Advertisement

ಬಾಗಲಕೋಟೆ: ದೇಶಿ ಪೈಲ್ವಾನರಿಗೆ ಬೇಕಿದೆ ನೆರವಿನ ಗ್ಯಾರಂಟಿ

05:17 PM Jan 18, 2024 | Team Udayavani |

ಉದಯವಾಣಿ ಸಮಾಚಾರ
ಬಾಗಲಕೋಟೆ: ಮೈಸೂರು ರಾಜರು, ಜಮಖಂಡಿಯ ಪಟವರ್ಧನ ಮಹಾರಾಜರು, ಮುಧೋಳದ ಘೋರ್ಪಡೆ, ವಿಜಯಪುರದ
ಆದಿಲ್‌ಶಾಹಿಗಳು ಸೇರಿದಂತೆ ನಾಡಿನ ಹಲವಾರು ಸಂಸ್ಥಾನಗಳ ಮಹಾರಾಜರು ಅತ್ಯಂತ ರಾಜಮರ್ಯಾದೆಯಿಂದ ಕಾಣುತ್ತಿದ್ದ ಶಕ್ತಿ ಪ್ರದರ್ಶನ ಸಾಹಸಿಗರು ವಿಶ್ವ ದಾಖಲೆ ಮಾಡಲು ತುದಿಗಾಲಲ್ಲಿದ್ದಾರೆ. ಆದರೆ, ಅವರಿಗೆ ಸರ್ಕಾರದ ಸೂಕ್ತ ನೆರವಿನ ಸಹಕಾರ ಸಿಗುತ್ತಿಲ್ಲ ಎಂಬ ಕೊರಗು ಕೇಳಿ ಬರುತ್ತಿದೆ.

Advertisement

ಇಡೀ ದೇಶದಲ್ಲಿ ಭಾರ ಎತ್ತುವ ಕ್ರೀಡೆ ಇಂದಿಗೂ ಜೀವಂತವಾಗಿರುವುದು ಉತ್ತರ ಕರ್ನಾಟಕದಲ್ಲಿ ಮಾತ್ರ. ಅದರಲ್ಲೂ ವಿಜಯಪುರ, ಬಾಗಲಕೋಟೆ, ಬೆಳಗಾವಿ ಜಿಲ್ಲೆಗಳಲ್ಲಿ ಸಾಧಕ ಸಾಹಿಸಿಗರಿದ್ದಾರೆ. ಇನ್ನೂ ಹಲವೆಡೆ ಇದ್ದಾರಾದರೂ ಅವರು 100
ಕೆಜಿಗಿಂತ ಹೆಚ್ಚಿನ ಭಾರ ಎತ್ತಿ ಸಾಧನೆ ಮಾಡಿದವರಲ್ಲ. ಈವರೆಗೆ ಅತಿ ಹೆಚ್ಚು ಭಾರ ಎತ್ತಿ, ವಿಶ್ವ ದಾಖಲೆ ಮಾಡಿದ ಕೀರ್ತಿ (215 ಕೆಜಿ) ವೇಲ್ಸನ್‌ ದೇಶದ ಮಾರ್ಕ್‌ ಜೀಸನ್‌ ಹೆಸರಿನಲ್ಲಿದೆ.

ರಾಜ್ಯದ ಸಾಹಸಿಗರು ಇವರು: ಈವರೆಗೆ ಇರುವ 215 ಕೆಜಿಯ ವಿಶ್ವ ದಾಖಲೆ ಮುರಿದು, ಹೊಸ ದಾಖಲೆ ಮಾಡಲು ನಮ್ಮ ಭಾಗದ ಪೈಲ್ವಾನರು ತಯಾರಿದ್ದಾರೆ. ಆದರೆ, ಅದಕ್ಕೆ ಸೂಕ್ತ ತರಬೇತಿಯ ಜತೆಗೆ ಅಗತ್ಯ ಸೌಲಭ್ಯ, ನೆರವು, ಸಹಕಾರ ಬೇಕಿದೆ. ವಿಜಯಪುರ ಜಿಲ್ಲೆಯ ನಾಗಠಾಣ ಗ್ರಾಮದ ಬೀರಪ್ಪ ಪೂಜಾರಿ ಎಂಬ ಪೈಲ್ವಾನ್‌, ಇಡೀ ದೇಶದಲ್ಲಿ ಅತಿ ಹೆಚ್ಚು ಭಾರ ಎತ್ತಿದ ದಾಖಲೆಯ ಸಾಹಸಿಗರ ಪಟ್ಟಿಯಲ್ಲಿ ಮೊದಲಿಗರಾಗಿದ್ದಾರೆ. ಈ ಸಾಹಸಿ ಪೈಲ್ವಾನ್‌ ಈವರೆಗೆ 208 ಕೆಜಿ ಭಾರ ಎತ್ತಿ ಸಾಧನೆ
ಮೆರೆದಿದ್ದಾರೆ. ಗುನ್ನಾಪುರದ ಶಿವಲಿಂಗ ಶಿರೂರ (195 ಕೆಜಿ), ಯಡ್ರಾಮಿಯ ಕರೆಪ್ಪ ಹೊಸಮನಿ (190 ಕೆಜಿ), ಹಳ್ಳೂರಿನ ಚಂದ್ರಶೇಖರ ಯಾಳವಾರ (180 ಕೆಜಿ) ಅತಿ ಹೆಚ್ಚು ಭಾರದ ಗುಂಡು ಎತ್ತಿದ್ದಾರೆ.

