Advertisement

Bagalkote: ಕುಂಟುತ್ತ ಸಾಗಿದೆ ಐಟಿಐ ಕಾಲೇಜು ಕಟ್ಟಡ

12:51 PM Aug 19, 2023 | Team Udayavani |

ಗುಳೇದಗುಡ್ಡ: ಪಟ್ಟಣದ ಸರಕಾರಿ ಐಟಿಐ ಕಾಲೇಜು ಕಟ್ಟಡ ನಿರ್ಮಾಣಕ್ಕೆ ಸರಕಾರ ಸಮೀಪದ ಪರ್ವತಿ ಗ್ರಾಮದ ಹತ್ತಿರದ
ಗುಡ್ಡದಲ್ಲಿ ಐಟಿಐ ಕಾಲೇಜು ನಿರ್ಮಾಣಕ್ಕೆ ಭೂಮಿ ಮಂಜೂರು ಮಾಡಿ, ಅನುದಾನ ಮಂಜೂರು ಮಾಡಿದೆ. ಆದರೆ ಕಾಮಗಾರಿ
ಮಾತ್ರ ಆಮೆಗತಿಯಲ್ಲಿ ನಡೆಯುತ್ತಿದೆ.

Advertisement

ಕೇಂದ್ರ ಸರಕಾರದ ಇನ್‌ಸ್ಟಿಟ್ಯೂಟ್‌ ಮ್ಯಾನೇಜ್‌ ಮೆಂಟ್‌ ಕಮೀಟಿಯ ಸಾರ್ವಜನಿಕ ಖಾಸಗಿ ಯೋಜನೆ ಅಡಿಯಲ್ಲಿ ಅಂದಾಜು 99.99 ಲಕ್ಷ ರೂ.ದಲ್ಲಿ ಐಟಿಐ ಕಾಲೇಜು ನಿರ್ಮಿಸಲು ತೀರ್ಮಾನಿಸಲಾಗಿದೆ. 2018ರಲ್ಲಿ ಅಂದು ಮುಖ್ಯಮಂತ್ರಿಗಳಾಗಿದ್ದ ಸಿದ್ದರಾಮಯ್ಯನವರು ಶಂಕುಸ್ಥಾಪನೆ ನೆರವೇರಿಸಿದ್ದರು. ಶಾಸಕ ಬಿ.ಬಿ.ಚಿಮ್ಮನಕಟ್ಟಿ ಅಧ್ಯಕ್ಷತೆ ವಹಿಸಿದ್ದರು.

ಕಾಲೇಜು ಅಧಿಕಾರಿಗಳ ಪ್ರಕಾರ ಕಾಲೇಜಿಗೆ 2019ರಲ್ಲೇ ಅನುದಾನ ಮಂಜೂರಾಗಿದೆ. ಆದರೆ ಆ ಸಮಯದಲ್ಲಿ ಕೊರೊನಾ ಬಂದಿದ್ದರಿಂದ ಆ ಕೆಲಸ ನಿಂತಿತ್ತು. ಮತ್ತೆ 2020-21ರಲ್ಲಿ ಕೆಲಸ ಆರಂಭಿಸಲಾಗಿತ್ತು. 2023ರ ಮಾರ್ಚ್‌ 2ರಂದು ಬಾದಾಮಿ ಶಾಸಕರಾಗಿದ್ದ ಸಿದ್ದರಾಮಯ್ಯನವರು ಕಟ್ಟಡ ಉದ್ಘಾಟಿಸಿದ್ದರು. ಈ ಬಗ್ಗೆ ಕಟ್ಟಡದ ಮೇಲೆ ಶಂಕುಸ್ಥಾಪನೆ ಹಾಗೂ ಉದ್ಘಾಟನಾ ಸಮಾರಂಭದ ಫಲಕ ಅಳವಡಿಸಲಾಗಿದೆ.

ಯಾರಿಗೆ ಟೆಂಡರ್‌: ಸರಕಾರಿ ಐಟಿಐ ಕಾಲೇಜು ಕಟ್ಟಡ ನಿರ್ಮಾಣ ಕೆಲಸವನ್ನು ಭೂಸೇನಾ ನಿಗಮಕ್ಕೆ ಟೆಂಡರ್‌ ನೀಡಲಾಗಿದೆ. ಕಟ್ಟಡವೇನೋ ಪೂರ್ಣಗೊಳಿಸಿದ್ದಾರೆ.

