Advertisement

ಬೌಂಡರಿ ಬಾರಿಸಿ ಗೆಲುವಿನ ಗದ್ದಿಗೆ ಏರಿದ ಗೌಡರ

04:01 AM May 24, 2019 | Team Udayavani |

ಬಾಗಲಕೋಟೆ: ಬಾಗಲಕೋಟೆ ಲೋಕಸಭೆ ಕ್ಷೇತ್ರದ 17ನೇ ಸಂಸದರಾಗಿ ಬಿಜೆಪಿ ಹಾಲಿ ಸಂಸದ ಪರುತಗೌಡ ಚಂದನಗೌಡ ಗದ್ದಿಗೌಡರ ಆಯ್ಕೆಯಾಗಿದ್ದು,ಮೋದಿ ಅಲೆಯಲ್ಲಿ ಸತತ 4ನೇ ಬಾರಿಗೆ ಭರ್ಜರಿ ಬೌಂಡರಿ ಬಾರಿಸಿದ್ದಾರೆ.

Advertisement

ಗದಗ ಜಿಲ್ಲೆಯ ನರಗುಂದ, ಬಾಗಲಕೋಟೆ, ಹುನಗುಂದ, ಬಾದಾಮಿ, ಬೀಳಗಿ, ಮುಧೋಳ, ಜಮಖಂಡಿ ಹಾಗೂ ತೇರದಾಳ ಒಳಗೊಂಡು ಒಟ್ಟು ಎಂಟೂ ವಿಧಾನಸಭೆ ಕ್ಷೇತ್ರಗಳಲ್ಲಿ ಬಿಜೆಪಿ ಮೊದಲ ಸುತ್ತಿನಿಂದಲೂ ಲೀಡ್‌ ಕಾಯ್ದುಕೊಂಡಿತ್ತು.

ತೋಟಗಾರಿಕೆ ವಿವಿಯಲ್ಲಿ ನಡೆದ ಮತ ಎಣಿಕೆ ಬೆಳಗ್ಗೆ ಆರಂಭಗೊಂಡರೂ, ಪ್ರತಿ ಬಾರಿಯಂತೆ ವೇಗವಾಗಿ ನಡೆಯಲಿಲ್ಲ. ಹೀಗಾಗಿ ಅಭ್ಯರ್ಥಿಗಳಲ್ಲಿ ತೀವ್ರ ಕುತೂಹಲ ಕೆರಳಿಸಿತ್ತು. ಮಧ್ಯಾಹ್ನ 12ರ ಬಳಿಕ ಮತ ಎಣಿಕೆ ವೇಗವಾಗಿ ನಡೆಯಿತು.

2004ರಿಂದ ಬಾಗಲಕೋಟೆ ಕ್ಷೇತ್ರ ಪ್ರತಿನಿಧಿಸುತ್ತಿರುವ ಬಿಜೆಪಿಯ ಗದ್ದಿಗೌಡರ, 4ನೇ ಬಾರಿಗೆ ಅತಿ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಕಳೆದ ಬಾರಿ 1.16 ಲಕ್ಷ ಮತಗಳ ಅಂತರದ ಗೆಲುವು ಪಡೆದಿದ್ದ ಅವರು, ಈ ಬಾರಿ ಅತಿ ಹೆಚ್ಚು ಮತಗಳ ಲೀಡ್‌ ದಾಖಲಿಸಿದ್ದಾರೆ. ಪ್ರಧಾನಿ ಮೋದಿ ಅಲೆ, ಜಿಲ್ಲೆಯ ತಳ ಮಟ್ಟದಲ್ಲಿರುವ ಹಿಂದುತ್ವದ ಸಂಘಟನೆ, ಬಿಜೆಪಿಯ ಎಲ್ಲ ನಾಯಕರ ಸಂಘಟಿತ ಪ್ರಯತ್ನದಿಂದ ಕಾಂಗ್ರೆಸ್‌ನ ಜಾತಿ ಲೆಕ್ಕಾಚಾರ ಬುಡಮೇಲಾಗಿದೆ. ಅಲ್ಲದೇ ಬಾದಾಮಿ ವಿಧಾನಸಭೆ ಕ್ಷೇತ್ರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಶಾಸಕರಾಗಿರುವ ಹಿನ್ನೆಲೆಯಲ್ಲಿ ಈ ಬಾರಿ ಕಾಂಗ್ರೆಸ್‌ ಗೆಲ್ಲಲಿದೆ ಎಂಬ ದೃಢವಾದ ವಿಶ್ವಾಸ
ಇಟ್ಟುಕೊಂಡಿತ್ತು. ಅದೇ ಕಾರಣಕ್ಕಾಗಿ ಲಿಂಗಾಯತ ಜಾತಿಗೆ ಸೇರಿದ, ಅದರಲ್ಲೂ ಏಕೈಕ ಮಹಿಳಾ ಅಭ್ಯರ್ಥಿಯನ್ನಾಗಿ ಜಿಪಂ ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಲಾಗಿತ್ತು.