ರಾಜ ಮರ್ಯಾದೆ ಇತ್ತು: ಗುಂಡು ಕಲ್ಲು ಎತ್ತಿ ಸಾಹಸ ಮೆರೆಯುವ ಸಾಹಸಿಗರಿಗೆ ಹಿಂದಿನ ಸಂಸ್ಥಾನಗಳ ರಾಜ, ಮಹಾರಾಜರು ರಾಜಮರ್ಯಾದೆ ಕೊಡುತ್ತಿದ್ದರು. ಶಕ್ತಿ ಪ್ರದರ್ಶನ ಕ್ರೀಡೆಗಳಾದ ಕುಸ್ತಿ, ಕಬಡ್ಡಿ, ಕತ್ತಿವರಸೆ, ಸಂಗ್ರಾಮ ಕಲ್ಲು, ಕಲ್ಲಿನ ಗುಂಡು ಎತ್ತುವ ಪೈಲ್ವಾನರಿಗೆ ರಾಜಾಶ್ರಯ ಕಲ್ಪಿಸಿ, ತಮ್ಮ ಸೇನೆಯಲ್ಲಿ ಹುದ್ದೆ ನೀಡಿ, ಸೈನಿಕರ ಶಕ್ತಿ ಹೆಚ್ಚಿಸಿಕೊಳ್ಳುತಿದ್ದರು. ತಮ್ಮ ಸಾಮ್ರಾಜ್ಯದ ವರ್ಚಸ್ಸನ್ನೂ ಇಮ್ಮಡಿಗೊಳಿಸುತ್ತಿದ್ದರು.

ಆದರೆ ಇತ್ತೀಚಿನ ದಿನಗಳಲ್ಲಿ ಪಾಶ್ಚಾತ್ಯರ ಪ್ರಭಾವದಿಂದ ದೇಶಿ ಕ್ರೀಡೆಗಳ ಬದಲು ಕ್ರಿಕೆಟ್‌, ಫ‌ುಟ್ಬಾಲ್‌ನಂಥ ವಿದೇಶಿ ಕ್ರೀಡೆಗಳತ್ತ ಯುವಕರು ವಾಲುತ್ತಿದ್ದಾರೆ. ಇಂಥ ಹೈಬ್ರಿàಡ್‌ ಕ್ರೀಡೆಗಳಿಗೆ ಧಾರಾಳವಾಗಿ ನೆರವು ನೀಡುವ ಸರ್ಕಾರ, ಜವಾರಿ ಕ್ರೀಡೆಗಳನ್ನು ಕಡೆಗಣಿಸುತ್ತಿರುವ ದುರಂತದ ಸಂಗತಿ ಎನ್ನುತ್ತಾರೆ ಸಾವಳಗಿಯ ಪೈಲ್ವಾನ್‌ ರವಿ ಜಾಧವ.

Advertisement

ವಿಶ್ವ ದಾಖಲೆಗೆ ಸಜ್ಜು
ಸದ್ಯ ವೇಲ್ಸನ್‌ ಮಾರ್ಕ್‌ ಜೀಸನ್‌ ಎಂಬ ಪೈಲ್ವಾನ 215 ಕೆಜಿ ತೂಕದ ಗುಂಡು ಎತ್ತಿ ವಿಶ್ವ ದಾಖಲೆ ಮಾಡಿದ್ದಾನೆ. ದುರ್ದೈವವೆಂದರೆ ಮಾಕ್‌ ಜೀಸನ್‌ ವಿಶ್ವದಾಖಲೆಯ ಸಮೀಪದಲ್ಲಿ ನಮ್ಮ ಕರ್ನಾಟಕದ ಹಲವು ಜನ ಪೈಲ್ವಾನರಿದ್ದಾರೆ ಎಂಬುದನ್ನು ಸರ್ಕಾರ ಮರೆತಿದೆ.

