Advertisement

ಬಾಗಲಕೋಟೆ:ಬಾಕಿ ಕೊಡದ ಕಾರ್ಖಾನೆ ಆರಂಭಿಸಬೇಡಿ

04:56 PM Jul 25, 2023 | Team Udayavani |

ಬಾಗಲಕೋಟೆ: ಕಳೆದ ವರ್ಷ ರಾಜ್ಯ ಸರ್ಕಾರ ನಿಗದಿ ಮಾಡಿದ ಟನ್‌ಗೆ 150 ರೂ. ಹೆಚ್ಚುವರಿ ಹಣವನ್ನು ಕೂಡಲೇ ನೀಡಬೇಕು. ಕಬ್ಬಿನ ಬಾಕಿ ಕೂಡದ ಕಾರ್ಖಾನೆಗಳು, ಮುಂದಿನ ವರ್ಷದಿಂದ ಕಬ್ಬು ನುರಿಸುವುದನ್ನು ಆರಂಭಿಸಲು ಅವಕಾಶ ನೀಡಬಾರದು. ಇದಕ್ಕಾಗಿ ಪ್ರತ್ಯೇಕ ಕಾನೂನು ರೂಪಿಸಬೇಕು ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರ ಶಾಂತಕುಮಾರ ಒತ್ತಾಯಿಸಿದರು.

Advertisement

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿವರ್ಷ ನಿಗದಿಪಡಿಸಿದ ಕಬ್ಬು ದರವನ್ನು ಆಯಾ ವರ್ಷವೇ ಪಾವತಿಸಬೇಕು. ಬಾಕಿ ಉಳಿಸಿಕೊಳ್ಳುವ ಕಾರ್ಖಾನೆಗಳನ್ನು ಮುಂದಿನ ವರ್ಷದಿಂದ ಕಬ್ಬು ನುರಿಸಲು ಅನುಮತಿ ನೀಡಬಾರದು. ಆಗ ಮಾತ್ರ ರೈತರ ಬಾಕಿ ಹಣ ವಸೂಲಿಯಾಗಲು ಸಾಧ್ಯವಿದೆ ಎಂದರು. ಕಬ್ಬು ಬೆಳೆಗಾರ ರೈತರಿಗೆ ಸಕ್ಕರೆ ಕಾರ್ಖಾನೆಗಳು, ತೂಕದಲ್ಲಿ ಮೋಸ ಮಾಡುತ್ತಿವೆ ಎಂದು ಮೊದಲು ನಾವೇ ರಾಜ್ಯಾದ್ಯಂತ ಹೋರಾಟ ಆರಂಭಿಸಿದ್ದೇವು. ಆಗ ಸುಮಾರು 15 ಕಾರ್ಖಾನೆಗಳ ಮೇಲೆ ದಾಳಿ ನಡೆಸಿ, ಪರಿಶೀಲನೆ ವರದಿ ಕೂಡ ಸಲ್ಲಿಕೆಯಾಗಿತ್ತು.

ಈಗ ಮತ್ತೆ ಆ ಧ್ವನಿ ಕೇಳಿ ಬರುತ್ತಿದೆ. ಅಲ್ಲದೇ ಸಕ್ಕರೆ ಸಚಿವರು ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆ ಖಾತೆ ಸಚಿವರು ಒಬ್ಬರೇ ಇದ್ದಾರೆ. ಹೀಗಾಗಿ ರಾಜ್ಯದ ಎಲ್ಲ ಸಕ್ಕರೆ ಕಾರ್ಖಾನೆಗಳ ಎದುರು, ಸರ್ಕಾರದಿಂದಲೇ ತೂಕದ ಯಂತ್ರ ಅಳವಡಿಸಬೇಕು. ಅಲ್ಲಿಂದಲೇ ತೂಕ ಮಾಡಿ, ಕಾರ್ಖಾನೆಗೆ ಕಬ್ಬು ಪೂರೈಸುವಂತಾಗಬೇಕು ಎಂದು ಆಗ್ರಹಿಸಿದರು.

