Advertisement

ಬಾಗಲಕೋಟೆ:ಕೋಟೆಕಲ್ಲಲ್ಲೊಂದು ಅಪೂರ್ವ ಜ್ಞಾನದೇಗುಲ-ಉಲ್ಲಾಸದ ವಾತಾವರಣ

06:18 PM Oct 17, 2024 | Team Udayavani |

ಉದಯವಾಣಿ ಸಮಾಚಾರ
ಬಾಗಲಕೋಟೆ:ಈ ಹಳ್ಳಿಯ ಮಕ್ಕಳು ಮೊಬೈಲ್‌ ಹಿಡಿದು ಸಮಯ ವ್ಯರ್ಥ ಮಾಡಲ್ಲ, ಮಹಿಳೆಯರು ಕಟ್ಟೆಗೆ ಕುಳಿತು ಹರಟೆ ಹೊಡೆಯಲ್ಲ, ಈ ಕಟ್ಟಡದೊಳಗೆ ಕಾಲಿಟ್ಟರೆ ಓದದೇ ಇರಲು ಮನಸ್ಸು ಒಪ್ಪಲ್ಲ. ನಿರುಪಯುಕ್ತವಾಗಿದ್ದ ಕಟ್ಟಡವೀಗ ಜ್ಞಾನ ದೇಗುಲ. ಹೌದು. ಈ ಸನ್ನಿವೇಶಗಳು ಕಾಣ ಸಿಗೋದು ಜಿಲ್ಲೆಯ ಗುಳೇದಗುಡ್ಡ ತಾಲೂಕಿನ ಕೋಟೆಕಲ್ಲ ಗ್ರಾಮದಲ್ಲಿ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಗ್ರಾಪಂ ಅಧ್ಯಕ್ಷ-ಸದಸ್ಯರು ಹಾಗೂ ಊರಿನ ಜನರು ಮನಸ್ಸು ಮಾಡಿದರೆ ಮಾದರಿ ಗ್ರಂಥಾಲಯ
ನಿರ್ಮಿಸಬಹುದು ಎಂಬುದಕ್ಕೆ ನೈಜ ಉದಾಹರಣೆಯಾಗಿದ್ದಾರೆ.

Advertisement

ನಿರುಪಯುಕ್ತವಾಗಿದ್ದ ಕಟ್ಟಡ: ಸರ್ಕಾರದ ಲಕ್ಷಾಂತರ ರೂ. ಖರ್ಚು ಮಾಡಿ ಕಟ್ಟಿದ್ದ ರಾಜೀವ ಗಾಂಧಿ ಸೇವಾ ಕೇಂದ್ರದ ಕಟ್ಟಡ ಇಲ್ಲಿ ಸಂಪೂರ್ಣ ಸದ್ಬಳಕೆಯಾಗಿದೆ. ಪಿಡಿಒ ಆರತಿ ಕ್ಷತ್ರಿ ಇಲ್ಲಿಗೆ ವರ್ಗವಾಗಿ ಬಂದ ಬಳಿಕ ಇದು ಸಾಕಾರಗೊಂಡಿದೆ. ಒಂದು ವರ್ಷದ ಹಿಂದಷ್ಟೇ ನಿರುಪಯುಕ್ತವಾಗಿದ್ದ ಕಟ್ಟಡವೀಗ ಇಡೀ ಊರಿನ ಜನರನ್ನು ಆಕರ್ಷಿಸುತ್ತಿದೆ. ಜತೆಗೆ ಓದಿಗೆ ಕೈಬೀಸಿ ಕರೆಯುತ್ತದೆ. ಮುಖ್ಯವಾಗಿ ಕೋಟೆಕಲ್ಲ ಗ್ರಾಪಂ ಓದುಗರಿಗೆ ಓಗೊಟ್ಟಿದೆ ಎಂದರೆ ತಪ್ಪಲ್ಲ.