ವಿಶ್ವದಾಖಲೆಯ ಸಮೀಪದವರಲ್ಲಿ ಪ್ರಮುಖರಲ್ಲಿ ಸದ್ಯ 207 ಕೆಜಿಯ ಗುಂಡು ಎತ್ತುವ ವಿಜಯಪುರ ಜಿಲ್ಲೆಯ ನಾಗಠಾಣದ ಬೀರಪ್ಪ ಪೂಜಾರಿ, ಆ ಭಾಗದಲ್ಲಿ ಬಲಭೀಮ ಎಂದೇ ಕರೆಯಲಾಗುತ್ತಿದೆ. ಅವರನ್ನು ಸರ್ಕಾರ ಗುರುತಿಸಿ ಸಹಾಯ ಹಸ್ತ ನೀಡಿ ಸೂಕ್ತ ತರಬೇತಿ ನೀಡಿದರೆ ವಿಶ್ವದಾಖಲೆಯಲ್ಲಿ ಕರುನಾಡು ಅಷ್ಟೇ ಅಲ್ಲ, ಭಾರತದ ಧ್ವಜ ಹಾರಿಸುವ ತಾಕತ್ತು ಅವರಲ್ಲಿದೆ.
ಸರ್ಕಾರದಿಂದ ಉದಾಸೀನಕ್ಕೊಳಗಾದ ದೇಶೀಯ ಕ್ರೀಡೆಗಳಲ್ಲಿ ಗುಂಡು ಕಲ್ಲು ಎತ್ತುವ ಸ್ಪರ್ಧೆ ಕೂಡ ಒಂದು. ಈ ಸ್ಪರ್ಧೆಯಲ್ಲಿ ಹಲವಾರು ಜನ ತಮ್ಮ ಶಕ್ತಿ ಪ್ರದರ್ಶನದ ಮೂಲಕ ರಾಜ್ಯದ ಗಮನ ಸೆಳೆದಿದ್ದಾರೆ. ಕಸರತ್ತೇ ಇಲ್ಲದ ಕಮರ್ಷಿಯಲ್‌ ಕ್ರೀಡೆಗಳಿಗೆ ಒತ್ತು ಕೊಡುವ ಬದಲು ಕಸುವಿನ, ಕಸರತ್ತಿನ, ಗತ್ತಿನ ದೇಶೀಯ ಕ್ರೀಡೆಗಳಿಗೆ ಒತ್ತು ಕೊಟ್ಟರೆ ನಮ್ಮ ನಾಡಿನ ಶಕ್ತಿವಂತ ಪೈಲ್ವಾನರು ಬೆಳಕಿಗೆ ಬರುತ್ತಾರೆ ಎಂಬುದು ಹಲವರ ಒತ್ತಾಯ.

ಇತ್ತೀಚಿನ ದಿನಗಳಲ್ಲಿ ದೇಶಿ ಕ್ರೀಡೆಗಳನ್ನು ಯುವಕರು ಮರೆಯುತ್ತಿದ್ದಾರೆ. ಸರ್ಕಾರದಿಂದ ಭಾರ ಎತ್ತುವ ಪೈಲ್ವಾನರಿಗೆ ಕರ್ನಾಟಕ ಕ್ರೀಡಾ ರತ್ನ ಹೊರತುಪಡಿಸಿ ಯಾವುದೇ ಪ್ರಶಸ್ತಿಗಳಿಲ್ಲ. ಮಾಜಿ ಪೈಲ್ವಾನರಿಗೆ ಸರ್ಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮಾಸಾಶನ ನೀಡಬೇಕು. ಗುಂಡು ಎತ್ತುವ ಸಾಹಸಿಗರಿಗೆ ಅಗತ್ಯ ಸಹಕಾರ ನೀಡಬೇಕು.
*ರವಿ ಜಾಧವ, ಮಾಜಿ ಪೈಲ್ವಾನ್‌

*ಶ್ರೀಶೈಲ ಕೆ. ಬಿರಾದಾರ

Advertisement

Udayavani is now on Telegram. Click here to join our channel and stay updated with the latest news.

Next