ರೈತರಿಗೆ ಸಂಕಷ್ಟ ಕಾಲದಲ್ಲಿ ಬಿತ್ತನೆ ಬೀಜ, ಗೊಬ್ಬರಕ್ಕೆ ಅನುಕೂಲ ಆಗುತ್ತಿದ್ದ ಕೃಷಿ ಸಮ್ಮಾನ್‌ ಯೋಜನೆಯ 4 ಸಾವಿರ ರೂ. ನೆರವು ನಿಲ್ಲಿಸಲಾಗಿದೆ. ಈ ಬಾರಿಯ ಬಜೆಟ್‌ನಲ್ಲಿ ಕೃಷಿ ಕ್ಷೇತ್ರಕ್ಕೆ 11 ಸಾವಿರ ಕೋಟಿ ಕಡಿತ ಮಾಡಲಾಗಿದೆ. ರಾಜ್ಯ ಸರ್ಕಾರಕ್ಕೆ ರೈತರ ಬಗ್ಗೆ ಕಾಳಜಿ ಇದ್ದರೆ ಅನ್ನ ಭಾಗ್ಯ ಯೋಜನೆಗೆ ರಾಜ್ಯದ ರೈತರಿಂದ ಭತ್ತ, ರಾಗಿ, ಜೋಳ, ಸಿರಿಧಾನ್ಯ ಖರೀದಿಸಿ ಪಡಿತರ ವ್ಯವಸ್ಥೆಯಡಿ ವಿತರಿಸಬೇಕು ಎಂದು ಒತ್ತಾಯಿಸಿದರು.

ಸಂಗಮದಲ್ಲಿ ಕಾರ್ಯಾಗಾರ: ಕೂಡಲಸಂಗ ಮದಲ್ಲಿ ರಾಜ್ಯಮಟ್ಟದ ರೈತ ಮುಖಂಡರ ಎರಡು ದಿನಗಳ ಕಾರ್ಯಗಾರವನ್ನು ಜು.25 ಮತ್ತು 26ರಂದು ಹಮ್ಮಿಕೊಳ್ಳಲಾಗಿದೆ. ರೈತರ ಸಮಸ್ಯೆಗಳ ಬಗ್ಗೆ ಚರ್ಚಿ ರೈತ ಸಂಘಟನೆ ಪ್ರಬಲವಾಗಿ ಬೆಳೆಸುವ ಬಗ್ಗೆ ಹಾಗೂ ಮುಂದಿನ ಹೋರಾಟ ರೂಪರೇಷೆಗಳ ಬಗ್ಗೆ ನಿರ್ಧರಿಸಲಾಗುವುದು ಎಂದು ತಿಳಿಸಿದರು.

Advertisement

ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾ ಕೃತ್ಯಗಳು ಪ್ರಜಾಪ್ರಭುತ್ವದ ಬುನಾದಿಯನ್ನೇ ಸರ್ವನಾಶ ಮಾಡಬಹುದಾದ ಕೃತ್ಯಗಳಾಗಿವೆ. ಕೇಂದ್ರ ಹಾಗೂ ಅಲ್ಲಿನ ರಾಜ್ಯ ಸರ್ಕಾರ ಕಠಿಣ ಕ್ರಮ ಕೈಗೊಳ್ಳುವಲ್ಲಿ ಮಣಿಪುರದಲ್ಲಿ ಹಲವಾರು ಸಾವು ನೋವು ಆಗುತ್ತಿವೆ. ವಿಫಲವಾಗಿವೆ. ಪೊಲೀಸರ ಲಾಟಿ ಏಟು ಹಾಗೂ ಅರೆ ಸೇನಾ ಪಡೆಗಳ ಬಂದುಕಿನಿಂದ ಶಾಂತಿ ನೆಲೆಸಲು ಸಾಧ್ಯವಿಲ್ಲ.

ಜಾತಿ- ಧರ್ಮ ಮೆಟ್ಟಿನಿಂತು. ಶಾಂತಿ-ಸಹನೆ ಹಾಗೂ ಪ್ರೀತಿಯಿಂದ ಮಾತ್ರ ಉತ್ತಮ ಸಮಾಜ ಕಟ್ಟಲು ಸಾಧ್ಯ . ಪ್ರಸ್ತುತ ಮಣಿಪುರದ ಗಲಭೆ ನಿಲ್ಲಿಸಲು ಸಾಧ್ಯ. ಜಾಗತಿಕ ಮಟ್ಟದಲ್ಲಿ ಈ ಘಟನೆಯಿಂದ ಭಾರತಕೆ ಅವಮಾನವಾಗುತ್ತಿದೆ ಎಂದು ವಿಷಾದಿಸಿದರು.