5 ಸಾವಿರಕ್ಕೂ ಹೆಚ್ಚು ಪುಸ್ತಕ: ಕೋಟೆಕಲ್ಲ ಗ್ರಾಪಂನಿಂದ ಮಾದರಿ ಗ್ರಂಥಾಲಯ ನಿರ್ಮಿಸಿದ್ದು ಇಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ತಯಾರಿ ಪುಸ್ತಕಗಳು, ಕಥೆ, ಕಾದಂಬರಿ ಹೀಗೆ ನಾನಾ ತರಹದ 5 ಸಾವಿರಕ್ಕೂ ಹೆಚ್ಚು ಪುಸ್ತಕಗಳ ರಾಶಿಯೇ ಇದೆ. ಗ್ರಂಥಾಲಯದೊಳಗೆ ಕಾಲಿಟ್ಟರೆ ಸೂಜಿ ಬಿದ್ದರೂ ಶಬ್ದವಾಗಬೇಕು ಎಂಬಂತಹ ನಿಶ್ಯಬ್ದ ವಾತಾವರಣವಿದೆ. ಇಲ್ಲಿ ಹರಟೆ ಹೊಡೆಯುವವರೆಗೆ ಅವಕಾಶವಿಲ್ಲ. ಪುಸ್ತಕ-ದಿನಪತ್ರಿಕೆಗಳು ಓದಲು ನಿತ್ಯ ಇಲ್ಲಿ ನೂರಾರು ಜನರು ಬರುತ್ತಾರೆ. ಓದಲು ಬಂದವರ ಮನಸ್ಸು ಉಲ್ಲಾಸಗೊಳ್ಳುವ ವಾತಾವರಣ ಇಲ್ಲಿದೆ.

ಗೃಹಿಣಿಯರು-ಮಕ್ಕಳು ನಿತ್ಯ ಬರ್ತಾರೆ: ಈ ಗ್ರಾಮದ ಸುಶಿಕ್ಷಿತ ಮಹಿಳೆಯರು ಮನೆಯ ಕೆಲಸ ಮುಗಿದ ಬಳಿಕ ನಿತ್ಯ ಒಂದೆರಡು ಗಂಟೆ ಇಲ್ಲಿಗೆ ಬಂದು ಕಥೆ-ಕಾದಂಬರಿ ಪುಸ್ತಕ ಓದುತ್ತಾರೆ. ಮಹಿಳೆಯರು, ಮಕ್ಕಳು, ಅಂಗವಿಕಲರು, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ಮಾಡಿಕೊಳ್ಳುವ ಪದವಿ ವಿದ್ಯಾರ್ಥಿಗಳಿಗಾಗಿ ಪ್ರತ್ಯೇಕ ಕೊಠಡಿ-ಪುಸ್ತಕಗಳ ವ್ಯವಸ್ಥೆ ಇಲ್ಲಿದೆ. ಮಕ್ಕಳು ಸಂಜೆ ಶಾಲೆ ಬಿಟ್ಟ ಬಳಿಕ ನೇರವಾಗಿ ಇಲ್ಲಿಗೆ ಬರುತ್ತಾರೆ. ಸಂಜೆ 5ರಿಂದ 7 ಗಂಟೆವರೆಗೂ ಇಲ್ಲಿಯೇ ಹೋಂ ವರ್ಕ್‌ ಸಹಿತ ಓದು-ಬರಹ ಮಾಡುತ್ತಾರೆ.