ಸಿದ್ದರಾಮಯ್ಯ ಅವರು ತಾವೇ ಟಿಕೆಟ್‌ ಕೊಡಿಸಿ, ಅತಿ ಹೆಚ್ಚು ದಿನ ಜಿಲ್ಲೆಯಲ್ಲಿ ಪ್ರಚಾರ ನಡೆಸಿ, ಮೋದಿ ಅಲೆ ಹಿಮ್ಮೆಟ್ಟಿಸುವ
ಪ್ರಯತ್ನ ಮಾಡಲಿಲ್ಲ ಎಂಬ ಅಸಮಾಧಾನ ಕಾಂಗ್ರೆಸ್‌ನಲ್ಲಿ ಶುರುವಾಗಿದೆ. ಅಲ್ಲದೇ ಕಾಂಗ್ರೆಸ್‌ನ ಅಭ್ಯರ್ಥಿ ವೀಣಾ ಪರವಾಗಿ ಪಕ್ಷದಲ್ಲಿ ಉತ್ತಮ ಹೆಸರಿದ್ದರೂ, ಅವರ ಪತಿಯ ನಡವಳಿಕೆಯಿಂದ ಬಹುತೇಕ ನಾಯಕರು ಒಲ್ಲದ ಮನಸ್ಸಿನಿಂದಲೇ ಚುನಾವಣೆ ಎದುರಿಸಿದ್ದರು ಎನ್ನಲಾಗಿದೆ.

Advertisement

ಪ್ರಧಾನಿ ಮೋದಿ ಆಡಳಿತ ಮೆಚ್ಚಿ ಕ್ಷೇತ್ರದ ಮತದಾರರು ನನಗೆ 4ನೇ ಬಾರಿ ಅವಕಾಶ ಕೊಟ್ಟಿದ್ದಾರೆ. ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ. ಸಚಿವ ಸ್ಥಾನ ಕೊಟ್ಟರೆ ನಿಭಾಯಿಸುವೆ.
– ಪಿ.ಸಿ.ಗದ್ದಿಗೌಡರ, ಗೆದ್ದ ಅಭ್ಯರ್ಥಿ

ಮತದಾರರ ತೀರ್ಪು ಒಪ್ಪಲೇಬೇಕು. ನಮ್ಮ ಪಕ್ಷದ ಎಲ್ಲ ನಾಯಕರು ಒಗ್ಗಟ್ಟಿನಿಂದ ಕೆಲಸ ಮಾಡಿದರೂ ಹಿನ್ನಡೆಯಾಗಿದೆ. ಸೋಲು-ಗೆಲುವು ಸಾಮಾನ್ಯ.
– ವೀಣಾ ಕಾಶಪ್ಪನವರ, ಕಾಂಗ್ರೆಸ್‌ ಅಭ್ಯರ್ಥಿ

Advertisement

Udayavani is now on Telegram. Click here to join our channel and stay updated with the latest news.

Next