ಸೇನೆಯಲ್ಲಿ ಕಾರ್ಯನಿರ್ವಹಿಸಿರುವ ಸೈನಿಕನ ಪತ್ನಿಗೆ ಈ ರೀತಿ ಆದರೆ ಸೇನೆಯಲ್ಲಿ ಕೆಲಸ ಮಾಡುವ ಸೈನಿಕರ ಆತ್ಮಸ್ಥೈರ್ಯ ಕುಗ್ಗಲಿದೆ. ಎಲ್ಲ ರಾಜಕೀಯ ಪಕ್ಷಗಳು ತಮ್ಮ ಪ್ರತಿಷ್ಠೆ ಬದಿಗೊತ್ತಿ, ಅಲ್ಲಿ ಶಾಂತಿ- ಸಹಬಾಳ್ವೆ ನೆಲೆಸಲು ಮುಂದಾಗಬೇಕು. ಘಟನೆಗೆ ಕಾರಣಿಭೂತರಾದ ಪಾತಕಿಗಳಿಗೆ ಕಾನೂನು ಅಡಿಯಲ್ಲಿ ಶಿಕ್ಷೆ ನೀಡಲು ಮುಂದಾಗಬೇಕು ಎಂದು ಒತ್ತಾಯಿಸಿದರು.

ರಾಜ್ಯ ಉಪಾಧ್ಯಕ್ಷ ಸುರೇಶ ಪಾಟೀಲ, ಸಂಘಟನಾ ಕಾರ್ಯದರ್ಶಿ ಹತ್ತಳ್ಳಿ ದೇವರಾಜ್‌, ಧಾರವಾಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪರಶುರಾಮ್‌ ಎತ್ತಿನಗುಡ್ಡ, ಬಾಗಲಕೋಟೆ ಜಿಲ್ಲಾ ಉಪಾಧ್ಯಕ್ಷ ಕಲ್ಲಪ್ಪ ಬಿರಾದಾರ, ರೇವಣ್ಣಯ್ಯ ಹಿರೇಮಠ, ಬೆಳಗಾವಿ ಜಿಲ್ಲಾ ಉಪಾಧ್ಯಕ್ಷ ಬಾಪುಗೌಡ ಪಾಟೀಲ್‌ ಮುಂತಾದವರು ಉಪಸ್ಥಿತರಿದ್ದರು.

ಮಣಿಪುರ ಘಟನೆಯಿಂದ ಜಾಗತಿಕ ಮಟ್ಟದಲ್ಲಿ ಭಾರತದ ಮಾನ ಹರಾಜು ಆಗುತ್ತಿದೆ. ಈ ವಿಷದಯಲ್ಲಿ ರಾಜಕೀಯ ಪಕ್ಷಗಳು, ತಮ್ಮ ಪ್ರತಿಷ್ಠೆ ಬಿಟ್ಟು, ಮಣಿಪುರದಲ್ಲಿ ಶಾಂತಿ ನೆಲೆಸಲು ಕ್ರಮ ಕೈಗೊಳ್ಳಬೇಕು. ಕಾರ್ಗಿಲ್‌ ಯುದ್ಧದಲ್ಲಿ ಭಾಗಿಯಾದ ಸೈನಿಕ ಪತ್ನಿಗೇ ಇಂತಹ ಪರಿಸ್ಥಿತಿ ಬಂದರೆ, ಸೈನಿಕರ ಆತ್ಮಸ್ಥೈರ್ಯ ಏನಾಗಬೇಕು ಎಂಬುದು ಚಿಂತಿಸಬೇಕು. ಘಟನೆಗೆ ಕಾರಣರಾದವರಿಗೆ ಕಠಿಣ ಶಿಕ್ಷೆ ವಿಧಿಸಬೇಕು.
ಕುರುಬೂರು ಶಾಂತಕುಮಾರ,
ರಾಜ್ಯಾಧ್ಯಕ್ಷ, ಕಬ್ಬು ಬೆಳೆಗಾರರ ಸಂಘ

Advertisement

Udayavani is now on Telegram. Click here to join our channel and stay updated with the latest news.

Next