Advertisement

ಸ್ಪರ್ಧಾತ್ಮಕ ಪರೀಕ್ಷೆ ತಯಾರಿಗಾಗಿ ಅಗತ್ಯ ಹಾಗೂ ಪರಿಣಿತರು ಬರೆದ ಪುಸ್ತಕ ತರಿಸಲಾಗಿದೆ. ಇದು ಈ ಗ್ರಾಮದ ಸ್ಪರ್ಧಾತ್ಮಕ ಪರೀಕ್ಷೆ ತಯಾರಿ ಮಾಡಿಕೊಳ್ಳುವ ವಿದ್ಯಾರ್ಥಿ ಸಮೂಹಕ್ಕೆ ಬಹಳಷ್ಟು ಅನುಕೂಲವಾಗಿದೆ. ಈ ಗ್ರಾಮದ ವಿದ್ಯಾರ್ಥಿನಿಯೊಬ್ಬಳು ನಿತ್ಯ ಬೆಳಿಗ್ಗೆ 7.30ರಿಂದ ಸಂಜೆವರೆಗೂ ನಿತ್ಯ ಈ ಗ್ರಂಥಾಲಯದಲ್ಲಿ ಓದಲು ಬರುತ್ತಿದ್ದಳು. ಏಳು ತಿಂಗಳ ನಿರಂತರ ಓದಿದ ಆ ವಿದ್ಯಾರ್ಥಿನಿ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಿದ್ದು ಅರಣ್ಯ ಇಲಾಖೆ, ಕಂದಾಯ ಇಲಾಖೆ ಸಹಿತ ಮೂರು ಇಲಾಖೆಗೆ ಆಯ್ಕೆಯಾಗಿದ್ದಳು. ಒಮ್ಮೆಲೆ ಮೂರು ನೌಕರಿ ಪಡೆದ ಆ ವಿದ್ಯಾರ್ಥಿನಿಗೆ ಈ ಜ್ಞಾನದೇಗುಲ ನೆರವಾಗಿರುವುದನ್ನು ಸ್ವತಃ ಇಲ್ಲಿನ ಪಿಡಿಒ ಆರತಿ ಕ್ಷತ್ರಿ ಹೆಮ್ಮೆಯಿಂದ ಹೇಳುತ್ತಾರೆ. ಒಟ್ಟಾರೆ, ಪಿಡಿಒ, ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಸಮಾಜಮುಖಿ
ಮನಸ್ಸುಳ್ಳವರಿದ್ದರೆ ಮಾದರಿ ನಡೆ ಇಡಬಹುದು ಎಂಬುದಕ್ಕೆ ಕೋಟೆಕಲ್ಲ ಗ್ರಾಪಂ ಮಾದರಿಯಾಗಿದೆ.

ಗಮನ ಸೆಳೆಯುವ ಬರಹಗಳು
ಬಚ್ಚಿಟ್ಟ ಪುಸ್ತಕ ಕೊಳೆಯುತ್ತದೆ, ಬಿಚ್ಚಿಟ್ಟ ಪುಸ್ತಕ ಹೊಳೆಯುತ್ತದೆ, ಉತ್ತಮ ಪುಸ್ತಕ ಜ್ಞಾನಿಯ ಚಿಂತನೆಯ ವಿಶ್ವರೂಪ. ಪುಸ್ತಕದಲ್ಲಿ ಇರುವುದನ್ನು ಮಸ್ತಕದಲ್ಲಿ ಇಟ್ಟರೆ ಮಸ್ತಕವೇ ಒಂದು ಪುಸ್ತಕವಾಗುವುದು, ನಾನು ಹೋರಾಟ ಮಾಡದಿದ್ದರೂ ಪರವಾಗಿಲ್ಲ, ಮಾರಾಟವಾಗಬೇಡ.

ಜಗತ್ತಿನಲ್ಲಿ ಮರಣವಿಲ್ಲದ ವರ ಪಡೆದ ವಸ್ತು ಪುಸ್ತಕ, ಒಂದು ಒಳ್ಳೆಯ ಪುಸ್ತಕ 100 ಜನ ಒಳ್ಳೆಯ ಗೆಳೆಯರಿಗೆ ಸಮ, ಒಬ್ಬ ಒಳ್ಳೆಯ ಗೆಳೆಯ, ಒಂದು ಗ್ರಂಥಾಲಯಕ್ಕೆ ಸಮ, ವಿದ್ಯಾರ್ಜನೆಯ ತಪಸ್ಸು ಫಲದಾಯಕ ವಾಗಬೇಕಾದರೆ ಉತ್ತಮ ಗ್ರಂಥಾಲಯ ಅಗತ್ಯ ಹೀಗೆ ಹಲವು ಅತ್ಯುತ್ತಮ ಸ್ಲೋಗನ್‌ಗಳನ್ನು ಈ ಗ್ರಂಥಾಲಯದ ಗೋಡೆಗಳ ಮೇಲೆ ಬರೆಸಿದ್ದು, ಅವು ಓದುಗರ ಮನ ಸೆಳೆಯುತ್ತಿವೆ. ಎಂಥಹದ್ದೇ ವ್ಯಕ್ತಿ, ಒಮ್ಮೆ ಈ ಗ್ರಂಥಾಲಯದಲ್ಲಿ ಕಾಲಿಟ್ಟರೆ, ಮನಸ್ಸು ಶಾಂತ-ಉಲ್ಲಾಸದೊಂದಿಗೆ
ಓದಿನೆಡೆಗೆ ಮನಸ್ಸು ಹಾತೊರೆಯದೇ ಇರದು.

