ಬಾಗಲಕೋಟೆ: ಜಿಲ್ಲೆಯಲ್ಲಿಯೇ ಕೋವಿಡ್ ವೈರಸ್ ಪತ್ತೆಗಾಗಿ ನಗರದ ಖಾಸಗಿ ವೈದ್ಯರೊಬ್ಬರು ತಮ್ಮ ಆಸ್ಪತ್ರೆಯ ಪಿಸಿಆರ್ ಯಂತ್ರವನ್ನು ಜಿಲ್ಲಾಡಳಿತಕ್ಕೆ ತಾತ್ಕಾಲಿಕವಾಗಿ ದೇಣಿಗೆ ನೀಡಿದ್ದಾರೆ.
ನಗರದ ಮಿಸ್ಕಿನ್ ಲ್ಯಾಬ್‌ನ ಮುಖ್ಯಸ್ಥ ಡಾ| ಅರುಣ ಮಿಷ್ಕಿನ್ ಅವರು ತಮ್ಮ ಲ್ಯಾಬ್‌ನಲ್ಲಿದ್ದ 7.50 ಲಕ್ಷ ಮೊತ್ತದ ಪಿಸಿಆರ್ (ಪ್ರಾಥಮಿಕ ರೋಗ ಪತ್ತೆ ಯಂತ್ರ) ಮಸೀನ್ ಅನ್ನು ಡಿಸಿಎಂ ಗೋವಿಂದ ಕಾರಜೋಳ ಸಮ್ಮುಖದಲ್ಲಿ ರವಿವಾರ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ| ಪ್ರಕಾಶ ಬಿರಾದಾರ ಅವರಿಗೆ ಹಸ್ತಾಂತರಿಸಿದರು.
ಕೋವಿಡ್ ವೈರಸ್ ಪತ್ತೆ ಮಾಡಲು ಶಂಕಿತರ ಗಂಟಲು ದ್ರವ ಪರೀಕ್ಷೆಗೆ ಈ ಯಂತ್ರ ಬಳಸಲಾಗುತ್ತದೆ. ಈ ಪಿಸಿಆರ್ ಯಂತ್ರವನ್ನು ಟಿಬಿ ರೋಗಿಗಳಿಗಾಗಿ ಉಪಯೋಗಿಸಲಾಗುತ್ತಿತ್ತು. ಸಧ್ಯ ಇದನ್ನು ಜಿಲ್ಲಾ ಆಸ್ಪತ್ರೆಯಲ್ಲಿ ಶಂಕಿತರ ಗಂಟಲು ದ್ರವ ಮಾದರಿ ಪರೀಕ್ಷೆ ಮಾಡಿ, ನಗೆಟಿವ್ ಬಂದರೆ ಮುಂದಿನ ಪರೀಕ್ಷೆ ಮಾಡುವುದಿಲ್ಲ. ಒಂದು ವೇಳೆ ಸ್ಥಳೀಯ ಪರೀಕ್ಷೆಯಲ್ಲಿ ಪಾಜಿಟಿವ್ ಕಂಡು ಬಂದರೆ, ಮತ್ತೂಮ್ಮೆ ಪರೀಕ್ಷೆಗೆ ಶಂಕಿತರ ಗಂಟಲು ದ್ರವ ಬೆಂಗಳೂರಿಗೆ ಕಳುಹಿಸಲಾಗುತ್ತದೆ.
ಪ್ರತಿದಿನ ಜಿಲ್ಲಾ ಆರೋಗ್ಯ ಇಲಾಖೆಯ ನಾಲ್ಕು ವಾಹನಗಳು, ಶಂಕಿತರ ಗಂಟಲು ದ್ರವ ಮಾದರಿಯನ್ನು ವಾಹನದಲ್ಲಿ ತೆಗೆದುಕೊಂಡು ಬೆಂಗಳೂರಿಗೆ ಹೋಗುತ್ತಿದ್ದವು. ಈ ಯಂತ್ರವನ್ನು ತಾತ್ಕಾಲಿಕ ದೇಣಿಗೆ ನೀಡಿದ್ದರಿಂದ ಸ್ಥಳೀಯವಾಗಿಯೇ ತಪಾಸಣೆಗೆ ಅನುಕೂಲವಾಗಲಿದೆ ಎಂದು ಡಿಸಿಎಂ ಗೋವಿಂದ ಕಾರಜೋಳ ತಿಳಿಸಿದರು.
ತಾತ್ಕಾಲಿಕ ದೇಣಿಗೆ: ನಮ್ಮ ಲ್ಯಾಬ್‌ನಲ್ಲಿ ಟಿಬಿ ರೋಗ ಪತ್ತೆಗೆ ಈ ಯಂತ್ರ ಬಳಸುತ್ತಿದ್ದೇವು. ಸದ್ಯ ಕೋವಿಡ್ ವೈರಸ್ ಎಲ್ಲೆಡೆ ಹಬ್ಬುತ್ತಿದ್ದು, ಸ್ಥಳೀಯವಾಗಿ ರೋಗ ಪತ್ತೆಗೆ ಲ್ಯಾಬ್ ಅಥವಾ ಯಂತ್ರವಿಲ್ಲ. ಇದು ರೋಗಿಗಳ ತಪಾಸಣೆಗೆ ಸಹಕಾರಿಯಾಗಲಿದೆ. ಕೊರೊನಾ ಭೀತಿ ದಿನಗಳು ಮುಗಿಯುವವರೆಗೂ ಈ ಯಂತ್ರವನ್ನು ಜಿಲ್ಲಾಡಳಿತಕ್ಕೆ ನೀಡಿರುವುದಾಗಿ ಡಾ| ಅರುಣ ಮಿಸ್ಕಿನ್ ಉದಯವಾಣಿಗೆ ತಿಳಿಸಿದರು.
ಕಿಟ್ ಬಂದ ಬಳಿಕ ಪರೀಕ್ಷೆ: ಖಾಸಗಿ ವೈದ್ಯರು ನೀಡಿರುವ ಪಿಸಿಆರ್ ಯಂತ್ರದಿಂದ ಶಂಕಿತ ರೋಗಿಯ ಗಂಟಲು ದ್ರವ ಸ್ಥಳೀಯವಾಗಿ ತಪಾಸಣೆ ಮಾಡಲು ಸಹಕಾರಿಯಾಗುತ್ತದೆ. ಆದರೆ, ಇದಕ್ಕೆ ಪ್ರತ್ಯೇಕ ಕಿಟ್‌ಗಳು ಬೇಕಾಗುತ್ತದೆ. ರಾಜ್ಯ ಸರ್ಕಾರ, ಎಲ್ಲ ಜಿಲ್ಲೆಗಳಿಗೂ ಕೋವಿಡ್ ರೋಗ ಪತ್ತೆಯ ಪ್ರತ್ಯೇಕ ಕಿಟ್ ಜಿಲ್ಲೆಗೆ ಕಳುಹಿಸಲಿದ್ದು, ಆ ಬಳಿಕ ಈ ಯಂತ್ರದ ಮೂಲಕ ಕೊರೊನಾ ಪರೀಕ್ಷೆ ನಡೆಸಲಾಗುವುದು ಎಂದು ಡಿಎಚ್‌ಒ ಡಾ| ಅನಂತ ದೇಸಾಯಿ ತಿಳಿಸಿದರು.