟೆ: ಜಿಲ್ಲೆಯ ಆರು ಹಳೆಯ ತಾಲೂಕಿನ ಜತೆಗೆ ಮತ್ತೆ ನಾಲ್ಕು ಹೊಸ ತಾಲೂಕುಗಳ ಘೋಷಣೆಯಾಗಿದ್ದು, ಅವುಗಳು ಹೆಸರಿಗುಂಟು, ಲೆಕ್ಕಕ್ಕಿಲ್ಲ ಎಂಬಂತಾಗಿದೆ. 2017ರಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಜಿಲ್ಲೆಯ ಗುಳೇದಗುಡ್ಡ, ಇಳಕಲ್ಲ ಹಾಗೂ ರಬಕವಿ-ಬನಹಟ್ಟಿ ಹೊಸ ತಾಲೂಕುಗಳಾಗಿ ಘೋಷಣೆಯಾಗಿದ್ದವು.

Advertisement

ಇನ್ನು ಸಮ್ಮಿಶ್ರ ಸರ್ಕಾರದಲ್ಲಿ ತೇರದಾಳ ತಾಲೂಕನ್ನು ಬಜೆಟ್‌ನಲ್ಲಿ ಮಾತ್ರ ಘೋಷಣೆ ಮಾಡಿದ್ದು, ಅದಕ್ಕಾಗಿ ಅಧಿಕೃತವಾಗಿ ಅಧಿಸೂಚನೆ ಹೊರಡಿಸಿಲ್ಲ. ಹೀಗಾಗಿ 2017ರಲ್ಲಿ ಘೋಷಣೆಯಾದ ಮೂರು ಹೊಸ ತಾಲೂಕುಗಳಿಗೆ ರಾಜ್ಯ ಸರ್ಕಾರ ಅಧಿಕೃತವಾಗಿ ರಾಜ್ಯಪತ್ರ (ಅಧಿಸೂಚನೆ) ಹೊರಡಿಸಿ, ಹೋಬಳಿ, ಗ್ರಾಮಗಳ ವಿಂಗಡಣೆ ಮಾಡಿದೆ.

ಹೊಸ ತಾಲೂಕುಗಳ ಆಡಳಿತಾತ್ಮಕ ಜಾರಿಗೊಳಿಸಲು, ಕಚೇರಿ, ಪೀಠೊಪಕರಣಕ್ಕಾಗಿ ತಲಾ 10 ಲಕ್ಷ ಅನುದಾನವೂ ಬಿಡುಗಡೆ ಮಾಡಲಾಗಿತ್ತು. ಆ ಅನುದಾನದಲ್ಲಿ ಜಿಲ್ಲೆಯ ಮೂರು ಹೊಸ ತಾಲೂಕುಗಳ ತಹಶೀಲ್ದಾರ್‌ ಕಚೇರಿಗಳು ಮಾತ್ರ ಕಾರ್ಯ ನಿರ್ವಹಿಸುತ್ತಿವೆ. ಆದರೆ, ವಾಸ್ತವದಲ್ಲಿ ಇಡೀ ತಾಲೂಕು ವ್ಯವಸ್ಥೆ ಇನ್ನೂ ಅನುಷ್ಠಾನಗೊಂಡಿಲ್ಲ. ಜಿಪಂ ವ್ಯಾಪ್ತಿಯ 27 ಹಾಗೂ ಕಂದಾಯ ಇಲಾಖೆಯ 7 ಸೇರಿದಂತೆ ಒಂದು ತಾಲೂಕಿನಲ್ಲಿ ಇರಬೇಕಾದ ಎಲ್ಲ ಸರ್ಕಾರಿ ಕಚೇರಿಗಳು ಆರಂಭಗೊಂಡಿಲ್ಲ.