ನಾನು ಇಲ್ಲಿಗೆ ಬಂದ ಬಳಿಕ ನಿರುಪಯುಕ್ತವಾಗಿದ್ದ ಕಟ್ಟಡವನ್ನು ಗ್ರಂಥಾಲಯ ಮಾಡಲು ಯೋಜನೆಗೆ ಎಲ್ಲರೂ ಸಹಕಾರ ಕೊಟ್ಟರು. 5 ಸಾವಿರಕ್ಕೂ ಹೆಚ್ಚು ಪುಸ್ತಕಗಳಿವೆ. ಮುಖ್ಯವಾಗಿ ಗ್ರಾಮೀಣ ಮಕ್ಕಳು, ಸ್ಪರ್ಧಾತ್ಮಕ ಪರೀಕ್ಷೆಗೆ ಓದಲು ಉತ್ತಮ ವಾತಾವರಣ ಮತ್ತು ಪುಸ್ತಕ ಇಲ್ಲಿವೆ. ಓರ್ವ ವಿದ್ಯಾರ್ಥಿನಿ ಇಲ್ಲಿ ಓದಿ ಒಮ್ಮೆಲೇ 3 ನೌಕರಿಗೆ ಆಯ್ಕೆಯಾಗಿದ್ದಳು. ಗ್ರಂಥಾಲಯ ನಿರ್ಮಿಸಿದ ಕಾರ್ಯ ಖುಷಿ ಕೊಟ್ಟಿದೆ.
ಆರತಿ ಕ್ಷತ್ರಿ, ಪಿಡಿಒ, ಕೋಟೆಕಲ್ಲ

ನಮ್ಮೂರ ಪಂಚಾಯಿತಿ ನಿತ್ಯವೂ ಮಕ್ಕಳು, ಮಹಿಳೆಯರು ಸಹಿತ ಓದುಗರಿಂದ ತುಂಬಿರುತ್ತದೆ. ಪಿಡಿಒ ಆರತಿ ಮೇಡಂ ಅವರ
ಮುಂದಾಲೋಚನೆ ಕೆಲಸಕ್ಕೆ ನಾವೆಲ್ಲ ಸಹಕಾರ ನೀಡಿದ್ದೇವೆ. ಮಾದರಿ ಕಾರ್ಯಕ್ಕೆ ಹಿರಿಯರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಮ್ಮ ಅವಧಿಯಲ್ಲಿ ಇಂಥದ್ದೊಂದು ಕಾರ್ಯ ಮಾಡಿದ ಹೆಮ್ಮೆ ಇದೆ.
ಪಾರ್ವತಿ ಹುಚ್ಚೇಶ ಮೇಟಿ,
ಅಧ್ಯಕ್ಷರು, ಕೋಟೆಕಲ್ಲ ಗ್ರಾಪಂ

ಹಿರಿಯ ಅಧಿಕಾರಿಗಳ ಮೆಚ್ಚುಗೆ ಈ ಗ್ರಂಥಾಲಯಕ್ಕೆ ಭೇಟಿ ನೀಡಿದ ಹಿರಿಯ ಅಧಿಕಾರಿಗಳು, ರಾಜಕೀಯ ಪ್ರಮುಖರು, ಗಣ್ಯರು ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜಿಲ್ಲಾಧಿಕಾರಿ ಜಾನಕಿ ಕೆ.ಎಂ, ಜಿಪಂ ಸಿಇಒ ಶಶಿಧರ ಕುರೇರ ಸಹಿತ ಹಲವು ಅಧಿಕಾರಿಗಳು ಭೇಟಿ ನೀಡಿ, ಗ್ರಂಥಾಲಯದ ವಾತಾವರಣ, ಇಲ್ಲಿನ ಪುಸ್ತಕಗಳ ರಾಶಿ, ಪಿಡಿಒ-ಅಧ್ಯಕ್ಷರ ಜಂಟಿ ಗ್ರಾಮಮುಖೀ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

*ಶ್ರೀಶೈಲ ಕೆ.ಬಿರಾದಾರ

Advertisement

Udayavani is now on Telegram. Click here to join our channel and stay updated with the latest news.

Next