Advertisement
ಬಾಗಲಕೋಟೆ: ಇದು ಕೃಷ್ಣೆಯ ಒಡಲು. ಲಕ್ಷಾಂತರ ರೈತರ ಆರ್ಥಿಕ ಬದುಕು ಹಸನಾಗಿಸಿದ ಖ್ಯಾತಿ ಇದೆ. ಆದರೆ ಅಷ್ಟೇ ಜನರು ಬದುಕಿಗಾಗಿ ಬವಣೆ ಪಟ್ಟ ಪ್ರಸಂಗಗಳೂ ಇವೆ. ಪ್ರತಿವರ್ಷವೂ ಹಿನ್ನೀರು ಬಂದು ಸರಿದಾಗೊಮ್ಮೆ ಆ ಒಡಲು ನೋಡಿ ಜನರು ಕಣ್ಣೀರು ಹಾಕುತ್ತಾರೆ. ಇದಕ್ಕೆಲ್ಲ ಕಾರಣ ಹಲವು. ಹೌದು. ಹಿನ್ನೀರು ಬಂದು ಸಂತ್ರಸ್ತರ ಬದುಕಿಗಷ್ಟೇ ತೊಂದರೆಯಾಗಿಲ್ಲ. ಸಾವಿರಾರು ಜನರಿಗೆ ಆಶ್ರಯವಾಗಿದ್ದ ಗಿಡ-ಮರಗಳು, ದೇವಸ್ಥಾನಗಳು, ಶಾಲೆಗಳೂ ಮುಳುಗಿವೆ.
ಜಿಲ್ಲೆಯನ್ನು ಇಂದಿಗೂ ಮುಳುಗಡೆ ಜಿಲ್ಲೆ, ತ್ಯಾಗಿಗಳ ಜಿಲ್ಲೆ ಎಂದೇ ಕರೆಯಲಾಗುತ್ತದೆ. ಕಾರಣ ಅಖಂಡ ವಿಜಯಪುರ ಜಿಲ್ಲೆಯ 192 ಹಳ್ಳಿಗಳು ಕೃಷ್ಣೆಯ ಹಿನ್ನೀರ ಒಡಲಿನಲ್ಲಿ ಮುಳುಗಿವೆ. ಅದಕ್ಕಾಗಿ 136 ಪುನರ್‌ವಸತಿ ಕೇಂದ್ರ ಸ್ಥಾಪಿಸಿ, ಪುನರ್‌ವಸತಿ, ಪುನರ್ ನಿರ್ಮಾಣ ಕಾರ್ಯ ನಡೆದಿದೆಯಾದರೂ ಅದೂ ಪೂರ್ಣ ಪ್ರಮಾಣದಲ್ಲಾಗಿಲ್ಲ.
Related Articles
Advertisement
ಬೀಳಗಿಯಲ್ಲಿ ಭಾವಾನುಭವಗಳೇ ಹೆಚ್ಚು:ಕೃಷ್ಣೆ-ಘಟಪ್ರಭೆ ಒಡಲಿನಲ್ಲಿ ಅತಿ ಹೆಚ್ಚು ಮುಳುಗಡೆ ಹಳ್ಳಿಗಳು ಬರುತ್ತವೆ. ಅದರಲ್ಲೂ ಬಾಗಲಕೋಟೆಯ ಕಲಾದಗಿಯಿಂದ ಬೀಳಗಿ ತಾಲೂಕಿನ ಚಿಕ್ಕಸಂಗಮದವರೆಗೆ ಸುಮಾರು ಸುಮಾರು 56ಕ್ಕೂ ಹೆಚ್ಚು ಹಳ್ಳಿಗಳು ಮುಳುಗಡೆಯಾಗಿವೆ. ಆಲಮಟ್ಟಿ ಜಲಾಶಯ ನಿರ್ಮಾಣದಿಂದ ಅತಿ ಹೆಚ್ಚು ಹಳ್ಳಿಗಳನ್ನು ಕಳೆದುಕೊಂಡ ತಾಲೂಕುಗಳಲ್ಲಿ ಬೀಳಗಿ ಮೊದಲು. ಆಲಮಟ್ಟಿ ಜಲಾಶಯವನ್ನು ಈಗಿರುವ 519.60 ಮೀಟರ್‌ನಿಂದ 524.256 ಮೀಟರ್‌ಗೆ ಎತ್ತರಿಸಿದಾಗ ಈ ತಾಲೂಕಿನ ಮೂಲ ಹಳ್ಳಿಗಳಲ್ಲಿ 14 ಹಳ್ಳಿಗಳು ಮಾತ್ರ ಉಳಿಯಲಿವೆ. ಉಳಿದವುಗಳೆಲ್ಲ ಪುನರ್‌ವಸತಿ ಕೇಂದ್ರಗಳೇ. ಹೀಗಾಗಿ ಬೀಳಗಿ, ಬಾಗಲಕೋಟೆ, ಹುನಗುಂದ, ಜಮಖಂಡಿ ತಾಲೂಕಿನಲ್ಲಿ ಹಿನ್ನೀರ ಒಡಲಿನ ಭಾವಾನುಭವಗಳೇ ಹೆಚ್ಚು. ಒಡಲ ತುಂಬಾ ದೇವಾಲಯಗಳ ಭಕುತಿ:
ಹಿನ್ನೀರ ಪ್ರದೇಶ ವ್ಯಾಪ್ತಿಯ ಶಾಲೆ, ಮನೆಗಳು ಸಾವಿರಾರು ಮುಳುಗಿವೆ. ಅವುಗಳ ಬಗ್ಗೆ ಜನರಿಗೆ ಭಾವಾನುಭವ ಇದ್ದರೂ, ಅತಿ ಹೆಚ್ಚು ಮನಸ್ಸಿಗೆ ನೋವು ತರುವುದೇ ಇಲ್ಲಿನ ದೇವಾಲಯಗಳ ಭಕುತಿ. ಉತ್ತರ ಕರ್ನಾಟಕ, ಅದರಲ್ಲೂ ಜಿಲ್ಲೆಯ ಜನರಿಗೆ ದೇವಾಲಯ, ದೇವರ ಮೇಲೆ ಅತಿ ಹೆಚ್ಚು ಭಕ್ತಿ-ಭಾವ. ಇಲ್ಲಿನ ದೇವಾಲಯಗಳ ಜಾತ್ರೆ, ವಾರ್ಷಿಕೋತ್ಸವ, ಕಾರ್ತಿಕೋತ್ಸವ ಹೀಗೆ ಹಲವು ಸಂಭ್ರಮಗಳಲ್ಲಿ ಪ್ರತಿಯೊಂದು ಹಳ್ಳಿಯ ಜನ ಭಕ್ತಿ-ಭಾವದಿಂದ ಭಾಗವಹಿಸಿ ಸಂಭ್ರಮಿಸುತ್ತಿದ್ದರು. ಆ ಎಲ್ಲ ದೇವಾಲಯಗಳನ್ನು ಹೊಸ ಊರಲ್ಲಿ ಪುನರ್ ನಿರ್ಮಾಣ ಮಾಡಲಾಗಿದೆಯಾದರೂ ಮೂಲ ಹಳ್ಳಿಯ ಪಾದಗಟ್ಟಿಗೆ ಹೋಗಿ ದೇವರ ಗರ್ಭಗುಡಿಗೆ ಹಣೆಹಚ್ಚಿ ನಮಸ್ಕರಿಸಿದಾಗಲೇ ಅವರಿಗೆ ಒಂದು ರೀತಿಯ ಖುಷಿ, ನೆಮ್ಮದಿ. ಆದರೆ ಆ ಹಳೆಯ ಹಳ್ಳಿಗಳ ತುಂಬಾ ಪ್ರತಿವರ್ಷ ಸುಮಾರು 6ರಿಂದ 7 ತಿಂಗಳವರೆಗೂ ಕೃಷ್ಣೆಯ (ಆಲಮಟ್ಟಿ ಜಲಾಶಯ) ಒಡಲಿನ ಹಿನ್ನೀರು ಆವರಿಸಿಕೊಳ್ಳುತ್ತದೆ. ಆಗ ದೇವಾಲಯಗಳ ಕಳಸದವರೆಗೂ ನೀರು ಬಂದಿರುತ್ತದೆ. ಇದರಿಂದ ಆ ದೇವಾಲಯಗಳ ಪ್ರವೇಶಕ್ಕೆ ಅವಕಾಶವಿರಲ್ಲ. ಇನ್ನು ಬೀಳಗಿ ತಾಲೂಕಿನ ಬಾಡಗಿಯ ಭಕ್ಕೇಶ್ವರ ದೇವಾಲಯ ಎದುರು ಬೃಹತ್ ಗಂಟೆಯೊಂದಿದ್ದು, ಹಿನ್ನೀರಿನ ತೆರೆಗಳಿಗೆ ಆ ಗಂಟೆಯ ನೀನಾದ ತನ್ನಿಂದ ತಾನೆ ಕೇಳಿಸುತ್ತದೆ. ಇಂತಹ ಹಲವಾರು ಸುಂದರ ಕ್ಷಣಗಳನ್ನು ಹಿನ್ನೀರು ಆವರಿಸಿಕೊಂಡಾಗಲೊಮ್ಮೆ ಕಾಣಬಹುದು. ಆದರೆ ಅಂತಹ ಕ್ಷಣಗಳನ್ನು ಕಾಣುವ ಜನ, ಹಳೆಯ ನೆನಪು ಮೆಲಕು ಹಾಕಿ ಭಾವನೆಗಳಿಂದ ಕಣ್ಣೀರಾಗುತ್ತಾರೆ. ಶ್ರೀಶೈಲ ಕೆ. ಬಿರಾದಾರ