ಶೇ.20 ಕೆಲಸ ಬಾಕಿ : ಸದ್ಯ ಭೂ ಸೇನಾ ಇಲಾಖೆಯವರು ಶೌಚಾಲಯವೊಂದನ್ನು ಬಿಟ್ಟು ಕಾಲೇಜಿನ ಉಳಿದೆಲ್ಲ ಕಟ್ಟಡ ಕೆಲಸ
ಪೂರ್ಣಗೊಳಿಸಿದ್ದಾರೆ. ಆದರೆ ಕಟ್ಟಡಕ್ಕೆ ಪೇಟಿಂಗ್‌, ವೈರಿಂಗ್‌, ವಿದ್ಯುತ್‌ ಸಂಪರ್ಕ  ಮಾಡಬೇಕು. ಪೈಪ್‌ಲೈನ್‌ ಮಾಡಿಲ್ಲ.
ಶೌಚಾಲಯದೊಳಗೆ ಬಾಂಡೆ ಒಂದೇ ಕೂರಿಸಿದ್ದಾರೆ. ಅದಕ್ಕೆ ಪೈಪ್‌ ಸಂಪರ್ಕವೇ ಕೊಟ್ಟಿಲ್ಲ. ಶೌಚಾಲಯದೊಳಗಡೆ ಇನ್ನೂ ಟೈಲ್ಸ್‌ ಅಳವಡಿಸಿಲ್ಲ. ಗಿಲಾಯ್‌ ಮಾಡಿಲ್ಲ. ಒಳಚರಂಡಿ ಸಂಪರ್ಕವಿಲ್ಲ. ಪೂರ್ಣ ಪ್ರಮಾಣದಲ್ಲಿ ಇಲ್ಲಿ ಇನ್ನೂ ಶೌಚಾಲಯ ನಿರ್ಮಾಣವಾಗಿಲ್ಲ. ಕಾಲೇಜಿನಲ್ಲಿ ಇನ್ನೂ ಶೇ.20 ಕೆಲಸ ಬಾಕಿಯಿದೆ.

Advertisement

ಐದಾರು ಬಾರಿ ಸಭೆ: ಕಾಮಗಾರಿ ಪೂರ್ಣಗೊಳಿಸುವಂತೆ ಐಟಿಐ ಅಧಿಕಾರಿಗಳು ಭೂಸೇನಾ ನಿಗಮದ ಅಧಿಕಾರಿಗಳೊಂದಿಗೆ
5-6 ಬಾರಿ ಸಭೆ ನಡೆಸಿದ್ದಾರೆ. ಪ್ರತಿ ಬಾರಿ ಸಭೆ ಕರೆದಾಗಲೂ ಆದಷ್ಟು ಬೇಗ ಕೆಲಸ ಮುಗಿಸಿಕೊಡುತ್ತೇವೆ ಅಂತಿದ್ದಾರೆ. ಇನ್ನೂ
ಪೂರ್ಣಗೊಳಿಸಿಲ್ಲ. ಐದಾರು ಬಾರಿ ಸಭೆ ಮಾಡಿದ್ದೇವೆ. ಸರಿಯಾಗಿ ಸ್ಪಂದಿಸುತ್ತಿಲ್ಲ ಎಂಬುದು ಐಟಿಐ ಕಾಲೇಜು ಅಧಿಕಾರಿಗಳ
ಮಾತು.

5 ಲಕ್ಷ ಬಾಕಿ; ತಡವಾಯಿತೇ ಕೆಲಸ ?
5 ಲಕ್ಷ ಹಣ ಪಾವತಿಯೇ ಕಾಮಗಾರಿ ವಿಳಂಬಕ್ಕೆ ಕಾರಣ ಎಂಬ ಮಾತುಗಳು ಕೇಳಿ ಬರುತ್ತಿವೆ. ಭೂಸೇನಾ ನಿಗಮಕ್ಕೆ ಐಟಿಐ ಕಾಲೇಜು ಇಲಾಖೆಯವರು ಬಹುತೇಕ ಎಲ್ಲ ಹಣ ಪಾವತಿಸಿದ್ದಾರೆ. ಆದರೆ ಇನ್ನೂ 5ಲಕ್ಷ ಹಣ ಪಾವತಿಸಬೇಕಿದೆ. ಆ ಹಣವನ್ನು ಪಾವತಿಸಿದರೆ ನಾವು ಕೆಲಸ ಮಾಡುತ್ತೇವೆ ಎಂಬುದು ಭೂಸೇನಾ ನಿಗಮದ ವಾದ. ಬಾಕಿ ಇರುವ ಕೆಲಸವನ್ನೆಲ್ಲ ಪೂರ್ಣಗೊಳಿಸಿ, ನಮಗೆ ಕಾಲೇಜು ಕಟ್ಟಡ ಹಸ್ತಾಂತರಿಸಿದರೆ ಬಾಕಿ 5ಲಕ್ಷ ಹಣ ಕೊಡುತ್ತೇವೆ. ನೀವು ತಡ ಮಾಡುತ್ತಿರುವುದರಿಂದ ವಿನಾಕಾರಣ ಬಾಡಿಗೆ ಕಟ್ಟುವಂತಾಗಿದೆ ಎಂಬುದು ಕಾಲೇಜು ಇಲಾಖೆಯವರ ವಾದ. ಇವರಿಬ್ಬರ ನಡುವೆ ಕೂಸು ಬಡವಾಯಿತು ಎನ್ನುವ ಹಾಗೆ ಕಟ್ಟಡ ಪೂರ್ತಿಗೊಂಡರೂ ವಾರದಲ್ಲಾಗುವ ಕೆಲಸ ತಿಂಗಳುಗಳು ಕಳೆಯುತ್ತ ಬಂದರೂ ಪೂರ್ಣಗೊಳ್ಳುತ್ತಿಲ್ಲ.

