ಶ್ರೀಶೈಲ ಕೆ. ಬಿರಾದಾರ
ಬಾಗಲಕೋಟೆ: ಮೂರು ನದಿಗಳ ಭೀಕರ ಪ್ರವಾಹಕ್ಕೆ ತುತ್ತಾಗಿರುವ ಸಂತ್ರಸ್ತರಿಗೆ, ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ನಿಯಮದಡಿ ನೀಡುವ ಪರಿಹಾರಧನ ಬಹಿಷ್ಕರಿಸಲು ಜಿಲ್ಲೆಯ ಸಂತ್ರಸ್ತ ರೈತರು ನಿರ್ಧರಿಸಿದ್ದಾರೆ.
ರಾಷ್ಟ್ರೀಯ ವಿಪತ್ತು ಸ್ಪಂದನೆ ಹಾಗೂ ರಾಜ್ಯ ವಿಪತ್ತು ಸ್ಪಂದನೆ ಅಡಿಯಲ್ಲಿ ರಾಜ್ಯ ಸರ್ಕಾರ ಸಂತ್ರಸ್ತರಿಗೆ ಪರಿಹಾರ ನೀಡಲು ಮುಂದಾಗಿದೆ. ರೈತರು ಬೆಳೆದ ಬೆಳೆ ಸಂಪೂರ್ಣ ಹಾನಿಯಾಗಿದ್ದು, ಇದಕ್ಕೆ ಸೂಕ್ತ ಪರಿಹಾರ ಕೊಡುವುದಾಗಿ ಸರ್ಕಾರ ಹೇಳಿದ್ದರೂ ಎನ್‌ಡಿಆರ್‌ಎಫ್ ನಿಯಮಾವಳಿ ಪ್ರಕಾರವೇ ಪರಿಹಾರ ನೀಡಲು ಅವಕಾಶವಿದೆ. ಹೀಗಾಗಿ ಹೆಚ್ಚಿನ ಪರಿಹಾರ ಕೊಡದಿದ್ದರೆ ಯಾವುದೇ ಕಾರಣಕ್ಕೂ ಪರಿಹಾರ ಪಡೆಯದಿರಲು ರೈತರು ನಿರ್ಧರಿಸಿದ್ದಾರೆ.
ಪರಿಹಾರ ಸಾಕಾಗಲ್ಲ: ಎನ್‌ಡಿಆರ್‌ಎಫ್‌ನಡಿ ಹೆಕ್ಟೇರ್‌ವಾರು ಬೆಳೆ ಹಾನಿಗೆ ಪರಿಹಾರ ನೀಡುತ್ತಿದ್ದು, ಅದನ್ನು ಎಕರೆವಾರು ನೀಡಬೇಕು. ಮುಖ್ಯವಾಗಿ ಈಗಿರುವ ಎನ್‌ಡಿಆರ್‌ಎಫ್ ನಿಯಮ ಬದಲಿಸಿಯೇ ಪರಿಹಾರ ನೀಡಬೇಕೆಂಬುದು ಸಂತ್ರಸ್ತರ ಪ್ರಮುಖ ಒತ್ತಾಯವಾಗಿದೆ.
ಸಂಸದರು, ಶಾಸಕರು, ತಮ್ಮ ವೇತನ ಹೆಚ್ಚಿಸಿಕೊಳ್ಳಲು ಯಾವುದೇ ವಿರೋಧವಿಲ್ಲದೇ ಅಧಿವೇಶನದಲ್ಲಿ ಬಿಲ್ ಪಾಸ್ ಮಾಡುತ್ತಾರೆ. ಆದರೆ, ರೈತರ ವಿಷಯದಲ್ಲಿ ಏಕೆ ಗಂಭೀರತೆ ತಾಳುತ್ತಿಲ್ಲ. ಕೇಂದ್ರ ಇಲ್ಲವೇ ರಾಜ್ಯ ಸರ್ಕಾರ, ಕೂಡಲೇ ವಿಶೇಷ ಅಧಿವೇಶನದಲ್ಲಿ ನಿಯಮಗಳನ್ನು ತಿದ್ದುಪಡಿ ಮಾಡಿ ನೆರೆ ಸಂತ್ರಸ್ತ ರೈತರಿಗೆ ಹೆಚ್ಚಿನ ಪರಿಹಾರ ಕೊಟ್ಟರೆ ಮಾತ್ರ ರೈತರು ಬದುಕುತ್ತಾರೆ. ಇಲ್ಲದಿದ್ದರೆ ಪ್ರವಾಹದಿಂದ ನೆಲಸಮಗೊಂಡ ಬೆಳೆ ಕಿತ್ತು ಹೊರ ಹಾಕಲು ಸರ್ಕಾರ ಕೊಡುವ ಪರಿಹಾರಧನ ಸಾಕಾಗಲ್ಲ ಎಂದು ರೈತರು ಗೋಳಿಡುತ್ತಿದ್ದಾರೆ.
ಎನ್‌ಡಿಆರ್‌ಎಫ್ ಮಾರ್ಗಸೂಚಿ: ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದ ಬೆಳೆ ಹಾನಿಯಾದರೆ, ರೈತರಿಗೆ ಪರಿಹಾರ ನೀಡಲು ಎನ್‌ಡಿಆರ್‌ಎಫ್ ಮಾರ್ಗಸೂಚಿಗಳಿವೆ. ಪ್ರತಿ ಹೆಕ್ಟೇರ್‌ಗೆ ಬೆಳೆವಾರು ಪರಿಹಾರ ನಿಗದಿ ಮಾಡಿದೆ. ಒಂದು ಹೆಕ್ಟೇರ್ ಕಬ್ಬು (ಎರಡೂವರೆ ಎಕರೆ) ಹಾನಿಯಾಗಿದ್ದರೆ ಅದಕ್ಕೆ ನಿಯಮದ ಪ್ರಕಾರ 13,850 ರೂ. ಪರಿಹಾರ ಬರುತ್ತದೆ. ಅದೇ ಒಂದು ಹೆಕ್ಟೇರ್ ಕಬ್ಬು ಬೆಳೆಯಲು ಸುಮಾರು 60ರಿಂದ 70 ಸಾವಿರ ಖರ್ಚು ಬಂದಿರುತ್ತದೆ. ಅದರಿಂದ 95ರಿಂದ 110 ಟನ್ ಕಬ್ಬು ಬೆಳೆಯುತ್ತಿದ್ದು, ಖರ್ಚು ತೆಗೆದರೂ, ಕನಿಷ್ಠ ಒಂದು ಹೆಕ್ಟೇರ್‌ನಿಂದ ಅಂದಾಜು 1.30 ಲಕ್ಷವರೆಗೆ ರೈತರಿಗೆ ಉಳಿತಾಯವಾಗುತ್ತದೆ. ಹೀಗಾಗಿ ಸರ್ಕಾರ ಪ್ರತಿ ಎಕರೆ ಕಬ್ಬಿಗೆ 1ಲಕ್ಷ ಪರಿಹಾರ ನೀಡಬೇಕು ಎಂಬುದು ರೈತರ ಒತ್ತಾಯ.