ಗ್ರಾಮ ವಿಂಗಡಣೆ ದೊಡ್ಡ ಸವಾಲು: ಹೊಸ ತಾಲೂಕೇನೋ ಘೋಷಣೆಯಾಗಿವೆ. ಆದರೆ, ಈ ಹಿಂದಿನ ತಾಲೂಕು ವ್ಯಾಪ್ತಿಯಲ್ಲಿದ್ದ ಹೋಬಳಿ, ಗ್ರಾಮಗಳನ್ನು ವಿಂಗಡಿಸಿ, ಹೊಸ ತಾಲೂಕಿಗೆ ಸೇರಿಸಿ, ದಾಖಲೆ ಹಸ್ತಾಂತರಿಸುವ ಕಾರ್ಯ ಬಹುದೊಡ್ಡ ಸವಾಲು. ಇದು ಜಿಲ್ಲೆಯ ಹೊಸ ತಾಲೂಕಿನಲ್ಲಿ ಈವರೆಗೆ ನಡೆದಿಲ್ಲ. ಕಂದಾಯ ಇಲಾಖೆ ವ್ಯಾಪ್ತಿಯಲ್ಲಿ ಮಾತ್ರ ಆರು ಹಳೆಯ ತಾಲೂಕು, ಮೂರು ಹೊಸ ತಾಲೂಕನ್ನು ನಮೂದಿಸಿ ವಿವರಣೆ
ಕೊಡಲಾಗುತ್ತಿದೆ. ಆದರೆ, ಭೂಮಿ, ಅಟಲ್‌ ಜನಸ್ನೇಹಿ ಕೇಂದ್ರಗಳ ಕಾರ್ಯಗಳು ಇಂದಿಗೂ ಆಯಾ ಹೋಬಳಿ ಅಧೀನದಲ್ಲೇ ನಡೆಯುತ್ತಿವೆ. ಹೋಬಳಿಗಳನ್ನು ವಿಂಗಡಿಸಿ ಹೊಸ ತಾಲೂಕಿಗೆ ದಾಖಲೆ ಸಮೇತ ಹಸ್ತಾಂತರಿಸುವ ಮಹತ್ವದ ಕಾರ್ಯ ಇನ್ನೂ ನಡೆದಿಲ್ಲ.

ಯಾವ ತಾಲೂಕಿಗೆ ಎಷ್ಟು ಹಳ್ಳಿ?: ಸಿದ್ದರಾಮಯ್ಯ ಸರ್ಕಾರದಲ್ಲಿ ಹೊಸ ತಾಲೂಕಾಗಿ ಘೋಷಣೆಗೊಂಡಿರುವ ಗುಳೇದಗುಡ್ಡ ತಾಲೂಕಿನಲ್ಲಿ ಒಂದು ಹೋಬಳಿ 38 ಹಳ್ಳಿಗಳು ಒಳಗೊಂಡಿವೆ. ಇಲ್ಲಿ ಹೊಸ ತಾಲೂಕು ಆಡಳಿತ ಭವನಕ್ಕೆ ಸೂಕ್ತ ಜಾಗ ಸಿಕ್ಕಿಲ್ಲ. ಹೀಗಾಗಿ ಮಿನಿ ವಿಧಾನಸೌಧ ನಿರ್ಮಾಣದ ಪ್ರಸ್ತಾವನೆಯೂ ಸರ್ಕಾರಕ್ಕೆ ಹೋಗಿಲ್ಲ. ಕಂದಾಯ ಇಲಾಖೆಯಡಿ ಬರುವ ಉಪ ನೋಂದಣಿ ಮತ್ತು ಖಜಾನೆ ಕಚೇರಿಗಳು ಮಾತ್ರ ಹೊಸ ತಾಲೂಕಿನಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಉಳಿದಂತೆ ಕೃಷಿ, ತೋಟಗಾರಿಕೆ, ಆರ್‌ಡಿಪಿಆರ್‌, ಸಣ್ಣ ನೀರಾವರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಸೇರಿದಂತೆ ಸರ್ಕಾರದ ಮಹತ್ವದ ಇಲಾಖೆಗಳು ಆರಂಭಗೊಂಡಿಲ್ಲ.

Advertisement

ಪಾಂಡಿಚೇರಿ ಮಾದರಿ ಇಳಕಲ್ಲ!: ಇನ್ನು ಇಳಕಲ್ಲ ಹೊಸ ತಾಲೂಕಿನ ಪರಿಸ್ಥಿತಿ ಪಾಂಡಿಚೇರಿ ಕೇಂದ್ರಾಡಳಿತ ಪ್ರದೇಶದಂತಾಗಿದೆ. ಇಳಕಲ್ಲ, ಕರಡಿ ಮತ್ತು ಅಮೀನಗಡ ಹೋಬಳಿಯನ್ನು ಈ ತಾಲೂಕು ವ್ಯಾಪ್ತಿಗೆ ಸೇರಿಸಿದ್ದು 73 ಹಳ್ಳಿ ಒಳಗೊಂಡಿದೆ. ಮೂಲ ಹುನಗುಂದ ತಾಲೂಕಿನಿಂದ ಹೊಸ ಇಳಕಲ್ಲ ತಾಲೂಕಿಗೆ ಹಲವು ದಾಖಲೆ ಹಸ್ತಾಂತರಗೊಂಡಿಲ್ಲ. ರೈತರ ಪಹಣಿ, ವಾರಸಾ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಹೀಗೆ ಹಲವು ದಾಖಲೆ ನೀಡುವುದು ಇನ್ನೂ ಹೋಬಳಿ ವ್ಯಾಪ್ತಿಯಲ್ಲೇ ನಡೆದಿವೆ.