ಕಟ್ಟಡ ಪೂರ್ಣಗೊಳಿಸುವಂತೆ ಭೂಸೇನಾ ನಿಗಮದವರೊಂದಿಗೆ ಐದಾರು ಬಾರಿ ಸಭೆ ನಡೆಸಿದ್ದೇವೆ. ಪ್ರತಿ ಬಾರಿ ಸಭೆ ಕರೆದಾಗಲು
ಆದಷ್ಟು ಬೇಗ ಕೆಲಸ ಮುಗಿಸಿ ಕೊಡುತ್ತೇವೆ ಅಂತಿದ್ದಾರೆ. ಪೂರ್ಣಗೊಳಿಸಿಲ್ಲ. ಸ್ವಂತ ಕಟ್ಟಡವಿದ್ದರೂ ಬಾಡಿಗೆ ಕೊಡುವಂತಾಗಿದೆ. ಭೂಸೇನಾ ನಿಮಗದವರು ಕೂಡಲೇ ನಮಗೆ ಕೆಲಸ ಪೂರ್ತಿಗೊಳಿಸಿ, ಹಸ್ತಾಂತರಿಸಬೇಕು.
ಸುಭಾಸ ಉಪ್ಪಾರ, ಪ್ರಾಚಾರ್ಯರು,
ಸರಕಾರಿ ಕೈಗಾರಿಕಾ ತರಬೇತಿ ಕೇಂದ್ರ, ಗುಳೇದಗುಡ್ಡ

ಐಟಿಐ ಕಾಲೇಜು ಕಟ್ಟಡ ಕೆಲಸವನ್ನು ಬಹುತೇಕ ಮಾಡಿದ್ದೇವೆ. ಜಿಎಸ್‌ಟಿ ಸಮಸ್ಯೆ ಸೇರಿದಂತೆ ಕೆಲವು ತಾಂತ್ರಿಕ ಸಮಸ್ಯೆಗಳಿಂದ ಕೆಲಸ ವಿಳಂಬವಾಗಿದೆ. ವೈರಿಂಗ್‌, ವಿದ್ಯುತ್‌ ಸಂಪರ್ಕ ಕೊಡುವುದು ಬಾಕಿ. ಒಂದು ವಾರದಲ್ಲಿ ಕೆಲಸ ಮುಗಿಸುತ್ತೇವೆ.
ಆನಂದ ಸ್ವಾಮಿ, ಸಹಾಯಕ ಕಾರ್ಯ
ನಿರ್ವಾಹಕ ಅಭಿಯಂತರರು, ಭೂಸೇನಾ ನಿಗಮ, ಬಾಗಲಕೋಟೆ

ಐಟಿಐ ಕಾಲೇಜು ಇದುವರೆಗೂ ಆರಂಭಗೊಳ್ಳದಿರುವುದರಿಂದ ಇಲ್ಲಿ ನಿತ್ಯವೂ ಕುಡುಕರ ಹಾವಳಿ ಹೆಚ್ಚಿದೆ. ಎಲ್ಲೆಂದರಲ್ಲಿ ಮದ್ಯದ ಬಾಟಲಿಗಳು, ನೀರಿನ ಬಾಟಲ್‌, ಪೌಚ್‌, ಪ್ಲಾಸ್ಟಿಕ್‌ ಗ್ಲಾಸ್‌ ಸೇರಿದಂತೆ ಇನ್ನಿತರೆ ವಸ್ತುಗಳು ಎಲ್ಲೆಂದರಲ್ಲಿ ಬಿದ್ದಿವೆ. ಕತ್ತಲಾದರೆ ಸಾಕು ಕುಡುಕರು ಇಲ್ಲಿಗೆ ಬಂದು ಬಿಡುತ್ತಾರೆ. ಆದ್ದರಿಂದ ಪೊಲೀಸ್‌ ಇಲಾಖೆಯವರು ರಾತ್ರಿ ಸಮಯದಲ್ಲಿ ಸಂಚರಿಸಿ, ಎಚ್ಚರಿಸುವ ಕೆಲಸ ಮಾಡಬೇಕೆಂಬುದು ಪ್ರಜ್ಞಾವಂತರ ಮಾತು.

*ಮಲ್ಲಿಕಾರ್ಜುನ ಕಲಕೇರಿ

Advertisement

Udayavani is now on Telegram. Click here to join our channel and stay updated with the latest news.

Next