ಬಾಗಲಕೋಟೆ: ಆಧುನಿಕ ಯುಗದಲ್ಲಿ ಮಾರುಕಟ್ಟೆಯಲ್ಲಿ ಹೊಸ ಹೊಸ ಕಾರು ಬಂದಿವೆ. ಬಹುತೇಕರು ಐಷಾರಾಮಿ ಹಾಗೂ ಹೊಸ ಮಾದರಿಯ ಕಾರನ್ನೇ ಬಳಸಲು ಇಷ್ಟಪಡುತ್ತಾರೆ. ಆದರೆ, ಇಲ್ಲಿನ ಯುವ ಐಎಎಸ್ ಅಧಿಕಾರಿಯೊಬ್ಬರು ತುಕ್ಕು ಹಿಡಿದು ನಿಂತಿದ್ದ ಹಳೆಯ ಅಂಬಾಸಿಡರ್ ಕಾರನ್ನು ದುರಸ್ತಿ ಮಾಡಿಸಿ, ಬಣ್ಣ ಹಚ್ಚಿ, ನಿತ್ಯವೂ ಅದನ್ನೇ ಬಳಸುತ್ತಿದ್ದಾರೆ. ಹೌದು, ಇಲ್ಲಿನ ಜಿಪಂ ಸಿಇಒ ಟಿ.ಭೂಬಾಲನ್ ಈ ಹಳೆಯ ಅಂಬಾಸಿಡರ್ ಕಾರು ಬಳಸುತ್ತಿದ್ದಾರೆ.
ಬಾಗಲಕೋಟೆ ನಗರವೂ ಸೇರಿದಂತೆ ಸ್ಥಳೀಯವಾಗಿ ಯಾವುದೇ ಕಾರ್ಯಕ್ರಮ ಇದ್ದರೆ ಈ ಹಳೆಯ ಕಾರನ್ನೇ ಬಳಸುತ್ತಿದ್ದು, ಜಿಲ್ಲೆಯ ವಿವಿಧ ತಾಲೂಕುಗಳಿಗೆ ಭೇಟಿ ನೀಡುವುದಿದ್ದರೆ ಮಾತ್ರ ಹೊಸ ಇನ್ನೋವಾ ಕಾರು ಬಳಸುತ್ತಿದ್ದಾರೆ. ಜಿಪಂ ಉಪ ಕಾರ್ಯದರ್ಶಿಯಾಗಿದ್ದ ವಿ.ಎಸ್.ಹಿರೇಮಠ ಬಳಸುತ್ತಿದ್ದ 2011ರ ಮಾದರಿಯ ಅಂಬಾಸಿಡರ್ ಕಾರು ಕಳೆದ 3 ವರ್ಷಗಳಿಂದ ಶೆಡ್ ಸೇರಿತ್ತು.ಜಿಪಂಗೆ ಟಿ. ಭೂಬಾಲನ್ ಸಿಇಒ ಆಗಿ ಬಂದ ಬಳಿಕ ಶೆಡ್ನಲ್ಲಿ ಖಾಲಿ ನಿಂತಿದ್ದ ಕಾರು ನೋಡಿ ಇದನ್ನು ಏಕೆ ಬಳಸುತ್ತಿಲ್ಲ ಎಂದು ವಿಚಾರಿಸಿದ್ದರು.
ಸರ್ಕಾರದಿಂದ ಎಲ್ಲ ಅಧಿಕಾರಿಗಳಿಗೆ ಹೊಸ ಇನ್ನೋವಾ ಕಾರು ನೀಡಿದ್ದು ಎಲ್ಲರೂ ಅದನ್ನೇ ಬಳಸುತ್ತಾರೆ ಎಂದು ಸಿಬ್ಬಂದಿ ವಿವರಿಸಿದ್ದರು. ಆಗ ಆ ಕಾರನ್ನು ಗ್ಯಾರೇಜ್ಗೆ ಕಳುಹಿಸಿ ದುರಸ್ತಿಗೆ ಎಷ್ಟು ಖರ್ಚಾಗುತ್ತದೆ ಎಂದೆಲ್ಲ ವಿಚಾರಿಸಿದ್ದಾರೆ. ಅದನ್ನು ದುರಸ್ತಿ ಮಾಡಿಸಿ ಹೊಸದಾಗಿ ಬಣ್ಣ ಬಳಿಸಿದ್ದಾರೆ. ಒಟ್ಟು 2.20 ಲಕ್ಷ ಕಿಮೀ ಮಾತ್ರ ಓಡಿದ್ದು, ಇನ್ನೂ 60 ಸಾವಿರ ಕಿಮೀವರೆಗೆ ಓಡಿಸ ಬಹುದು. ಹೀಗಾಗಿ ಕಳೆದ ಹಲವು ತಿಂಗಳಿಂದ ಈ ಕಾರನ್ನು ಸಿಇಒ ಬಳಸುತ್ತಿದ್ದಾರೆ. ಈಚೆಗೆ
ಜಿಲ್ಲೆಗೆ ಬಂದಿದ್ದ ಆರ್ಡಿಪಿಆರ್ ಅಪರ ಮುಖ್ಯ ಕಾರ್ಯದರ್ಶಿ ಉಮಾ ಮಹಾದೇವನ್ ಕೂಡಾ ಈ ಕಾರಿನಲ್ಲಿ ಸಂಚಾರ ಮಾಡಿ ಖುಷಿ ಪಟ್ಟಿದ್ದರು. ಜತೆಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಶಿವಯೋಗಿ ಕಳಸದ ಕೂಡ ಈ ಅಂಬಾಸಿಡರ್ ವಾಹನದಲ್ಲಿ ಸಂಚರಿಸಿ ಸಂಭ್ರಮಿಸಿದ್ದರು.
ಮಾರುಕಟ್ಟೆಗೆ ಎಷ್ಟೇ ಹೊಸ ಮಾದರಿಯ ಕಾರು ಬಂದರೂ ಈ ಹಳೆಯ ಅಂಬಾಸಿಡರ್ ಕಾರಿನ ಓಡಾಟ ಅತ್ಯಂತ ಆರಾಮದಾಯಕ ಹಾಗೂ ಸುರಕ್ಷಿತ. ಅಪಘಾತ ಸಂಭವಿಸಿ ಕನಿಷ್ಟ 2ರಿಂದ 3 ಪಲ್ಟಿ ಆದರೂ ಒಳಗೆ ಇದ್ದವರಿಗೆ ಏನೂ ಆಗಲ್ಲ. ಆದರೆ, ಮೈಲೇಜ್ ವಿಷಯದಲ್ಲಿ ಸ್ವಲ್ಪ ದುಬಾರಿಯಾಗುತ್ತದೆ. ಹೀಗಾಗಿ ನಮ್ಮ ಸಾಹೇಬರು ಸ್ಥಳೀಯವಾಗಿ ಮಾತ್ರ ಇದನ್ನು ಬಳಸುತ್ತಾರೆ.
ಪ್ರಕಾಶ ಗುಳೇದಗುಡ್ಡ (ತೊನಶ್ಯಾಳ), ಬಾಗಲಕೋಟೆ ಜಿಪಂ ಸಿಇಒ ಕಾರು ಚಾಲಕ