ಆದರೆ, ದಾಖಲೆ ನೀಡುವಾಗ ಹೊಸ ತಾಲೂಕು ಹೆಸರು ದಾಖಲಿಸಲಾಗುತ್ತಿದೆ. ಇಳಕಲ್ಲ ಭೌಗೋಳಿಕ ನಕ್ಷೆ ಗಮನಿಸಿದಾಗ ಎರಡು ಪ್ರತ್ಯೇಕ ಭೌಗೋಳಿಕ ಕ್ಷೇತ್ರ ಸೇರಿಸಲಾಗಿದೆ. ಮಧ್ಯೆ ಹುನಗುಂದ ತಾಲೂಕಿನ ಹಳ್ಳಿಗಳು ಬರುತ್ತಿದ್ದು ಅವುಗಳನ್ನು ದಾಟಿ ಗುಡೂರ (ಎಸ್‌.ಸಿ) ಭಾಗದ ಹಳ್ಳಿ ಸೇರಿಸಲಾಗಿದೆ. ಹೀಗಾಗಿ ಭಾರತದ ಭೌಗೋಳಿಕ ನಕ್ಷೆಯ ನಾಲ್ಕು ಕಡೆ ಪ್ರತ್ಯೇಕ ಭೌಗೋಳಿಕ ಕ್ಷೇತ್ರ ಹೊಂದಿರುವ ಪಾಂಡಿಚೇರಿ ರಾಜ್ಯದಂತೆ ಇಳಕಲ್ಲ ತಾಲೂಕಿನ ಪರಿಸ್ಥಿತಿಯಿದೆ.

ಮುಗಿಯದ ಗೊಂದಲ: ರಬಕವಿ-ಬನಹಟ್ಟಿ ತಾಲೂಕಿಗೆ ಹಳ್ಳಿಗಳ ಸೇರ್ಪಡೆ ವಿಷಯದಲ್ಲಿ ಗೊಂದಲ ಮುಗಿದಿಲ್ಲ. ಮಹಾಲಿಂಗಪುರ ಮತ್ತು ಸುತ್ತಲಿನ ಹಳ್ಳಿಗಳನ್ನು ರಬಕವಿ-ಬನಹಟ್ಟಿಗೆ ಸೇರಿಸಬೇಕು, ಇಲ್ಲವೇ ಪ್ರತ್ಯೇಕ ತಾಲೂಕು ಮಾಡಬೇಕೆಂಬ ಹೋರಾಟ ಒಂದೆಡೆ ಇದೆ. ಮತ್ತೂಂದೆಡೆ ಸಮ್ಮಿಶ್ರ ಸರ್ಕಾರದಲ್ಲಿ ತೇರದಾಳ ಹೊಸ ತಾಲೂಕು ಘೋಷಣೆಯಾಗಿದ್ದು ಅದಕ್ಕೆ ಅಧಿಕೃತ ಗೆಜೆಟ್‌ ಆಗದಿದ್ದರೂ ಮಹಾಲಿಂಗಪುರ ಭಾಗವನ್ನು ತೇರದಾಳಕ್ಕೆ ಸೇರಿಸಲಾಗಿದೆ.

ಹೀಗಾಗಿ ಮಹಾಲಿಂಗಪುರ ಜನ ಹೋರಾಟ ನಡೆಸುತ್ತಿದ್ದಾರೆ. ಅಧಿಕೃತವಾಗಿ ಗೆಜೆಟ್‌ ನೋಟಿಫಿಕೇಶನ್‌ (ಅಧಿಸೂಚನೆ) ಆಗದ ಹಿನ್ನೆಲೆಯಲ್ಲಿ ಸದ್ಯ ತೇರದಾಳ ತಾಲೂಕು ರಚನೆಯಾಗಿಲ್ಲ. ಇಲ್ಲಿ ವಿಶೇಷ ತಹಶೀಲ್ದಾರ್‌ ನೇಮಕ ಮಾಡಿದ್ದು, ಅವರು ತೇರದಾಳ ಹೋಬಳಿ ವ್ಯಾಪ್ತಿಗೆ ಸೀಮಿತಗೊಂಡು ಕಾರ್ಯ ನಿರ್ವಹಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next